ಅವರ ಮನೆಯಲ್ಲೇ ಮೊಟ್ಟಮೊದಲ ಬಾರಿಗೆ ಕಣಿಲೆಯ ಪಲ್ಯದ ರುಚಿ..

ಶೇಷಗಿರಿ ಜೋಡಿದಾರ್
ಪ್ರಾಯಶಃ ೧೯೭೨ ಅಥವ ೭೩ ಸರಿಯಾಗಿ ನೆನಪಿಲ್ಲ…ನಾನು ಆಗ ಕಾಸರಗೋಡಿನ ಆಡ್ಯನಡ್ಕ ಎನ್ನುವ ಸ್ಥಳದಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದೆ….. ನನ್ನ ಒಬ್ಬ ಸಹೋದ್ಯೋಗಿಯಾದ ಶ್ರೀಕೃಷ್ಣ ಚೆನ್ನಂಗೋಡ್ ಮತ್ತು ನನಗೆ ಕವನ ಬರೆಯುವ ದುರಬ್ಯಾಸವಿತ್ತು… ನಾವಿಬ್ಬರೂ ಕವನಗಳನ್ನು ಬರೆಯುತ್ತಾ ಇದ್ವಿ…. ಮಂಗಳೂರಿನ ಕೊಣಾಜೆಯಲ್ಲಿ ಕನ್ನಡ ಎಮ್.ಎ. ಮಾಡುತ್ತಿದ್ದ ಕಮಲ ಹೆಮ್ಮಿಗೆ ಮತ್ತು ಎಸ್.ಮಾಲತಿ ಅವರ ಪರಿಚಯವಿತ್ತು… ಆಗಾಗ ಭಾನುವಾರ ನಾನು ಮಂಗಳೂರಿಗೆ ಬಂದು ಅವರಲ್ಲಿ ವಿಚಾರ ವಿನಿಮಿಯ ಮಾಡಿಕೊಳ್ಳುತ್ತಿದ್ದೆ…
ನಾವು ನಾಲ್ಕು ಜನವೂ ಸೇರಿ ಕವನ ಸಂಕಲನ ತರಬೇಕೆಂಬ ಶ್ರಿಯುತ ಚೆನ್ನಂಗೋಡ್ ಅಲೋಚನೆ… ಅದಕ್ಕೆ ಅವರಿಬ್ಬರೂ ಒಪ್ಪಿದರು… ಆದರೆ ನನ್ನ ಸ್ನೇಹಿತರಾದ ಸೂ.ರಮಾಕಾಂತ್ ಒಪ್ಪಲಿಲ್ಲ… ಹೀಗಾಗಿ ಕಡೆಗೆ ನಾವಿಬ್ಬರೇ ಸಂಕಲನ ತರಬೇಕೆಂಬ ನಿರ್ಧಾರಕ್ಕೆ ಬಂದಾಗ.. ಮುನ್ನುಡಿಯ ವಿಚಾರ ಬಂದಾಗ ನಮಗೆ ಹತ್ತಿರವಿದ್ದ ಕೆ.ವಿ. ತಿರುಮಲೇಶ್ ಬಳಿ ಹೋದೆ.
ವಿಟ್ಲದಿಂದ ಕಾಸರಗೋಡಿಗೆ ಹೋಗುವ ರಸ್ತೆಯಲ್ಲೇ ತಿರುಮಲೇಶರ ಮನೆಯಿತ್ತು… ಸ್ವಲ್ಪ ಸಮಯದ ಮುಂಚೆಯೇ ಅವರ ಮದುವೆ ಆಗಿ ಹೊಸದಾಗಿ ಸಂಸಾರ ಆರಂಭಿಸಿದ್ರು…. ಅವರ ಹೆಂಡತಿ ನಿರ್ಮಲ ( ನೆನಪು ಸರಿ ಇದೆ ಎಂದುಕೊಂಡಿದ್ದೇನೆ) ನಾನು ಹೋದ ದಿನ ಅವರ ಮನೆಯಲ್ಲೇ ಮೊಟ್ಟಮೊದಲ ಬಾರಿಗೆ ಕಣಿಲೆಯ ಪಲ್ಯದ ರುಚಿ ಪರಿಚಯಿಸಿದರು… ಕವನಗಳ ಬಗ್ಗೆ ಚರ್ಚಿಸಿ ಬೇಗ ಕೊಡುವುದಾಗಿ ಹೇಳಿ… ನನ್ನನ್ನು ಬೀಳ್ಕೊಟ್ಟ ಸಂದರ್ಭದ ಅವರ ಆತ್ಮೀಯತೆ ಇಂದಿಗೂ ನಾನು ಮರೆತಿಲ್ಲ..
ಎರಡನೆ ಬಾರಿ ಹೋದಾಗ ನನ್ನ ಕವನಗಳ ಬಗ್ಗೆ ವಿಶೇಷವಾಗಿ ಕೇಳಿದರು.. ನನ್ನ ವಿವರಣೆಯ ನಂತರ ಸಮಾಧಾನವಾಯಿತು.. ನಂತರ ಆ ಮುನ್ನುಡಿಯನ್ನು ಬರೆದುಕೊಟ್ಟರು. ಕವನಗಳಿಗಿಂತ ಅವರ ಮುನ್ನುಡಿಯೇ ಚೆನ್ನಾಗಿತ್ತು ಈಗ ಅನಿಸುತ್ತೆ. ನಂತರ ನನ್ನ ಪ್ರಥಮ ಕವನಸಂಕಲನ “ಎರಡು ಧ್ವನಿ” (ಈ ಶೀರ್ಷಿಕೆಯನ್ನು ಅವರೇ ಸೂಚಿಸಿದರು ಅಂತ ಕಾಣುತ್ತೆ) ಪುತ್ತೂರಿನ ವಿವೇಕಾನಂದ ಕಾಲೇಜ್ ನಲ್ಲಿ ಗುಂಡ್ಮಿ ಮತ್ತೆ ಅಮೃತ ಸೋಮೇಶ್ವರರಿಂದ ಬಿಡುಗಡೆಯಾಯಿತು. ಆಗಿನ ಎಲ್ಲಾ ಪತ್ರಿಕೆಗಳಲ್ಲಿ (ಕೇವಲ ನಾಲ್ಕು) ಉತ್ತಮ ಪ್ರತಿಕ್ರಿಯೆಯೂ ಬಂತು.
ಆ ಗುಂಗಿನಲ್ಲೇ ಇರುವ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬೆಂಗಳೂರಿಗೆ ಬಂದೆ ಪತ್ರಕರ್ತನಾಗಲೂ.. .ಯಾವ ಚಾನ್ಸೇ ಇರಲಿಲ್ಲ… ಪ್ರಯತ್ನಿಸಿ ಕೊನೆಗೆ ಜೀವನಕ್ಕಾಗಿ ಮೇಷ್ಟ್ರಾದೆ. ಅದಕ್ಕೆ ಖಂಡಿತಾ ಪಶ್ಚಾತ್ತಾಪ ಇಲ್ಲ… ನಂತರ ನಮ್ಮ ಬೆಂಗಳೂರಿನ ಹೋರಾಟದ ಬದುಕು ಆರಂಭವಾಯಿತು. ಆ ಹೋರಾಟದಲ್ಲಿ ಕಳೆದುಹೋದೆ.
ಆಗ ಗಾಂಧಿ ಬಜಾರ್ ನ ವೆಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್ ನಲ್ಲಿ ನನ್ನ ಸ್ನೇಹಿತನ ಸಹಾಯದಿಂದ ೪೦ ರೂಪಾಯಿಯ ಬಾಡಿಗೆ ರೂಮಿನಲ್ಲಿ ವಾಸ ಆರಂಭ. ಆ ರೂಮಿನಲ್ಲಿ ಕಲಾವಿದ ವಾಸುದೇವ್. ಕೆ. ಎಡ್ನೀರ್. ಬಾಲಕೃಷ್ಣ ಮತ್ತೆ ಬಸವರಾಜ್ ಇನ್ನು ಹಲವಾರು ಮಿತ್ರರು ನನ್ನೊಟ್ಟಿಗಿದ್ದರು. ಆ ಸಮಯದಲ್ಲಿ ತಿರುಮಲೇಶ್ ಆ ಕೊಠಡಿಗೆ ಬಂದಿದ್ದರು. ನಮ್ಮೊಟ್ಟಿಗೆ ಇದ್ದು ನಂತರ ಪ್ರಯಾಣ ಮುಂದುವರೆಸಿದರು…
ಇಂದಿಗೂ.. ಆ ಕೆ.ವಿ. ತಿರುಮಲೇಶ್, ಉದ್ದ ಕೂದಲು, ಸಣಬಿನಿಂದ ನೇಯ್ದ ಒಂದು ಹೆಗಲಿನ ಚೀಲ ….. ಯಾವುದನ್ನೂ ಮರೆಯಲು ಸಾಧ್ಯವಿಲ್ಲ. ಎಲ್ಲರೊಟ್ಟಿಗೂ ಮಾತಾಡಿಕೊಂಡು ಗಾಂಧಿಬಜಾರ್ ನ ಗೀತಾ ರೆಸ್ಟೂರೆಂಟ್ ನಲ್ಲಿ ತಿಂಡಿ ಕೊಡಿಸಿ, ಬಿಲ್ಲು ಕೊಟ್ಟು ಹೋದ ನಂತರ ಮತ್ತೆ ಅವರ ಮುಖತಃ ಭೇಟಿ ಆಗಿಲ್ಲ.. ಅವರ ಬಗ್ಗೆ ಅವರ ಬರವಣಿಗೆಯ ಮೂಲಕ, ಬರಹಗಾರ ಮಿತ್ರರ ಮೂಲಕ ತಿಳಿಯುತ್ತಿತ್ತು..
kaikini with sheshagiri
ಅವರಿಗೆ ಪ್ರಶಸ್ತಿ ದೊರೆತಿದೆ ಅಂತ ಗೊತ್ತಾದ ತಕ್ಷಣ ನನ್ನ ಮತ್ತು ತಿರುಮಲೇಶರ ಈ ಸ್ವಲ್ಪ ಕಾಲದ ಒಡನಾಟ, ಸಂಪರ್ಕ ನೆನಪಿಗೆ ಬಂತು… ಮುಂಚೆಯೇ ಬರಬೇಕಿತ್ತು ಅನಿಸುತ್ತೆ… ಮೊನ್ನೆಯಷ್ಟೇ ಅವರನ್ನು ನೆನಪಿಸಿಕೊಂಡೆ…
ಜಯಂತರ  ’ ಒಂದು ಜಿಲೇಬಿ’ ಕವಿತೆಗಳ ಸಂಕಲನದಲ್ಲಿ
ಅವರ ಮಾತಲ್ಲಿ… ಹೀಗೆ ಬರೆದಿದ್ದಾರೆ..
ಮೂವತ್ತ್ಯದು ವರ್ಷಗಳ ಹಿಂದೆ ನನಗೆ ಕವಿತೆಯ ರುಚಿ ಹತ್ತಿಸಿದ….
ಗಂಗಾಧರ ಚಿತ್ತಾಲರ ” ಹರಿವ ನೀರಿದು”
ರಾಮಾನುಜನ್ ರ ” ಹೊಕ್ಕಳಲ್ಲಿ ಹೂವಿಲ್ಲ”,
ತಿರುಮಲೇಶರ ” ಮುಖಾಮುಖಿ”……ಕವನ ಸಂಕಲನಗಳಿಗೆ…
ಈಗಲೂ ಎಲ್ಲಾ ಸಂದರ್ಭಗಳಲ್ಲೂ ಕಿರಿಯ ಕವಿಗಳಿಗೆ ಈ ಮಾತನ್ನು ಹೇಳುವುದನ್ನು ಕೇಳಿದ್ದೇನೆ
ಲಕ್ಷ್ಮಣ್ ಕೊಡಸೆ ಅವರ ಈ ಮಾತನ್ನು ನಾನೂ ಒಪುತ್ತೇನೆ-
” ಕೆ ವಿ ತಿರುಮಲೇಶ್ ಅವರನ್ನು ಆಯ್ಕೆ ಮಾಡುವ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಅನೇಕ ವರ್ಷಗಳಿಂದ ಆಗಿದ್ದ ಅನ್ಯಾಯವನ್ನು ಸರಿಪಡಿಸಿದೆ. ಪ್ರಚಾರದಿಂದ ದೂರ ಇದ್ದು ತಮ್ಮಷ್ಟಕ್ಕೆ ಕನ್ನಡ ಸೇವೆಯಲ್ಲಿ ನಿರತರಾಗಿರುವ ಅವರಿಗೆ ಈ ಗೌರವ ಇಪ್ಪತ್ತು ವರ್ಷಗಳ ಹಿಂದೆಯೇ ಬರಬೇಕಿತ್ತು. ಈಗಲಾದರೂ ಬಂದಿದೆಯಲ್ಲ, ಅದು ಅತ್ಯಂತ ಖುಷಿಯ ಸಂಗತಿ.”
ಸಾಹಿತ್ಯ ಅಕ್ಯಾಡೆಮಿಯವರು  ಸರಿಪಡಿಸಿಕೊಳ್ಳುವುದು ಇನ್ನೂ ಬಹಳ ಇದೆ. ಪ್ರಚಾರದಿಂದ ದೂರ ಉಳಿದವರು ಇನ್ನೂ ಇದ್ದಾರೆ ಎನ್ನುವುದನ್ನು ಮರೆತ ಹಾಗಿದೆ..

Comments

Popular posts from this blog

ಕಾಗೆ....