ನೆನಪು.

ತಾಯಿಯ ಮಮತೆಯ ಅಂಟಿಕೊಂಡಿದ್ದು ಗರ್ಭದ ಗೋಡೆಗಾದರೂ ಹೊಕ್ಕಳು ಹುರಿ ಹರಿದು ಹುಟ್ಟಿದ್ದು ಊದುಕು ಲುಮೆಯ ತೊಟ್ಟಿಲಲ್ಲಿ. ಬಿಸಿಲ ಝಳದಲೇ ಜಾರಿದ ಬಾಲ್ಯ ಕಾಡುಬಂಡೆಗಳಮೇಲೆ ಚಿಗುರಿದ ಯವ್ವನ,
ಜೂಟಾಟ, ಕಣ್ಣುಮುಚ್ಚಾಲೆ ಕೊರಕಲು ಪ್ರಪಾತಗಳಲ್ಲಿ, ತಳರಹಿತ ಗವಿಯ ಸಂದು, ಗೊಂದುಗಳ ನೆರಳಲ್ಲೂ ತೀವ್ರ ತಾಪವೇ ಹವಾ ನಿಯಂತ್ರಿತ ಆವಾಸ. ಬಂಡೆಗಳನ್ನೇ ಯಾಮಾರಿಸಿ ಕೊರಕಲಲ್ಲೇ ಆವಾಸ ಕಂಡ ನೇರಲೆ,ಕಾರೆ,ಕವಳೆ,ಲೇಬೆ, ಬೋರೆ ಗಂಜಿಗೆ. ಕೊರಕಲುಗಳಲ್ಲಿ ತಲೆ ಎತ್ತಿರುವ ಗುಲಗಂಜಿ. ಉಪಹಾರ ಯಾವುದಾದರೇನು ಹಸಿವುಮಾತ್ರ ಪಂಚತಾರ ಹೋಟೆಲ್ ಗಳಂತೆ.ಆಲ್ಲಿ ಸ್ವಸಹಾಯ ಪಧ್ದತಿ ಕಡ್ಡಾಯ. 
ಬಹಿರ್ದೆಸೆಯ ಚಾರಣದಲ್ಲಿ ಸಿತಾಫಲ ಅನ್ ಲಿಮಿಟೆಡ್ ನುರಿತ ಪರ್ವತಾರೋಹಿಗೆ.

ನಿರ್ಜನ ಕಣಿವೆಯಲಿ ಸ್ವಗತ, ಶಾಶ್ವತ. ಸಂಭಾಷಣೆ ಕೂಗೋಗುಡ್ಡದ ಪ್ರತಿಧ್ವನಿಯಲಿ ಕಂಪಿಸಿ, ರಾಕ್ಷಸ ಇಳಿಜಾರು ಬಂಡೆ ಬೈಗಳ ಪ್ರತಿಧ್ವನಿಯ ರೋಮಾಂಚನ ಶ್ರವಣ. ನೇಯ್ಗೆ ಮಗ್ಗಗಳ ನಿಲ್ಲದ ನಡಿಗೆಯ ರೇಶಿಮೆಯ ಹೆಜ್ಜೆ. ಶಿಸ್ತಿನ ಸಾರೋಟು ಚಲನೆಯಲಿ ಲಾಳಗಳ ಓಟ, ನಿರಂತರ ಧ್ವನಿಸುವ ಬದುಕಿನ ಚಟಾ ಪಟಾ. ಊರಿಗೊಂದು ಭಾಷೆ ಅದರ ಸಾಮಾನ್ಯದ ಅಸ್ತಿತ್ವ. ಕರಡಿ ಗಂಗಣ್ಣನ ಘಮ,ಘಮ ಮಂಡಾಳ್ ಒಗ್ಗರಣಿ ಆದ್ಯಾತ್ಮ ತತ್ವ. ಅತ್ತಿಕಾಯಿ, ಜೊತೆಗೆ ಮೆಣ್ಸಿನ್ಕಾಯ್ ಉಳ್ಳಾಗಡ್ಡಿ, ಮಂಡಕ್ಕಿ ಭರ್ಜರಿ ಭೋಜನ. 

ಈಜಾಟ ಮನೋರಂಜನೆ ಆಟ, ನೀರಿದ್ದ ಆ ದೊಡ್ಡಬಾವಿ, ಬಾನಿ ಎಳೆಯುವ ಹಗ್ಗದ ಮೇಲೆ ಜೋಕಾಲಿ, ಹಿಂಬದಿಯ ನಡಿಗೆಯಲಿ ದಿಣ್ಣೆ ಏರಿ, ಬಾನಿತುಂಬ ನೀರು ತುಂಬಿ, ತಗ್ಗಿನಲಿ ಇಳಿಯುವ  ಯಾಂತ್ರಿಕ ಎತ್ತುಗಳು,   
ಶುಶ್ಕತೆಗೆ ಬಡಕಲಾಗಿ ಒಣಕಲಾಗಿ ನಿಂತ ಸೈಂಧವ ತಾಳೆಮರ. ಈಚಲಿನ ವಿರಳತೆಯಲಿ ತೆಂಗು, ಬಾಳೆಯೇ ಬೆಳೆಯದ ಬಾಳೆತೋಪು. ಮೇಕೆ,ದನಗಳ ಜಾಡೇ ಜಾರೋಬಂಡಿ ಶಿಲಾ ಉದ್ಯಾನವನದಲ್ಲಿ. ಹಟ್ಟಿಯಲಿ ಕತ್ತರಿಸಿ ಹಸಿರು ಜೋಳದ ಸಪ್ಪೆ, ಕೊಟ್ಟಿಗೆಯಲ್ಲಿ ಜೊಲ್ಲುಸುರಿಸುವ ದನಗಳು. ಹಳಸಿದ ಹಿಂಡಿಗೆ ಆಕಳುಗಳು ಜೊಲ್ಲುಸುರಿಸುತಿತ್ತು.

ನಿಜವಾದ ಮಳೆ ನಿಜಕ್ಕೂ ಸುರಿಯುತ್ತಿತ್ತು, ಹಳ್ಳಿಯಲಿ ಹಳ್ಳ ಹರಿಯುತ್ತಿತ್ತು, ಚಪ್ಪರ ಸೋರುತಿತ್ತು. ಕಾಫಿಯಂಥ ಮಳೆನೀರ ಪ್ರವಾಹದಲಿ ಕಾಗದದೋಣಿಗಳು ಸರಾಗ ತೇಲಿ, ಉತ್ಸಾಹದಲಿ ಮುಳುಗಿ ಊರ ಕೆರೆ
ಸೇರಿ, ಕುರಿಗಳ ಪಿಚಿಕೆಯ ಜೊತೆ ಪಳೆಯುಳಿಕೆಯಾಗಿತ್ತು.

ಅಜ್ಜಿ ಹೇಳುವ ಕಥೆ, ಲಾಟೀನು ಬೆಳಕಲ್ಲಿ, ಮುತ್ತುಗದ ಎಲೆ ಪೋಣಿಸುವ ಹುರಿಯಲ್ಲಿ, ಡಬ್ಬಣಕೆ ಚುಚ್ಚಿ ಸರ ಮಾಡುವ ಮೊಮ್ಮಕ್ಕಳ ಸರಪಣಿ. ಬೋಳುತಲೆಗೆ ಕೆಂಪು ಸೀರೆಯ ಸೆರಗು ಹೊದ್ದ ಅಜ್ಜಿಯಸುತ್ತ ಪಾಳಿಯಲಿ 
ನಿದ್ರೆ, ಒಬ್ಬಬ್ಬರನ್ನೇ ಆಹುತಿ ತೆಗೆದುಕೊಂಡಾಗ ಜಗವೆಲ್ಲ ಕನಸಲ್ಲಿ ಜಾರುತ್ತಿತ್ತು.

Comments

Popular posts from this blog

ಕಾಗೆ....

Reunited...at last..