Thursday, December 18, 2014
ಅಮೀಬಾ.....
ಪಾಪಿ....ಚಿರಾಯು..... ಅಂತ ಕೇಳಿದ್ದೆ....ಆದರೆ...
ಅವಯವರಹಿತ ಅದೃಷ್ಯ ಅಸ್ತಿತ್ವಅಗೋಚರ...
ಸರ್ವಂತರ್ಯಾಮಿ, ನಿರ್ವಿಕಾರದಲ್ಲಿ, ಪ್ರತ್ಯಕ್ಷ...
ಮೃತ್ಯುಂಜಯನಿಗೇಕೆ ಬೇಕು ಮೋಕ್ಷ? ಕನಿಕರದ ಭಿಕ್ಷೆ
ಸೂಕ್ಷಮಸೂರದ ಕೆಳಗೆ...ನೋಡುವವರ ಭಾವನೆಗಳಂತೆ
ತನ್ನದೇ ಕ್ರಿಯಗಳಿಗೆ ತಕ್ಕಂತೆ, ಬದಲಿಸುವ ಬಹುರೂಪಿ
ಮಿಥ್ಯಾಪಾದ ಇರಬಹುದು, ಹುಡುಕಿದರೆ ಸಿಗಬಹುದು ಜಠರ,
ಹಸಿವಿನ ಅರಿವಾದಾಗ ಚಲನೆ ಆರಂಭ....ಹುಡುಕಲು ಆಹಾರ,
ಕ್ಲಿಷ್ಟ ಕ್ರಿಯಗಳ ಕ್ಷಿಪ್ರ ದೇಹದ ಅತಿ ನೇರ ಸರಳಜೀವಿ,
ಚೇಷ್ಟೆಗಳು ಮಾತ್ರ ನಿಮ್ಮಂತೆ, ದೆಸೆಯಿಲ್ಲದ ಪರದೇಸಿ
ದಿಕ್ಕನ್ನೇ ಸವರಿ ದಾರಿಯಾಗಿಸುವ ಮಹಾ ಸಾಹಸಿ
ಕಾಯವೇ ಬಾಯಾಗಿಸುವ ವಿಚಿತ್ರ ಮೋಹ,ಸದಾ ದಾಹ
ಕಡಿದು ತುಂಡುಮಾಡಿದರೂ...ಅಖಂಡ ಉಳಿಯುವ ಅಮರ
ಕತ್ತಿ ಅಲಗಿನ ಮೊನಚಲ್ಲೇ ನುಸುಳಿ ತೆವಳಿ ಪರಾರಿ ಸರ,ಸರ
ಮುಕ್ತನ ಕಣ್ಣಾ ಮುಚ್ಚಾಲೆಯಲಿ ಮಾಯವಿ ದೇವತೆ
ಮಾನವನ ಭಯವಿಲ್ಲ, ದೇವರೇ ಗೊತ್ತಿಲ್ಲ, ತನ್ನ ಸಹಜೀವಿಗಳಂತೆ
ಪ್ರೇಮದ ಕಾಮಕೇಳಿಯಲಿ ನಿರ್ಮೋಹಿ ನಿರ್ಲಿಂಗಿ
ಮುಂದುವರಿಯುವ ವಿದಳನದ ಮೊತ್ತ ಕಲ್ಪನಾತೀತ
ಸಮಲಿಂಗಿ ಕಾಲಚಕ್ರದಲ್ಲಿ ಚಿರಂಜೀವಿ ಪಟ್ಟ
ಮನಬಂದಂತೆ ರೂಪ ಬದಲಿಸಬಲ್ಲ ಭಿನ್ನ ಲಿಂಗಿ
ಭೀಕರ ಬರಗಾಲದಲ್ಲೇ ಗುಣಿಸುತ್ತಾನೆ ತನ್ನ ಸಂತತಿ
ಲೆಖ್ಕ ವಿಚಿತ್ರ...ಕೇವಲ ಹೆಚ್ಚಳ, ಬದುಕು ಭಾಗಲಭ್ದವಾಗದೇ
ಉಳಿಯುವ ಶೇಷ ಮಾತ್ರ ಶೂನ್ಯದಿಂದ ದೂರ
ಬದುಕೇ ಅಧುನಿಕ ಗಣಿತಶಾಸ್ತ್ರ ನಮ್ಮದೂ ಇದರಿಲ್ಲಿದೆ ಪಾತ್ರ
ಸರ್ವ ಭಕ್ಷಕ ಕಬಳಿಸಲು ಸಿಧ್ದ,,ರುಚಿ ನಿಶಿಧ್ದ ಏನಾದರೂ ಆದೀತು
ಬೊಚ್ಚುಬಾಯಿಂದ ನೇರ ಜೀವರಸ ಸೇರಲಿ,ಅಗಿಯಲಾರ,
ಹುಡುಕಲಾರದ ಸೋಮಾರಿನಿಂತಲ್ಲೇ ಬಾಯಿಚಾಚಿ,ಬಾಚುತ್ತಾನೆ
ಬೇಟೆಯ ಸುತ್ತುವರೆದು ವಿಸ್ತರಿಸುವ ಮಾಂತ್ರಿಕ ಬಾಯಿ ಸರೋವರ
ಹುಟ್ಟುಹಾಕುವ ಕೆರೆಆಗುವ ಹೊಟ್ಟೆಅವರಿಸುವ ಕಟ್ಟೆ
ಸುಸಜ್ಜಿತ, ಅಲಂಕೃತವಿಶಾಲ ಕೋಣೆ, ಆದರೂ ಸೆರೆಮನೆ
ಹೊರಗೆ ಬರಲಾರ, ಅಲ್ಲೇ ಮುಳುಗಿರುವ ಜಲಜೀವಿ, ಆಜೀವ ಖೈದಿ
ಸೇವನೆ, ವಿಸರ್ಜನೆ, ಮೋಜು, ಮನರಂಜನೆ ಇಲ್ಲಿಗೆ ಸೀಮಿತ,
ಮುಕ್ತಗಾಳಿಗೆ ಮಾತ್ರ ಕೊರತೆ ಇಲ್ಲಿ, ಬೇಡ ಕಾಳಜಿ ಉಸಿರಿಗಾಗಿ
ಗಾಳಿಇಲ್ಲದೆ ಬದುಕಬಲ್ಲ ಗಟ್ಟಿಪಿಂಡ, ಮರೆವೇ ನೆನಪಾಗುವ ಬದುಕಿನಲ್ಲಿ
ಚಿರಂಜೀವಿಗೆ ಸಾವಿಲ್ಲ, ತಿಥಿ,ವೈಕುಂಠದ ಗೊಡವೆ ಯಾಕೆ
ನಿರ್ವಿಕಾರ,ನಿರ್ಗುಣ,ನಿರ್ಲಿಂಗ, ವಿಶ್ವರೂಪ ಕರುಣಿಸುವ ಪ್ರತಾಪಿ
ಎಲ್ಲೆಲ್ಲು ಕಾಣುವ ನೀನು, ನಿನ್ನಂಥವರು ಅನುಭವಾತೀತರು
ಅಗೋಚರವನ್ನು ಸೂಕ್ಷ್ಮದಲಿ, ದರ್ಶಕದಿಂದಲೇ ನೋಡಬೇಕು
ಅಮೂರ್ತ, ಅದೃಶ್ಯ ರೂಪವೇ ಸಾಕಾರ ನನ್ನ ಕೋಶರಸದಲ್ಲಿ
ಅವರ್ಣನೀಯ ಅನುಭವ ಕ್ಷಣ,ಕ್ಷಣದಲ್ಲಿ ದೇಹಕಣದಲ್ಲಿ
ನನ್ನಲ್ಲಿರುವ ನೀವು ಅಸಂಖ್ಯಾತ, ನಾನು ನೀನಾಗಿ ನಿನ್ನಲ್ಲಿಗೆ ಬರುವೆ,
ಸ್ವಲ್ಪ ತಾಳು.......ಗೊತ್ತು ನಿನ್ನೊಳಗೆ ನಾನು ನನ್ನೊಳಗೆ ನೀನು
ಇಂದಲ್ಲಾ,ನಾಳೆ, ನಾನು,ನೀನು ಒಂದು, ಸ್ವಲ್ಪ ಹಿಂದು,ಮುಂದು
ಮೊದಲು ನಾನೋ? ನೀನೋ.... ನಿರ್ಧರಿಸಲಿ ತಟಸ್ಥ ಸಮಯ......

No comments:

Blog Archive