Tuesday, July 10, 2018


11-07-2018.

ಶಾಪ.
ಸ್ವಚ್ಛ ಗೊಳಿಸುವ ಹಳ್ಳಿಯ ಗುತ್ತಿಗೆದಾರ
ಮಳೆರಾಯ, ಹೆಚ್ಚು ಕಡಿಮೆ, ಕಾಲಪ್ರಜ್ಞ
ಸಮಯಪಾಲಕ,
ಬಂದೇ ಬರುತ್ತಾನೆ ವರುಷದಲ್ಲಿ ಒಮ್ಮೆ
ಸಮಯ ಸ್ವಲ್ಪ ಹಿಂಚು, ಮುಂಚು,
ಸಿಂಪಡಿಸಿ ಮಳೆನೀರ, ಸೂಕ್ತ ಮಿಶ್ರಣದಲ್ಲಿ
ತೊಳೆದು, ಬಳೆದು, ಶುಚಿಗೊಳಿಸುತ್ತಾನೆ
ಸಾರಿಸಿ, ಗುಡಿಸಿ, ಮನೆ, ಕೇರಿ, ಹಾದಿ, ಬೀದಿ,
ಧೂಳು ಝಾಡಿಸಿ, ರಬಸದಲಿ ತಿಕ್ಕಿ
ಆರಲು ಬಿಟ್ಟಾಗ, ಹಳ್ಳಿ
ಚಿತ್ರಕಾರನ ಕ್ಯಾನ್ವಾಸ್ ಮೇಲೆ, ಹೊಚ್ಚಹೊಸ
ಹೊಳೆಯುವ ಸುಂದರ ಭೂವಿನ್ಯಾಸ ಚಿತ್ರ
ಹುಳ, ಕೀಟ, ಹುಪ್ಪಡಿ, ಗಿಡ, ಮರ, ಮೂಲಿಕೆ
ಹೂ, ಎಲೆಗಳು ರೂಪಪಡೆಯುತ್ತವೆ ,ಸ್ಪಷ್ಟವಾಗಿ
ಮತ್ತೊಮ್ಮೆ, ತಮ್ಮ ರೆಂಬೆ, ಟೊಂಗೆಗಳ ಮೇಲೆ
ಮನಮುಟ್ಟುವ ಪ್ರಕೃತಿಯ ಬಣ್ಣ
ಹೊಳೆಯುವ ಎಲೆ, ಚಿಗುರು, ಮೊಗ್ಗು, ಹೂ
ಮರುಜೀವ ಗಳಿಸಿ, ಗಾಳಿಯಲಿ ತೂಗಿ
ಅಭಾರಿಯಾಗಿ ನಲಿದು ತೂಗುವಾಗ,
ಉಲಿಯುತ್ತವೆ ಕೋಗಿಲೆ, ಕಪ್ಪೆಗಳ ವೃಂದಗಾನ,
ಗವಾಕ್ಷಿಯಲಿ ಹೊಗೆ ಏರುತ್ತದೆ ಮೇಲೆ,
ತೊಳೆದ ರಾಡಿನೀರು ಧೂಳಿನ ಡಿಕಾಕ್ಷನ್
ಹರಿಯುತ್ತದೆ, ಈಗತಾನೆ ತೊಳೆದ, ಎಲ್ಲರ ಮನೆಮುಂದೆ
ಮಕ್ಕಳ ಕಾಗದದ ದೋಣಿಗಳ ಹೊತ್ತು
ಕಸ, ಕಡ್ಡಿ, ಒಣ ಸಗಣಿ ತೇಲಿ,ನೊರೆಯಾಗಿ
ತೊರೆಯಾಗಿ, ದಾಟಿ ಹಳ್ಳ,
ಕೆರೆ ಮುಟ್ಟಿಸಿ ತಳ ತಲುಪಿ ಹೂಳುಗೊಬ್ಬರ,
ನೇಗಿಲ ಯೋಗಿ, ವರ್ಷಪೂರ್ತಿ ಹರ್ಷ
ಹುಟ್ಟಿದ ಮರಿ,
ಮಳೆಯಲಿ ತೋಯ್ದ ಹಳ್ಳಿಯ ಹಸಿರು
ಸದಾ ಖುಷಿಕೊಡುವ ನೋಟ ನೆನಪೀಗ ಮಾತ್ರ
ಬದಲಾಗಿದೆ ಕಾಲ
ಆದರೂ, ಅದೇ ಗುತ್ತಿಗೆದಾರ,
ಪ್ರಾಯದ, ಮುಂಗೋಪ
ಬದಲಾಗಿದ್ದಾನೆ, ಯವುದೋ ಪ್ರಲೋಭದಲಿ ಭ್ರಷ್ಟ,
ಅದೇ ನೀರಂತೂ ಅಲ್ಲ, ಆದರೂ
ಬದಲಾಗದ ಶುಭ್ರಗೊಳಿಸುವಿಕೆ ವಿಧಾನ
ನಿಯತ್ತಿನಲಿ, ತೊಳೆಯುತ್ತಾನೆ,
ಸಂಧಿ,ಗೊಂದಿ ಬಿಡದೆ ತೀಡಿ ತಿಕ್ಕಿ ಜೆಟ್ ಜಳಕಕ್ಕೆ ತಳ್ಳಿ
ಆವಾಸ ಬೀಳಿಸಿ, ಗಾಡಿಗಳ ಉರುಳಿಸಿ, ರಾದ್ದಾಂತ ಮಾಡಿ
ಕೊಳೆ ತೆಗೆದರೂ ಮಾಸದ ಕಲೆ
ಸುಂದರ ಕ್ಯಾನ್ವಾಸ್ ಆಗಬಲ್ಲದೆ
ಬದಲಾದ, ಅಸ್ವಾಭಾವಿಕ ಬಣ್ಣಗಳು ,
ಒಪ್ಪದ ನಮ್ಮ ಕಣ್ಣುಗಳು
ತೊಳೆದರೂ ಹೊಲಸು, ಸೇರುವುದಿಲ್ಲ ಹಳ್ಳಿಯ ಹಳ್ಳ
ತೊರೆ ಹರಿಯುತ್ತಿಲ್ಲ, ಕೆರೆಯತಳ ಸೇರುತ್ತಿಲ್ಲ
ಅಲ್ಲಲ್ಲೇ ಟಿಕಾಣೆ, ನೊರೆಬಣ್ಣದ ಆಟದಲಿ ತ್ಯಾಜ್ಯ
ಕಸವೇಕೊ ಮುಳುಗುತ್ತಿಲ್ಲ, ಕರಗುತ್ತಲೂ ಇಲ್ಲ
ಯಾಕೋ ತಳದ ಕಸ ಕೊಳೆಯುತ್ತಲೂ ಇಲ್ಲ
ಅಸ್ತಿಪಂಜರ
ತೇಲುವ, ನಿರ್ಜೀವ ದೇಹಗಳು
ಮಾರ್ಜಕ, ವಿಸರ್ಜಕಗಳು,
ಪ್ಲಾಸ್ಟಿಕ್ ಶೇಷ, ಶೀಶೆ, ತೆಳುತಗಡಿನ ಖಾಲಿ ಡಬ್ಬಿ,
ಪೊದೆಗಳ ಬುಡದಲ್ಲೇ ಗಂಟಾಗಿ ಸಿಕ್ಕು,
ಕಂಡರಿಯದ ವಿದ,ವಿದದ ಅಸಹಜ ಬಣ್ಣ,
ದಿಕ್ಸೂಚಕ ಗಾಳಿ ಪಟಗಳು ನೇತುಬಿದ್ದಿವೆ
ಎಲೆಯ ವರ್ಣಕದಲ್ಲಿ
ಮೊಗ್ಗು, ಹೂವಿನ ಮಗ್ಗುಲಿನಲ್ಲಿ
ಯಾವುದೋ ಹೊಸ ಸಂಕರ ತಳಿ
ಹರಡಿಕೊಂಡಿವೆ ಎಲ್ಲೆಲ್ಲೂ
ಮಳೆ ಬರುತ್ತಿದೆ, ಹಳ್ಳ ಹರಿಯುತಿದೆ
ಕೋಡಿ ಒಡೆದರೂ, ಕೊಚ್ಚಿಹೋಗದ
ಅಸಹ್ಯ........
ಕರಗದು, ಮುಳುಗದು, ಕೊಳೆಯದು
ತೇಲುವ ಪಾಪದ ಶಾಪ ಇನ್ನೆಂದಿಗೂ...

Thursday, July 5, 2018

ಮನುಷ್ಯ...


ಮನುಷ್ಯ... 

ನಿನ್ನ ನಿಲ್ಲದ ಅನಾಯಾಸದ ಪ್ರಶ್ನೆಗೆ 
ಮಿದುಳಲ್ಲಿ ಬಿಡುವಿಲ್ಲದ ಹುಡುಕಾಟ
ಮನಸ್ಸಿನಲ್ಲಿನ ತಡಕಾಟ,
ಹುಡುಕುವುದಕ್ಕೆ ಬೇಕಿದೆ ಕಾರಣ 
ನಿಲ್ಲದ ಪರದಾಟ, ಅವ್ಯಕ್ತ ಹೋರಾಟ

ತಲೆಬುಡದ ನಾಯಕ ಗ್ರಂಥಿ! ಸೇವಕ ನಡುಪಂಥಿ
ಹೃದಯ, ಮುಚ್ಚಿದ ಕತ್ತಲು ಕೋಣೆ, 
ಎಡವೋ? ಬಲವೋ?
ದ್ವಿದಳ ಕವಾಟದ ಆಚೆಯೇ ಹೃತ್ಕುಕ್ಷಿಗಳು 
ಕೊಳವೆಯಾಂತರ ರಕ್ತಪ್ರವಾಹ
ಸಮವೇಗ ಸ್ಥಿರತೆಯಲಿ ತಟಸ್ಥ

ಭಾವನೆಯ ಸೆಲೆಯೋ, ಬರಡು ನೆಲೆಯೋ?
ಗೊಂದಲದ ಬಲೆಯಲ್ಲಿ
ಅಲ್ಲಿ ಏನಿದೆ ಎಂಬರಿವು, ಆಳವೇ ಸುಳಿಯ ಸೆಳವು
ಎಲ್ಲವೂ ಅಯೋಮಯ, ಅಸ್ಪಷ್ಟ
ಇಂದಿಗೂ ನಿಗೂಢ, ಕಾಣದ ಪವಾಡ
ತಲೆ ಕೆಡಿಸಬೇಡ, ತೂಕಡಿಕೆ ನಿಂತಿಲ್ಲ ಇನ್ನೂ,

ಮೌನ, ನಿರುತ್ತರವೇ ಪರಿಹಾರವಿರಬಹುದು
ಪ್ರಶ್ನೆಯೇ ಚಟವಾದ ವ್ಯಸನಿ ನೀನು
ಉತ್ತರಿಸುವ ಹುಚ್ಚ, ಹುಂಬತನ ಹಟ ನನಗಿಲ್ಲ
ಬದುಕಲೇ ಬೇಕೆಂಬ ಸಹಜ ಚಟ, ಸಾಯುವವರೆಗೂ
ಪ್ರಶ್ನಿಸುವ ಹಕ್ಕಿನ ಅಮಲು ನನಗಿಲ್ಲ
ತತ್ವ, ಸಿದ್ಧಾಂತಗಳ ಮಿತಿಯಲ್ಲಿ 
ಸ್ವಾತಂತ್ರದ ಜಾತ್ರೆಯಲಿ, ಅಜ್ಞಾನದ ಆಡಳಿತ
ಮೌಢ್ಯತೆಯ ಆಟಕ್ಕೆ, ಭಾಗಿಯಲ್ಲ

ಸವಾಲು, ಪ್ರತಿಕ್ರಿಯೆಗಳ ಹಂಗು, 
ಇರಬಹುದು ಸೃಜನಾತ್ಮಕ, ಪ್ರತಿಭಾನ್ವಿತರದೇ ಸ್ವತ್ತು
ಖಾಲಿಯಾಗಿಯೇ ಉಳಿಯಬಹುದು
ಅನಾಮಧೇಯರಾಗಿ, ಆಗಂತುಕರಾಗಿ, 
ಈ ಗ್ರಹದ ಇತರ ಸಹಜೀವಿ, ಸಹ ಪ್ರಭೇದಗಳಂತೆ,
ವಿಶ್ವ ಮಾನವನ ಪಟ್ಟಕ್ಕೆ  ಮನಸ್ಸು ಒಪ್ಪುತ್ತಿಲ್ಲ
ನಾವೇ ನಾವಾಗಿ, ಸರ್ವಗ್ರಹ ಸದಸ್ಯರಂತೆ
ಅಂದರೆ... 
ಜೈವಿಕ ಅಸ್ತಿತ್ವವೇ ಸಾಕು, ಪರವಾಗಿಲ್ಲ, 
ಇರಬಹುದು ಇಲ್ಲೇ, 

Wednesday, June 27, 2018ಕನವರಿಕೆ.


ಮಾತೆಯ ಮಮತೆಯ
ಕುಡಿಯಾದರೂ...ಹುಟ್ಟಿದ್ದು ಊರಲ್ಲ,
ಊದು ಕುಲುಮೆಯ ಗರ್ಭದಲ್ಲಿ, 
ಜ್ವಾಲೆಯಲೇ ಕಳೆದ ಬಾಲ್ಯ ಕಾಡುಬಂಡೆಗಳಮೇಲೆ
ಇವ ನಿಜಕೂ ಅಗ್ನಿಪುತ್ರನಲ್ಲ,
ಜೂಟಾಟ, ಕಣ್ಣುಮುಚ್ಚಾಲೆ ಕೊರಕಲು ಪ್ರಪಾತಗಳಲ್ಲಿ
ತಳರಹಿತ ಗವಿಯ ಸಂದು, ಗೊಂದುಗಳ ನೆರಳಲ್ಲೂತೀವ್ರ ತಾಪ.
ಬಯಲ ದರ್ಶಿನಿಯ ನೇರಲೆ,
ಕಾರೆ,ಕವಳೆ,ಲೇಬೆ, ಬೋರೆ, ಉಪಹಾರಕ್ಕೆ,
ಶಿಲಾ ಶಿಖರ ದರ್ಶಿನಿ ಚಾರಣದ ಕ್ಯಾಂಟೀನಲ್ಲಿ ಸಿತಾಫಲ
ಅನ್ ಲಿಮಿಟೆಡ್
ಬಹಿರ್ದೆಸೆಯ ದಿನಚರಿಯಲಿ ನುರಿತ ಪರ್ವತಾರೋಹಿ
ನಿರ್ಜನ ಕಣಿವೆಯಲಿ ಸ್ವಗತ, ಶಾಶ್ವತ
ಸಂಭಾಷಣೆ ಕೂಗೋಗುಡ್ಡದ ಪ್ರತಿಧ್ವನಿಯ ಕಂಪನ
ರಾಕ್ಷಸ ಇಳಿಜಾರು ಬಂಡೆ ಬೈಗಳ ಪ್ರತಿಧ್ವನಿಯ ರೋಮಾಂಚನ
ನೇಯ್ಗೆ ಮಗ್ಗಗಳ ನಿಲ್ಲದ ನಡಿಗೆಯ ರೇಶಿಮೆಯ ಹೆಜ್ಜೆ
ಶಿಸ್ತಿನ ಸಾರೋಟು ಚಲನೆಯಲಿ ಲಾಳಗಳ ಓಟ
ನಿರಂತರ ಧ್ವನಿಸುವ ಚಟಾ ಪಟಾ
ಊರಿಗೊಂದು ಭಾಷೆ ಅದರ ಸಾಮಾನ್ಯದ ಅಸ್ತಿತ್ವ
ಕರಡಿ ಗಂಗಣ್ಣನ ಘಮ,ಘಮ ಮಂಡಾಳ್ ಒಗ್ಗರಣಿ ಆದ್ಯಾತ್ಮ ತತ್ವ
ಅತ್ತಿಕಾಯಿ, ಜೊತೆಗೆ ಮೆಣ್ಸಿನ್ಕಾಯ್ ಉಳ್ಳಾಗಡ್ಡಿ
ಈಜಾಟ ಮನೋರಂಜನೆ ಆಟ, ನೀರಿದ್ದ ಆ ದೊಡ್ಡಬಾವಿ
ಬಾನಿ ಎಳೆಯುವ ಹಗ್ಗದ ಮೇಲೆ ಜೋಕಾಲಿ
ಶುಶ್ಕತೆಗೆ ಬಡಕಲಾಗಿ ಒಣಕಲಾಗಿ ನಿಂತ ಸೈಂಧವ ತಾಳೆಮರ
ಈಚಲಿನ ವಿರಳದಲಿ ತೆಂಗು, ಆದರೂ ಹೆಸರು ಬಾಳೆತೋಪು
ಮೇಕೆ,ದನಗಳ ಜಾಡೇ ಜಾರೋಬಂಡಿ
ಹಟ್ಟಿಯಲಿ ಕತ್ತರಿಸಿ ಹಸಿರು ಜೋಳದ ಸಪ್ಪೆ.
ಹಳಸಿದ ಹಿಂಡಿಗೆ ಆಕಳುಗಳು ಜೊಲ್ಲುಸುರಿಸುತಿತ್ತು
ನಿಜವಾದ ಮಳೆ ನಿಜಕ್ಕೂ ಸುರಿಯುತ್ತಿತ್ತು
ಹಳ್ಳ ಹರಿಯುತ್ತಿತ್ತು, ಚಪ್ಪರ ಸೋರುತಿತ್ತು
ಕಾಫಿಯ ಪ್ರವಾಹದಲಿ ಕಾಗದದೋಣಿಗಳು
ಸರಾಗ ತೇಲಿ, ಉತ್ಸಾಹದಲಿ ಮುಳುಗಿ ಊರ ಕೆರೆ
ಸೇರಿ, ಕುರಿಗಳ ಪಿಚಿಕೆಯ ಜೊತೆ
ಪಳೆಯುಳಿಕೆಯಾಗಿತ್ತು.
ಅಜ್ಜಿ ಹೇಳುವ ಕಥೆ, ಲಾಟೀನು ಬೆಳಕಲ್ಲಿ
ಮುತ್ತುಗದ ಎಲೆ ಪೋಣಿಸುವ ಹುರಿಯಲ್ಲಿ
ಡಬ್ಬಣಕೆ ಚುಚ್ಚಿ ಸರ ಮಾಡುವ ಮೊಮ್ಮಕ್ಕಳ ಸರಪಣಿ
ಬೋಳುತಲೆಗೆ ಸೆರಗು ಹೊದ್ದ ಅಜ್ಜಿಯಸುತ್ತ
ನಿದ್ರೆ, ಒಬ್ಬಬ್ಬರನ್ನೇ ಆಹುತಿ ತೆಗೆದುಕೊಂಡಾಗ
ಜಗವೆಲ್ಲ ಕನಸಲ್ಲಿ ಜಾರುತ್ತಿತ್ತು.

Thursday, June 14, 2018
ಇರುವೆ.

ಬಾಗಿಲ ಹೊಸಿಲ ಸಂದಿನಿಂದ
ಪುಟ್ಟ ಮಣ್ಣ ಸಡಿಲ ದುಂಡಾದ ಪಿರಿಮಿಡ್ ನ ಬಾಗಿಲನಿಂದ
ಹೊರಬರುತ್ತಲೇ ಇರುವ, ಒಂದು ಕ್ಷಣವೂ ನಿಲ್ಲದ
ಶಾಶ್ವತ ಚಲನಶೀಲರು, ಹಿಂಬಾಲಿಸಿ ಹೋದರೆ,
ಹೊರಗೋ, ಒಳಗೋ, ಮೇಲೋ, ಕೆಳಗೋ?
ಬಚ್ಚಲಲ್ಲೋ, ಸ್ವಿಚ್ ಬೋರ್ಡ್ ನ ಕಿಂಡಿಯಲ್ಲೋ
ಮಾಯಾವಾಗುವ ಭೂಸೇನೆಯ ಇರುವೆಗಳ ತುಕಡಿ.
ಶಿಸ್ತಿನ ಗಸ್ತಲ್ಲಿ ಸಮರಸಿದ್ಧ ಸಿಪಾಯಿಗಳು
ಯುದ್ಧವೇ? ಯಾರಮೇಲೆ?
ಯಾರುಸಾರಿದ್ದಾರೆ ಇದರಮೇಲೆ?
ಸಮರೋಪಾದಿ ಮುಂಜಾಗ್ರತೆ
ಸಂಗ್ರಹಣೆ ಆಹಾರಕೆ ಅಲೆದಾಟ
ಆವಾಸದ ಬಿಲದಲ್ಲಿ ನಿಲ್ಲದ ಪರದಾಟ
ನೈಸರ್ಗಿಕ ವಿಕೋಪದ ಋತುವಿಗೆ ಸಂರಕ್ಷಣೆ.
ಆ ಸುಂದರ ನಗರ,
ಮುಖ್ಯರಸ್ತೆ,
ಕವಲು ದಾರಿಗಳು ಸುರಂಗದಲ್ಲಿ
ಆಡ್ಡದಾರಿಗಳಲ್ಲಿ, ಮುಖ್ಯರಸ್ತೆಗಳಲ್ಲಿ
ನೆಲಮಾಳಿಗೆಯ ನೆಲದುರ್ಗದ ನೆಲದಡಿ ನಗರ
ಕಟ್ಟಿರುವ ಕಾರ್ಮಿಕರು, ರೂಪಿಸಿರುವ ಶಿಲ್ಪಿಗಳು
ಉದ್ಯಾನವನಗಳಿಲ್ಲ, ಅಪ್ರತಿಮರ ಪ್ರತಿಮೆಗಳಿಲ್ಲ
ಬಣ್ಣದ ಕಾರಂಜಿಗಳೂ ಇಲ್ಲ
ಸಾಲುಮರಗಳು ಇಲ್ಲಿ ಬೇಕಿಲ್ಲ
ಖಜಾಂಚಿಯೂಇಲ್ಲ, ಖದೀಮರಿಲ್ಲ
ಅವರವರ ಕರ್ಮ, ಕರ್ತವ್ಯನಿಷ್ಟೆ,
ಪಾಳಿಯಲಿ ನಡೆಯುವ ಸೈನಿಕರಿಗೆ ಸ್ಪರ್ಷ ಅನಿವಾರ್ಯ
ಸಂವಹನ, ಅಭಿಪ್ರಾಯ ವಿನಿಮಯಕೆ
ಅಸ್ಪ್ರುಷ್ಯರಾರಿಲ್ಲ, ಎಲ್ಲರೂ ನಿರ್ಲಿಂಗ
ನಿಷ್ಕಾಮಕ ಸಲಿಂಗ ಮನ್ಮಥರು,
ಅರಮನೆಯ ಅಂತಃಪುರದಲ್ಲಿ
ರಾಣಿಒಬ್ಬಳೇ! ಸ್ವತಂತ್ರ
ಭವ್ಯಮಹಲಿನ ಪರಿಸರ ಎಲ್ಲರು ಪರತಂತ್ರರು
ಪರಾವಲಂಬಿ ಭಕ್ಷಕರು, ಪರಸ್ಪರಾಲಂಬಿ ರಕ್ಷಕರು
ಇರುವು,ಅದರರಿವು,
ಸಕಲ ಪ್ರಭೇದ ಸಮನ್ವಯ ಜಗದ ಉಳಿವು,
ಮತಿಹೀನ ಮತ್ಸರದಲಿ ಸಂಪೂರ್ಣ ಅಳಿವು
ಅವಿವೇಕ ಅತಿರೇಕದ ವಿವೇಕ, ಮಾರಕ!
ಎಂದೆಂದಿಗೂ,
ಮೂಡಲಿದಿಯೇ ಮನಪರಿವರ್ತನೆ ತಿಳಿವು
ತಿಳಿಸಿವಿರಾ ದಯಮಾಡಿ ನಿಮ್ಮ ನಿಲುವು?

ಬಯಲು 

ಬಲಿತ ನಿಶ್ಚಲ, ನಿಸ್ತೇಜ ಜಡ ದೇಹಗಳ
ಹೊತ್ತು, ಶಿಶು ಶೂನ್ಯ ನೊಟದಲಿ,
ಹಸುಳೆಗಳ ಪಾಳಿಯಲಿ ಚಲಿಸುವ ನೋವುಗಳು
ಕೊಬ್ಬಿ ಕೊಳೆತ ಮೊಸಳೆಗಳ ರಾಗ, ರಗಳೆ
ಬತ್ತಿದ ಕಣ್ಣೀರ ಜಲಪಾತದಲ್ಲಿ
ನಿರ್ವಾತ ಅವಕಾಶ, ವಿಶಾಲ ಆಕಾಶದ ವಿಸ್ತಾರ
ಜಲರಹಿತ ತಡೆರಹಿತ ಅಣು ಆವೀಕರಣ
ತೂಗುಕಣಗಳು ಗುರುತ್ವದಲಿ ನಿಶ್ಚಲ
ಅಲ್ಲಿ, ಆ ಗುಂಡಿಯ ಕಂದರ
ಅಂತಃಕರಣ ಸದಾಸಿದ್ಧ ಹರಾಜಿಗೆ
ಕಲ್ಲಾಗಿ ಬಡಿತ, ಸ್ಥಗಿತ ಗುಂಡಿಗೆ,
ಏಳಲಾರದ ಹೆಣಭಾರ ಕ್ಕೆ ಮಂಕಾದ ಆತ್ಮ,
ಬೆಳಕಿನಲಿ ಕುರುಡಾಗುವ
ಮುಂಜಾನೆಯ ಕೊರಗು,
ಕಂಗಾಲಾಗಿದೆ ಕಗ್ಗಕತ್ತಲು ಕಕ್ಕಾಬಿಕ್ಕಿಯಾಗಿ
ಮಾನವತೆಯ ಜೀವಂತ ಪ್ರದರ್ಶನ.

Saturday, June 2, 2018
ಗಾಳಿ ಮರ.ಕಡಲ ಪಕ್ಕ, ಹಾಸಿರುವ ಉಸುಕು
ಕರ್ಲಾನ್ ಹಾಸಿಗೆ, ಮೃದು ನುಣಪು
ಮುಂಗಾರಿನ ವರುಣಜಾತ್ರೆ ಆರಂಭ 
ನಿಲ್ಲದ ಸಾಮೂಹಿಕ ಆತ್ಮಾಹುತಿ
ಕಡಲಂಚಿನ ಕಾವಲುಗಾರ, ಯಾರ ಹರಕೆಗೋ?
ಸಾಮುದಾಯಿಕ ಜಲಾರ್ಪಣೆ
ಗಾಳಿಮರಗಳು ಜಲಸಮಾಧಿಯಲಿ ಅಂಗಾತ ಬಿದ್ದು
ಹೊರಳುತ್ತವೆ, ವರುಷ, ವರುಷ,
ಮುಂಗಾರ ವಿಕೃತ ಹರುಷ
ನಿಜ, ಬೇರುಬಿಟ್ಟಿತ್ತು ಆಳವಾಗಿ ಮಣ್ಣಿನಲ್ಲೇ
ಅಲ್ಲೇ ಅಪ್ಪ,ಅಜ್ಜನಕಾಲದಿಂದ
ಕಣ,ಕಣಗಳು ಬೆಸದಿತ್ತು ನೆಲಮಾಳಿಗೆಯ ಸಂಬಂಧ
ಕೋಶಬಲೆಯಲಿ ಸುಕ್ಕು,ಸುಕ್ಕಾಗಿ
ಮರಳ ಹಾಸಿಗೆಯ ಬದಿಯೇ ಡೇರೆ ಹಾಕಿ
ಶತ್ರುಗಳ ಉಬ್ಬರವಿಳಿತ ಕಂಡ ವೀಕ್ಷಕರು
ದೈತ್ಯ ಶತ್ರುಅಲೆಗಳ ಹಿಮ್ಮೆಟ್ಟಿಸುವ ವೀರ ಯೋಧರು.
ಯುದ್ಧಯಾತ್ರೆ ಮುಂಚೂಣಿಯ ಸಂರಕ್ಷಕರು
ಪ್ರತಿ ಆಕ್ರಮಣ ಮೆಟ್ಟಿ ಬಹುಕಾಲ ನಿಂತವರು
ನಿಶ್ಯಭ್ದ ಕದನವಿರಾಮದ ನಡುವೆಯೂ
ಮಣ್ಣ ಕಾಯುವ ಜಾಗೃತ ಸಂರಕ್ಷಕರು.
ಗತಕಾಲದ ಕುಲುಮೆಯಲಿ ಕಳೆದಿತ್ತು ಬದುಕಿನ ತಿದಿ
ಬಿರು ಗಾಳಿಯನೂ ಎದುರಿಸಿ, ಸಾಗರ ಸ್ಥಬ್ಧಗೊಳಿಸಿ,
ಜೀವನರಾಗ ಹಾಡಿದ ಸುಗಮ ಸಂಗೀತಕಾರ,
ಸೂಜಿಎಲೆ ಸ್ವೀಕರಿಸಿತ್ತು
ಸಮಯ ಮೇಲ್ವಿಚಾರಕನ ಜುಗಲ್ ಬಂದಿ ಸವಾಲು
ಉಳಿಸಿಕೊಂಡಿದ್ದ ಈ ಸಮರ್ಥ
ಸಂಭ್ರಮಿಸಿ ಓಲಾಡುತಿತ್ತು,ಮೈಮರೆತು ಹಾಡಿತ್ತು
ಗಾಳಿ ಗುಂಯ್ಗುಡುವ ಜಾನಪದ ಹಾಡು
ಕೇಳುಗರಿಲ್ಲದ ಕಾಲದಿಂದ ಯಾರಿಗೋ
ಶೃತಿ ತಪ್ಪಿಲ್ಲ ಇಂದಿಗೂ,
ಗಾಳಿ, ಬಿಸಿಲು, ಮಳೆ, ಕೆರಳಿಸಿದರೂ
ಧೃತಿಗೆಡದೆ ನಿಭಾಯಿಸಿ, ಮುಗಿಸಿದ ತನ್ನ ಪ್ರದರ್ಶನ
ದೃಷ್ಟಿ ಹಾಯುವವರೆಗೂ
ಅನಾಥಬಿದ್ದಿರುವ ಕಪ್ಪು ಹಂದರದ ವಿಕೃತ ಕಳೇಬರಗಳು
ಅದೇ ಮೆತ್ತನೆಯ ಹಾಸಿಗೆಯ ಮೇಲೆ ನಿಶ್ಚಲ,
ಯಾವುದನು ಲೆಕ್ಕಸಿದೆ, ಕಾರ್ಯನಿರ್ವಹಿಸಿ
ಇಂದು ಶಾಶ್ವತ ವಿಶ್ರಾಂತ ಮುಕ್ತ ಸ್ಮಾರಕವಾಗಿ.....

Monday, May 21, 2018ಅಲ್ ಸಾದಿಕಿ ಅಲ್ ರದೀ. ಸುಡಾನ್ ಕವಿ- 
(ಅರೇಬಿಕ್ ಮೂಲದ ಇಂಗ್ಲಿಷ್ ಅನುವಾದದ ಭಾವಾಂತರ)ಉಸಿರ, ಕೋಮಲರಾಗ ವಾಗಿಸುವ ಗಾನಕೋಗಿಲೆಗಳು ನಿನ್ನ ಬಾಯಲ್ಲಿ
ನಿನ್ನ ಕಣ್ಣಿಂದ ತುಳುಕುವ ಮಬ್ಬು ಬೆಳಕಲ್ಲೇ ನೀ ಸಂಪೂರ್ಣ ಬೆತ್ತಲೆ
ಜಾಗೃತವಾಗಲು ನೀನು, ಒಮ್ಮೆಯಾದರೂ ಜಿಗಿಯಬೇಕು ದಿಗಂತದಾಚೆ
ತೆರೆದಷ್ಟೂ ಅಂತ್ಯವಿಲ್ಲದ ಮುಚ್ಚಿದ ಕಿಟಕಿಗಳ ತೆರೆಯುತ್ತಲೇ ಇರಬೇಕು
ಗೋಡೆಗಳಿಗೆ ಆದಾರವಾಗಬೇಕು
ದೇಹ, ಜಗದ ನಡುವೆ ಸೂಕ್ಷ್ಮ ಭಾಷೆ ಎಳೆಯಲ್ಲೇ
ಅಕ್ಷರಗಳಿಗಂಟಿಕೊಂಡು ಏರುವ ನಾನು
ನಿಜ ಲೋಕ, ಭಾಷೆಗಳ ನಡುವೆ
ಜೋತು ಬಿದ್ದಿರುವ ಭಾವನೆಗಳ ಕಲೆಹಾಕುತ್ತೇನೆ ಬಾಯಲ್ಲೇ
ಅಕ್ಷರ, ನಿಜಪರಿಸರಗಳ ನಡುವೆ ತೂಗುತ್ತೇನೆ
ಬೆಟ್ಟದೊಂದರ ತುದಿಯಲ್ಲಿ ನಿಂತು
ಗಾಳಿಯೊಂದಿಗೆ ಗುದ್ದಾಟದಲಿ ಆತ್ಮ ಪ್ರಸಂಶೆ
ರಹಸ್ಯಗಳ ಪ್ರತಿಧ್ವನಿ ಆಲಿಸಲು
ಕೊಟ್ಟಿದ್ದೇನೆ
ಕೌತುಕಕೆ ನನ್ನ ತಲೆ ಮುಕ್ತವಾಗಿ
ನನ್ನ ನಾಲಿಗೆಯೇಕೆ ಇಷ್ಟು ಎತ್ತರವೇರಲು ಹೇಳಿದೆ?
ನನ್ನಾಸೆ, ನನ್ನದೇ ಧ್ವನಿಗಳ ನಡುವಿನ ಅಂತರ ವೇನು
ಏನಿದೆ ಈ ಕಂದರದ ಕೇಂದ್ರದಲ್ಲಿ?
ದೇಹವೇ ತನ್ನಿರುವ ಮೀರಿ ಅತೀತವಾಗುವ
ಆಸೆಗಳ ವಂಚನೆಯಲಿ ಗಡಿಪಾರಾದ ದೇಹ ಗಾಳಿಯಲ್ಲಿ ಸುಭಧ್ರ,The Laboratory.
Somebody asked me who am I?
I did reply with pride my name.
The questions on my great family tree 
when investigated unstopped and uninterrupted…
further and farther like a detective on solving a murder mystery
I did answer my father’s name and his father’s….
grand fathers name…
With sir name attached in great fancy
I did not forget to detail out the place of migration
from where it branched and extended in its exploration
An unavoidable adventure of an escape of desperation.
The questions seem to be unending….
the names and identity and the origin of history diffused
My very presence became a worthless molecule
disappeared into the timeless solution,
The great search continues to segregate the solute
Solvent is settled in a saturated solution
dissolved gradually into a matter of plasma
And till I got confused with constant stirring
who am I ? Yes...tell me who I am?
Forgot my own present name,puzzled and irritated in a raze,
I answered.....
"Does it really matter now?"

ಪಲಾಯನ /ಮೌನ ಕಣಿವೆ. 

ದೂರದ ಬೆಟ್ಟ ನುಣ್ಣಗೆ, ಕಾಣುವ ಕಾಡು ಸಣ್ಣಗೆ
ಹೂಕೋಸುಗಳ ಹಸಿರ ಸೊಂಪಿನ ಗುಂಪು
ಹೊರಳಿದ ಕೋನದಲ್ಲೆಲ್ಲಾ ವಿಸ್ತರಿಸುವ ಕಣ್ಣು
ಒರಟು ಹಸಿರ ಚಾದರಹೊದ್ದಿರುವ ಗಿರಿಗಳ ರಾಶಿ,
ಕಣಿವೆಯ ಆಳದ ಮೇಲೆ ಕಾಣುವ ವಿಸ್ತಾರ ನೀಲಿ, 
ಕಾಡ ತಬ್ಬಲು ಕಾಡುವ ಚಡಪಡಿಸುವ ಮನಸು
ಶಿಖರ ಏರಿ ನಿಂತಾಗ ಸ್ವರ್ಗತಾಕಿದ ಅವ್ಯಕ್ತ ಖುಷಿ,
ನೂರಾರು ಬೆಟ್ಟಗಳು ವಿಶಿಷ್ಟ ಮೇಲ್ಮೈ
ಗುಮ್ಮಟವೋ, ಗೋಪುರವೋ,ಎಲ್ಲವೂ ಅಂತ್ಯದಲಿ
ವಕ್ರತೆಯ ಸಮತಟ್ಟು,ಇಳಿಜಾರ ಮೇಲ್ಮುಖ ಏರು ದಿಣ್ಣೆ
ತಗ್ಗಾಗುವ ಬಯಲು, ಕೆಳಹರಿಯುವ ಝರಿ
ರಕ್ತನಾಳಗಳು, ಲೋಮನಾಳಗಳ ಹರಿವಲ್ಲಿ ತೊರೆಗಳ ಕವಲು
ಕತ್ತರಿಸಿ,ನೀಟಾಗಿ ಬೋಳಿಸಿದ ಉದ್ಯಾನವನದ ಹುಲ್ಲಲ್ಲ
ಸ್ವೇಚ್ಛೆಯಲಿ ಎಲ್ಲೆಡೆ ಹರಡಿ, ಎಲ್ಲರನು ಬಚ್ಚಿಡುವ
ಸಸ್ಯಾಹಾರಿ ಹಲ್ಲುಗಳ ಸೈಂಧವ ಹುಲ್ಲು
ಅಪರಿಚಿತ ಜೀವಿಗಳ ಬಾಡಿಗೆರಹಿತ ಆವಾಸ
ಇಳಿಜಾರಿನ ತಳದಲ್ಲಿ, ಅಸಂಖ್ಯ ಅಗೋಚರ ಜೀವ ಪ್ರಭೇದಗಳು
ಇಳಿದಾಗ, ನಡೆದಾಗ, ಏರುವಾಗ ಎಲ್ಲವೂ ಅಯೋಮಯ!
ದೇಹಾಂತರಿಕ ಅಂಗರಚನಾ ಬಲೆ,
ವಿವರಣೆಗೆ ಸಿಕ್ಕದ, ವಿವಿದತೆಯನ್ನೇ ಕೆಣಕಿ,
ಜೋಡಿಸಲ್ಪಟ್ಟ ಸಸ್ಯ ಸ್ತರಗಳ ಜಾಲ,
ಅಂಗ, ಅಂಗಾಂಶಗಳ ಪ್ರತ್ಯೇಕ ಕೋಶಗಳ ವಿನ್ಯಾಸ, ,
ಮರಗಿಡಗಳು, ಪೊದೆ ಮೂಲಿಕೆ, ಎಲೆ ಹೂಗಳ ಓಕುಳಿ
ಒಣಗಿ, ಒಂಟಿನಿಂತ ಕಪ್ಪು ನಿರ್ಜೀವ ಪಂಜರ
ಭಯ ಹುಟ್ಟಿಸುವ ಒಂಟಿ ಮರ ಹಸಿರ ಓಯಸಿಸ್ ನಲ್ಲಿ
ಇಂಚು,ಇಂಚಲ್ಲೂ ಬದಲಾಗುವ ಬಣ್ಣದ ಸಂಚು,
ಮರುಗಳಿಗೆಯಲಿ ದಟ್ಟಮೋಡದಲಿ ಮಿಂಚು
ಯಾವುದಕೋ ನಡೆಯುತಿದೆ ಈ ಹೊಂಚು,
ಏನಿದು ಹಸುರಿನ ಈ ಸೋಗು? ಕಾಡಿನ ಸೊಬಗು,
ಇರುಳು ಬೆಳಕಿನ ಮೆರಗು! ಶಾಶ್ವತ ಬೆರಗು,
ಮರೀಚಿಕೆಯ ವಿಸ್ತಾರ, ಆಲಂಗಿಸಿ ಮುದ್ದಿಸುವ ಆಸೆ
ಏನನ್ನು ಅಪ್ಪಲಾರದ, ಎಲ್ಲವನು ಹಿಡಿಯಲಾಗದ
ವಿಶಾಲತೆಯಲಿ ಕರಗಿ, ಆತ್ಮ ಆಂತರ್ಯದಲಿ
ಕಳೆದು ಹೋಗುವ ಅಸಹಾಯಕ ಪ್ರೇಮಿ.

Tuesday, April 3, 2018ಶಿಕಾರಿ.


ಪ್ರಾಣಿಪ್ರಿಯರ ದಯೆ
ಅನಿವಾರ್ಯವೇ ಪ್ರಾಣಿಗಳಿಗೆ?
ಸ್ವಾರ್ಥಕ್ಕೆ ಬಳಸಿ, ಮಾಡಿದ ನಾಮಕರಣ
"ಸಾಕುಪ್ರಾಣಿಗಳು"
ಮನುಷ್ಯ!
ನೀನೆಂತಹ ಪ್ರಾಣಿ?
ವಿಕಾಸದ ವಿಲಕ್ಷಣ ಅಂತ್ಯದ ಕೊಂಡಿ
ಗೆಲ್ಲಲಾರದ ಪ್ರಾಣಿಗಳಿಗೆ ಅಂಜಿ
ವರ್ಗೀಕರಣ ಗೊಂಡ, ಕ್ರೂರಮೃಗಳು.
ಎರೆ ಒಡ್ಡಿ, ಗಾಳ ಹಾಕಿ,
ಅಡಗಿ, ಗುರಿ ಇಟ್ಟು
ಬೆನ್ನಿಗೆ ಚೂರಿ ಹಾಕುವ ಸುಸಂಸ್ಕೃತ
ಮಹಾ ಶಿಕಾರಿ,
ನಾಗರೀಕ ಹವ್ಯಾಸಿ.
ಮಹಾವಿಲಾಸಿ,
ನಿಜಕೂ ಮಹಾದಾನಿ.
ದುರಾಸೆಯ ನಿನ್ನ ಪ್ರಗತಿ,
ಜೀವಸಂಕುಲ ಕಂಡ ಅಧೋಗತಿ.
ಕುತೂಹಲದ ತೆವಲಿಗೆ ಎಲ್ಲಿಯ ಮಿತಿ?
ಪಿಂಡಾರ್ಪಣೆಗೆ ಭೂಮಂಡಲವೇ ಆಹುತಿ
ಈ ಗ್ರಹದ ಅನಪೇಕ್ಷಿತ ಅಥಿತಿ.
ದಿಕ್ಕು,ದೆಸೆ ಇಲ್ಲದ ಅನ್ವೇಷಕ ಸ್ಥಿತಿ
ನಿನ್ನಾತ್ಮಹತ್ಯೆಯ ನಿಲ್ಲದ ಗತಿ.
ನೆನಪಿರಲಿ, ಆಗಲಿದೆ
ಜೊತೆಯಲ್ಲಿ ನಿನ್ನದೂ ತಿಥಿ.

Tuesday, March 27, 2018

Pursuit.

                                                                     
                                                                                                                                                                                                                                                                                       

Pursuit.

Every action in a fraction of a second here is genetically real 

Mysteries and miseries of yours can never be extraterrestrial
The bond with the gravity with mortality is the fact, though cruel 
Escape from the agonies to ecstatic level is ever a playful will.Why fear and crave for psychedelic life of only sybaritic ploy 
You can never be alone in this paradise to enjoy licentious joy
Life is simply a cyclic repetition of birth, growth and death
Merely being alive with the senses intact is the absolute truth.


The joy that jerks and lurks on us often dearly but rarely
The sadness that mocks and sucks us too quietly but deeply
The zeal for joy, the soul of sorrows are never a scarcity 
Let the spirit of "being alive" remain in us with all its divinity


Proclaim your needs as per your lawful biological share
Neither more,nor less of your right, have it, and enjoy the bliss 
You will be too light without any burden of luxury in your transit 
One who carries nothing lives meditatively in their quiet pursuit.


27-03-18
The Laboratory.


Somebody asked me who am I?
I did reply with pride my name.
The questions on my great family tree 
when investigated unstopped and uninterrupted…
further and farther like a detective                                                                                                                     
solving a murder mystery 
I did answer my father’s name and his father’s….
grand fathers name…
With sir name attached in great fancy
I did not forget to detail out the place of migration
from where it branched and extended in its exploration
An unavoidable adventure of an escape of desperation.
The questions seem to be unending….
the names and identity and the origin of history diffused
My very presence became a worthless molecule
disappeared into the timeless solution,
The great search continues to segregate the solute
Solvent is settled in a saturated solution
dissolved gradually into a matter of plasma
And till I got confused with constant stirring
who am I ? Yes...tell me who I am?
Forgot my own present name,puzzled and irritated in a raze,
I answered.....
"Does it matter now?"

Wednesday, March 7, 2018

ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ.......


ಚುಮು,ಚಿಮು ಬೆಳಕು ಚಿಗುರುವ ಮುನ್ನ,
ಚಿಲಿಪಿಲಿ ಹಕ್ಕಿಗಳು ಗೂಡುಬಿಡುವ ಮುನ್ನ
ನಡೆಯುತ್ತಾರೆ, ನಡಿಗೆಪ್ರಿಯ ನಾಗರೀಕರು 
ತಮ್ಮ ನಗರದ ಶ್ವಾಸಕೇಂದ್ರಗಳಲ್ಲಿ
ಕತ್ತಲ, ಸದ್ದಡಗಿದ ಮುಸುಕಿನ ಮಂಪರ ಮುಂಜಾವಿನಲ್ಲಿ
ಬಡಾವಣೆಯ ನಡು ಮಧ್ಯದ ಹೆಮ್ಮೆಯ ತಮ್ಮ ಕಾಡಲ್ಲಿ
ವಾಯುವಿಹಾರ, ಚಲನಾಸಕ್ತರು ಕಾವಲುಗೋಪುರದ ಸುತ್ತುತ್ತಾ 
ಮೂರು ಪ್ರದಕ್ಷಣೆ ಮುಗಿಸಿ,ತೀರ ಸುಸ್ತು
ಆರಾಮದಾಯಕ ಆಯಾಸದಲ್ಲಿ ಅಸೀನರು

ನಡಿಗೆಗೆಂದೇ ಸಮವಸ್ತ್ರ, ಕಿವಿಗೆ ಅಂಟಿದ ಗಾಯನ
ನಿಶ್ಯಭ್ದ ಗಾನಾಲಾಪ ಕಿವುಡರ ಸಾದನ 
ಹಿಡಿತಕ್ಕೆ ತಕ್ಕ ಪಾದರಕ್ಷೆಗಳು, ತೋರಿಕೆಗೆ ಬೂಟು 
ಅತ್ಯಾಕರ್ಷಕ ನವೀನ ಟ್ರ್ಯಾಕ್ ಸೂಟು
ನಿಂತಲ್ಲೇ ನಡೆಯುವ, ಓಡುತ್ತ ನಡೆಯುವ, 
ನಡೆಯುತ್ತ ಓಡುವ, ಗತಿಯಲ್ಲೇ ಪಡೆವ ಕರ್ಣಾನಂದ
ಗುಂಪಲ್ಲಿ ಗದ್ದಲವೆಬ್ಬಿಸುವ ಉತ್ಸಾಹಿ   ಹವ್ಯಾಸಿಗಳು
ವಿಶ್ವ ವರ್ತಮಾನ, ಗಹನ ಚರ್ಚಾ ವ್ಯಸನಿಗಳು

ಉದ್ಯಾನ ತಜ್ಞನ ಅಭಿರುಚಿಯ ಅಭಿವ್ಯಕ್ತಿ 
ಗಿಡ ಮರಗಳ ಇರುವಿನ ಆಯ್ಕೆ
ತನ್ನಿಚ್ಛೆಗನುಸಾರ ಪುಷ್ಪ ಸಿಂಗಾರ 
ಕಂಡ ಕಂಡಲ್ಲಿ ಕತ್ತರಿಸಿ ಕಾಂಡ, ಮುಂಡಾಯಿಸಿ ರುಂಡ 
ಕುಂಡದಲಿ ನೀರುಣಿಸಿ, ಗುಲಾಮಗಿರಿ ಗಿಡ ಕೃಷಿ
ಸಿಕ್ಕು, ಸಿಕ್ಕಾದ ತಂತಿಗಳ ಬಲೆಯಲ್ಲಿ ಬಿಗಿದ ನೇಣುಗಳಲ್ಲಿ 
ಎಲೆಗಳ ಚೀತ್ಕಾರ ನರಳುವ ಕಾಂಡ ಕಂಬಗಳಮೇಲೆ
ಅಸಹಾಯಕ ಟೊಂಗೆಗಳು, ಅತೃಪ್ತ ರೆಂಬೆಗಳು, 
ಕವಲಗಾದ ಕಳವಳ, ವಿಧಿಯಿಲ್ಲ ಬೆಳೆಯಬೇಕು ತುಂಡರಿಸಿದಂತೆ
ಜೀತದಾಳುಗಳ ಈ ಜೀವಸಂತೆಯಲಿ, ಜಾಡಮಾಲಿಯ ದರ್ಬಾರು
ಜಾಮಿತಿಯ ರೂಪ ಪಡೆದು ಕಳದೇ ಹೋಗಿವೆ ಇಲ್ಲಿ
ಅಳೆದು, ಹೊದಿಸಿದ ಸಂಚಲನ ಪಥ ಕಲ್ಲುಹಾಸು
ಅಂಕು, ಡೊಂಕಾದರೂ ಮೃದು ಗಾರೆ ದಾರಿ.

ವೃತ್ತ, ಚೌಕಗಳ ನಿಖರ ಅಳತೆಯಲ್ಲೇ ಹಿಗ್ಗುವ ವಿನಯವಂತ 
ಹಸಿರುಹಾಸು, ಮನಬಂದಂತೆ ಬೆಳೆಯುವಂತಿಲ್ಲ,
ಮೀರಿದರೆ ಮಿತಿ, ಆಗಲೇ ಬೇಕು ವನಮಾಲಿಯ 
ಕತ್ತರಿ, ಕುಡುಗೋಲು, ಕೊಡಲಿಗಳಿಗಾಹುತಿ  
ವಿರೂಪ ಬಳ್ಳಿ ಗಿಡಗಳ ಅರಣ್ಯರೋಧನ  
ಹೇರಲ್ಪಟ್ಟ ಹೊಸರೂಪದ ಅವಮಾನದಲ್ಲಿ,  
ಕಸಿಯಾದ ಹೂಗಳು, ಹುಸಿಯಾದ ನಿರ್ವರ್ಣದಲಿ 
ಪಡೆದಾಗಿದೆ ನಿರ್ವಾಣ ಬುದ್ಧನಂತೆ,   
ಶಾಂತ ಮಂದಹಾಸ ಮಂಕಾಗಿದೆ ಮಾತ್ರ
ಆದರೂ...ನನ್ನ ವಿನಂತಿ
'ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ..'


Sunday, February 18, 2018

ವಿಶಿಷ್ಟ..

ವಾಕರಿಸಿ, ಕ್ಯಾಕರಿಸಿ, ಧಿಕ್ಕರಿಸು,
ಉಗುಳಿ, ಹಾಕು ಹಿಡಿ ಶಾಪ,
ಛೀಮಾರಿ ಹಾಕಿ, ಹೇರು ಬಹಿಶ್ಕಾರ
ಪ್ರತಿಕ್ರಿಯಸದ ನಿರ್ಲಿಪ್ತ, ಈ ನಿರ್ಲಜ್ಜ
ಸ್ನೇಹಿತನೋ, ಶತ್ರುವೋ, ಸಂಭಂದಿಯೋ?
ಅದೇಕೋ ಸಹಿಸಲಾರ ಎಂದಿಗೂ ಯಾರ ಸಹವಾಸ
ನಿಯಂತ್ರಣದ ಗುಲಾಮಿಗಡಿಯಲ್ಲಿ ಬಂದಿಯಾಗದ ಭಕ್ತ
ಅವಿಧೇಯ ಪ್ರಾಣಿ, ಗುಡಿಯಿಂದ ಮುಕ್ತ
ನ್ಯೂಟನ್ ನ ಗುರುತ್ವ, ಐನ್ಶ್ಟಿನ್ ಕಾಲಪ್ರಜ್ಞೆ ಫತ್ವಾ
ಪರಿಗಣಿಸದ ಪ್ರಭೇದ ಚಡಪಡಿಕೆಯೇ ಅಸ್ತಿತ್ವ
ಆಕಾಶದ ವಿಸ್ತಾರದಲ್ಲಿ ಹಗುರತೇಲುವ ಮನಸು
ಕಾಯದ ಕಾಯಕದ ಹಂಗಿಲ್ಲದ ವಿರಕ್ತ
ಕಲ್ಪನಾತೀತ ಹಿಡಿತಕ್ಕೆ ಸಿಗದ ಅನೂಹ್ಯ ವಿಕಾಸ
ಇತಿಹಾಸಕಾರ ವಿಷಯಾಸಕ್ತ ಕುಗ್ಗದ ಹಿಗ್ಗು
ಸ್ಥಿತಿಸ್ಥಾಪಕತ್ವದಲ್ಲಿ ವಿಸ್ತೀರ್ಣ ಅಳೆಯುವ ಹಂಬಲ,
ಖಾಲಿತನದ ನಿಹಾರಿಕೆಯಲಿ ಕಲ್ಪನಾವಿಹಾರಿ,

ಎಲ್ಲರ, ಎಲ್ಲದರ ಬೆಸುಗೆ ಅನಿವಾರ್ಯ,
ಸಹಜ ಬದುಕಿನ ಬೆಲೆ, ವಾಸ್ತವದ ಬಲೆ
ಆಹಾರ ಜಾಲದಲಿ ಜೀವಸಂಕುಲ ಬೆಸದ ಮಾಯಾಜಾಲ
ಜೀವಿ ಸಂತುಲನದಲ್ಲಿ ನಿರ್ಜೀವಿ ಪರಕೀಯನಲ್ಲ
ವಿಶೇಷನೂ ಅಲ್ಲ, ವಿಶಿಷ್ಟನೂ ಅಲ್ಲ, ಆದರೆ ಬಲ್ಲ
ನಿಶ್ಯೇಷವಾಗುವ ಈತನೂ ಸಹಾ ನಿಮ್ಮೊಂದಿಗೆ
ಇರಬೇಕು, ಇರುವು ರಹಸ್ಯ, ಒಗಟಿನಂತೆ
ಪ್ರವಾದಿಯೂ ಇವನೇ, ಧರ್ಮಪರಿಪಾಲಕ ಭಕ್ತನೂ ತಾನೇ,
ಪ್ರಚಾರಕರಿಲ್ಲ,ಹಿಂಬಾಲಕ ತಾನೊಬ್ಬಮಾತ್ರ
ಯಾರರನ್ನೂ ತಲುಪಲಾರದ ಸಂತ,
ಸಮಾಧಿಯಲಿ ಏಕಾಂತ, ಮಹಾ ಭ್ರಾಂತ
ತನ್ನೊಂದಿಗೆ ತಾನು, ತನ್ನದೇ ನಿಶ್ಯಭ್ದ ಸಿದ್ಧಾಂತ
ಬೆರಗಾಗಿ, ನೋಡಿ ಚಕಿತಗೊಳ್ಳುವ ಮಗುವಿನ ರಾದ್ಧಾಂತ
ಹುಡುಕುತ್ತಾನೆ ಸದಾ ಯವುದನ್ನೋ,
ಮತ್ತೆ,ಮತ್ತೆ ಏನನ್ನೋ!

Saturday, February 3, 2018


ಗಾಂಧಿಬಜಾರ್.

ನಾಲ್ಕು ದಶಕಗಳ ದಿನನಿತ್ಯ ಆತ್ಮೀಯ ಒಡನಾಟ
ಕದಲಿಲ್ಲ ಇಲ್ಲಿಂದ ವಲಸೆ ಬಂದ ದಿನದಿಂದ, 
ಆವಾಸ ದಾನಕ್ಕೆ  ತೀರಿಸಲಾಗದ ಋಣದಹೊರೆ ಹೊತ್ತು
ಮುಲಾಜಿಗೆ ಇರಬೇಕು, ಬಿಡಲಾರದ ಈ ಅಪರೂಪದ ಸಂಭಂದ 
ಈ ಗಾಂಧಿಬಜಾರ್ ರಸ್ತೆಯ ಜೊತೆಯ ಅನುಭಂದ, 
ಗಾಂಭೀರ್ಯದ ಈದಾರಿ ಕಾಯ್ಕುಕೊಂಡಿದೆ ವ್ಯವಹಾರಿಕ ದೂರ
ತನ್ನವನಾಗಿ ಮಾಡಿಕೊಳ್ಳದೆ ಇಂದಿಗೂ, 
ಭೂರಿ ಬೋಜನ ಬಡಿಸದಿದ್ದರೂ 
ಖಾಲಿಹೊಟ್ಟೆಗೆ ಎಂದೂ ಹಾಡಿಲ್ಲ ಒಂದು ಲಾಲಿ 
ತನ್ನರಸ್ತೆಯ ಸಾಮಾನ್ಯ ಪಂಕ್ತಿಯಲ್ಲೇ ಇಡ್ಲಿಕೊಟ್ಟು
ತಲೆ ತಟ್ಟಿ ಜೋಗುಳದಲ್ಲಿ, ಬಸವನಗುಡಿ ಬಂಡೆಗಳ ಮೇಲೆ ಕನಸು ಕೆತ್ತಿಸಿದೆ.

ಅನ್ನವೇ ಕನಸಾದ ಕಾಲ, ಚಿತ್ರಾನ್ನದಲೇ ತಣ್ಣಗಾಗುತ್ತಿದ್ದ ಹಸಿವು
ಕೃತಜ್ಞನಾಗಿರಬೇಕೇ ಹೊರತು, ಸಮಾನರಾಗುವುದಿಲ್ಲ
ಧೀರ್ಘ ಸ್ನೇಹದ ಸಲಿಗೆಗೆ ಅವಕಾಶವಿಲ್ಲ. 
ಯಾರಿಗೂ, ಎಂದೂ, ತನ್ನ ಪರಕೀಯತೆ ಬಿಟ್ಟುಕೊಟ್ಟಿಲ್ಲ. 
ದೂರ ತಳ್ಳುವುದಿಲ್ಲ, ಹತ್ತಿರ ಸೇರಿಸುವುದಿಲ್ಲ
ಯಾರನ್ನೂ ಸಹಾ, ಆಗರ್ಭ ಶ್ರೀಮಂತರಹಾಗೆ, 
ಗೌರವಾನ್ವಿತ ಗಾಂಭೀರ್ಯದ ಅಂತರ ಅನಿವಾರ್ಯ. 
ಇರಬಹುದು ಇದರ ಘನತೆ  ಅನ್ಯತೆಯ ಧನ್ಯತೆಯಲ್ಲಿ  
ಬರುವವರೆಲ್ಲಾ ಇಲ್ಲೇ ನಿಲ್ಲುವರಲ್ಲ ಎಂಬ ಕಟುಸತ್ಯ 
ಅರಿವಾಗಿ ಇಳಿದಿದೆ ಆಳದಲಿ ಅನುಭವದ ಪಾಠ,
ತನ್ನಿರುವಿನಿಂದಲೇ ಹರಸಿ, ಆಶೀರ್ವದಿಸುವ ಸಂತ, ಮಠಾದೀಶ 

ಸಾಮಾನ್ಯ ಯಾತ್ರಿಗೆ ತೀರದ ವ್ಯಾಮೋಹ. 
ಏನನ್ನೂ, ಯಾರಿಂದಲೂ  ಪಡೆಯದ  ಈ ಪರದೇಸಿ
ಯೋಗ್ಯರಿಗೆ ತಕ್ಕಂತೆ ದೊರೆತಿದೆ ಅವರವರ ಪಾಲು
ಎಲ್ಲರ ಅನಿವಾರ್ಯ ಪೂರೈಸಿದೆ ಬೇಕುಗಳ, ಯೋಗ್ಯರಿಗೆ
ಮುಲಾಜಿಲ್ಲದ ನಿರ್ದಾಕ್ಷಿಣ್ಯ ಸಂಭಂದ ಲಕ್ಷಣ. 
ತಿಳಿದಿದೆ,  ತಾನೊಂದು ರಸ್ತೆಮಾತ್ರ ಹಾದಿಹೋಕರಿಗೆ
ನಾಮಧೇಯರ ನಡಿಗೆಯಲಿ  ನುಣುಪಾಗಿರುವ ರಸ್ತೆಗಳು
ಬಿ.ಎಂ.ಶ್ರೀ,ಡಿ.ವಿ.ಜಿ, ಎಚ್.ಎನ್, ಮಾಸ್ತಿ, ಆನಕೃ,ಆಣ್ಣಯ್ಯ,  
ಅಳೆದಿದ್ದ, ನಡೆದಿದ್ದ ಇಂಚಿಂಚು ಬಜಾರಿನ ಒಡನಾಟ
ಅಲ್ಲೇ ಟ್ಯಾಗೂರ್ ವೃತ್ತದಲಿ ಯುವಕ ಕೇಂದ್ರ
ಪಕ್ಕದಲೇ ವಿಶ್ವ ಸಾಂಸ್ಕೃತಿಕ ಸ್ಥಾನ, ಬದಿಗೆ ರಾಮಕೃಷ್ಣರ ಆಶ್ರಮ,
ಹಚ್ಚಿದ್ದರು ಯುವಕರು ಸ್ವಾತಂತ್ರದ ಕಿಚ್ಚು ಹಿಂದೊಮ್ಮೆ

ಲಂಕೇಶರ ಬೆಳಗು, ಆಡಿಗರ ಸಂಜೆ, ಕಿ.ರಂ ರ ರಮ್ ರಾತ್ರಿ
ಮಿಂಚುತ್ತಿದ್ದ ಸಾಹಿತ್ಯ ಸಂಚು, ನಿಸಾರರ ವಾಯು ವಿಹಾರ 
ವೈಎನ್ಕೆ ಹಾಸ್ಯದ ಮಿಂಚು, ಕಾರಂತರ ಕಂಠ ಕಂಚು,
ಲಿಪಿಯಲ್ಲೇ ಬಾಕಿಯಾಗಿದ್ದ ಬಾ.ಕಿ.ನ,
ವಲಸಿಗ ಪ್ರತಿಭಾನ್ವಿತ ಯುವ ದಂಡು ಹಾಕುತ್ತಿತ್ತು ಗುಂಡು
ಬೆಳೆದು ಆಕ್ರಮಿಸಲಿಲ್ಲ ವಿದ್ಯಾರ್ಥಿಭವನ ಭವ್ಯವಾಗಿ 
ಉಳಿಸಿಕೊಂಡಿದೆ ಭವ್ಯತೆಯನು ಮಾತ್ರ ಸ್ಮಾರಕದಂತೆ
ದ್ವಾರಕ ಭವನ, ಅವಸಾನ ಕಂಡಿದೆ ಚಟ್ನಿಯಲ್ಲಿ
ಗೀತಾರೆಸ್ಟೋರೆಂಟನ ಸಾಂಬಾರು ಸೋತಿತು ಎಲ್ಲರನು ಬೆಳಸಿ
ಡಬಲ್ ಡೆಕ್ಕರ್, ಟೇಲರ್ ಬಸ್ ಗಳ ನಿಲ್ದಾಣ, ಗತ ಇತಿಹಾಸ
ರಸ್ತೆ ಹನ್ನೊಂದರ ಕೊನೆಯ ನಿಲುಗಡೆ ಮೇಕ್ರಿವೃತ್ತ  ಇಂದು ಶೂನ್ಯ
ಹಿಡಿತಕ್ಕೆ ಸಿಕ್ಕದ ಈ ಗೂಳಿ, ಬೀದಿಬಸವ ! ಗುಡಿಯಲ್ಲಿದ್ದರೂ 
ಜಾರುತ್ತದೆ ಆಕ್ಟೋಪಸ್ ನಂತೆ ಎಲ್ಲರಿಗೂ ಭ್ರಮೆಯಾಗಿ
ಕ್ಷಣ, ಕ್ಷಣಕೂ ಬಣ್ಣಕಳಚುವ ಓತಿಕ್ಯಾತ, ಈ ಮಾಯಾಬಜಾರ್
ಹೆಸರು ಮಾತ್ರ ಗಾಂಧಿಬಜಾರ್.... 

Blog Archive