Friday, September 18, 2015

ಶಿಬಿರಾರ್ಥಿ

ಅನಂತ ಗೋಳ ಗುಮ್ಮಟದಲ್ಲೊಂದು
ಬೃಹತ್ ಗುಡಾರ. ವಿಶಿಷ್ಟ ವಿಚಿತ್ರ ಬಿಡಾರ
ಬಣ್ಣ ಬಣ್ಣದ ತಾತ್ಕಾಲಿಕ ದೃಷ್ಯಗಳೆಲ್ಲಾ ಆಕರ್ಶಕ    
ಸರ್ಕಸ್ ನ ಬೆಳಕು ಸುತ್ತುವ ಡೇರೆ ....ಅತಿ ವಿಸ್ತಾರ
ಇದುವರೆವಿಗೂ ಯಾರು, ಕಾಣದ, ಕಂಡರಿಯದ
ಜೀವ ತುಂಬಿ ಕೊಂಡಿದೆ ಈ ಗ್ರಹದ ಗುಂಡು ಮೈದಾನ
ಇದೊಂದು ಭದ್ರ ಕೋಟೆ, ಮನಮೋಹಕ ವಿಶಾಲ ಪೇಟೆ
ಎತ್ತರದ ಗೋಡೆ ಸುತ್ತುತ್ತದೆ.... ಸುತ್ತೆಲ್ಲ ಕಡಲ ಕಂದರ
ಗಾಜಿನ ಪಾರದರ್ಶಕ ಭಿತ್ತಿ...ಈ ಮಾಯಾನಗರ ಶಕ್ತಿ
ಬುರುಜು,ಬತೇರಿ,ಬಾಗಿಲು ಮಂಟಪ ಇದ್ದರೂ
ದೃಷ್ಟಿಗೆ ದೂರದಲಿ ಎಲ್ಲವೂ ಅಗೋಚರ
ತಮ್ತಮ್ಮ ಲುಪ್ತತೆಯಲ್ಲಿ..ಶಾಶ್ವತ ಸುಪ್ತ

ಅಭೇದ್ಯವೇನಲ್ಲ...ಇದೇನು ಯುದ್ಧಕೈದಿಗಳ ಶಿಬಿರವಲ್ಲ
ಎಲ್ಲ ದಿಕ್ಕಿಗೂ ಸದಾತೆರೆದಿರುವ ಪ್ರವೇಶದ್ವಾರಗಳು
ಛತ್ರ...ಕಾವಲುಗಾರ, ಒಡೆಯನೇನಲ್ಲ
ಅಧಿಕಾರವಿಲ್ಲದ  ಅಷ್ಟದಿಕ್ಪಾಲಕರು ಇದ್ದಾರೆ, ಹೆಸರಿಗೆ ಮಾತ್ರ
ಒಳಬರುವುದು, ಹೊರಹೋಗುವುದು ನಡೆಯುತ್ತಲೇ ಇದೆ
ನಿಲ್ಲದ ಪ್ರದರ್ಶನ, ಆರಂಭದಿಂದ....
ಇಷ್ಟವಾದರೆ ಮತ್ತೆ ಮರಳಬಹುದು ಅಪ್ಪಣೆ,
ಅನುಮತಿ ಅನಗತ್ಯ...
ಆದರೂ,ಹೊರಹೋಗಬಯಸುವವರೇ.. ಅತಿ ವಿರಳ

ಎಂದೂ ನಿಲ್ಲದ ಚಟುವಟಿಕೆಗಳು..
ಬಹು ಆಕರ್ಷಕ,ಮೋಹಕ, ಎಲ್ಲರೂ ಕರ್ಮಯೋಗಿಗಳು,
ಕರಗಿಹೋಗಿದ್ದಾರೆ ಕಾರ್ಯದಲ್ಲಿ,ತೊಡಗಿದ್ದಾರೆ,
ತೊಳಲಾಟದಲ್ಲಿ, ಚಿತ್ತ ವಿಭ್ರಾಂತಿಯಾಲಿ
ಕನಸ ಕಾಣುವ ಮರ್ಮಯೋಗಿಗಳು
ಮನಸಿಗೂ,ಕನಸಿಗೂ ನನಸುಗಳು ತಾಳೆಯಾಗುವುದಿಲ್ಲ
ಭೋಗದ ನಶೆಏರಿಸಿಕೊಂಡವರಿಗೆ ಹಗಲು,ರಾತ್ರಿಗಳಿಲ್ಲ
ಶಾಶ್ವತ ಸ್ವಪ್ನಲೋಕದ ಅಮಲು ಇಳಿಯುವುದಿಲ್ಲ
ಭರವಸೆಯ ಭ್ರಮೆಯ ಓಲಾಟದಲ್ಲಿ,
ಉರುಳುತ್ತಿದೆ ಕಾಲ ಚಕ್ರ ದಾರಿತಪ್ಪಿ.

ಕೋಟೆಯ ವ್ಯಾಮೋಹ ಜೀವನ ಜಲಧಾರೆ,
ನಿಜ...ಜೀವನ ಅತಿ ಸುಂದರ, ಚಿತ್ತಾಕರಷ್ಕಣೆಗಳು
ನೂರಾರು,
ಭೋಗಕ್ಕೆ ಸ್ವ ಇಛ್ಛೆಯಿಂದಲೇ ಸೆರೆಯಾಗುವ,
ಜೀವಾತ್ಮಗಳು.. ಸಹಸ್ರಾರು
ಪ್ರಯತ್ನಗಳು ನಿರಂತರ
ಬಿಸಿಲುಕುದುರೆಯ ಹಿಡಿದುಕಟ್ಟುವ ಪ್ರಚೋದನೆ
ಆತುರದಲ್ಲಿ ಸವಾರಿ ಮಾಡುವ ಛಲ
ಅರಿವಿಲ್ಲ ಯಾರಿಗೂ,ಸಿಗಲಾರದು ಯಾವ ಫಲ

ಕಿಕ್ಕಿರಿದ ಜೀವರಾಶಿಗಳ ಜೀವಾನಿಲ ಎಲ್ಲಿ?
ಬೀಸುವ ಗಾಳಿ ನುಸುಳದ ಹಾಗೆ ತಡೆಗೋಡೆ ಪೇರಿಸಿ
ಖುಷಿಯಾಗಿದ್ದೇವೆ, ನಮ್ಮ ಸಾಧನೆಯನೆರಳಲ್ಲಿ  
ಇಳಿವ ಸೂರ್ಯ ನೆರಳಾಗುತ್ತಾನೆ ಬೇಗ
ಯಾವ ಮೂರ್ಖನೂ ಬಯಸಲಾರ
ತಲೆ ಎತ್ತಿ ನೋಡಲು ಆಕಾಶ, ಯಾರಿದ್ದಾರೆ?
ಸೂರ್ಯನೋ,ಚಂದ್ರನೋ, ಮೇಘವೋ?
ಕಾರ್ಯೋನ್ಮುಖಿಗಳು, ಸದಾ ಅಧೋಮುಖಿಗಳು
ಬದುಕಿಲ್ಲಿ ಬಲು ಮೋಜು, ಕೆದಕುತ್ತಾನೆ
ಉನ್ಮತ್ತತೆಗೆ ಗಾಳಿ ಬೆಳಕಿನ ಹಂಗೇಕೆ?
ಜನಿಸಿದ ಜಾಗ, ನಮ್ಮ ಉಸಿರಿನ ರುದ್ರ ರಾಗ

ನಿಜ....ಕಾಣುತ್ತದೆ, ತೆರೆದ ಆಕಾಶ,ಹೆಪ್ಪುಗಟ್ಟುವ ಮೋಡ
ಬೀಸುವ ಗಾಳಿಯನ್ನೂ ನೋಡಬಹುದು ಕೋಟೆಯ ಹೊರಗೆ
ಹಸಿರು ಸಸ್ಯರಾಶಿ, ದಿಗಂತ ಎಲ್ಲವೂ ಗೋಚರ
ಗೋಡೆ  ಬಿದ್ದಾಗ, ಬರ್ಬರ ಪ್ರವೃತ್ತಿ
ಸ್ವಾಭಾವಿಕ....

ನನಗೂ ಅನಿಸುತ್ತದೆ, ಈಗ ಹೊರಬರಬೇಕು
ನೂಕು,ನುಗ್ಗಲು ಇಲ್ಲ, ಗೇಟ್ ಖಾಲಿ
ಹೋಗಬೇಕು, ಮುಕ್ತ ಗಾಳಿಯಲಿ ಮೈ ತೆರೆಯಬೇಕು
ಹಿತಬೆಳಕಿಗೆ ಕಣ್ಣೊಡ್ಡಿ ಕಾಡಲ್ಲಿ ಹಸಿರಾಗಬೇಕು,
ಬಣ್ಣವಾಗ ಬೇಕು,ಬಿಸಿಲೇರಿದಾಗ ವಿಶಾಲ ಬಯಲಲ್ಲಿ
ಸುಡುವಾಗ ಸೂರ್ಯ,ನಿಶ್ಚಲ ವಾಗಬೇಕು ಕಡಲಮರಳಲ್ಲಿ
ತಪ್ಪಿಸಿ ಓಡಬೇಕು ಈ ಮೋಹನಗರಿಯ ವ್ಯಸನದಿಂದ
ಯಾರು,ಯಾರನ್ನೂ,ಯಾವುದಕ್ಕೂ ತಡೆಯದ ನಾಗರೀಕರು
ಸುಸಂಕ್ಕೃತರು, ತಲೆಹಾಕುವುದಿಲ್ಲ,
ಹಾಗಾಗಿ ಕಣ್ಣುತಪ್ಪಿಸುವ,ಅನಿವಾರ್ಯತೆ ಇಲ್ಲ
ಮಹಾ ಪಲಾಯನ.......ಸಾಹಸ ಕಥೆಯಾಗದ
ನೀರಸ ಕಥೆ.....ಪಯಣಿಗ,  ನಾನೇನು ನಾಯಕನಲ್ಲ....
ಕೇವಲ, ಶಿಬಿರಾರ್ಥಿ.....

No comments:

Blog Archive