ಪ್ರವಾಹ.
ನೆಲ ನೆನೆಯುವ  ತುಂತುರು, ಬೆಳಕಿಗೆ ಹಿಡಿದಿದೆ ಮಂಪರು,
ಬಿಸಿಲಿಗೆ ಬೆಂಡಾಗುವ ಬಯಲು,ಬಿರುಕು ಬಸಿರು
ಯಾವುದೋ,ಎಲ್ಲಿಯದೋ  ಊಹೆಗೆ ನಿಲುಕದ ಒಂದು ಕಾಲ.....
ಆದರೆ ಅಕಾಲ... ಕಂಡಿಲ್ಲ ಕೇಳಿಲ್ಲದ ಋತು,
ನಿರಂತರ ನಿಸರ್ಗ ಜಾಲ,
ಸಕಾಲ   
ಮೌನ ಕವಾಯತು ನಡೆಸಿರುವ  ಮೋಡದ ದಂಡು
ನಡೆಸಿದೆ
ಪಥಸಂಚಲನ ಆಕಾಶದಲ್ಲಿ
ಅನಿರೀಕ್ಷಿತ ಧಾಳಿ ಸಂದೇಶ ಹರಡಿತು 
ಸಾವಕಾಶದಲ್ಲಿ,
ಅಲ್ಲೇ ಆ ಆಕಾಶದಲ್ಲಿ,
ಬೆದರಿದ   ಮರಗಿಡಗಳು ಹೊಯ್ದಾಡಿವೆ ಹೂಂಕರಿಸಿ,
ಮುದುರಿ
ತಬ್ಬಿಬ್ಬು ಮಂಗಗಳು,
ನೆಗೆಯುತಿವೆ ಪೈಪೋಟಿಯಲ್ಲಿ
ತಾಯಿತಬ್ಬಿದ  ಮರಿ ಕೋತಿ ನಿಶ್ಚಿಂತ......
ತನ್ನಮ್ಮನ ಅಪ್ಪುಗೆಯಲ್ಲಿ,
ಕಾಡೆಲ್ಲಾ ಪ್ರಕ್ಷುಬ್ದ,  ಮಾಯವಾದವು  ಹಕ್ಕಿ ಗೂಡಿನಲ್ಲಿ,
ನಿರ್ಭಯ ಮೌನ ರಾಗ ಸೆಟೆದ ಬಾಲಗಳಲ್ಲಿ,
ಹಾವು ಹಾರಿವೆ ಹೊಲಗಳಲ್ಲಿ,ಕಾವು ತಗ್ಗಿತು ಬಿಲಗಳಲ್ಲಿ,
ಮಂಡೂಕಾಲಾಪನೆ ಕೆರೆಗಂಟಿದ ಕಳೆಗಳಲ್ಲಿ
ರಣಕಹಳೆ ಗುಡುಗಿದೆ ಮಿಂಚಿನ ಬಲೆಯಲ್ಲಿ
ಪುಟಿದೇಳುವ ಸಿಡಿಗುಂಡಿನ ಹನಿಗಳು ಧೂಳೆಬ್ಬಿಸಿ ಇಳಿದಾಗ,
ತುಂಬಿ ತುಳುಕಿತು ಕೊರಕಲು ಕಣಿವೆ, ತೋಯ್ದ ಬಣಿವೆ. 
ಮಳೆಯಾಯಿತು ಗಾಳಿ, ಸುಳಿಯಾಯಿತು ರಸ್ತೆ. 
ಹಳ್ಳವಾಯಿತು  ಹಳ್ಳಿ, ದ್ವೀಪವಾದ ಊರು,
ಸಾಗರ...ನೀರ  ಆಕರ ನಗರ  
ರಸ್ತೆ.... ಉಕ್ಕಿ ಹರಿಯುವ ಹೊಳೆ,
ಎಲ್ಲಾ ಅವ್ಯವಸ್ತೆ!!
ನೆಲಕಚ್ಚಿದ  ಬೆಳೆ,ನಿಜ ಕೊಚ್ಚಿಹೋದ   ಕೊಳೆ,
ತೇಲಿವೆ ನಾರುವ ನಿಶ್ಚಲ ರಾಶಿ ದೇಹಗಳು  
ನಿರ್ಜನ ಬೀದಿ ಬೀದಿಯಲ್ಲಿ ಹರಾಜ್....
ಬೇಡಿಕೆಯೇ ಇಲ್ಲಾ
ಸಾವು ತೀರ ಅಗ್ಗ...
ಹರಿದೇ ಹೋಗಿದೆ  ಪಾಪದ  ಹೊಳೆ
ಆಣೆಕಟ್ಟು ಬೇಡ, ಜಲಭಾರ!
ಭೂಭಾರ, ಎಲ್ಲಾ  ಮುಗಿಯದ ವ್ಯವಹಾರ.
ಕುದುರದ ವ್ಯಾಪಾರ,ಚೌಕಾಶಿ ಆರಂಭ
ಉಸಿರಪ್ರೇಮಿಗಳ ಹುಸಿ ಹಸಿರಿನಲ್ಲಿ....  

ಬೆಳಗು....
೧. ಕನಸ ಘನಿಸುವ ಆಗಸಕೆ ಮೇಘದ ಮೆರಗು,
    ಈ ಸುಂದರೆ ಬೆಳಗು.....
೨. ಅವಿತುಕೊಂಡ ಆಗಸಕೆ ಮುನಿಸಿಕೊಂಡ ಬೆಳಗು...
೩. ಮಾಮೂಲು ಸಂದೇಶ, ಏನಿಲ್ಲ ವಿಶೇಷ.
    ಘಾಸಿಗೊಂಡ ಗಗನ ಭೂಪ
    ಸವರಿಕೊಂಡಿದ್ದಾನೆ ಮೋಡದ ಮುಲಾಮಿನ ಲೇಪ...
    ಪಾಪ..
೪. ಮುಸುಕಿದ ಮೋಡದ ಮುಂಜಾವು,
     ದೇಹಕೆ ಬೇಕು ಬಿಸಿಕಾಫಿಯ ಕಾವು,
     ಬೇಡ..ಬೇಡ ಯಾವ ಜಂಜಾಟದ ನೋವು,
     ಬಿಲದಲ್ಲಿ ಬೆಚ್ಚಗೆ ಮಲಗಿರುವ ಹಾವು...


Comments

Popular posts from this blog

ಕಾಗೆ....