ನಿರ್ಲಿಪ್ತರು.


ನಮ್ಮೂರಿನ ಜಾಲಿಮರದ ಕೊರಡು
ಬಿಸಿಲ ಕುಲುಮೆಯ ತಿದಿಯು ಏರಿಳಿತದ ಶ್ವಾಸಕೆ
ಸಿಡಿವ ಕೆಂಡವಾಗಬೇಕಿದ್ದ ಕ್ರಾಂತಿ ಕವನ 
ಕಿಡಿ ಕಾರಬೇಕಿದ್ದ ಹಾಡು,
ಯಾಕೋ....ಕರ್ಶಕದಲ್ಲಿಇದ್ದಿಲಾಗಿದೆ
ದಹನಕ್ರಿಯೆ ಇನ್ನೂ ಅಪೂರ್ಣ,
ಸ್ವರತಪ್ಪಿದ ಜಾಡು, ಕನಿಕರದ ಪಾಡು
ಬೂದಿಯಾಗಿದೆಯೆಂದು ಸಂಭ್ರಮಿಸ ಬೇಡಿ
ಕಿಡಿ ಒಂದು ತಾಕಿದರೆ ಸಾಕು, ಬಣಿವೆಯೇ ಆಹುತಿ
ಸಿವುಡುಪೇರಿಸಿದ ಕಣದಲ್ಲಿ ಕಾಂಡವದಹನ
ಬಿಸಿಲ ಜ್ವಾಲೆಯ ತಾಂಡವ ನೃತ್ಯ
ಶಿವನ ಜಟೆಯಲ್ಲಿ ನಿಂತ ಗಂಗೆಯ ಹರಿವು
ನಿರ್ನಾಮವಾಗುವರು ಯಾರೆಂದು ತಿಳಿದಿಲ್ಲ
ನರ್ತಕ, ನೃತ್ಯದಲ್ಲಿ ತಲ್ಲೀನ ಸದ್ಯಕೆ
ರೆಪ್ಪೆಗಳು ಬೇರ್ಪುಡುವ ಮುನ್ನ, ಮುಕ್ಕಣ್ಣ ಮೌನಿ
ಧ್ಯಾನಿ, ಬೂದಿಮಣ್ಣಾಗುವ ಮೊದಲು
ದೃಷ್ಟಿಮಂಜಾಗಿ, ನಂಜಾಗುವ ಮೊದಲು
ಗ್ರಾಮದೇವತೆಯ ಬೇಡಿರಿ,
ಕಳೆದವರ್ಷ ಹೂತಹೆಣ ತೆಗೆಯಿರಿ, ಮಳೆಯಾಗಬಹುದು.
ಕಾಳು ಹಸನಾಗಿಸುವ ಮುನ್ನ
ಬಡಿಯಲೇ ಬೇಕು ಸಿವುಡು, ರಾಶಿಮಾಡುವ ಮುನ್ನ,
ಹಂಚಿಕೆ ಹಸನಿರಬೇಕು ಎಲ್ಲರಿಗೂ ಸಮಪಾಲು,
ಚಮ್ಮಾರ, ಕಮ್ಮಾರ, ಕುಂಬಾರ,
ಅಗಸ, ಮಡಿವಾಳ,ತೋಟಿ, ಪೂಜಾರಿ
ಉಳಿಸಿಕೊಳ್ಳಿ ನಿಮ್ಮ, ನಿಮ್ಮೆಲ್ಲರ ಪಾಲು
ಮಿಕ್ಕ ಸಿಂಹಪಾಲಲ್ಲೂ ಸದಾ ಕಾಂಗಾಲು
ಕೊರಡು ಹೊಗೆಯಾಡುತಿದೆ ಹೊಂಗೆಯ ನೆರಳಲ್ಲಿ,
ನೀರಿಲ್ಲದ ಹಳ್ಳದಲಿ, ಉರಿಯನೇ ಉಂಡ ಕೃಷಿಕ
ನರಳುತ್ತಾನೆ ಶಾಶ್ವತ ಮೌನದಲ್ಲಿ ಅಸಹಾಯಕ
ಖುಷಿಯಾಗಿದ್ದಾನೆ ಧನಿಕ, ಬದುಕಿದ್ದಾನೆ ಶ್ರಮಿಕ
ನಗರದಲ್ಲಿ ನಿರ್ಲಿಪ್ತ ನಾಗರೀಕ.

Comments

Popular posts from this blog

ಕಾಗೆ....