ಈರುಳ್ಳಿ...




ರೂಪ ಬದಲಿಸಿ ಎಲ್ಲರ ಗ್ರಾಸವಾಗುವ ನೀನು
ಅನಿವಾರ್ಯ ಆಡುಗೆ ಕೋಣೆಯಲ್ಲಿ
ಆದರೂ,ಇತರರ ಅಸ್ತಿತ್ವವನ್ನೇ ನುಂಗುವ ಸರ್ವಾಧಿಕಾರಿ
ನೀನು, ನನ್ನ ಸಂಭಂದ ತಾಜ ಸಾವಯವ ಕರಳು ಬಳ್ಳಿ
ಅರಿತವಿರಿಗೆ ಮಾತ್ರ ಇದರ ಅರಿವು,
ಇಲ್ಲವೇ, ಎಲ್ಲರನು ನೋಯಿಸಿ ಕಣ್ಣು ತೋಯಿಸುವ ನೀನು ಬಲು ಮಳ್ಳಿ.

ಬಹೀಷ್ಕೃತ ಅಸ್ಪೃಷ್ಯ...
ನಿನ್ನ ಅರಿತವರು ಬಹಳ ಕಡಿಮೆ
ಹೊರ ಹೊಳಪಿನ ಪಾರದರ್ಶಕ ಪದರ ಚಿನ್ನವೋ?
ಮಬ್ಬಾದ ಕೆಂಬಣ್ಣ ತಾಮ್ರವೋ? ಅಥವಾ ಎರಡೂ ಅಲ್ಲದ ಕುಗ್ಗುವ,
ಒಂದು ಅಲೋಹ, ತೆಳು ತಗಡು
ನಿರ್ಜೀವಾದ ಸಜೀವ ಪ್ಲಾಸ್ಮ ಪದರವೋ?
ನಿನ್ನ ಸರ್ವಾಂತರ್ರ್ಯಾಮಿ ಲೋಕಪ್ರಿಯತೆ, ಜನಮಾನ್ಯತೆ
ನಿನಗೊದಗುವ ಸನ್ಮಾನ ನನಗೆ ತರಿಸುವ ಅಶ್ರುಭಾಷ್ಪ,
ನಿರಂತರ...ಆನಂದವೋ? ಕಟ್ಟೆ ಒಡೆದ ದುಖವೋ?
ಕೇವಲ ಉರಿಯೋ, ಒಸರುವ ಸ್ರಾವಿಕೆಯೋ?
ನಿನ್ನ ಮಹಿಮೆ ನನಗೆ ದಿಗ್ಭ್ರಮೆ
ನಿನ್ನ ರೂಪ, ನಿಜ ಸ್ವರೂಪ,ರಚನೆ ಅತಿವಿಶಿಷ್ಟ
ಅಡ್ಡ ಕೊಯ್ದರೆ ಚಕ್ರ, ಉದ್ದ ಕೊಯ್ದರೆ ಶಂಖ...
ಪುಂಖಾನುಪುಂಕ ಸಮನಾಂತರ ಪದರ
ಜೀವನದ ಜಾಮಿತಿ, ವಿವರಣೆಗೆ ಇಲ್ಲ ಮಿತಿ
ಆದರೂ ನಿನಗ್ಯಾಕೆ ಬಹಿಷ್ಕಾರ ಮಡಿವಂತರಿಂದ
ನನಗಿದು ಬಿಡಿಸಲಾಗದ ಒಗಟು.

ನೀನು ಕಲಿಸುವ ಪಾಠ ಯಾವ ಧರ್ಮಗುರುವೂ ಬಡಿಸದ
ಅಪರೂಪದ,ಆದ್ಯಾತ್ಮದ ರಸ ಕವಳ....
ಹೌದು ರುಚಿರಹಿತ ಕಾಲನ ವಾಸ್ತವಕೆ,
ಸಿಹಿಯ ಸಹಿಸಿ ಕರಗದ ನಿನ್ನಮಿಲನ, ಅಸಂಭದ್ದ ಸಂತುಲನ
ಖಾರದಲ್ಲಿ ಕರಗುವ ಕರುಣೆ ಸಪ್ಪೆಯಲ್ಲಿ ಸೋಲಬೇಕೆ?
ಮಸಾಲೆಯ ಮಂಥನದಲ್ಲಿ ಮನಸೂರೆ ಗೊಳ್ಳುವ ನೀನು
ನಿಜಕೂ ಅತಿ ಪ್ರಭುದ್ದ ಜನರ ಚಪ್ಪರಿಸುವ ನಾಲಿಗೆಯಲ್ಲಿ

ಭೂಮಿ ದುಂಡಾಗಿದೆ ನಿಜ! ಬದುಕು ವೃತ್ತವೋ?
ನೇರ ಸರಳರೇಖೆಯೋ, ಅಥವಾ ಲಂಬಕೋನವೋ?
ನಿನ್ನ ಉರುಟಾದ ದೇಹಕ್ಕೆ ಅಯಸ್ಕಾಂತ ಸೆಳೆತ
ಕುತೂಹಲ, ಮಡಚಿ ಸುಕ್ಕಾದ ನಿನ್ನ ತಗಡು ಬಾಹ್ಯಪದರ
ಪದರ,ಪದರವಾಗಿ ನಿರ್ವಸ್ತ್ರಮಾಡುವ ನನ್ನ ದುಶ್ಯಾಸನ ಜಿಜ್ಞಾಸೆ

ಸುಲಿಯುತ್ತಾ ಹೋದಂತೆ, ಬಿಚ್ಚಿಕೊಳ್ಳುವ ನಿನ್ನ ಬಹುಪದರ ತ್ವಚೆ
ಕಳಚಿದಂತೆಲ್ಲಾ ಬೆತ್ತಲಾಗುವ ಬಯಲಲ್ಲಿ
ಕಂಡದ್ದು ಮಾತ್ರ ಅದೇ ಶೂನ್ಯ ಖಾಲಿ ಆಕಾಶ
ನೀನು ಶಂಖವೂ ಅಲ್ಲ ಚಕ್ರವೂ ಅಲ್ಲ
ನೋಟಕ್ಕೆ ನಿಲುಕದ ಬಹುರೂಪಿ, ನಿರೂಪಿ
ನೀನು ಮಾಯಾವಿ....

 


 

Comments

Popular posts from this blog

ಕಾಗೆ....

Reunited...at last..