Thursday, November 3, 2016ವಿಚಿತ್ರ ವಾಸ್ತವ.....

ಒಮ್ಮೆ ನಾನೂ ಬಾಲಕನಾಗಿದ್ದ ನೆನಪು. ಕಿರಿಯರು, ಚಿಣ್ಣರು....ನಿರ್ಲಕ್ಷಿತರು ಮನೆಯಲ್ಲಿ. ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ. ಪರದೇಸಿ ಮಕ್ಕಳೆಲ್ಲ. ಆಗೋಮ್ಮೆ ಕಾಲ ಹಾಗೇ ಇತ್ತು....ದೊಡ್ಡವರದೇ ಆಗಿತ್ತು ಗತ್ತು,..ಗೌರವ, ಘನತೆ ಆಗಿತ್ತು ಅವರದೇ ಸ್ವತ್ತು....ಅವರು ಪ್ರಶ್ನಾತೀತರು...ವಂದನೀರು, ಪ್ರಾತಸ್ಮರಣೀಯರು. ದೇವರ ಹರಿಕೆಗೆ ಬಿಟ್ಟ ಬಲಿ ಅಬ್ಬೆಪಾರಿ ಮಕ್ಕಳು ಆಕಸ್ಮಿಕ ಲೋಕಕ್ಕೆ ಕಾಲಿಟ್ಟವರು. ವಿಧೇಯತೆಯೇ ಅವರಿಗಿದ್ದ ಪಾಲು ಶರಣಾಗತಿಯಲ್ಲಿ.ಭಯ,ಭಕ್ತಿ, ತಗ್ಗಿ ಬಗ್ಗಿ, ಹೆದರಿ ಕುಗ್ಗಿ ಪದಗಳ ಭರ್ಜರಿ, ಆರ್ಭಟ ಕಿವುಡಾಗಿಸುವ ಮೆರವಣಿಗೆ. ಹಬ್ಬ,ಹರಿದಿನಗಳಲ್ಲಿ,ಕಲೆತಿದ್ದ ಜನರ ಮುಂದೆ ಪ್ರದರ್ಶನ. ಉತ್ಕಟ ವಿಧೇಯತೆ, ಉನ್ಮಾದದಲಿ ವಿನಯ, ಅಪ್ಪನಿಂದ ಕೊಟ್ಟಶಿಸ್ತು. ಇದಕ್ಕೆ ಹಿರಿಯರದೆಲ್ಲಾ ಇತ್ತು ಅಸ್ತು. ಗುಲಾಮಿಯ ಹಿರಿಮೆ, ಗೌರವದ ಗರಿಮೆ. ದೊಡ್ಡವರಿಗೆ ಆದ್ಯತೆ. ಎದುರು ಮಾತು ಸಲ್ಲದು ಸಂಭಾವಿತ ಕಿರಿಯರಿಗೆ. ಅಶಕ್ತ ಮಕ್ಕಳು ಶೋಷಣೆ ಸಂಸ್ಕಾರ. ಮನೆತನದ ಲಕ್ಶಣ. ಅನುವಂಶೀಯ ಕೀರ್ತಿ. ಹಿರಿಯರಿದ್ದಾಗ ನಮ್ಮ ಹಸಿವು ಮರೆವ ಕಲಿಸಿದ್ದ ಕಲೆ., ಖಾಲಿಹೊಟ್ಟೆಯಲಿ ನೂರಾರು ಶೇಷಪ್ರಶ್ನೆಗಳು. ಉತ್ತರಿಸಲು ಯಾರಿಲ್ಲ...ಪ್ರಶ್ನಿಸುವ ಹಕ್ಕಿಗೇ ಮುಕ್ಕು.
ದುರದೃಷ್ಟವಶಾತ್ ನನ್ನ ಹಿರಿಯರು ನಮ್ಮಪ್ಪ,ಅಮ್ಮ. ಅವರಿಗೂ ಇದ್ದರು ಮನೆತುಂಬ ಪ್ರಾಯದವರು ಮನೆತುಂಬ. ಪರಂಪರೆಯ ಗುಣಾಣುಗಳು ಅವರಿಂದಲೇ ವರ್ಗವಾಗಿತ್ತು. ಅದರಿಂದಲೇ ಅನುವಂಶೀಯ ವಿಧೇಯತೆ ರಕ್ತಗತವಾಗಿತ್ತು ನಮಗೆ. ಅವರ ತಿರಸ್ಕಾರದ ನೆರಳಲ್ಲಿ ನಮ್ಮನ್ನು ನಾವಾಗೇ ಬೀದಿಯಲೇ ಮುಕ್ತವಾಗಿ ಬೆಳೆಯಲು..ಬಿಟ್ಟ ಪಾಶ್ಚಿಮಾತ್ಯ ಬುಧ್ದಿಜೀವಿಗಳು.. ಪರೀಕ್ಷೆ ಬಂದಂತೆಲ್ಲಾ ಹತ್ತಿರ, ನಾವು ಅನಾಥರಾಗಿ ತತ್ತರ...ಆದರೆ ಬಂದ ಹಿರಿಯ ನೆಂಟರಿಂದ ಪಾಠ ಸದಾ ಜಾರಿಯಲ್ಲಿರುತ್ತಿತ್ತು. ಎಲ್ಲರ ಬುದ್ದಿವಾದ ಒಂದೇ.... ಓದಲೇ ಬೇಕು ಪಾಠ...ಇಲ್ಲದಿದ್ದರೆ ಸಿಗುವುದಿಲ್ಲ ಊಟ. ಬಾಡಿಗೆಯ ಮನೆ, ಎರಡೊತ್ತಿನ ಕವಳ. ಮಹತ್ತರ ಗುರಿ. ಸಾಧಿಸಲು ಬೇಕಾದ ಶ್ರಮದ ಖಡಕ್ ಎಚ್ಚರಿಕೆ.
ಆಗ ಕನಸು ಕಂಡದ್ದುಂಟು...ನಾವೂ ದೊಡ್ಡವರಾಗ ಬೇಕು. ಬೆಳಗಾಗುವುದರೊಳಗೆ, ಎಲ್ಲರೂ ಗೌರವಿಸುವಂತೆ, ಕಂಡರೆ ಎಲ್ಲ ಮಕ್ಕಳು ಹೆದರಿ ಮೌನವಾಗುವಂತೆ. ಯಾರಿಂದಲೂ ಹೇಳಿಸಿಕೊಳ್ಳದಂತೆ, ನಾವು ನಾವಾಗಬೇಕು..ಕುರ್ಚಿ ಮತ್ತು ನೆಲದ ಅದಲು,ಬದಲು ಆಗಿ ನಾವಿರಬೇಕು ಮೇಲೆ....ಮಕ್ಕಳು ಚಾಪೆಯಮೇಲೆ..!! ಒಂದು ವಿಕೃತಿ ಸಂತೋಷದ ಉನ್ಮಾದದ ಅನುಭವ ಸ್ವಪ್ನದ ರೋಮಾಂಚನ.
ಈಗ ನಿಜಕ್ಕೂ ದೊಡ್ಡವನಾಗಿದ್ದೆನೆ.....ಈಗಾಗಲೇ ಹಿರಿಯ ನಾಗರೀಕ ಎಂದು ಧೃಡೀಕರಿಸಲ್ಪಟ್ಟು ಆರೇಳು ವರ್ಷಗಳೇ ಕಳೆದಿವೆ..... ಸರಾಸರಿ ದೇಶದ ಆಯು ಪ್ರಮಾಣಕ್ಕಿಂತ ಹೆಚ್ಚು ಬದುಕಿದ್ದೇನೆ.... ನನ್ನಂತೆ ಲಕ್ಷಾಂತರ ಸಮವಯಸ್ಕರು ಬದುಕಿದ್ದಾರೆ ನನ್ನೊಟ್ಟಿಗೆ...!!
ಹೌದು ಕನಸು ನನಸಾಗಿದೆ.....

ಅದರೆ...
ಈಗಿನ ಸ್ಥಿತಿ ಸಂಪೂರ್ಣ ತದ್ವಿರುದ್ಧ. ಗುಂಪಿನಲ್ಲಿ ಹಂಚಿಬಾಳುವ ಜೇನು ಹುಳುಗಳಿಂದ, ತಮ್ಮ ಪ್ರಭೇದವನ್ನೇ ಬೇಟೆಯಾಡ ಬಲ್ಲ ಜೇಡ ರಾದ ವಿಕಾಸದ ಕಥೆ ನಮ್ಮ ಸಮಾಜದ್ದು. ಖಾಸಗಿ ವಯಕ್ತಿಕ ಮೋಜಿನ, ವಿಲಾಸೀಯ ಮತ್ತು ಸ್ವೇಛ್ಚೆಯ ಒಂಟಿ ಬದುಕಿಗೆ ಮೊರೆಹೊಕ್ಕ ಆಧುನಿಕ ಸಂಸ್ಕೃತಿ ಈಗ. ಗ್ರಾಮಕ್ಕೆ ನಗರಕ್ಕೆ ವ್ಯತ್ಯಾಸವಿಲ್ಲ... ಜಾಗತಿಕರಣದ ವಿಶ್ವನಾಗರೀಕ ಎಂಬ ಪರಿಕಲ್ಪನೆಯ ಮಾಹಿತಿತಂತ್ರ ಕಾಲದಲ್ಲಿ.....ಇರುವ ಒಂದೋ, ಎರಡುಕುಡಿಗಳು ತಮ್ಮಂತೆ ಅನುಭವಿಸದಿರಲಿ ಎಂಬ ಪೋಷಕರ ಮಮಕಾರ ಸ್ವಾಭಾವಿಕ. ಬಾಯಲ್ಲಿ ಬಂದದ್ದನ್ನು ಶಿರವಹಿಸಿ ನಡೆಸಿಕೊಡುವ ದ್ರೋಣರಂತಹ ಪೋಷಕರು. ವಿಚಿತ್ರ ಮುದ್ದಿನಲಿ ಪರಾವಲಂಬಿ ತರಬೇತಿ.....ಹಿರಿಯರೆಂದರೆ ಯಾರು? ಎಂಬ ಅಮಾಯಕ ನೋಟ ಘನೀಕರಿಸುತ್ತದೆ ಯುವಕರಲಿ. ನಮ್ಮ ಹೊಸ ಪೀಳಿಗೆಯಲಿ....ಎಲ್ಲಾ ಅಧಿಕಾರಗಳಿಗೂ ಮಕ್ಕಳೇ ಆದ್ಯ, ಪೂಜ್ಯ..ಅಂತಿಮ ನಿರ್ಣಯ ಅವರದೇ.....
ಮಾರ್ಪಾಡು ಅನಿವಾರ್ಯ...ನಿಜ....! ಹೌದು ಆಕಾಲಕ್ಕೆ ಆ ರೀತಿ,ನೀತಿಗಳು ಸರಿಯಾಗಿತ್ತು. ಈಗಲೂ ಎಲ್ಲವೂ ಸಹಜವಾಗಿ ಸರಿಯಾಗಿರಲೇ ಬೇಕು.ಇರಬಹುದೇನೋ?
ಆದರೆ... 
ನನ್ನ ಸ್ಥಾನ, ಮಾನ ಯಾವ ಬದಲಾವಣೆಕಂಡಿಲ್ಲ
ಕಿರಿಯನಾಗಿ ಕನಸ ಕಂಡ ದಿನದ ಯಥಾ ಸ್ಥಿತಿಯನ್ನು ಕಾಯ್ದಿರಿಸಿಕೊಳ್ಳಲಾಗಿದೆ....

ನಾನು...
.
ಆಗ...ಕಿರಿಯನಾಗಿ ನಿರ್ಲಕ್ಷಿತ...
ಈಗ.....ಹಿರಿಯನಾಗಿ ಅನಪೇಕ್ಷಿತ.....

ಇದೊಂದು ವಿಚಿತ್ರ ಸತ್ಯ.... ಹ,ಹ,ಹ,ಹ....ಖಂಡಿತಾ ಅರ್ಧ ಸತ್ಯವಲ್ಲ.
ಹಳ್ಳಿಯಲ್ಲಿ ಹುಟ್ಟಿ, ಕನ್ನಡಮಾದ್ಯಮದಲ್ಲೇ ಓದಿದ ನನ್ನಂತಹ ನನ್ನ ಸಮಕಾಲೀನರ ಭಾವನೆಗಳು ಹೀಗೆ ಇರಬಹುದೇನೋ? ಗೊತ್ತಿಲ್ಲ.. ಈ ನನ್ನ ಅಭಿವ್ಯಕ್ತಿ....ಸರ್ವಕಾಲಿಕವೂ ಅಲ್ಲ, ಸರ್ವವ್ಯಾಪಿಯೂ ಅಲ್ಲ..ಎಂದು ನನಗೆ ಗೊತ್ತು....
ಕೇವಲ ನನ್ನ ಗ್ರಹಿಕೆ.....

No comments:

Blog Archive