ಬಾವುಲಿ.

ನೆಲಹಂಗು ಧಿಕ್ಕರಿಸಿದ ಊರ್ಧ್ವಮುಖಿ
ಶಾಶ್ವತ ಗುರುತ್ವವಿರೋಧಿ ವಾಯುಸಂಚಾರಿ,
ಮರಆವಾಸಿ ಕತ್ತಲ ವಿಸ್ತಾರದಲಿ ಲೀನವಾಗಿ 
ಅದೃಷ್ಯದಲಿ ಚಲಿಸಿ ತೇಲುತ್ತಾನೆ
ಕೈ ಬೆರಳೇ ಕೊಡೆಯಾಗಿಸುವ ಪವಾಡ
ಭುಜ, ತೋಳು, ಕೈ, ಮೂಳೆಗಳು ನೀಳ
ಅಸಹಜದಲ್ಲಿ, ಮಡಚಿದ ಸಂಚಿಯಾಗುವ ಬೆರಗು
ಅಪಾರದರ್ಶಕ ತೆಳು ಮಾಂಸಲ ಪದರ
ಬಿಚ್ಚುತ್ತಾನೆ ತನ್ನ ವಂಶಜರ ಬಳುವಳಿಯ ಛತ್ರಿ
ತೆರೆದು, ತೆಳುವಾಗಿ, ರೆಕ್ಕೆಯಾಗಿಸಿ
ತೇಲುತ್ತಾನೆ ಸರಾಗ, ಹಗುರವಾಗಿ
ಋಣಮುಕ್ತ ಭುವಿಗೆ, ಪರಕೀಯ ಆತ್ಮ,
ನೆಲ ಮುಟ್ಟದ ಛಲವಾದಿ ಅತಿ ಸೋಜಿಗ
ಕುರುಡನಲ್ಲ, ಆದರೂ ದೃತರಾಷ್ಟ್ರನ ಪಟ್ಟ
ಶಬ್ದ ಸಂವೇದಿಯ ಕಿವಿ ಅತಿ ಚುರುಕು
ಏಕಲವ್ಯನ ಶಬ್ದಬೇಧಿ ಕಲೆಯ ದೃಷ್ಟಿ
ಯಾರಿಗೂ ಅಪ್ಪಳಿಸಿದ ಕತ್ತಲಸಂಚಾರಿ
ಭಯಂಕರ ಬೇಟೆಗಾರ ಹೂಡುತ್ತಾನೆ
ನಿರ್ಜನ ಗುಹೆಗಳ ಛಾವಣಿಯಲ್ಲೂ ಸಂಸಾರ
ನೆಲ ಮೆಟ್ಟದ ವೀರ,ಹಾರಲಾರ ಹಕ್ಕಿಗಳಂತೆ,
ಬೆರಳುಗಳೇ ತೆಳು ವಾಯು ಹಾಯಿ
ತೇಲುತ್ತಾನೆ,ಮಣ್ಸೆಳತ ಗೆದ್ದ ಖುಷಿ
ಜಾರುತ್ತಾನೆ ಸಾವಕಾಶದಲ್ಲಿ ಶಬ್ದ ನೇತ್ರ
ತಲುಪದ ಎತ್ತರದಲಿ, ಛಲ ತಪಸ್ವಿಯ ಪ್ರಾಣಾಯಾಮ
ನಿರ್ವಾಣದಲಿ ಹಟಯೋಗಿ,
ಶೀರ್ಷಾಸನದಲೇ ವಿಶ್ರಾಂತಿಪಡೆಯುವ ಭೋಗಿ
ಹವಾನಿಯಂತ್ರಿತ, ಸುಸಜ್ಜಿತ ಅಗೋಚರ ಮಾಯಹಾಸಿಗೆ
ಕುಂಠಿತ ಹಿಂಗಾಲು, ಕೊಕ್ಕೆ ಉಗುರು ದಿಂಬಿಗೆ,
ಗಟ್ಟಿಹಿಡಿತ, ಜೋತುಬಿದ್ದೇ ಗೊರಕೆಹೊಡೆಯುವ ಭೂಪ
ಎಲ್ಲೋ ಜೋಗಪ್ಪ ನಿನ್ನ ಅರಮನೆ?
ಎಲ್ಲೋ ಜೋಗಪ್ಪ ನಿನ್ನ ತಳಮನೆ?
ಎತ್ತರಕೆ ನೇತುಬೀಳುವ ಗಗನಚುಂಬಿ ಆವಾಸಿ
ಕಳಚಿ ಕೊಕ್ಕೆಯ ಹಿಡಿತ, ಇಳಿದು ಹಗುರಾಗಿ
ಎಲ್ಲಮಲಗಿರುವಾಗ, ಮತ್ತೇ ಏಳುವ ಬುದ್ಧ
ಇರುಳ ಸಂಚಾರಿ ಕ್ರಿಯಾಶೀಲ ಬೇಟೆಗೆ ನಿಶ್ಯಭ್ದದಲಿ ಬಧ್ದ
ನೆಲತಳಕೆ ಡೈವ್ ಮಾಡಿ, ಜಿಗಿದು ತೇಲಿಸುವ
ಚಾಲಾಕಿ ಚಾಲಕ ಕತ್ತಲು ರಸ್ತೆಯಲ್ಲಿ ತನ್ನ ದೇಹ
ಕರ್ತವ್ಯಕೆ ಹಾಜರ್, ಆಹಾರ ಬೇಟೆಗೆ,
ಮಡಿಯಗೊಂದಲದಿಂದ ದೂರ. ಬದುಕು ಭಾರ
ಜಗವೆಲ್ಲ ಎದ್ದಾಗ ಅರಮನೆಯ ಸುತ್ತ
ಹುಡುಕುತ್ತಾನೆ, ನೆಲ, ಸೂರಿಲ್ಲದ ತ್ರಿಶಂಕು
ಭಿತ್ತಿರಹಿತ ಮಹಲು,ಮರದ ಎತ್ತರದಲ್ಲಿ,
ಯಾವುದೊ ಟಿಸಿಲ ತುದಿಯಲ್ಲಿ
ತಲೆಕೆಳಗೆ, ನೇರ ಮಲಗುತ್ತಾನೆ, ಅವಿಶ್ರಾಂತ
ಶಾಂತ ಜೀವಿ,ಪ್ರಕೃತಿ ನಿಯಮಪಾಲಕ,
ಮಹಾಭಕ್ತ ಪರಿಸರ ಸಂರಕ್ಷಕ.

Comments

Popular posts from this blog

ಕಾಗೆ....