ಕೊಡಚಾದ್ರಿ.....
ಬೆಟ್ಟದ ಹುಟ್ಟು ಹುಡುಕಿದರೂ
ನಿಶ್ಯಬ್ಧ ಮೌನ ವಿಸ್ತಾರ ಉತ್ತರ
ಶಿಖರ ಚಿಗುರುವುದಿಲ್ಲ, ಸೈಂಧವ ಎತ್ತರ 
ತಳದಲ್ಲೇ ಕವಲಾದ ಬಿಳಲು ಶಿಖರಗಳು
ವಿವಿಧ ಮಜಲುಗಳ ಮನಸಿನ ಕಣಿವೆಯಲ್ಲಿ
ಊಹೆಗೆ ನಿಲುಕದಷ್ಟು ಪುರಾತನ ಹಸಿರು
ಅಡಗಿರುವ ಕಾಮನ ಬಿಲ್ಲು, ಕಡಿದಾದ ಕಾರ್ಗಲ್ಲು
ನೋಟ ಸೀಳಿದಷ್ಟೂ ನೀಟಾದ ಜೋಡಣೆ
ನಾಟಕದ ಪರದೆಗಳು ಒಂದರ ಹಿಂದೆ ಒಂದು
ಎಂದೋ ಚಿಮ್ಮಿ ಘನೀಕರಿಸಿ ನಯವಾದ ಶಿಲೆ
ಕರಗಿ ಮಣ್ಣಾದ ಅವಕಾಶದಲಿ ಜೀವಜಾಲ
ಹಿಗ್ಗಲಾರದ ಬೆಟ್ಟ ಸವೆಯುವುದಿಲ್ಲ,
ನೋಡಿದಷ್ಟೂ ಮನತಣಿಯದ ತಾಣ
ಹಿನ್ನೋಟಕೆ ಸಿಕ್ಕ ಅದೇ ಗಂಭೀರ ನಿಲುವು
ಇನ್ಯಾವುದೋ ಆಯಾಮದಲಿ, ಅದೃಶ್ಯ
ಕ್ಷಣ,ಕ್ಷಣಕೆ ಬದಲಾಯಿಸುವ ಶೃಂಗಾರ ಪರಿಪಾಠ
ಇಂಚು,ಇಂಚಿಗೂ ಸಂಚಿನಲಿ ವೈವಿದ್ಯ ವರ್ಣ
ಪ್ರಶಾಂತ ನಿಶ್ಚಲ ಸೌಂದರ್ಯ ಚಂಚಲ
ಹಕ್ಕಿ ಹಾರಟದಲಿ ಹಗುರ ಮನಸು
ಕೋಶ,ಕೋಶಗಳಲಿ ಎದ್ದ ಆತ್ಮಪ್ರತಿಧ್ವನಿ
ಜಡದೇಹದಲಿ ಸಂಚಾರ ಶಾಂತೋನ್ಮಾದ ತರಂಗ
ಆನಂದಲಿ ಅವರ್ಣನೀಯ ಚೇತನ
ಅನಪೇಕ್ಷಿತ ತಾತ್ಕಾಲಿಕ ಇರುವಲ್ಲಿ ಶಾಶ್ವತ ಹುಡುಕಾಟ
ಅಪೇಕ್ಷಿತನಾದಲ್ಲಿ! ಯಾರು? ನಾನೆಲ್ಲಿ?
ಆಕಾಶ ಕನ್ನಡಿಯ ನಿರ್ವಾತದಲ್ಲಿ,
ಪ್ರತಿಬಿಂಬಿಸಲಾರದ ಇರುವಿಕೆ
ಕಾಡು, ಮರ ಹಕ್ಕಿ ನದಿ, ತೊರೆಗಳಲ್ಲಿ ಪ್ರತಿಫಲನ
ತಡಕಾಡಿ, ಹುಡುಕಿದರೂ ಶೂನ್ಯತೆಗೆಲ್ಲಿಯ ಎಲ್ಲೆ?
ಅನಂತದಲ್ಲೇ ಕರಗಿಮಾಯವಾಗುವ
ಜೀವದ ಕುರುಹಾದರೂ ಎಲ್ಲಿ?
ದಿಗಂತ, ಕಣಿವೆಯ ಕಂದರದಲ್ಲಿ
ನಿರ್ಮೋಹ ಅನ್ಯತೆಯಲಿ ಪರಮಾಣು,ಬ್ರಹ್ಮಾಂಡ
ಮಾಯಾಲೋಕದಲ್ಲಿ ಸತ್ಯ, ನಿತ್ಯ ಸುಂದರ ಚೀತ್ಕಾರ
ಮೇಲೇರಿದ ಹಾಗೆ, ಅಮಲೇರುವ ಉನ್ಮಾದ,
ತೇಲಿ ನೆಲದಿಂದ ಹಗುರತೆಯ ಮೋಡ ಸ್ಪರ್ಶ,
ಕೆಳ ತೇಲುವ ಮೋಡ, ಆಕಾಶರಾಜ ನಾನು
ಅಗೋಚರ ಅದೃಶ್ಯ ಸುಂದರ ಲೋಕ
ನೋವಿಲ್ಲ, ನಲಿವಿಲ್ಲ, ಇಲ್ಲ ರೋಮಾಂಚನ ಸುಳಿವು
ದಣಿವಿಲ್ಲ, ದಾಹವಿಲ್ಲ,ನಿರ್ವಿಕಾರದ ಸೆಳವು
ಬಿಡುಗಡೆಗೆ ಸಿದ್ದ ಹಗರು ದೇಹ
ನಿರ್ಜನ ವಕ್ರ ಮೈದಾನದಲಿ,ಸೂರ್ಯೋದಯ
ಹೊಳೆಯುವ ಹೊರಚಾಚಿದ ಕಾರ್ಗಲ್ಲು ಛಾಯೆ
ಏರಲಾರದ ಕಡಿದಾದ ಕೊರಕಲೇ ಮೆಟ್ಟಿಲು
ದಿಟ್ಟಿಸಿ ನೋಡಿದೆ...ಕೆಳಗೋ? ಮೇಲೋ?
ಅಕ್ಕ, ಪಕ್ಕ, ಸುತ್ತ,ಮುತ್ತ ದಿಕ್ಕಿಲ್ಲದ ಗಡಿ
ಮೋಡದಲಿ ಸೆರೆಯಾಳು, ತಳಕಾಣದ ಗುಂಡಿ,
ಸೊನ್ನೆ ಸೂರ್ಯನಸುತ್ತ ಮಬ್ಬಿನ ಪ್ರಭಾವಳಿ
ಈ ಮಹಾ ವೃತ್ತದಲ್ಲಿ
ಹಿಡಿಯಲಾರದ ಗೋಳದಲ್ಲಿ...

Comments

Popular posts from this blog

ಕಾಗೆ....