೨೧-೦೮-೧೯೧೮

ಜೀವ ಪ್ರಭೇದ


ಉಪವಾಸ ಅಲೆದಾಟ,ಆವಾಸ ಹುಡುಕಾಟ,
ನೀರಡಿಕೆಯ ಪರದಾಟ
ಪ್ರಭೇದ ಸಮುದಾಯ ನಿಶ್ಯಬ್ಧ ಹೋರಾಟ 
ನಿಲ್ಲದ ಪೀಕಲಾಟ, ಶಾಶ್ವತ ತೊಳಲಾಟ
ಪರಿಸರದಾಲಯದಲ್ಲಿ ಪ್ರತಿನಿತ್ಯದ ಪಾಠ,
ದೂರಿಲ್ಲ ಯಾರನ್ನೂ, ಕೂರಿಸಿಲ್ಲ ಗೂಬೆ,
ಮೌನದಲಿ ಜಪಿಸದ ಸಂತ
ವಿನಾಶದಲ್ಲೂ ಹಗೆ ಸಾಧಿಸದ ಶಾಂತಜೀವಿ
ಸಹಜ ಬದುಕಿನ ಕಲೆ, ನಿಗಧಿಯಾದ ಪ್ರಕೃತಿಯ ಬೆಲೆ
ಅನೂಹ್ಯ ಅವಲಂಬನದ ಜೀವಬಲೆ.
ಬದುಕುಳಿಯುವ ಕೊಲೆಗಾರ ಅಪರಾಧಿಯಲ್ಲ
ನ್ಯಾಯದೀಶನೂ ಅಲ್ಲ, ಕೇವಲ ಕಕ್ಷಿದಾರ
ತನ್ನಿರುವಿಗೆ ತಾನೇಜವಾಬ್ದಾರ, ಹಕ್ಕುಪತ್ರದಾರ
ನಿಭಾಯಿಸುವ ಶಿಸ್ತಿನ ನಿಸ್ವಾರ್ಥ ಪಾತ್ರಧಾರ,
ಕಾಣದ ಪಾಳೇಗಾರನ ಶಿಸ್ತಿನ ಸರದಾರ.
ಹುಟ್ಟ ಕಾಮಿ, ಸಂತತಿಯ ಮುನ್ನಡೆಗೆ
ಸಂತನಾಗ ಬೇಕಿಲ್ಲ,ಸಂತಾನ ರಕ್ಷಣೆಗೆ
ವ್ಯಭಿಚಾರಿಯಲ್ಲ ಪೀಳಿಗೆಯ ವರ್ಗಾವಣೆಗೆ
ಲೈಂಗಿಕಾಸಕ್ತ....ವಿಕೃತನಲ್ಲ,ಬ್ರಹ್ಮಚಾರಿ ತಪಸ್ವಿ.
ಸಾಯದಿರುವುದೇ ಗೆಲವು, ಅದು ಜೈವಿಕ ಹಕ್ಕು,
ಜೀವನ್ಮರಣದ ಪೈಪೋಟಿಯಲಿ ಸೋಲು ಸಹಜ
ನಿರ್ಮೋಹಿ ನಿಯಮಪಾಲಕ ಅಚಲತೆಯಲಿ ಅಸಹಜ
ಜೀವಸಂಖ್ಯಾ ಸ್ಪೋಟ ಸರ್ವಕಾಲಿಕ ಪ್ರದರ್ಶನ
ಸ್ವಪ್ರಭೇಧ ಪ್ರತಿನಿಧಿಯ ಆಯ್ಕೆಯಲಿ ಭೂಭಾರ
ಅಪಾಯಕಾರಿ ಅಸಮತೋಲನ..
ಅಶಕ್ತ ನಿರ್ವಂಶದಲ್ಲಿ ಮುಕ್ತಾಯ, ಪ್ರಕೃತಿ ಆಜ್ಞೆ
ಪಡೆದ ಸಾಲ ಹಿಂದಿರುಗಿಸುವ ಮರಣ ದುರಂತವಲ್ಲ
ಬದುಕಿನ ತಟಸ್ಥಬಾಗಿದಾರ ಮಹಾತ್ಮ
ಈ ಕಥೆಯ ಎಲ್ಲ ಪಾತ್ರಗಳು
ಜೀವಂತ, ವಿನಯಸಂಪನ್ನ ಮಹಾಬಲರು
ಖಳನಾಯಕ ಯಾರೆಂದು ನೀವೇ ತಿಳಿಸಿ.

Comments

Popular posts from this blog

ಕಾಗೆ....