Sunday, May 4, 2014

ರಾಷ್ಟ್ರೀಯ ಹೆದ್ದಾರಿ...

ಭೂಪಟದ ಅಕ್ಷಾಂಶ, ರೇಖಾಂಶಗಳ ಛೇಧಗಳಲ್ಲಿ
ಆರೋಹಣ, ಅವರೋಹಣಗಳಲ್ಲೇ
ರೂಪ ಪಡೆಯುವ ಮೂಲೆ ಬಿಂದುಗಳು
ಕವಲುಗಳು, ಉಪಕವಲುಗಳು, 
ಕೋನ ಬಿಂದುಗಳ ಫಲಿತಾಂಶ,
ಮೂಲೆಗೆ ನೂಕಲ್ಪಟ್ಟ ಹಳ್ಳಿ ಹಾಡಿಗಳು 
ವಕ್ರರೇಖೆ,ಉಬ್ಬುತಗ್ಗುಗಳಲ್ಲಿ ಸಮಕೋನ.
ವೃತ್ತದಲ್ಲಿ ಕೇಂದ್ರಬಿಂದು ನಗರ, ಪರಿಧಿ ದಾಟಿ
ಅಡ್ಡಾದಿಡ್ಡಿ ಗೀಚಿದ ಕರಿ ಪಟ್ಟಿ
ಕೊಂಡೊಯ್ಯುವ ಗುರಿ,
ಬೇಸಿಗೆಯಲ್ಲಿ ಗರಿಗರಿ,ಈ ದಾರಿ...

ಗ್ರಾಮೀಣ ದಳ್ಳುರಿಗೆ ಧೂಳೆದ್ದ ಆವಿಗಾಳಿಯ
ದೃಷ್ಟಿಗೆ ದೂರವಾಗುವ ಕಪ್ಪು ರತ್ನಗಂಬಳಿ
ಉದ್ದಳತೆ, ಮಾತ್ರ ಬೇರೆ,
ನೆಲಗುಡಿಗಳನ್ನು ಬಿಗಿದುಕಟ್ಟುತ್ತದೆ....ನಿಜ,
ಕಾಡ ಮೈಮೇಲೆ ಎಳೆದಿರುವ ಬರೆಯ ಹಾಸು
ಚಲಿಸುತ್ತಿದ್ದವು ಒಮ್ಮೆಇಲ್ಲೇ ಸಕಲ ಸದಸ್ಯರು
ಇದರ ಆಸು ಪಾಸು

ಅಂಚಿಲ್ಲದ ಒರಟು ಲಂಗೋಟಿ
ಸೀದಾ,ಸಾದ,ಸರಳ, ಜೋಕಾಲಿ ತೂಗುತ್ತದೆ ಬೇಕಾಬಿಟ್ಟಿ.
ಕಣಿವೆ,ಶಿಖರಗಳ ಭ್ರಮೆಯ ಸೃಷ್ಟಿ ಉಯ್ಯಾಲೆಯಲ್ಲಿ
ಪ್ರಗತಿ ಹಣೆಯ ಮೇಲಿನ ಪಟ್ಟಿ ವಿಭೂತಿ,
ಹಸಿರು ತ್ಯಾಪೆ ದೂರದಲ್ಲಿ ಸಬೂಬಿಗಾಗಿ
ವಿವಿಧತೆಯ ನಾಮಗಳ ಸಂಖ್ಯೆಯೇ ಏರು.ಪೇರು
ಒಂದು,ಎರಡು, ನಾಲ್ಕು ಚತುಷ್ಪಥ ರಸ್ತೆ
ನಾಗರಿಕ ಸಾಗಣೆಯ ಸುವ್ಯವಸ್ಥೆ...
ಪಕ್ಕನೇ ಎದುರಾಗುವ ಯಾರದೋ ಸಾವು
ಅಪಘಾತ, ಗುರುತುಸಿಗದ ಅವಸ್ಥೆ

ಎಂದೋ,ಬದಲಿಸಿದ ಹಳೆ ಅಂಚು
ನಗ್ನತೆಯ ಮುಚ್ಚುವ ಸಂಚು,
ಗಿರಿಕಾನನಗಳಿಗೆ ಕನ್ನಹಾಕುವ ಹೊಂಚು
ತೆರೆದ ಗಾಯಕ್ಕೆ ಅಂಟಿಸಿದ ಕಪ್ಪು ಟೇಪು
ಮುಚ್ಚಿಲ್ಲ ಮುಲಾಮಿನ ಹಸಿರುಪಟ್ಟಿ
ಮಣ್ಣಿಗಂಟಿದ ಮೌನಿ,ಮುನುಗದ ಮಹಾತ್ಯಾಗಿ

ಬಸಿಯಲು ಬಾರದಂತೆ ಬಿಗಿದಿದ್ದಾರೆ ಡಾಂಬರು ನಡುಪಟ್ಟಿ
ಮಣ್ಣಿನ ಪದರಕ್ಕೊಂದು ಜಲನಿರೋಧಕ ಬ್ಯಾಂಡೇಜು
ಧರೆಗೆ ದಾಹ, ಖಾಲಿಬಸಿರ ನಿಟ್ಟುಸಿರು,ಕೇಳುವವರು ಯಾರು?
ಈ ದಟ್ಟಡವಿಯಲ್ಲಿ,ಕಳೆದು ಹೋಗಿದೆ
ಸ್ವಯಂ ಚಾಲಿತಗಳ ವೇಗದ ಅಬ್ಬರದಲ್ಲಿ
ಮಾಯವಾದ,ಅಸಂಖ್ಯ ಜೀವಿಸಂಕುಲ ಸಂಚಲನೆ
ಯಾತ್ರಿಗಳ ಮೂಕ ವೇದನೆ
ಚಕ್ರಗಳು ಉರುಳುತ್ತವೆ, ಹಗಲು ರಾತ್ರಿಗಳ ವಿಭಜನೆಯಲ್ಲಿ
ರಸ್ತೆ ವಿಭಾಜಕ, ಸದಾ ನಿದ್ರೆಯಲ್ಲಿ
ಸ್ಥಭ್ದಕ್ಕೆ ಶರಣಾದ ಜೈವಿಕ ಗಡಿಯಾರ, ಕೃಶವಾಗಿ
ಕಾಫಿ, ಚಾ ಬೆರೆಸುವ ಬೀದಿ ಅಂಗಡಿ, ಪಂಜಾಬಿ ಧಾಬಗಳಲ್ಲಿ
"ಜಗವಲ್ಲ ಮಲಗಿರಲು ಅವನೊಬ್ಬನೆದ್ದ"
ಎಂದೋ ಕೇಳಿದ ಸಾಲು,
ಹೆದ್ದಾರಿತಂತಿ ಕಂಪನದಲ್ಲಿ,ಸದಾ ತೇಲುವ ಪ್ರತಿಧ್ವನಿ

ಹೆದ್ದಾರಿಗೊಂದು ಭಾಷೆ, ಪದವಿಲ್ಲದ ಶಬ್ಧ
"ಶಬ್ಧಮಾಡಿ ದಾರಿ ಕೇಳಿ" ಚಾಲಕ ಹುಟ್ಟಲ್ಲೇ ಮೂಕ,
ಪಯಣಿಗ ಅಭ್ಯಾಸಿ ಕುರುಡ, ಬೇಕಿದೆ ಬೆಳಕಿನ ಭಾಷೆ ಕತ್ತಲಲ್ಲಿ
ಆಧುನಿಕ ಕಪ್ಪು ಚಾಳೀಸು
ಮೂಕದಾರಿಯಲ್ಲಿ ನಾವು ಭಾಷಾನಿರ್ಗತಿಕರು, ಭಾವ ಕೃಪಣರು
ಎದುರಾದರೂ, ಸದ್ದು ಮರೆವ ಜಾಣ ಕಿವುಡರು
ದೂರ ಗ್ರಹಿಸುವ ಗ್ರಾಹಕ, ಸದಾ ಅಸಹಾಯಕರು.

ಕಣ್ಣು ಹೊಡೆಯುವ, ಡಿಮ್ ಆಂಡ್ ಡಿಪ್ ಭಾಷೆ
ಅದಕ್ಕೂ " ಐ ಡೋಂಟ್ ಕೇರ್" ವ್ಯಕ್ತಿತ್ವ
ಕಂಡ,ಕಂಡವರಿಗೆ ಸದಾ ಸೆಡ್ಡು ಹೊಡೆಯುವ ಪರಕೀಯತೆ
ಕುಸಿದು, ಸರಿಯುವ ನಿರ್ಜೀವ ಆಕೃತಿಗಳು
ಹಿಂದಕ್ಕಟ್ಟಿ ಮುನ್ನುಗ್ಗುವ ಶಾಶ್ವತ ತೆವಲು
ಬೇಕಿಲ್ಲದ, ಪೈಪೋಟಿಯ ತೀಟೆ

ರಸ್ತೆಗಾಗಿ ಬೆಟ್ಟವೋ? ಶಿಖರಸುತ್ತುವ ರಸ್ತೆಯೋ?
ತಿಳಿದಿಲ್ಲ...
ಆದರೂ ಗತಿಶೀಲ ಘಾಟಿ, ರಸ್ತೆ ಗಮಿಸುತ್ತಿವೆ ಅನುಕ್ರಮದಲ್ಲಿ,
ಏರಿಳಿತಗಳಲ್ಲಿ, ಸೂರ್ಯ,ಚಂದ್ರರ ಲೆಕ್ಕಿಸದೇ
ನಿಲ್ಲದೆ ಚಲಿಸುತ್ತಲೇ ಇದ್ದೇವೆ ಆದಿಯಿಂದ.....
ಹೆಡ್ ಲೈಟ್ ನಲ್ಲೇ...

ಪ್ರವಾಸಿಗರು ನಾವಲ್ಲ, ಪಯಣೀಗರು ನೀವೆಲ್ಲ
ಮೂಲ ನಿವಾಸಿಗಳ...ಭ್ರಮಣೆಯಲ್ಲಿ
ಗಿರಿಕಿಹೊಡೆಯುವ ಗಿರಾಕಿಗಳು,
ಶಾಶ್ವತ ವಿಳಾಸ ಅನ್ವೇಷಣೆ,
ಸಿಗಬಹುದೇ?
ಈ ಮುಗಿಯದ ವರ್ತುಲ ಹೆದ್ದಾರಿಯಲ್ಲಿ?

No comments:

Blog Archive