ಉತ್ಪರಿವರ್ತನೆ.

   

ಉತ್ಪರಿವರ್ತನೆ.


ಇದು ಒಂದು ಪದ. ಬದಲಾವಣೆ, ಏರುಪೇರು ಆಗುವುದು, ಎಂಬ ಅರ್ಥವನ್ನು ಕೊಡುವ ಪರಿವರ್ತನೆ ಎಂಬಪದದಿಂದ ಹುಟ್ಟಿಕೊಂಡ ಕನ್ನಡ ಪದ. ಕನ್ನಡದ್ದೇ. ಭಾಷೆಯೇ ಅಷ್ಟು...ಮೂಲಪದ ಸಮಯಕ್ಕೆ ತಕ್ಕ ಹಾಗೆ ತನ್ನ ಮೂಲದ ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತದೆ. ಪರಿವರ್ತನೆ. ಕ್ರಮೇಣ ಬದಲಾಗುವ ವಿಧಾನ. ಆದರೆ ವಿಜ್ಜಾನದ ಅದರಲ್ಲೂ ಜೀವಶಾಸ್ತ್ರದಲ್ಲ್ಲಿ ಉಪಯೋಗಿಸುವಾಗ ಅದಕ್ಕೆ ಬೇರೆ ಅರ್ಥ "ಇದ್ದಕ್ಕಿದ್ದಹಾಗೆ" ಎಂಬ ಅರ್ಥಪಡೆದಿದೆ. ಒಟ್ಟಿನಲ್ಲಿ ಮೂಲಪದದ ರೂಪ ಪೂರ್ಣ ಕಳೆದು ಕೊಳ್ಳದೆ ಇದ್ದರೂ ಆರಂಭಕ್ಕೆ ಮುನ್ನ ಸೇರುಸುವ ಪೂರ್ವ ಪದದಿಂದಲೋ ತನ್ನ ಮುಂದೆ ಅಂತ್ಯಪದದ ಜೋಡಣೆಯಿಂದ ತನ್ನ ಸಾಹಿತ್ಯಾತ್ಮಕ,ವೈಜ್ನಾನಿಕ ಹಾಗು ಪ್ರಚಲಿತ ವ್ಯವಹಾರಿಕ ಬಳಕೆಯಲ್ಲಿ ಬದಲಾಗಿ ಹೋಗುತ್ತದೆ. ಹಾಗೆ ಪರಿವರ್ತನೆ ಎಂಬ ಪದ ಬದಲಾಗಿ ವಿಜ್ಞಾನದ ಬಳಕೆಯಲ್ಲಿ ಹೊಸ ಅರ್ಥವನ್ನು ಕಂಡುಕೊಂದಿರುವುದರಿಂದ ಈಗ ಅದು ಕೆಲವರಿಗೆ ವಿಜ್ಞಾನದ ವಿದ್ಯಾರ್ಥಿಗಳಿಗೆ ಉತ್ಪರಿವರ್ತನೆ ಎಂದರೆ ಜೀವಶಾಸ್ತ್ರದ ತಳೀಶಾಸ್ತ್ರದಲ್ಲಿ ಬರುವ ಅಂಗ್ಲ ಪದ Mutation ಗೆ ಸಮಾನಾರ್ಥ ಪದ ಅರ್ಥ ಎನಿಸುತ್ತದೆ. ಇಲ್ಲಿನ ವೈಜ್ನಾನಿಕ ಗ್ರಹಿಕೆಗೆ ಡಿ.ಎನ್.ಎ. ಗುಣಾಣುವಿನಲ್ಲಿ ಉಂಟಾಗುವ ನೈಸರ್ಗಿಕ ರಾಸಾಯನಿಕ ಹಟಾತ್ ಬದಲಾವಣೆ ಎಂದು ವಿವರಿಸುತ್ತಾರೆ. ಪದದ ಇತಿಹಾಸದ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ ಕಾರಣ ಪದಗಳ ಮೂಲ ಎಲ್ಲಿ? ಯಾವಾಗ? ಹೇಗೆ? ಏತಕ್ಕೆ? ಎಂದು ಶುರು ಮಾಡಿದರೆ ನಾವು ಅಂದುಕೊಂಡಂತೆ ಅದು ಆಂಗ್ಲ ಭಾಷೆಯಿಂದಲೂ ಹುಟ್ಟಿ ಕೊಂಡಿರುವುದಿಲ್ಲ. ಪದದ ಇತಿಹಾಸ ಗ್ರೀಕ್ ಅಥವಾ ಲ್ಯಾಟಿನ್ ಮೂಲದಿಂದ ಬಂದಿರುವುದು ಗೊತ್ತಾಗುತ್ತದೆ.

ಉತ್ಪರಿವರ್ತನೆ ಎಂಬ ಪದಕ್ಕೆ ಇಷ್ಟೊಂದು ಪೀಟಿಕೆ ಯಾಕೆ ಸಹಜ ಪ್ರಶ್ನೆ ಏಳುತ್ತದೆ. ಕಾರಣ ಇಷ್ಟೇ....

ಅನೇಕ ವಿಜ್ಞಾನದ ಪದಗಳು ಅನೇಕ ಬರಹಗಾರ ಕೈಗೆ ಸಿಕ್ಕಿ ಅವರವರ ಮನಸ್ಸಿಗೆ ಬಂದಂತೆ ಅನುವಾದ ಮಾಡಿರುವುದರಿಂದ ಗೊಂದಲಕ್ಕೆ ಕಾರಣ ವಾಗುತ್ತದೆ. ಕೆಲವರು ಇಂಗ್ಲಿಶ್ ಪದಗಳನ್ನೇ ಕನ್ನಡೀಕರಿಸುವ ಪದ್ದತಿ ಇಟ್ಟು ಕೊಂಡಿದ್ದಾರೆ. ಉದಾಹರಣೆಗೆ ಕನ್ನಡದಲ್ಲಿ ಫೋನ್ ಮಾಡುವುದು,( ಈಚೆಗೆ "ಒಂದ್ ಫೋನ್ ಹಾಕಮ್ಮ"
ಎಂದು ಹೇಳುವುದನ್ನು ಕೇಳುತ್ತಿದ್ದೇವೆ ) ಎಂದು ಹೇಳುವುದನ್ನು ಕೆಲವರು ಫೋನಾಯಿಸು ಎಂದು ಕ್ರಿಯಾಪದ ವಾಗಿ ಬಳಸುತ್ತಾರೆ. ರೀತಿಯ ಬಳಕೆಗೆ ಯಾರ ಅನಮತಿ ಬೇಕು, ಹಾಗೆ ಭಾಷಾಂತರ ಮಾಡಲು ಕೆಲವು ನಿರ್ಧಿಷ್ಟ ಭಾಷನಿಯಮಗಳು ಇಲ್ಲವೇ? ಕೆಲವರು ಸಂಸ್ಕೃತ ದಿಂದ ಎರವಲು ಪಡೆದರೆ ಮತ್ತೆ ಕೆಲವರು ತಮ್ಮ ಸ್ಥಳೀಯ ಭಾಷೆಯನ್ನೂ ಆಧಾರವಾಗಿಟ್ಟುಕೊಂಡಿರುತ್ತಾರೆ. ಅವರ ಪ್ರಕಾರ ಗ್ರಾಮಾಂತರ ಪದಗಳ ಸೊಗಡನ್ನು ಎಲ್ಲರಿಗೂ ತಿಳಿಸುವ ಹುಂಬ ಉದ್ದೇಶ ವಾಗಿರುತ್ತದೆ. ಆದರೆ ಸಮಸ್ಯೆ ಎಂದರೆ ನಮ್ಮ ಕರ್ನಾಟಕದಲ್ಲಿ ವಿವಿದ ಭಾಗಗಳಲ್ಲಿ ಕನ್ನಡದ ಬಳಕೆಯಲ್ಲಿ ವಿಪರೀತ ವೈತ್ಯಾಸ ಕಂಡುಬರುತ್ತದೆ. ಹೀಗಾಗಿ ಆಯಾ ಪ್ರದೇಶಗಳ ಪದ ಬಳಕೆ ಬದಲಾಗುವುದರಿಂದ ಗೊಂದಲ ಹೆಚ್ಚಾಗುವುದೇ ವಿನಃ ಕಡಿಮೆಯಾಗುವುದಿಲ್ಲ. ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ಹಾಗೂ ಬಳಕೆಯಲ್ಲಿರುವ ಚಾಲ್ತಿ ಪದ ಸಂಸ್ಕ್ರುತವಾಗಲಿ, ಇಂಗ್ಲಿಶ್ ಆಗಿರಲಿ, ಅಥವಾ ಯಾವುದೋ ಒಂದು ಪ್ರಾದೇಶಿಕ ಭಾಷೆಯಾಗಿರಲಿ ಬಂದರೆ ಸಾಕು. ಅದರ ಬಳಕೆಗೆ ಯಾವುದೋ ಪೂರ್ವಾಗ್ರಹಪೀಡಿತ ಸಂಕುಚಿತ ಮನೋಭಾವನೆಯನ್ನು ಇಟ್ಟುಕೊಂಡು ಅದಕ್ಕೆ ಬೇರೆ ಸೋಗು ಹಾಕಿ ಮಡಿಮಾಡುವುದು ಅನವಶ್ಯಕ.

ನಮ್ಮಲ್ಲಿ ಕನ್ನಡ ಪ್ರೆಮಿಗಳಿಗಿಂತ ಸಂಸ್ಕೃತ ದ್ವೇಷಿಗಳು ಅಥವಾ ಇಂಗ್ಲಿಶ್ ದ್ವೆಷಿಗಳೇ ಹೆಚ್ಚು. ಅವರ ಹುಚ್ಚು ಕನ್ನಡ ಪ್ರೇಮಕ್ಕೆ ಇಂಗ್ಲಿಶ್ ಕಲಿಕೆಯ ತಮ್ಮ ವೈಫಲ್ಯವೇ ಕಾರಣ ಎಂದು ಅವರ ಊಹೆಗೂ ಬರುವುದಿಲ್ಲ. ಅವರಿಗೆ ತಿಳಿಯದಂತೆ ನಡೆಯುವ ವಿಚಿತ್ರ ಮಾನಸಿಕ ರೋಗ. ಬೆಂಗಳೂರಿನ ಅನೇಕರು ಕನ್ನಡದಷ್ಟೇ ಸ್ಪಷ್ಟವಾಗಿ, ತಮಿಳು, ತೆಲುಗು ಮಾತನಾಡುತ್ತಾರೆ. ತಮಿಳು ಅಥವಾ ತೆಲುಗು ಪದಗಳಿಗೆ ಅವರ ಆಪೆಕ್ಷವಿಲ್ಲ. ಉದಾಹರಣೆಗೆ ನೋಡಿ. ಕೇದಿಗೆ ಎಂಬ ಸುಂದರ ಪದ, ಕವಿಗಳ ಕವನಗಳಲ್ಲಿ ಬರುವ ಕೇದಿಗೆಯ ಕಂಪು. ನನ್ನ ಪ್ರಕಾರ ಕೇದಿಗೆ ಎಂದರೆ ಎಲ್ಲರಿಗು ಅರ್ಥವಾಗುವ ಪದ ಎಂದುಕೊಂಡಿದ್ದೆ.(ಮಲ್ಲಿಗೆ,ಸಂಪಿಗೆ, ಕೇದಿಗೆ) ಆದರೆ ನಮ್ಮ ಬೆಂಗಳೂರು ಕನ್ನಡಿಗರಿಗೆ ಕೇದಿಗೆ ಅಂದರೆ ಅರ್ಥ ವಾಗುವುದಿಲ್ಲ. ಅವರಿಗೆ ತಾಳೆ ಹೂ ಎಂದರೆ ಹೌದ? ಅದಾ? ಅಂತ ರಾಗ ಎಳಿತಾರೆ. ತಾಳೆ, ತಾಟಿನುಂಗು ಇವೆಲ್ಲ ಪಕ್ಕ ತಮಿಳು ಪದಗಳು. ಅದಕ್ಕೆ ಮಡಿ ಇಲ್ಲ. ಬಳಸ ಬಹುದು. ಬೆಂಗಳೂರಿನ ಚೇಪೆ ಕಾಯಿ ಹೇಗೆ ಬಂತು? ಸೀಬೆ, ಬಿಕ್ಕೆ ಇತ್ಯಾದಿ ಇದರ ಇತರ ಬಳಕೆಯಾಗುವ ಪದಗಳು. ಇನ್ನು ಬೋರೆ ಹಣ್ಣು ಇಲ್ಲಿ ಎಲಚಿ ಹಣ್ಣು ಆಗಿದೆ. ಬೋರೆ ಮುಂಬೈ ಕರ್ನಾಟಕದ ಬೈರ್ ಪದದಿಂದ ಬಂದಿದೆ ಎಂದು ಕೊಳ್ಳಬಹುದು. ಇನ್ನೊಂದು ಉದಾಹರಣೆ ಎಂದರೆ ಚವಳೆಕಾಯಿ ಬೆಂಗಳೂರಿನಲ್ಲಿ ಗೋರಿಕಾಯಿ ಆಗಿದೆ. ಮಂಡಕ್ಕಿ, ಕಳ್ಳೆ ಪುರಿ ಹೇಗಾಯ್ತು? ಹೀಗೆ ನೂರಾರು ಪದಗಳ ಉದಾಹರಣೆಗಳನ್ನು ನಾವು ಕೊಡಬಹುದು.

ಇನ್ನು ದಕ್ಷಿಣ ಕನ್ನಡದ ಕನ್ನಡದ ಬಗ್ಗೆ ಹೇಳುವದಾದರೆ, ಕೇಳುವಾಗ ವ್ಯಾಕರಣಬದ್ಧ ಅನಿಸಿದರೂ ಅನೇಕ ಪದಗಳು ಅರ್ಥವಾಗುವುದಿಲ್ಲ. ಲಕ್ಷ್ಮಿ ಚೇಳು ಅಂದರೆ ಇಲ್ಲಿನ ಜರಿ. ಜರಿ...ಝರಿಎಂದರೆ ಇನ್ನೊಂದು ಅರ್ಥ. ಜಿಗಣೆಗೆ ಇಂಬಳ. ನಿಜ...ಈ ಪದವನ್ನು ಕೇಳೇ ಇಲ್ಲದ ಜನ ಎಷ್ಟೋಬಾರಿ ತಿಗಣೆ ಎಂದು ತಿಳಿದು ಕೊಳ್ಳುತ್ತಾರೆ. ಆಗ ಪದಕ್ಕಿಂತ ಅದರ ವಿವರಣೆ ಕೊಟ್ಟು ಅವರಿಗೆ ಅರ್ಥಮಾಡಿಸಿದ ಅನುಭವ ನನಗೆ ಇದೆ. ಕೂಗು ಅಂದರೆ ಅವರ ಪ್ರಕಾರ ಅಳುವುದು, ನಮ್ಮ ಪ್ರಕಾರ ಜೋರಾಗಿ ಮಾತನಾಡುವುದು. ಬಾಯಿಗೆ ಬಂದಂತೆ ಕೂಗಾಡಬೇಡ, ಎಂದು ಹೇಳುತ್ತೇವೆ. ಅವರಿಗೆ ಅರ್ಥ ತಿಳಿಸಬೇಕೆಂದರೆ ನಾವು ಬೊಬ್ಬೆ ಹೊಡೆಯಬೇಡ ಎಂದಾಗ ಮಾತ್ರ.ಹಾಗೆ ಇನ್ನೊಂದು ಪದ ವಾಸನೆ. ವಾಸನೆ ಎಂದರೆ ನಮ್ಮ ಪ್ರಕಾರ ಒಳ್ಳೆವಾಸನೆ ಯಾಗಿರಬಹುದು ಅಥವ ಕೆಟ್ಟವಾಸನೆ, ದುರ್ವಾಸನೆ ಯಾಗಿರಬಹುದು. ಆದರೆ ದಕ್ಷಿಣಕನ್ನಡದ ಜನಗಳಿಗೆ ವಾಸನೆ ಎಂದರೆ ಕೇವಲ ದುರ್ನಾತ ಮಾತ್ರ. ಅವರ ಪ್ರಕಾರ ಒಳ್ಳೆಯವಾಸನೆಗೆ ಅವರು ಬಳಸುವ ಪದ ಪರಿಮಳ!! ಈ ಶಬ್ಧ ನಮಗೂ ಪರಿಚಯ. ಅದರೆ ನಾವುಬಳಸುವ ರೀತಿ ಬೇರೆಯಾಗಿದೆ. ಸಾಮಾನ್ಯವಾಗಿ ಹುಡುಗಿಯರಿಗೆ ಈ ಹೆಸರಿಡುತ್ತಾರೆ.

ಒಂದು ಪದಕ್ಕೆ ಇಷ್ಟೊಂದು ವಿವರಣೆ ಏತಕ್ಕೆ? ಎಂಬಪ್ರಶ್ನೆ.

ನನ್ನ ಹೇಳುವ ಉದ್ದೇಶ ಇಷ್ಟೇ... ಯಾವುದೇ ಭಾಷೆಯಲ್ಲಿ ಪದಗಳು ಎಲ್ಲಿಂದ, ಹೇಗೆ, ಯಾವಾಗ ಬಳಸಲು ಆರಂಭವಾದವು ಎಂಬುದು ಮುಖ್ಯವಲ್ಲ. ಎಲ್ಲಾ ಪದಗಳಿಗೂ ತನ್ನದೇ ಆದ ಇತಿಹಾಸ ವಿರುತ್ತದೆ. ಅದರ ವಿಮರ್ಷಾತ್ಮಕ ಅಧ್ಯಯನ ನಮ್ಮ ದಿನನಿತ್ಯದ ಭಾಷೆಯಬಳಕೆಯಲ್ಲಿ ಅನವಶ್ಯಕ.ಅದನ್ನು ಭಾಶಕಾರರು ನೋಡಿಕೊಳ್ಳುತ್ತಾರೆ. ನಮಗೆ ಪದದ ಇತಿಹಾಸಕ್ಕಿಂತ ಭಾಷೆ ಬೆಳೆಯುವುದು, ಜನಗಳಬಾಯಲ್ಲಿ ಅವುಗಳ ಸತತ ಉಪಯೋಗದಿಂದ ಮತ್ತು ಬಳಕೆಯಿಂದ ಉಂಟಾಗುವ ಜ್ಞಾನವರ್ಧನೆ ಬಹು ಮುಖ್ಯ.

Comments

Popular posts from this blog

ಕಾಗೆ....