2011.....

ಹೊಸ ವರ್ಷ...

ಅಂದು ಕೊಂಡಂತೆ, ಕನಸು ಕಂಡಂತೆ, ಬಹುನಿರೀಕ್ಷಿತ ಹೊಸ ವರ್ಷ ಬಂದೇ ಬಿಟ್ಟಿತು. ಹನ್ನೊಂದರ ಬದುಕು ಹಗುರವಾಗಿರಲಿ ಎಂಬ ಆಸೆ, ಮನೋಕಾಮನೆ. ಕಾಲಿಟ್ಟಿತು ಕಾಲ,ಅದೇ ಎಲ್ಲಾ ಹೊಸದೇನಿಲ್ಲ, ವಿಚಿತ್ರ ಸೋಮಾರಿ ಪ್ರಖರ ಬೆಳಗು, ಗುಯ್ ಗುಡುವ ರಸ್ತೆಗಳ ಸ್ಮಶಾನ ಮೌನ. ಚುಚ್ಚುವ ಬೆಳಗು. ಒಂಟಿತನ ಕಾಡುವ ಹಗಲು. ಮುಗಿಯದ ಜೀರುಂಡೆಯ ಝೇಂಕಾರ ಹೊರಗೆ. ಚಡಪಡಿಕೆಯ ಚಮತ್ಕಾರ ಒಳಗೆ. ಮನಕ್ಕೆ ಮನೆಗೆ ವ್ಯತ್ಯಾಸವೆ ಇಲ್ಲ, ದಿನದ ಗಂಟೆಗಳಲ್ಲಾ ಬಾರಿಸುತಿದೆ ಬೇಸರದ ಜಾಗಟೆ. ಆದರು ಕ್ಷಣ ಕ್ಷಣ ಗಳ ಕೂಡುವ ಲೆಕ್ಕ ತಪ್ಪುವುದಿಲ್ಲ. ಕೂಡುತ್ತಲೇ ಗುಣಾಕಾರವಾಗಿ ನಿಮಿಷ ಗಂಟೆಗಳಲ್ಲಿ ಭಾಗಕಾರಕ್ಕೆ ಭಾಗವಾಗದೇ ಶೇಷವಾಗಿ ಉಳಿಯುತ್ತದೆ. ನೆನ್ನೆ, ಮಾಯವಾಗಿವೆ ಕಾಣದಂತೆ. ದಿನ ಉರುಳಿತು, ದಿನ  ವಾರ, ವಾರ ತಿಂಗಳಾಗಿ ... ಹತ್ತರ ಮತ್ತೊಂದು ವರುಷ ಹಿಂದಾಯಿತು.ನನ್ನ ಜೀವನದ ಖಾತೆಗೆ ಇನ್ನೊಂದು ವರ್ಷ ಪ್ಲಸ್ ಆಗಿದೆ.  one year nearer to my destiny!!   ವರ್ತಮಾನದಿಂದ ತಪ್ಪಿಸಿಕೊಳ್ಳುವುದಕ್ಕೆ ಬರುವ  ನಾಳೆಗಳು ಹಸಿರಾಗಿ ಕಾಣುತ್ತದೆ. 
ಅದೇನೋ ಅಂದುಕೊಂಡಿದ್ದು ಏನಾಯಿತು? ಈಗ ಅನಿಸುತ್ತದೆ ಆಗ ಅಂದುಕೊಂಡಿದ್ದಾದರು ಏನು? ಕಳೆದ ಸಮಯದಲ್ಲಿ ಕಂಡ ಕನಸು ನೆನಪಿಗೆ ಬಾರದೆ ಕಲುಕಿದೆ ಅಸ್ತಿತ್ವವನ್ನು. ಹುರುಪು, ಉತ್ಸಾಹ, ಕನಸು, ನಿರ್ಧಾರ ಯಾವುದು ನೆನಪಿಗೆ ಬರುತ್ತಿಲ್ಲ. ಹಿಂದೆ ಉಳಿದ ನೆನಪು, ಹಿಡಿತಕ್ಕೆ ಸಿಕ್ಕದ ವರ್ತಮಾನ,ಇದೀಗ ತಾನೇ ಮುಗಿದು ಹೋದ ಕ್ಷಣ, ಮುಂದಿನ ಕಲ್ಪನೆ ಕನಸುಗಳಲ್ಲಿ ಕಳೆದು ಹೋಗಲಾರದ ಜಡತವ. ಎಲ್ಲೋ ಬದುಕು ಶಾಶ್ವತ ನಿಂತಿದೆ ಎಂಬ ಅನುಭಾವ. ವಿಚಿತ್ರ ಮನಸ್ಥಿತಿ. ಎಲ್ಲರಿಗು ಹೀಗೆಯೇ? ನನಗೆ ಮಾತ್ರ ಈ ಜಡತನದ ವಾಸಿಯಾಗದ ರೋಗವಾಗಿದೆ ಎನಿಸುತ್ತದೆ. ಸುತ್ತ ನೋಡಿದರೆ ನನ್ನವರೆ!!! ನನ್ನಂಥವರೇ...ಪ್ರಾಯದ ಜೀವಿಗಳು. ಸುಕ್ಕುಗತ್ತಿದೆ ಚರ್ಮ, ಬದಲಾಗಿದೆ ಮುಖ, ಬೋಡಾದ ತಲೆ, ಕೂದಲು ಇದ್ದರು ನೆರೆತ ಬಣ್ಣ. ಹೌದು ಅವರು ಸಹಾ ಥೇಟ್ ನನ್ನ ಹಾಗೆಯೇ. ಆದರು ಅವರೆಲ್ಲ ಎಲ್ಲಾ ರೀತಿಯಲ್ಲಿಯೂ ಇನ್ನೂ ಜೀವಂತ ವಾಗಿದ್ದಾರೆ ಅನಿಸುತ್ತದೆ.ನೆನ್ನೆಗಳಲ್ಲಿ  ತೆಳುವುದಿಲ್ಲ, ನಾಳೆಗಳಲ್ಲಿ ವ್ಯರ್ಥ ಈಜುವುದಿಲ್ಲ. ಕ್ಷಣ ಕ್ಷಣದಲ್ಲೂ ಉತ್ಸಾಹದ ಚಿಲುಮೆಯಂತೆ ತಮ್ಮ ಪ್ರತಿಯೊಂದು ಚಟುವಟಿಕೆಗಲ್ಲಿ ಚಿಮ್ಮುತ್ತಾರೆ ಕಾರಂಜಿಯಂತೆ.  ಕನಸು, ಅದೇನೋ ಸಾದಿಸುವ ಹಂಬಲ, ಬಾಡದ ಬತ್ತದ ಜೀವ ಸ್ಪೂರ್ತಿ. ಅವರಿಗೊಂದು ಗುರಿ ಇದೆ. ಅವರಿಗೆ ನನ್ನನ್ನು ಹೋಲಿಸಿಕೊಂಡಾಗ ಹೇಸಿಗೆ ಯಾಗುವಷ್ಟು ಖುಶಿ ಯಾಗುತ್ತದೆ ಅಂದು ಕೊಳ್ಳುತ್ತೇನೆ. ಆದರೆ ಖುಷಿಯೂ ಇಲ್ಲ, ಅಸೂಯೆ ಇಲ್ಲ,

ನನಗೆ ಯಾಕೆ ಎಲ್ಲರಂತೆ ಆಲಸಿತನದಲ್ಲಿ  ಸಮಯ  ಎಂಜಾಯ್  ಮಾಡಲು  ಆಗುತ್ತಿಲ್ಲ.ವ್ಯರ್ಥ  ಕಳೆದ ಸಮಯ  ನೆನೆದಾಗ ಏನೋ ತುಂಬಾ ದೊಡ್ಡ ತಪ್ಪು ಮಾಡಿಬಿಟ್ಟೆ ಎಂಬ ಪಾಪ ಪ್ರಜ್ಞೆ. ಏನು ಮಾಡಲಿ ಬಿಡಲಿ ಕಾಲಕ್ಕೆ ನನ್ನ ಅಪ್ಪಣೆ ಬೇಕಾಗಿಲ್ಲ. ತನ್ನಷ್ಟಕೆ ಸ್ವತಂತ್ರ ವಾಗಿ ಓಡುತ್ತಲೇ ಇರುತ್ತದೆ. ಸಂತೋಷ ಪಡುವುದಕ್ಕೆ ನೂರಾರು ಸಂಗತಿಗಳಿವೆ. ಆದರೆ ಅನುಭವಿಸುವುದಕ್ಕೂ ಸಾಧ್ಯವಾಗದ ಹಂತ. ಪ್ರಾಯಶಃ ನನ್ನ ರೋಗಗ್ರಸ್ತ ದೇಹ?? ಇರಬಹುದು. ಉದಾಹರಣೆಗೆ. ತಿನ್ನುವ ಚಟ. ಆದರೆ ತಿನ್ನಲು ಹೆದರಿಕೆ. ದೇಹಕ್ಕೆ ಒಗ್ಗದ ರುಚಿ. ಪತ್ಹ್ಯಾಹಾರವೇ ಗತಿ. ಊರೂರು ತಿರುಗೋಣ ಎಂದರೆ ಎರಡು  ವಿಧದ ಭಯ. ಒಂದು, ಈಗಾಗಲೇ ಕೈಕೊಟ್ಟಿರುವ ನನ್ನ  ಹೃದಯ ಎಲ್ಲಿಬೇಕಾದರು, ಯಾವಾಗ ಬೇಕಾದರೂ  ಕೈ ಕೊಡಬಹುದು. ರಸ್ತೆಯಲ್ಲಿ ಅನಾಥ ಹೆಣವಾಗುವ ಅಂಜಿಕೆ. ಎರಡನೆಯ ಭಯ. ದೇಹ ಚಲನಶೀಲ ವಾಗಿಲ್ಲ. ಮೂಳೇ ಮಾಂಸಕ್ಕೆ ಬರುವ ಎಲ್ಲಾ ತಾಪತ್ರಯಗಳು ಈಗಾಗಲೇ ದೇಹಕ್ಕೆ ಮುತ್ತಿಕೊಂಡಿವೆ.  ನನ್ನ ಸಾಹಸ ಯಾತ್ರೆಯ ಮಧ್ಯದಲ್ಲೇ ಜಡವಾಗುವ ಸೂಚನೆ. ಇವೆಲ್ಲವೂ ನಿಜವೇ? ಅಥವಾ ನಾನು ಎಲ್ಲದಕ್ಕೂ ಹೆದರುವ ಅಂಜುಬುರುಕನೆ? ಅರ್ಥವಾಗುತ್ತಿಲ್ಲ. ಒಂದಂತು ನಿಜ. ನಾನು ಹೀಗೆ ಇರಲಿಲ್ಲ ಖಂಡಿತ.ಮಹತ್ತರ ವಾದುದನ್ನು ಸಾದಿಸುವ ಕನಸು ಕಂಡಿದ್ದೆ. ಎಲ್ಲವೂ ಆಗಬೇಕೆಂದುಕೊಂಡಿದ್ದೆ. ಆದರೆ ಹಾಗೆ ಆಗುವುದಕ್ಕೆ, ಅಥವಾ ಸಾದಿಸುವುದಕ್ಕೆ ಬೇಕಾದ ಪರಿಶ್ರಮ, ಛಲ, ಧೃಡ ನಿರ್ಧಾರ ಇತ್ಯಾದಿಗಳ ಕೊರತೆಯಿಂದಾಗಿ ಕೇವಲ ಕನಸು ಕಂಡೆನೆ ಹೊರತು ಬೆನ್ನಟ್ಟಿ ಓಡಲಿಲ್ಲ ನಾನು ಒಡಬೇಕಾದಾಗ. ಅದಕ್ಕೆ ಅಂತ ಕಾಣುತ್ತೆ, ಈಗ ತಲುಪಲಾರದ, ಸಾದಿಸಲಾರದ ನಿರಾಸೆಯ ಹಂತ ತಲುಪಿದ್ದೇನೆ.ಮಾಡಬೇಕು, ನಾಳೆ, ನಾಳೆ, ಎಂದು ಮುಂದೂಡಿದ ಆಲಸಿತನದ ನೂರಾರು ದಿನಗಳು, ತಿಂಗಳು, ವರ್ಷ...... ಎಲ್ಲಾ ಮುಗಿದಾಯಿತು ಇನ್ನೇನು, ಈಗ ಮಾಡಬಹುದು, ಅಂದುಕೊಂಡದ್ದನ್ನೆಲ್ಲಾ ಸಾದಿಸಬಹುದು ಎಂದುಕೊಳ್ಳುವ ಕಾಲ... ಈಗ..ಆಸೆಯಿದೆ, ಸಮಯವಿದೆ, ಜೀವಿಸುವಷ್ಟು ಪರಿಕರಗಳಿವೆ...ಆದರೆ...ಕಾಲ ಮಿಂಚಿದೆ...  ನಾನೀಗ ಮುದುಕನಾಗಿದ್ದೇನೆ....
ಹೌದು...ಆದರೆಅದಕ್ಕೆ,ಆ ಅನಿವಾರ್ಯದ ಸಹಜಮುದಿತನಕ್ಕೆ ಬಹಳ ಹಿಂದಿನಿಂದಲೇ ತಯಾರಾಗಿದ್ದೆ.ಮದುಕನಾಗುವ ಕೊರಗು ನನ್ನನ್ನು ಎಂದು ಕಾಡಿಲ್ಲ.ಒಂದು ರೀತಿಯಲ್ಲಿ ಹೇಳಬೇಕೆಂದರೆ ಅದನ್ನು ಸ್ವಾಗತಿಸುತ್ತಿದ್ದೆ. ಹಾಗೆ ನೋಡಿದರೆ ನನಗೆ ವಯಸ್ಸು ಹೆಚ್ಚ್ಹುಹೇಳಿಕೊಳ್ಳಲು ಉತ್ಸಾಹವಿತ್ತು. ಕಾರಣ ವಯಸ್ಸಾದ ದೇಹದ ಇತಿಮಿತಿ ಗಳಬಗ್ಗೆ ಪ್ರಾಕ್ಟಿಕಲ್ ಆಗಿ ಅನುಭವ ಇರಲಿಲ್ಲ.
ದೈಹಿಕವಾಗಿ.. ಅದಕ್ಕಾಗಿಯೇ ಅಂತ ಕಾಣುತ್ತೆ ಒಂದುರೀತಿಯ ಪೂರ್ಣ ಸೋತ ಭಾವನೆ. ಎಲ್ಲವನ್ನು ಕಳೆದುಕೊಂಡ ಅನಿಸಿಕೆ. ದೇಹದ,ವಯಸ್ಸಿನ ಇತಿ ಮಿತಿಯ ಅರಿವು ವಿಹ್ವಲನನ್ನಾಗಿ ಮಾಡಿದೆ.ಶಿಥಿಲ ದೇಹದೊಂದಿಗೆ ಉತ್ಸಾಹವೂ ಸಹಜವಾಗಿಯೇ ಸೋತಿದ್ದರೆ ನನ್ನ ಈ ರೀತಿಯ ದ್ವಂದ್ವ,ತುಮಲ ಇರುತ್ತಿರಲಿಲ್ಲ ಎಂದುಕಾಣುತ್ತದೆ. ಆದರು ಪರವಾಗಿಲ್ಲ. ಈ 
ಮಾನಸಿಕ ವೇದನೆ, ವಿಶ್ಲೇಷಣೆ ಯಲ್ಲೇ  ಬದುಕುವುದು, ಜಡವಾಗಿರುವುದಕ್ಕಿಂತ ಉತ್ತಮ ಅನಿಸುತ್ತದೆ. ನಿದ್ದೆ ಬಾರದ  ಚಡಪಡಿಸುವ  ಮನಸ್ಸು.  ಹಾಗಾಗಿ  ನಾನಿನ್ನು  ಉಳಿದಿದ್ದೇನೆ  ಎಂಬ  ಸಮಾಧಾನ. ಈ ಖಾಲಿತನ ಬಹಳದಿನ ಇರಲಾರದು ಅನಿಸುತ್ತದೆ. ಆದರೆ ಖಾಲಿತನದ ಅನಿಸಿಕೆ, ಮಾನಸಿಕ ಅತೃಪ್ತಿಯ ಅನುಭವ ಉಳಿವಿಗೆ ಅತಿ ಅವಶ್ಯಕ.

Comments

Popular posts from this blog

ಕಾಗೆ....