ಎರೆಹುಳು.......
ಎರೆಹುಳು ಹೊರಳುತಿದೆ ಕೆರಳಿ, ಮನಸು. ತೆವಳಿ ಜಾರುತಿದೆ, ಸಾಗುತಿದೆ ದೂರ.. ಸಾವಕಾಶವಾಗಿ, ಆಮೆಯೊಂದಿಗೆ ಎರೆ ಹುಳು ನಡೆಸಿದೆ ಓಟದ ಪೈಪೋಟಿ. ನೆಲಕೆಳಗಣ ವಿಶಾಲ ಮೈದಾನ, ಕಲ್ಲ ಒರಟು ಕಣಗಳ ನೂಕಿ ಮುನ್ನುಗ್ಗಿ ಕೆದರಿ, ಬಿರುಗೂದಲು ಸರಿಸಿ , ಪಕ್ಕಕೆ ಹಾರಿ ಮೇಲೇರುವ ತವಕ, ಆಸೆ... ಬೆಳಕ ಹಿಡಿಯಲು ಬೊಗಸೆಯೊಳಗೆ, ಆಕ್ರಮಿಸಲು ಆಕಾಶ ವಾಮನನಂತೆ, ಸರಾಗ ಸಾಗುತಿದೆ..... ಭ್ರಮೆ . ಕತ್ತಲ ಸಾಮ್ರಾಜ್ಯದಲಿ ಅಧಿಪತಿಯ ಗಸ್ತು, ಎಲ್ಲವು ಶಾಂತ ಬಿರುಗಾಳಿಯ ಮುನ್ನ, ಗುಡುಗಿಲ್ಲ, ಸಿಡಿಲಿಲ್ಲ, ಮೋಡವಿನ್ನು ಬಿರಿದಿಲ್ಲ. ಭಯವಿಲ್ಲ, ಇನ್ನು ನಾನು ಮುಳುಗುವುದಿಲ್ಲ, ಕೊಚ್ಚಿಹೋಗುವುದಿಲ್ಲ, ಉಸಿರುನಿಲ್ಲುವುದಿಲ್ಲ, ಚರ್ಮಹಸಿ ಇರುವತನಕ. ಮಣ್ಣ ನುಂಗಿದ ಅಸ್ತಿತ್ವ ಪಿಸುಗುಡುತಿದೆ ಸದಾ ಗೊಡ್ಡು ತತ್ವ. ಸುರಂಗ ಚಕ್ರಾಧಿಪತಿ ಮೆರವಣಿಗೆ, ಅಂಧ ನಗರಿಯ ರಂಧ್ರಮಯ ರಾಜ ಬೀದಿಗಳಲ್ಲಿ, ಮೌನ ಸಂಗೀತ, ಓಲಗದ ಸಂಭ್ರಮ,ಮಣ್ಣ ವಾಸನೆಯ ಘಮ ಘಮ, ನಿರ್ವಾತ, ನಿಶ್ಯಬ್ದ ಕತ್ತಲ ಪಲ್ಲಕ್ಕಿ ಗಿರಕಿ ಹೊಡೆಯುತಿದೆ ವರ್ತುಲ ರೈಲಿನಂತೆ. ಕಾಡಿಲ್ಲದ ನಾಡಿನಲ್ಲಿ ಹೋಗುವುದಾದರೂ ಎಲ್ಲಿ? ಅರಿವಿಲ್ಲ ಅದಕೆ ಅದರ ದಿಕ್ಕು ದಾರಿ, ಗೊತ್ತಿಲ್ಲ ಗುರಿ.. ಇಲ್ಲಿ ಚಲನೆಯೊಂದೆ ಸರಿ. ಮಿಕ್ಕೆಲ್ಲವೂ ಅರ್ಥರಹಿತ ಮರಿ. ಹಸಿಯಾದ ನೆಲ ಬಿರಿದು ಬಿರುಕು, ನಸುಕೇ ಇಲ್ಲದ ಬದುಕು, ಮರಳುಗಾಡಿನ ಉಸುಕು, ತುಂಬಾ ತೊಡಕು, ಬಿಸಿಲ ಕುದುರ...