ದಾಹ
ಜಲವೆಲ್ಲ ನೆಲವಾಗಿ, ನೆಲವೆಲ್ಲ ಘನವಾಗಿ,
ಹರಳಾಗಿ, ಹುರುಳಿಲ್ಲದ ಬಿಳಿಹುಡಿಯಾಗಿ ಹರಡಿ
ವ್ಯಾಪಿಸುವ ವಿಸ್ತಾರ, ದಿಗಂತ ಶಾಂತ, ಶಿಲಾಸ್ಪಟಿಕ ಸಾಗರ
ಮರುಭೂಮಿಯಲ್ಲೆಲ್ಲಾ ಪ್ರತಿಫಲನ
ಆಸಾಧ್ಯವೇನೋ ? ಕಡಲಾಲಿಂಗನ
ಕಂಗಾಲಾದ ವಿರಹಿ ಭೂಅಂಚಿನ ಜೋಡಿ
ಕಣ್ಣಿದ್ದು, ಬೆಳಕಲ್ಲೇ ಕುರುಡು
ಸೂರ್ಯನಿದ್ದೂ ಇಲ್ಲದ ವಿಚಿತ್ರ ಬೆಳಕು
ಅಕ್ಶಿಪಟಲ ಅಂಧಕಾರ,ಶಾಶ್ವತ ಮಬ್ಬು
ಪಾಪ ಅಪಾರದರ್ಶಕ ನಿಶ್ಚಲ ಗಾಳಿ
ಚಲಿಸಲಾರದು,ಬಡಿದಿದೆ ಶ್ವಾಸಕ್ಕೇ ಪುರುಡು
ಇರುಳುಗುರುಡು,ದೃಷ್ಟಿದೋಷ
ಆಗಲೇಬೇಕಿದೆ ಶಾಪಮುಕ್ತ
ಬೇಕಿದೆ ನಮ್ಮೆಲ್ಲರೊಳಗೊಬ್ಬ ಸಾತ್ವಿಕ ಶಬರಿ
ಬೆರಗಾಗಿ,ದೃವಕರಗಿ
ಬೆದರಿ,ಬೆವರಿದೆ, ಸೊರಗಿದ ಹಿಮನದಿ,
ಹರಿದಿದೆ ಅಪಾಯ ವೇಗ ಪ್ರವಾಹ
ನೀರೆಲ್ಲ ಆವಿ, ಗಗನ ಭಾಷ್ಪಹೊದಿಕೆ
ಇಂಗಿಸಿ ಆಪೋಷನ ತೆಗೆದುಕೊಳ್ಳುವ ಬಾಯಾರಿದ ಧರೆ
ವಾತಾಪಿ, ಮಂತ್ರ ಮರೆತ ನಾವು ಕೇವಲ ಪರತಂತ್ರ
ಜೀವಂತ ಒಂಟೆಗಳ ಕೊರಳಗಂಟೆಯ ನಾದ
ಸ್ಥಬ್ಧವಾಗಿದೆ ಓಯಸಿಸ್ ನಲ್ಲಿ
ಬದುಕಿನ ತಂಟೆಯೇ ಇಲ್ಲ,?ಭಾವಗಳ ಗಂಟೇಕೇ
ಆವಾಸದ ನಂಟೇಕೇ?
ಊರ ಕಾಲು ದಾರಿ, ರಾಜಮಾರ್ಗ,ರಾಷ್ಟ್ರೀಯಹೆದ್ದಾರಿ
ನದಿಯಾಗಿ ಸರಿದು ಜೀವಜಾಲ ಬಿರಿದು
ಗಿರಿ,ಕಾನನದಲ್ಲಿ ಜಲಸ್ಪೋಟ, ಸಜೀವ ಸಮಾಧಿ
ಅದಕೆಂದೇ
ಬರಬೇಕಿದೆ ಗಂಗೆ ಮರಳಿ ಮತ್ತೊಮ್ಮೆ ಈ ಧರೆಗೆ
ತೀರಿಸಲು ತೃಷೆ, ಬೇಕಿದೆ ಜೀವಾಧಾರ ತೀರ್ಥ
ಬೇಕಿದೆ ತಕ್ಷಣ ಭೂಮಿಗೊಬ್ಬ ಭಗೀರಥ
ಮಹಾತಪಸ್ವಿಹೂಡಬೇಕಿದೆ ಘನಗೋರ ತಪಸ್ಸು
ವರಕೊಟ್ಟ ಶಿವನಡುಗಿ ಅಡಗಿ ನಾಪತ್ತೆ ಹಿಮಶಿಖರಗಳಲ್ಲಿ
ಕೊಳಕಲ್ಲೇ ನೆನೆದು ಬತ್ತಿದ ಗಂಗೆ ಚಿಮ್ಮುತ್ತಿಲ್ಲ
ನಿರ್ನಳಿಕೆಗಳಿಗೆಲ್ಲ ತುಕ್ಕು ಪಾತಾಳದಲ್ಲಿ
ಸೋರಿಹೋಗಿದೆ ಬಾಯಾರಿದ ಜಲದುರ್ಗದಲ್ಲಿ.

Comments

Popular posts from this blog

ಕಾಗೆ....