"ಸವನಾಲು ಬಸದಿ"
ಇದೇ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಇಲ್ಲೇ ಸಮೀಪದಲ್ಲಿರುವ ಅಷ್ಟಾಗಿ ಪ್ರಸಿಧ್ದಿಇಲ್ಲದ, ಬೆಟ್ಟದಬುಡದ ಹಸಿರುಕಾಡಲ್ಲಿ, ಎತ್ತರದ ಮರಗಳ ನೆರೆಳಿಲ್ಲಿರುವ ಒಂದು ಜೈನ ಬಸದಿ ಅದರ ಪರಿಸರ ಆಕರ್ಷಣೀಯವಾಗಿದೆ. ಯಾರಿಗೂ ನಿರಾಸೆ ಮಾಡುವುದಿಲ್ಲ ಈ ಸುಂದರ ತಾಣ. ಎಲ್ಲರೂ ನೋಡಬಹುದೆಂದು ನಮ್ಮ ಸ್ನೇಹಿತರೊಬ್ಬರು ಹೇಳಿದಾಗ....ತಿಂಗಳು ಗಟ್ಟಲೆ ಎಲ್ಲೂ ಹೋಗದೆ ಮನೆಯಲ್ಲೇ ಇದ್ದು ಸಾಕಾಗಿ ಕಾಯುತ್ತಿದ್ದ ನನಗೆ ಪ್ರಯತ್ನಪಡಬಹುದೆಂದು ಅನಿಸಿತು. ವಿರಳ ಜನಸಂದಣಿ ಇರುವ.....ಅತಿ ಚಿಕ್ಕದಾರಿ ಕಾಡು, ಆಡಿಕೆ, ಬಾಳೆ ತೋಟಗಳ ನಡುವೆ ಸಣ್ಣರಸ್ತೆಯಲ್ಲಿ ಒಂದು ಕಾರ್ ಮಾತ್ರ ಹೋಗಲು ಇರುವ ದಾರಿ. ಎರಡು, ಮೂರು ಕಿ.ಮಿ ಒಳಗೆಹೋಗುವಾಗ ನಿರ್ಜನರಸ್ತೆಗಳು. ಅಲ್ಲೊಂದು ಸೇತುವೆ ಇದೆ. ಆ ಸೇತುವೆಯಲ್ಲಿ ಸಣ್ಣ ಕಾರಿನ ಪಕ್ಕದ ಕನ್ನಡಿಗಳನ್ನೂ ಸಹಾ ಒಳಗೆಳೆದುಕೊಂಡು ಮಾತ್ರ ಹೋಗಬಹುದಾದ, ಸ್ವಲ್ಪ ಹೆದರಿಕೆ ಹುಟ್ಟಿಸುವ ಸೇತುವೆ. ನನ್ನಂತ ಅನುಭವವಿಲ್ಲದ ಹೊಸ ಚಾಲಕರಿಗೆ ನಿಜವಾದ ಸವಾಲು. ಸ್ಟೇರಿಂಗ್ ಕೊಂಚ ಯಾಮಾರಿದರು ಹೊಸಕಾರ್ ಉಜ್ಜಿಕೊಂಡುಹೋಗುವುದು ಖಾತ್ರಿ ಸೇತುವೆಯ ಕಬ್ಬಿಣದ ಕಂಬಿಗಳಿಗೆ. ಕೆಣಕಿದ ಹಾಗೆ ಅನಿಸಿ ನೋಡೋಣ ಪ್ರಯತ್ನ ಪಡೋಣ, ತೀರಾ ಆಗದಿದ್ದರೆ ಗಾಡಿಯನ್ನು ಅಲ್ಲೇ ನಿಲ್ಲಿಸಿ ನಡೆದುಕೊಂಡೇ ಹೋಗುವುದೆಂದು ನಿರ್ಧರಿಸಿ ಹೊರಟೆವು ಮೂರು ಮಂದಿ. ನನ್ನ ತಮ್ಮನ ಮಗ ಪ್ರತೀಕ್ ಜೋಡಿದಾರ್, ಲಕ್ಷ್ಮಿಯ ತಮ್ಮನ ಮಗಳು ಅರ್ಪಿತಾ ಶಾಮಪ್ರಸಾದ್ ಒಟ್ಟಿಗೆ ಇದ್ದರು.,
ಬೆಳ್ತಂಗಡಿಯ ಚರ್ಚ ರಸ್ತೆಯಲ್ಲೇ ಮುಂದು ವರೆದು ನಂತರ ಗ್ರಾಮೀಣಭಾಗದ ಒಳದಾರಿ ಸೇರಿದೆವು. ಒಳಗೆ ಹೋಗುತಾ, ಹೋಗುತ್ತಾ ಜನರೇ ಕಾಣದ ರಸ್ತೆಗಳು. ಒಂದೆರಡು ಹಳ್ಳಿಗಳಂತೆ ಕಂಡು ಬಂದರೂ ಅಲ್ಲಿ ಯಾವ ಆವಾಸಗಳು ಕಾಣದ ನಿರ್ಜನ ಪ್ರದೇಶ. ಕೇಳೋಣವೆಂದರೆ ಒಬ್ಬ ನರಪಿಳ್ಳೆಯೂ ಕಾಣುತ್ತಿಲ್ಲ ಇರುವ ರಸ್ತೆಯಲ್ಲಿ. ಆದರೂ ಅನ್ವೇಷಣೆ ಮುಂದುವರೆಸಿದೆವು. ಜೊತೆಯಲ್ಲಿರುವ ಇಬ್ಬರು ಉತ್ಶಹಿ ಸಂಗಾತಿಗಳೇ ನನ್ನ ಧೈರ್ಯ.
ನಾವು ಊಹಿಸಿದಷ್ಟು ದುರ್ಗಮವಾಗಿರಲಿಲ್ಲ ಗ್ರಾಮೀಣ ಒಳ ರಸ್ತೆಗಳು. ಎದುರಿಗೆ ಗಾಡಿಬಂದರೆ ಎರಡು ಅಡಿ ಜಾಗವೂ ಇಲ್ಲ ಪಕ್ಕಕ್ಕೆ ಸರಿದು ಸೈಡ್ ಕೊಡಲು. ಹಿಂದಕ್ಕೆ ಹೋಗದೇ ವಿಧಿ ಇರಲಿಲ್ಲ. ದಟ್ಟ ಹಸಿರಲ್ಲಿ ಹಲವು ಕಿಲೋಮೀಟರ್ ನಂತರ ಹಳ್ಳದ ಬಳಿ ಒಬ್ಬ ಹೆಂಗಸು ಸ್ಕೂಟಿಯಲ್ಲಿ ಎದುರು ಸಿಕ್ಕಾಗ ನನ್ನ ಪುಕ್ಕಲು ಸಾಹಸಕ್ಕೆ, ಧೈರ್ಯಕ್ಕೆ ನನಗೆ ನಗುಬಂತು. ಆಕೆ ವಿವರವಾಗಿ, ಎಡ,ಬಲ, ನೇರ, ಎಲ್ಲಾ ಪಕ್ಕಗಳನ್ನು ಸರಿಯಾಗಿ ವಿವರಿಸಿ. ಸೇತುವೆ ತಲುಪುವ ಹಾಗೆ ಗೈಡ್ ಮಾಡಿದರು. ನಂತರ ಸೇತುವೆಯನ್ನು ಕ್ರಾಸ್ ಮಾಡಲೇ ಬೇಕೆಂಬ ಉತ್ಕಟ ಆಸೆ ಕಾಡಿತು. ಪ್ರತೀಕನಿಗೆ ಹೇಳಿ ಸೇತುವೆಯ ಇನ್ನೊಂದು ಬದಿಯಲ್ಲಿ ನಿಂತು ಎಡ,ಬಲಗಳ ಸನ್ನೆ ಮಾಡಲು ಹೇಳಿ....ಅಂತೂ ಸೇತುವೆಯ ಗೋಡೆಗೆ ತಾಕದಂತೆ ಆ ಬದಿ ಸೇರಿದಾಗ ಏನೋ ಮಹತ್ತರವಾದುದನ್ನು ಸಾಧಿಸಿದ ಖುಷಿ. ನಂತರ ಬೇಗ ಬೆಟ್ಟದ ಬಳಿ ಇರುವ ಬಸದಿಯನ್ನು ತಲುಪಿದೆವು. ಮುಖ್ಯ ರಸ್ತೆಯನ್ನು ಬಿಟ್ಟನಂತರ ಕಿ.ಮಿ ಗಳ ಬಗ್ಗೆ ಅಥವ ದೂರದ ಬಗ್ಗೆ ಯೋಚಿಸಲಿಲ್ಲ.
ಒಟ್ಟಿನಲ್ಲಿ ಮನೆಯಿಂದ ಸುಮಾರು ಏಳೆಂಟು ಕಿ.ಮಿ ಗಳಾಗಬಹುದು ಆಷ್ಟೇ ( ನಡುವೆ ಬರುವ ಕೆಲವಷ್ಟೇ ಗ್ರಾಮಗಳ ಹೆಸರು ನನ್ನ ಮನಸ್ಸಲ್ಲಿ ದಾಖಲಾಗಿಲ್ಲ ಇನ್ನೂ... ). ಆದರೆ ಅನುಭವ ಬೇರೆ ಯಾವುದೋ ದೂರದ ದಟ್ಟದ ಕಾಡಿಗೆ ಹೋಗಿರುವಂತಹ ಭಾವನೆ. ಯಾವುದೇ ಮಾನವ ಚಟುವಟಿಕೆಗಳಿಂದ ದೂರವಿರುವ ಕೇವಲ ವಿಶಿಷ್ಟ ಕಾಡ ಸಪ್ಪಳ ಮಾತ್ರ. ಮನೆ, ಗುಡಿಸಲು ಏನು ಇಲ್ಲ...ಎರಡು ಪಕ್ಕಗಳಲ್ಲಿಯೂ ಬಾಳೆ, ಅಡಕೆಗಳ ತೋಟ. ಬಸದಿ ಸೇರಿದಾಗ ಅಲ್ಲಿ ಎಡ ಪಕ್ಕದಲ್ಲಿ ಇತ್ತೀಚಿಗೆ ಕಟ್ಟಿದ ಕಟ್ಟಡಗಳಿವೆ. ಇಲ್ಲಿನ ಸ್ಥಳೀಯ ಜೈನರೆಲ್ಲಾ ಪ್ರತಿ ಅಮಾವಾಸ್ಯೆಗೆ ಬಂದು ಪೂಜಿಸುತ್ತಾರೆ. ಮಿಕ್ಕದಿನ ಯಾವ ಭಕ್ತರು ಬರುವುದಿಲ್ಲ. ಬಂದರೆ ಪ್ರವಾಸಿಗರು ಮಾತ್ರ. ಪ್ರತಿ ವರ್ಷದ ಆಷಾಡ ಮಾಸದ ಅಮಾವಾಸ್ಯೆ (ಆಷಾಡ ಮಾಸಕ್ಕೆ ತುಳುವಿನಲ್ಲಿ ಆಟಿಮಾಸ ಎನ್ನುತ್ತಾರೆ.) ಈ ಆಟಿ ಅಮವಾಸ್ಯೆಯ ದಿನ ವಿಶೇಷ. ಜಾತೆಯಷ್ಟು ಜನಸೇರುತ್ತಾರೆ ಎಂದು ತಿಳಿಯಿತು. ಊಟ, ಆ ವಿಶೇಶ ಆಚರಣೆಯ ದಿನ ಮತ್ತು ಪ್ರತಿ ಅಮಾವಾಸ್ಯೆ ಮಾತ್ರ. ಉಳಿದ ದಿನಗಳು ನಂತರ ಅಲ್ಲಿ ಯಾರೂ ರಾತ್ರಿ ತಂಗಲು ಉಳಿಯುವುದಿಲ್ಲ. ಯಾರೂ ಇಲ್ಲಿವಾಸವಾಗಿಲ್ಲ. ಇತರ ಭಕ್ತರು ಅಥವಾ ಪ್ರವಾಸಿಗರು ಯಾವಗ ಬೇಕಾದರೂ ಹೋಗಬಹುದು. ಪೂಜೆ ಸಲ್ಲಿಸುವ ಅರ್ಚಕರಾಗಲಿ, ಮಂಗಳಾರತಿ, ದೀಪ ಯಾವುದೂ ಇರುವುದಿಲ್ಲ.
ಕಾಡಿನ ಮಧ್ಯೆ, ಬೆಟ್ಟದ ತಳದ ಬಳಿ ಹಳೆಯ ಚೌಕಾಕಾರದ ಬಾವಿ ಇದೆ. ಅದರ ಬಳಿಯೇ ಆಡಿಗೆಗೆ, ಊಟಕ್ಕೆ ಕಟ್ಟಡವಿದೆ. ಇನ್ನುಳಿದ ಜಾಗದಲ್ಲಿ ಹತ್ತಾರು ಕಾರುಗಳನ್ನು ನಿಲ್ಲಿಸುವಷ್ಟು ಜಾಗ. ನಮ್ಮ ಪ್ರವೇಶದ ಸರಿ ಮುಂಭಾಗದಲ್ಲಿ ಬಾವಿಯ ಪಕ್ಕದಲ್ಲಿ ಕಾರ್ ಅನ್ನು ನಿಲ್ಲಿಸಿ....ಬಸದಿಯ ಕಡೆನೋಡಿದೆವು. ಬೆಟ್ಟಹತ್ತಬೇಕು. ಮೆಟ್ಟಿಲು ಏರಬೇಕು. ಎಷ್ಟು? ಎತ್ತರ, ಎಷ್ಟು ಮೆಟ್ಟಿಲು?. ಹತ್ತಲು ಸಾಧ್ಯವೆ? ನನ್ನ ದೇಹಕ್ಕೆ. ಇತ್ಯಾದಿ ಪ್ರಶ್ನೆಗಳು ಕಾಡಿದವು. ಅರ್ಪಿತಾ ತಾನೇ ಮುಂದೆ ಹೋಗಿ ವಿವರಗಳನ್ನು ತಿಳಿಸುವುದಾಗಿ ಹೊರಟಳು. ಅವಳ ಜೊತೆ ಪ್ರತೀಕ್ ಸಹಾ ಹೋದ. ಐದು ನಿಮಿಷದಲ್ಲೇ ಮೇಲಿನಿಂದ ನಿಂತು...ನಾನು ಹತ್ತ ಬಹುದೆಂದು ಮಿಲಿಟರಿ ಸನ್ನೆ ಮಾಡಿದಳು.
ನಾನು ಹತ್ತಲು ಪ್ರಾರಂಭಿಸಿದೆ. ಅಷ್ಟೇನು ಕಷ್ಟವಲ್ಲ. ಸುಮಾರು ಐವತ್ತು ಅಡಿಗಳಿಗಿಂತ ಕಡಿಮೆ ನನ್ನ ಅಂದಾಜು ವಿಶಾಲ ಮೆಟ್ಟಿಲುಗಳನ್ನು ಹತ್ತಿ....ಗುಹೆಯ ಅಂಗಳ ತಲುಪಿದೆವು. ಗುಹೆಯ ಮೇಲೆ ಕಾಂಕ್ರೀಟ್ ನಿಂದಾದ ವೃತ್ತಾಕಾರದ ಛಾವಣಿ ಇದೆ....ಅಲ್ಲೇ ಇರುವ ಗುಂಡು ಬಂಡೆಗಳಿಗನುಗುಣವಾಗಿ. ಅದರ ಒಂದು ಬದಿ ಗುಹೆಯನೆತ್ತಿಯಮೇಲೆ ಜೈನ ಮುನಿಯ ಮೂರ್ತಿ ಇದೆ. ಗೋಡೆ, ಬಾಗಿಲುಗಳಿಲ್ಲದ ಬದುಕು.... ಕಬ್ಬಿಣದ ಕಂಬಿಗಳ ಹಂದರವಿದೆ. ಮಳೆಗಾಲದಲ್ಲಿ ತಾತ್ಕಾಲಿಕ ಟೆಂಟ್ ಹಾಕಲು. ಮುಕ್ಕಾಗಿರುವ ಮೂರ್ತಿಗೆ ಪೂಜೆ ಇಲ್ಲ ಎಂಬ ವಿಷಯ ತಿಳಿಯಿತು. ಇತ್ತೀಚೆಗೆ ಆಗಿರಬಹುದು. ಈ ಎಲ್ಲಾ ನಿರ್ಮಾಣಗಳು. ಕಾರಣ...ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯವರ ಯಾವುದೇ ಬೋರ್ಡ್ ಇಲ್ಲ, ಸೂಚನೆಗಳಿಲ್ಲ ಮತ್ತು ಆ ಇಲಾಖೆಯ ಟ್ರೇಡ್ ಮಾರ್ಕ್ ಆದ ನೀಟಾದ ಹುಲ್ಲು ಹಾಸುಗಳಿಲ್ಲ. ತಂತಿಯ ಬೇಲಿ ಇಲ್ಲ. ಹಾಗಾಗಿ ಅಷ್ಟು ಐತಿಹಾಸಿಕ ಪ್ರಾಮುಖ್ಯತೆ ಇಲ್ಲದಿರಬಹುದು. ಮೊದಲು ಜೈನಮುನಿಯನ್ನು ನೋಡಿ ನಂತರ ಗುಹೆಯ ಒಳಗೆಹೋಗುವುದೆಂದು ನಿರ್ಧರಿಸಿ ಮೇಲೆ ಹೋದೆವು. ಆಗುಂಬೆಯ ಬಳಿ ಇರುವ ಕುಂದಾದ್ರಿಯ ನೆನಪು ಬಂತು. ಸುಲಭವಾಗಿ ಹತ್ತುವಾಗ. ಜೈನಮುನಿಯ ಏಕಾಂತ. ಛಾವಣಿ ಇಲ್ಲದ ಬಂಡೆ ಬಯಲಲ್ಲಿರುವ ವೃತ್ತಾಕಾರದ ಛಾವಣಿರಹಿತ ಗೋಡೆರಹಿತ ಒಂದುಬದಿಯಲ್ಲಿ ಮೂರ್ತಿ. ಗೋಡೆ, ಗೋಪುರಗಳಿಲ್ಲದ, ಛತ್ರ ಛಾವಣಿಇಲ್ಲದ ಮುಕ್ಕ ವಿಸ್ತಾರದಲ್ಲಿ ನಿರ್ಭೀತನಾಗಿ, ನಿರ್ವಿಕಾರಕನಾಗಿ ನೂರಾರು ವರ್ಷಗಳಿಂದ. ಈ ರೀತಿಯ ಜಗಕೆ ತೆರೆದುಕೊಂಡ ಶಾಂತಮೂರ್ತಿ ಇರುವ ಜೈನಾಲಯ ನನ್ನ ಬದುಕಿನ ಕಲ್ಪನೆ. ಬಹಳ ಇಷ್ಟವಾಯಿತು. ಭಕ್ತರು ಬರುವುದು ಅಪರೂಪ ಎಂದು ಮೂರ್ತಿಯನ್ನು ನೋಡಿದರೆ ತಿಳಿಯುತ್ತದೆ. ಭಕ್ತರಾಗಲಿ, ಪ್ರವಾಸಿಗರಾಗಲಿ ಯಾರೂ ಇರಲಿಲ್ಲ. ಬಾಹುಬಲಿಯ (ಶ್ರವಣಬೆಳಗೊಳ, ಧರ್ಮಸ್ಥಳದ ಬೃಹತ್ ಶಿಲ್ಪವನ್ನು ಊಹಿಸಬೇಡಿ) ದರ್ಶನ ಪಡೆದು ಪುನಃ ಮೆಟ್ಟಿಲಿಂದ ಕೆಳಗಿಳಿದು ಗುಹೆಯಬಳಿ ನಿಂತು ಒಳಗೆ ಹೋಗುವುದೋ ಬೇಡವೋ ಎಂಬ ಪ್ರಶ್ನೆ.....ಕಾರಣ.... ಹಾವುಗಳ ತಾಣ, ಅತಿ ಮೆಚ್ಚಿನ ಜಾಗ....ತಂಪಾದ, ಶಿಲೆಗಳ ನಡುವಿನ ಕೊರಕಲುಗಳು.
ಆದರೂ ಅದೇನೋ ಒಂದು ರೀತಿಯ ಹೆದರಿಕೆಯಲ್ಲಿನ ಸಾಹಸ ಪ್ರವೃತ್ತಿ, ರೋಮಾಂಚನ ಭಾವನೆ. ಮೊಬೈಲ್ ಲೈಟ್ ನಲ್ಲೇ ನಾಲ್ಕಾರು ಮೆಟ್ಟಿಲುಗಳಿಳಿದು ಅಲ್ಲೇ ಕುಳಿತುಕೊಂಡೆ. ಕಾರಣ ಕತ್ತಲು ಮತ್ತೆ ಗುಹೆಯ ಛಾವಣಿಯಿಂದ ಬೆಳಕಿನ ಸಣ್ಣಕಿರಣ ಅದರೊಟ್ಟಿಗೆ ಒಂದು ಬದಿಯಿಂದ ನೀರಿನ ಹನಿಜಿನುಗುತ್ತಿತ್ತು. ಮಧ್ಯದಲ್ಲಿ ಕಿರಿಬೆರಳಿನಗಾತ್ರದ ನೀರು ಬೀಳುತ್ತಿತ್ತು. ಬಂಡೆಯಲ್ಲಿ ಗುಹೆಯಮೇಲಿರುವ ಸಹಸ್ರಾರು ಮರಗಳ ಬೇರುಗಳು ಇಳಿದಿವೆ ಗುಹೆಯಲ್ಲಿ. ಒಂದು ಕ್ಷಣ ಹಾವೆಂಬ ಭ್ರಮೆಯಾಯಿತು. ಗುಹೆಯ ತಳದವರೆಗೂ ಇಳಿಯುವ ಉತ್ಸಾಹಕ್ಕಿಂತ ಪ್ರಪಾತದ ಕತ್ತಲ ಆಳದ ಹೆದರಿಕೆಯಿಂದಾಗಿ. ಅಲ್ಲೇ ಕುಳಿತು ನಾಲ್ಕೈದು ಫೋಟೋಗಳನ್ನು ತೆಗೆದು ಗುಹೆಯಿಂದ ಹೊರಬಂದು ಮೆಟ್ಟಿಲುಗಳಿಳಿದು ಗಾಡಿಯಲ್ಲಿ ಕುಳಿತಾಗ ಅದೇನೋ ಒಂದು ರೀತಿಯ, ಅದೇನನ್ನೋ ಸಾಧಿಸಿದ ಖುಷಿ, ಸಮಾಧಾನ.
ಒಟ್ಟಿನಲ್ಲಿ ನನಗನಿಸಿದ್ದು. ಇಲ್ಲಿಯ ಸುತ್ತ, ಮುತ್ತ ನೂರಾರು ಅನಾಮಧೇಯ ಅಷ್ಟಾಗಿ ಪ್ರಸಿದ್ದಿಹೊಂದದ ಸುಂದರ ತಾಣಗಳಿವೆ. ಎಲ್ಲಕೂ ತಮ್ಮದೇ ಒಂದು ಆಪ್ಯಾಯಮಾನ ರೌದ್ರತೆಯ ಸೌಂದರ್ಯ ವಿದೆ. ನೀವೂ ಇಷ್ಟಪಡುತ್ತೀರಾ ಎಂಬುದು ನನ್ನ ನಂಬಿಕೆ.
ಇನ್ನು ಈ ಬಸದಿಯ ಹೆಸರು "ಸವನಾಲು ಬಸದಿ"
ಜೈನರನ್ನು ಹೊರತುಪಡಿಸಿ ಸ್ಥಳೀಯರಿಗೂ ಅಷ್ಟಾಗಿ ಪರಿಚಯವಿಲ್ಲದ, ಕೇವಲ ಜೈನರ ಪವಿತ್ರಸ್ಥಳವಾದುದರೂ ಮುಕ್ಕಾದ ಮೂರ್ತಿಯಿಂದಾಗಿ, ನಿತ್ಯ ಪೂಜೆ ಇಲ್ಲದ ಬಸದಿಯನ್ನು ಅಚ್ಚುಕಟ್ಟಾಗಿಯೇ ನೋಡಿಕೊಳ್ಳಲಾಗಿದೆ ಎಂದು ಹೇಳಬಹುದು. ಇದರ ಬಗ್ಗೆ ಯಾರೂ ನಿಮಗೆ ವಿವರ ಕೊಡುವುದಿಲ್ಲ. ಕೇವಲು ಧಾರ್ಮಿಕ ಪ್ರಾಮುಖ್ಯತೆ ಇರುವುದರಿಂದ ಜೈನಸಮುದಾಯದವರು ಮತ್ರ ಬರುತ್ತಾರೆ ವಿಶೇಷ ಸಂದರ್ಭಗಳಲ್ಲಿ. ವರ್ಷಕ್ಕೊಮ್ಮೆ ಒಂದು ವಿಶೇಷದಿನ, (ಆಶಾಡದ ಅಮಾವಾಸ್ಯೆಯ ದಿನ) ನಾನ್ನೂರು, ಐನೂರು ಜನ ಸೇರುತ್ತಾರೆ ಎಂದು ತಿಳಿಯಿತು. ಅವರೆಲ್ಲರಿಗಾಗಿಯೇ ಮತ್ತು ಪ್ರತಿ ಅಮವಾಸ್ಯೆಗೆ ಬರುವ ಭಕ್ತರಿಗಾಗಿಯೇ ಭೋಜನಶಾಲೆ, ಪ್ರತ್ಯೇಕ ಆಡುಗೆ ಸಾಮಾನುಗಳ ಉಗ್ರಾಣ ಮತ್ತು ಕೋಣೆ ನಿರ್ಮಿಸಲಾಗಿದೆ. ರಾತ್ರಿ ಉಳಿದುಕೊಳ್ಲಲು ಯಾವ ವ್ಯವಸ್ಥೆಯೂ ಇಲ್ಲ.
ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಇಲಾಖೆಯನ್ನು ಸಂಪರ್ಕಿಸಿ ಐತಿಹಾಸಿಕ ಪ್ರಾಮುಖ್ಯತೆ ಕಂಡುಬಂದರೆ ವಿವರಣೆ ಕೊಡುತ್ತೇನೆ ಇನ್ನೊಮ್ಮೆ. ಬೆಟ್ಟದ ತಳದಲ್ಲಿ, ಕಾಡಿನ ಮಧ್ಯೆ ಇರುವ ಈ ಅತಿ ಸುಂದರ, ಶಾಂತ ವಾತಾವರಣದ ತಾಣ.....ಈ ಸವನಾಲು ಬಸದಿ....ನಿಜಕ್ಕೂ ಖುಷಿಕೊಟ್ಟಿತು ನನಗೆ.
Comments