ಹುಸ್ಸೇನ್ ಮತ್ತು ಕುದುರೆ.







ಹುಸ್ಸೇನ್ ಮತ್ತು ಕುದುರೆ



ಮುಂದಿರುವ ಪುಟ್ಟ ವನ
ಹಿಂದೆ ಚಿತ್ರ ಕಲಾ ಭವನ,
ಚಿತ್ರ
ವಿಚಿತ್ರ ಪ್ರವೇಶ ದ್ವಾರ,
ಸ್ವಾಗತ ಬಯಸುವ ಹಿತಬೆಳಕಿನ ಮೌನ ಪುಷ್ಪಾಹಾರ.
ವಿಶಾಲ ಹಜಾರ, ಪಡಸಾಲೆಯ ಆಚೆ
ಪ್ರತ್ಯಕ್ಷವಾಗುವ,
ಅಪರೂಪದ ಅಲಂಕಾರ,
ನೆಲ, ವಿಗ್ರಹ, ಗೋಡೆ, ದೀಪ ಅಸಹಜ,
ಆದರೂ ಅಸಮಾನ್ಯ ಅಯಸ್ಕಾಂತ,
ಅಪರೂಪಕ್ಕೆ ಬರುತ್ತಾರೆ ಅಥಿತಿ,
ಜೊತೆಗೆ ತಂದೇ ತರುತ್ತಾರೆ ಕಿತಾಪತಿ.
ಪಾದರಕ್ಷೆಯ ಮಹಾ ಬ್ರಾಂತಿ.

ಬಳಕುವ ಬಿಳಿ ತೊಗಲು ಕಾಲು,
ಬೆತ್ತಲೆ ಅಂಗಾಲು, ತಬ್ಬಿದ ಕನ್ನಡಿ ಗ್ರಾನೈಟ್ ಹಾಸು
ವಿಕಾರ ಮೌನ, ಸ್ತಬ್ದಚಿತ್ರಗಳಂತೆ ಕಾಣುವ ವೀಕ್ಷಕರು,
ಮೂಕ ವಿಮರ್ಶಕರು,
ಚಾವಣಿಯಲಿ ಹುದುಗಿರುವ ಹೊನಲು ದೀಪಗಳು,
ಪ್ರತಿಧ್ವನಿಸುವ ನಿಶ್ಯಬ್ಧ.
ಅಸಾಹಾಯಕ ವಿಗ್ರಹಗಳು,
ಬಿಟ್ಟಿವೆ ಪಿಳಿ,ಪಿಳಿ ಕಣ್ಣು,
ದಿಟ್ಟಿಸುತ್ತವೆ ವಿಶಾಲ ಗೋಡೆಯನ್ನು,
ಏನನ್ನೋ ಅನುಭವಿಸಲು .

ವರ್ಣಮಯ ಕಲಾ ಕೃತಿಯ ಬೆಚ್ಚಗಿನ
ಗೋಡೆಯ ಆಲಿಂಗನ,
ಕೊಬ್ಬಿದ ಕುದುರೆಗಳ ದಷ್ಟ ಪುಷ್ಟ,
ಪೃಷ್ಟ,
ಬೋಳು ಬೆಟ್ಟಗಳ ನಡುವೆ
ಜಡೆಯ ಬಾಲ ಬಲು ಸ್ಪಷ್ಟ
ಕಂದು, ಬೂದು, ಕಪ್ಪಿನೋಕುಳಿ ಬಣ್ಣ,
ಕಾಲುಗಳು ಕೊಂಚ ಸಣ್ಣ,
ಹಿನ್ನೋಟದ ತಲೆ, ನಿಮಿರಿದ ಕಿವಿ,
ವಾವ್ ಅದ್ಭುತ ಕವಿ!!

ಎರ್ರಾ ಬೇರ್ರೀ ಬಾರಿಸಿದ ಕುಂಚ.
ಸೃಷ್ಟಿಸಿದೆ ಅದ್ಭತ ಪ್ರಪಂಚ
ಹೆದರಿ ಮುದುಡಿದ ಹಾಳೆಯಮೇಲೆ ಓಡುತ್ತವೆ ನಾಗಾಲೋಟ,
ಬಿಟ್ಟುಹೊಗುತ್ತವೆ, ಭಾರವಾದ ಹೆಜ್ಜೆಯನ್ನು,
ಬೆಳ್ಳಿ ಗಡ್ಡದ ಹಿಂದೆ ಕೆನ್ನೆಯ ಕುಳಿಗಳಲ್ಲಿ
ಧೂಳಿನ ಮೋಡದಲಿ ಓಡುವ ಬಣ್ಣದ ಹಕ್ಕಿಗಳು,

ಕುಂಚ ಬಿಡಿಸುವ ಕಾವ್ಯ,
ಚಿತ್ರ ಹಾಡುತ್ತವೆ ಬಣ್ಣ ರಾಗ ಭೂಪಾಲಿ,
ಕಾಡುತ್ತವೆ ಕಣ್ಣ,
ಬಿಡಿಸಿದೆ ಕವನ ಕೋಮಲ್ ಗಾಂಧಾರ,
ಹುಸ್ಸೈನ್ ತಾತ, ಎರಚುತ್ತಾನೆ ಬಣ್ಣಗಳ ಪದಗಳನ್ನು,
ಆಕ್ರಮಿಸುತ್ತವೆ ಬಣ್ಣ ಮಿದುಳಿನ ಕಣಿವೆಗಳಲ್ಲಿ,
ಇಳಿಯುತ್ತದೆ ಹೃದಯ ಪಾತಾಳದ ಆಳದಲ್ಲಿ....
ಶತಾಯು ಯುವಕನೇ..
ಕರಗದಿರು ಆ ಕಟಾರದ ಉರಿಬಿಸಿಲಿನಲ್ಲಿ,
ನಿನ್ನ ಹೊಸ ಲಾಯದಲ್ಲಿ .
ಮುಗಿಯದ ಅನ್ವೇಷಣೆಯಲ್ಲಿ..
ಶಾಶ್ವತ ಕಾಣುವ ಆ ನಿನ್ನ ಬಿಸಿಲು,
ಕುದುರೆ ಮಾತ್ರ ಮೇಯುತ್ತಿವೆ ಓಯಸಿಸ್ ನಲ್ಲಿ...
ಉಳಿಯಬಲ್ಲೆಯ ಹಸಿರು ನೆನಪುಗಳಲ್ಲಿ?

Comments

Popular posts from this blog

ಕಾಗೆ....