ನನ್ನೂರು....
ನನ್ನೂರು, ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ, ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ. ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ, ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆ ಪದಗಳಿಗೆ ಸಿಗದ ಭಾಷೆಯಂತೆ, ನನ್ನೂರಿಗೆ ನಾನೇ ಆಗಂತುಕ. ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು. ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡು ಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು, ಬಣ್ಣ ಮಾತ್ರ ಬೇರೆ, ವಿವಿದ ನೆರಳುಗಳ ಬಿಸಿಲ ಮಾಡು ಸುಪ್ತ ಜ್ವಾಲಾಮುಖಿ ಇಂದು ಬರೀ ಬಿಸಿಲ ಗೂಡು. ನಿರ್ವಾತ ಋತುರಹಿತ ಬಯಲಿಗೆ ಎರಡೇ ಎರಡು ಕಾಲ, ಬೇಸಿಗೆ, ಕಡು ಬೇಸಿಗೆ. ಬಾರಿ ಬಾರಿ ಕಳೆದು ಹೋಗುವ ಮಳೆಗಾಲ ಕೇವಲ ಕಾಲ್ಪನಿಕ ಸುಂದರ ಕಾವ್ಯ ಮಾತ್ರ. ಶಾಶ್ವತವಾಗಿ ಉರಿಯುತ್ತ ನಿಂತಿದೆ ಬರಗಾಲ. ಕೈಗೆಟುಕದ ಉಳಿಗಾಲ.. ಬಿಸಿಲ ಬೇಗೆಯ ಮರೀಚಿಕೆ ನೀಲಿ ಹಾಳೆ, ಚಿತ್ರ ಪೂರ್ಣಗೊಂಡಿಲ್ಲ, ಇನ್ನೂ, ಕುಂಚಕ್ಕೆ ಅಡರಿದೆ ಕೊಳೆ, ಬಾಡಿ ಬತ್ತಿದ ಗೂಡಲ್ಲಿ ನೂರಾರು ಮೂಳೆ, ಬದುಕೆಲ್ಲಾ ಬರೀ ಗೋಳೇ. ಪ್ರತಿಧ್ವನಿಸುತಲಿದೆ ಕೂಗೋ ಗುಡ್ಡದಲ್ಲಿ ಪದವಾಗದೆ ತೇಲಿದೆ ಗಾಳಿಯಲಿ ಕೂಗು ಸ್ಪೋಟಿಸದ ಮೌನ ಹೆಪ್ಪುಗಟ್ಟಿದ ಭಾವ. ನಿರ್ಲಜ್ಜ, ನಿರ್ಲಿಪ್ತ, ನಿರ್ಜಲ ಪಾಪಿ ಅಡರು ಬಳ್ಳಿ, ಪಕ್ಕಕ್ಕೆ ತಳ್ಳಿ ಕತ್ತಾಳಿ, ಕಳ್ಳಿ, ನಿದ್ರಿಸುವ ಕೇದಿಗೆ ಪೊದೆ ನಿರ್ಜಲ ನನ್ನ ಹಳ್ಳಿ, ಹಳ್ಳದ ಮಲೆಯಮ್ಮನ ಆಲದ ಬಿಳಲು ಬೇರು, ಭಕ್ತರ ಭಕ್ತಿಯಲಿ...