ಚಿಟ್ಟೆ




ಪೂರ್ವಜರು ಎಂದೋ ಬಿಟ್ಟುಹೋದ
ಗಸೆ,ಗಸೆ ಕಾಳುಗಳು ಅಡುಗೆ ಕೋಣೆಯ
ಹಸಿರ ಚಪ್ಪರದ ಮೇಲೆ
ಮೊಟ್ಟೆಒಡೆಯುವ ಬ್ರೂಣದಲಿ
ಪ್ರತ್ಯಕ್ಷ .

ಮೈಎಲ್ಲಾ  ಬಳಕುವ ಉಂಗುರದ ಬಳೆಗಳು
ತೆವಳಿ ನಿಧಾನ ಸರಿಯುತ್ತಿದೆ ಸಾವಕಾಶದಲ್ಲಿ
ಮೈಯೆಲ್ಲಾ ಕಾಲುಗಳು ಮೃದುವಾದ ಅಂಗಿಗೆ

ಮರುಜನ್ಮ ಪಡೆಯುತ್ತಾನೆ ಬಕಾಸುರನಾಗಿ

ಘಟೋತ್ಕಜ  ಭೋಜನಪ್ರಿಯ
ಮೇಯುತ್ತಲೇ ಇರುತ್ತಾನೆ ವ್ರತ ಹಿಡಿದ ಮಡಿವಂತ
ತಿಂದದ್ದೇ ತಿನ್ನುತ್ತಾನೆ ಮತ್ತೆ ಮತ್ತೆ ಪ್ರತಿನಿತ್ಯ
ಇದೇ ಅವನ ಪಥ್ಯ
ಬಳುಕಿ ಬೆಂಡಾಗಿ ಕುಸಿದು ಬಿದ್ದ ನಿರ್ಲಿಪ್ತ
ಊಟ ಬಡಿಸಿದ ಎಲೆಯೇ ಮಾಯ 
ಅರಿವಿಲ್ಲದೇ ಅಳಿದು ಹೋದ ಹಸಿವು
ಮಾಂತ್ರಿಕನ ಮೋಡಿಗೆ ಎದೆ,ಹೊಟ್ಟೆಯೇ ಮಾಯ


ಕೂಪ ಮಂಡೂಕ,ಕಪ್ಪೆ ಕಬಳಿಸಿದ ಹಾವು
ಅಂಗಾತ ಬಿದ್ದು ನಿದ್ರಿಸಿದ ಕುಂಭಕರ್ಣ 
ಮರೆತುಹೋದ ತನ್ನ ಪೂರ್ವ ಪರಾಪರ 
ಅಚಲ ಶಾಂತಮೂರ್ತಿ ಮೆಚ್ಚಿಕೊಂಡ ಪರಿಸರ 
ಇವನಿಗಿಲ್ಲ ಅವಸರ 


ಹಿಂದೆ ಸರಿದ ಕಾಲ ಕರಗಿಲ್ಲ ಇನ್ನೂ 
ರೂಪ ಮಾಸಿಲ್ಲ, ಉಳಿದ ಕಲೆ ಅಲ್ಲೇ ಶಾಶ್ವತ 
ಗಳಿಸಲಿದ್ದಾನೆ ಜೀವಬಲ, 
ಕಾದಿರುವ ಸಹನಾ ಮೂರ್ತಿ 
ಪಡೆಯುತ್ತಿದ್ದಾನೆ ಹೊಸ ಸುಂದರ ರೂಪ


ತಾಳಿರಿ, ಸೋಜಿಗದ ಪ್ರಕೃತಿಯ ಪರಿ
ತಾನೇ ನೇಯ್ದ ಅಂಡಕಾರದ  ನವೀನ ಮಹಲು
ಮೃದು  ರೇಶಿಮೆಯ ಹೊಳಪು,
ಆಧುನಿಕ ವಿನ್ಯಾಸ
ಒಳಗೆ ಬಿರುಕು ಬಿಟ್ಟಿದ್ದಾನೆ ಶಿಲ್ಪಿ ಕವಲು ಕವಲು
ಎಳೆ,ಎಳೆಗಳ   ಜಡೆಗಳಲ್ಲಿ ಬಿಡಿಸಲಾರದ ಸುಕ್ಕು
ಕನವರಿಸಿದ್ದಾನೆ ಸ್ವಾತಂತ್ರದ ಹಕ್ಕು


ಆದೇಶ ಬರಲಿದೆ ಗೃಹ ಬಂಧನದ ಬಿಡುಗಡೆಗೆ
ಹೊರಬರಲು ಬೇಕಾಗಿದೆ ನಿಜವಾದ ಹೋರಾಟ
ಅನಿವಾರ್ಯ  ಒಪ್ಪಂದದ  ಮಾರ್ಪಾಡು.


ತಲೆಯೇ ಮುಚ್ಚುವ ಉಬ್ಬುಗಣ್ಣು
ಛಿದ್ರವಾದ ಕೋಟಿ ಪ್ರತಿಬಿಂಬಗಳು ಅವುಗಳಲ್ಲಿ
ಬಯಲ ಆಲಿಸುವ ಎರಡು ಗ್ರಾಹಕ
ಸುರಳಿ ಸುತ್ತಿದ ಸೊಂಡಿಲು, ಮೀಸೆ ಒಡೆದ ಯುವಕ,
ರಕ್ತಸೋರಿದ ನಿರಕ್ತ ಪಕ್ಕಾ ವಿರಕ್ತ
ಬಡಿಯುತ್ತಾನೆ  ತನ್ನ ಮೂಳೆರಹಿತ ಜೋಡಿ ಬೀಸಣಿಗೆ
ಗಾಳಿ ಹೀರಲು ಪುಟ್ಟ ರೆಕ್ಕೆ
ಆಗಂತುಕನ ಪ್ರಾಯದ ತೆವಲು ಹಾರಲು
ತನ್ನ ಆವಾಸ ಸೇರಲು,


ಎರಡು ಜನ್ಮ ದಾಟಿ  ಬಂದ ಪಯಣಿಗ
ಅನಾಥ, ದ್ವಿಜ
ಇವನವರಿಲ್ಲ, ಚದುರಿಹೋದರು ಎಲ್ಲೋ
ಮೂಲ ಬೇರಿನಲ್ಲಿ
ಇಳಿಯುತ್ತಾನೆ ಆಗಾಗ, ಅಳೆಯುತ್ತಾನೆ ಭೂಮಿ
ಮೋಜಣೀದಾರ 
ಕೊಂಡಿ, ಕೀಲುಕಾಲುಗಳಿಂದ
ಅಭ್ಯಾಸ,
ಅಲೆದಲೆದು ಸವಿಯುತ್ತಾನೆ ಹೂಗಳನ್ನು
ಹೊರುತ್ತಾನೆ  ಪರಾಗ  ಹಾರುತ್ತಾನೆ ಸರಾಗ 
ಹಾರಾಟ ಲಯ, ಹೂಂಕಾರಕ್ಕೆ  ರೆಕ್ಕೆಗಳ  ತಾಳ
ಝೇಂಕಾರ ರಾಗದಲಿ ಇವನದೇ ವೇಗ
ಕ್ಷಣದಲ್ಲಿ ಮಾಯ
ಸೇರಿದ್ದಾನೆ ತನ್ನದೇ  ಸಮುದಾಯ

ಅಸಂಖ್ಯಾತ ವಲಸಿಗ ಚಿಟ್ಟೆಗಳು
ಗುರುತು ಹಿಡಿಯುವ ಕಾರ್ಯ ಸುಲಭವಲ್ಲ.











Comments

Popular posts from this blog

ಕಾಗೆ....