ಆಮೆ.
ಸ್ಥಾನಕ್ಕೆ ತಕ್ಕಂತೆ ವೇಶ ಬದಲಿಸುವ ಹೊರೆ
ಹೊತ್ತ ಈ ಧೀಮಂತ, ಸಂತ ನೀನಲ್ಲ ಉಭಯವಾಸಿ
ನೀನೊಬ್ಬ ಸರೀಸೃಪ ಉರಗವಾಸಿ, ತಿಳಿದಿದೆ ನನಗೆ 
ಈಜಿ,ನಡೆಯುವ ಚಲನಶೀಲ ಉರಗ ಚತುಷ್ಪಾದಿ
ಪರ್ವತವೇ ಬೆನ್ನಾಗಿ, ಮುಖಮುಚ್ಚಿಕೊಂಡು
ವಿಕಾಸದ ಹೆದ್ದಾರಿಯಲಿ ಗಂಭೀರ ನಡೆ ಹೊತ್ತ ಮಂದಗತಿ
ನಿಧಾನವೇ ಪ್ರಧಾನವಾದ ಅಸಮಾನ್ಯ ಪ್ರಭೇದ
ಸರಿಸಾಟಿಇಲ್ಲದ ತಾಳ್ಮೆ, ಹರಾಜಾಗಲಿದೆ ನಿನ್ನ ಮಾನ
ನೆಲಬಿರಿದು, ಉಗುಳಲಿ ಜ್ವಾಲಾಮುಖಿ ಲಾವ
ಕಲ್ಲಾದರೂ ಕದಲದ ಹೆದರದ ಪ್ರಶಾಂತಮೂರ್ತಿ
ಗುರುತ್ವದ ಮೋಹಕೆ ಬಿದ್ದೂ ಒದ್ದಾದಡದ ಪ್ರೇಮಿ
ವೇಗೋತ್ಕರ್ಷ ತಿರಸ್ಕರಿಸಿದ ಮಹಾಸಂಯಮಿ
ವಿಶ್ವ ಮಾನ್ಯ ಸಮತೋಲನ ವೇಗಕ್ಕೆ ಚರ್ಚಾತೀತ ಮಾದರಿ
ಎಲ್ಲ ಪಂದ್ಯ,ಓಟಗಳಲ್ಲಿ, "ತಾವು ಮೊದಲು" ಎಂದು
ಮುಂದೆ ಕಳಿಸಿ ಎಲ್ಲರನು, ತಾನೇ ಹಿಂದಾಗುವ ಸಾಭ್ಯಸ್ಥ,
ಸ್ಥಿರಗತಿಯಲ್ಲೇ ಜಯಶಾಲಿ ಎಲ್ಲಾ ರೇಸ್ ಗಳಲ್ಲಿ!
ತನ್ನಂತೇ ಜಗವೆಲ್ಲ,ತನಗಾಗಿ ಇನ್ನೆಲ್ಲ
ಆಗಲೇ ಇಲ್ಲ ಕ್ರಾಂತಿಕಾರಿ,ಶಾಶ್ವತ ತಟಸ್ಥ ನಿಶ್ಚಲ
ನಿಂತಜಾಗದಲ್ಲೇ...ಕದಲಿಲ್ಲ ಒಂದಿಂಚೂ
ಮಿಲಿಯಾನು ವರುಷಗಳಿಂದ,ಮೆರೆದ ಶ್ರೀಮಂತ
ಓ ಆಮೆಯೇ, ಅನುಕಂಪನೀಯ ಯೋಗ್ಯ...
ಜಗವನ್ನೇ ಧೀರ್ಘ ಆಳಿದ ಡೈನೋಸಾರಸ್ ಕುಲದವನು
ಎಲ್ಲರಿಗೂ ಗೊತ್ತು, ಆದರೆ ಪೈಪೋಟಿಯಲ್ಲಿ
ಆಗ ಹಕ್ಕಿಹಾರಿರಲಿಲ್ಲ,ಸ್ತನಿಯ ಎದೆಹಾಲು ಚಿಮ್ಮಿರಲಿಲ್ಲ,
ಪರಿಸರ ಸಾರಿತ್ತು ನೀನೇ ಸರ್ವಶಕ್ತನೆಂದು
ಬಂದಿದೆ ಹಾಲಿನಯುಗ, ಹಂಚಿಕೊಂಡಿವೆ ಎಲ್ಲ
ಆವಾಸ ಸಮ,ಸಮ,ಆಗಸ ಹಕ್ಕಿಗಳ ಆಕ್ರಮಣ
ಹಿಂದಾಯ್ತು ಸರೀಸೃಪಗಳ ಸುವರ್ಣಯುಗ
ದೂರವಾಗಿರುವೆ ಎಲ್ಲ ವಾಸ್ತವದಿಂದ
ಬಂದುಬಿಡು ಆ ನಿನ್ನ ಭದ್ರ,ಶಿಲಾಕೋಟೆಯಿಂದ
ಬದುಕು, ಅನುಭವಿಸು ಈ ಜೀವ ಜಾತ್ರೆ
ಹೀರು ಹೊಸಗಾಳಿ, ತಲುಪಲಿ ಪ್ರತಿ ವಾಯುಕೋಶ
ಇಲ್ಲವೇ ಆ ಅಜ್ಞಾನ ಶಿಲಾಕವಚದಡಿ ನೀನೇ ಅಪ್ಪಚ್ಚಿ
ಪೈಪೋಟಿಗೆ ಬಂದಾಗಿದೆ ಆಗಲೇ ಗುಂಪಲ್ಲಿ ಮರಿ ಗುಬ್ಬಚ್ಚಿ
ಹೊರ ಬಾ ಅ ಪೂರ್ವಜರ ರಾಜವಂಶ ಗರ್ಭದಿಂದ
ಜಾತಿ,ಕುಲ ಶ್ರೇಷ್ಟತೆಯ ಉಗುಳಲಿ ನಿಶ್ವಾಸ,
ಪುಪ್ಪುಸಕೆ ಸುಲಭವಾಗಲಿ ನಿನ್ನಉಚ್ಛ್ವಾಸ
ನಿರ್ವಾತದಲಿ ಹಾರಾಟ, ಮರೆತ ಭಾರ,
ಮಾಯವಾಗಲಿದೆ ಶೂನ್ಯದಲಿ ಗುರುತ್ವ
ನಿನಗ್ಯಾಕೆ ಬೇಕು ಇನ್ನೊಂದು, ವಿಶೇಷ ಪೌರತ್ವ

Comments

Unknown said…
Superb...!!!

Sir,
could you visit ammanahaadugalu.blogspot.com and share your suggestions please

Popular posts from this blog

ಕಾಗೆ....