ನನ್ನೂರು....
ನನ್ನೂರು,
ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ,
ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ.
ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ,
ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆ
ಪದಗಳಿಗೆ ಸಿಗದ ಭಾಷೆಯಂತೆ,
ನನ್ನೂರಿಗೆ ನಾನೇ ಆಗಂತುಕ.
ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು.
ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡು
ಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು,
ಬಣ್ಣ ಮಾತ್ರ ಬೇರೆ,
ವಿವಿದ ನೆರಳುಗಳ ಬಿಸಿಲ ಮಾಡು
ಸುಪ್ತ ಜ್ವಾಲಾಮುಖಿ ಇಂದು ಬರೀ ಬಿಸಿಲ ಗೂಡು.
ನಿರ್ವಾತ ಋತುರಹಿತ ಬಯಲಿಗೆ ಎರಡೇ ಎರಡು ಕಾಲ,
ಬೇಸಿಗೆ, ಕಡು ಬೇಸಿಗೆ.
ಬಾರಿ ಬಾರಿ ಕಳೆದು ಹೋಗುವ ಮಳೆಗಾಲ
ಕೇವಲ ಕಾಲ್ಪನಿಕ ಸುಂದರ ಕಾವ್ಯ ಮಾತ್ರ.
ಶಾಶ್ವತವಾಗಿ ಉರಿಯುತ್ತ ನಿಂತಿದೆ ಬರಗಾಲ.
ಕೈಗೆಟುಕದ ಉಳಿಗಾಲ..
ಬಿಸಿಲ ಬೇಗೆಯ ಮರೀಚಿಕೆ ನೀಲಿ ಹಾಳೆ,
ಚಿತ್ರ ಪೂರ್ಣಗೊಂಡಿಲ್ಲ,
ಇನ್ನೂ,
ಕುಂಚಕ್ಕೆ ಅಡರಿದೆ ಕೊಳೆ,
ಬಾಡಿ ಬತ್ತಿದ ಗೂಡಲ್ಲಿ ನೂರಾರು ಮೂಳೆ,
ಬದುಕೆಲ್ಲಾ ಬರೀ ಗೋಳೇ.
ಪ್ರತಿಧ್ವನಿಸುತಲಿದೆ ಕೂಗೋ ಗುಡ್ಡದಲ್ಲಿ
ಪದವಾಗದೆ ತೇಲಿದೆ ಗಾಳಿಯಲಿ ಕೂಗು
ಸ್ಪೋಟಿಸದ ಮೌನ ಹೆಪ್ಪುಗಟ್ಟಿದ ಭಾವ.
ನಿರ್ಲಜ್ಜ, ನಿರ್ಲಿಪ್ತ, ನಿರ್ಜಲ ಪಾಪಿ ಅಡರು ಬಳ್ಳಿ,
ಪಕ್ಕಕ್ಕೆ ತಳ್ಳಿ ಕತ್ತಾಳಿ, ಕಳ್ಳಿ,
ನಿದ್ರಿಸುವ ಕೇದಿಗೆ ಪೊದೆ ನಿರ್ಜಲ
ನನ್ನ ಹಳ್ಳಿ,
ಹಳ್ಳದ ಮಲೆಯಮ್ಮನ ಆಲದ ಬಿಳಲು ಬೇರು,
ಭಕ್ತರ ಭಕ್ತಿಯಲಿ ಆಗಿಲ್ಲ ಇಂದಿಗೂ ಏರುಪೇರು,
ಸೀಳಿದೆ, ಕಪ್ಪು ಬಸಿರನ್ನ,
ಊರ ಕೋಣದ ಬಲಿ,
ಎಲ್ಲೆಲ್ಲೂ ರಕ್ತ ಚೆಲ್ಲಿ,
ಇಳಿದಿದೆ ಆಳದಲ್ಲಿ,
ಎಂದಿಗೂ ಮಾಸದ ಓಕುಳಿ,
ಕೆಂಪು ಮಣ್ಣಿನ ಮೇಲೆ ಗೀಚಿದ ಜಾಲಿ
ಬರೀ ಸೌದೆ,
ನೆನಪಿಸುತ್ತದೆ ಹೊಟ್ಟೆ ಹಸಿವನ್ನ ಪದೇ ಪದೇ..
ಬಿಸಿಲ ಬೆವರಿಗೆ ಟಿಸಿಲೊಡೆದ ತಂಗಡಿ,
ಅಲ್ಲಲ್ಲಿ ತಲೆ ತಗ್ಗಿಸಿ ನೆಟ್ಟಗೆ ನಿಂತ ತಾಳೆ,
ಬೆಳೆಯಲಾರದು ಇಲ್ಲಿ ಬಾಳೆ!!
ಬರೀ ಕವಳೇ,ಕಾರೆಗಳದೇ ಕಾರುಬಾರು,
ಶರಣಾಗಿ, ಸೋಲೋಪ್ಪಿದೆ, ಮುಂಗಾರು,
ನಡೆಸಿದೆ ವಿಜಯೋತ್ಸವ ಬೇಸಿಗೆಯ ತೇರು.
ಮುತ್ತಜ್ಜಿಯ ಸುಕ್ಕಾದ ಚರ್ಮ
ಒಣಗಿ ಸಿಡಿದ ಕಾಡು ಎಕ್ಕ,
ಶುಷ್ಕ ಗಾಳಿಯಲಿ ತೇಲುವ ಪಾರಿವಾಳದ ಬಿಜ,
ಅಪ್ಪುತ್ತಿದೆ ಧರೆಗಿಳಿದು ಮತ್ತೆ ಮತ್ತೆ,
ಗುರುತ್ವಾ ಮಾತೆಯನ್ನು,
ಭಾರ.
ದೃಷ್ಟಿಗೆ ಬಾರದ ಬಯಲು,
ದೂರ,
ಎಲ್ಲೆಲ್ಲು ಬಿಸಿಲ ಮಹಾಪೂರ.
ಸುಟ್ಟು
ಕರಕಲಾಗಿರುವ ಕಪ್ಪು ಡಾಂಬರು ರಸ್ತೆ ,
ಬಿಡಿಸಿವೆ ಅಪರೂಪದ ವಿಚಿತ್ರ ನವ್ಯ ಚಿತ್ರ,
ಚಕ್ರಗಳ ಕುಂಚ.
ಹುಟ್ಟಿಸಿವೆ ಹಸಿ, ಹುಸಿಯಾದ ಕನಸನ್ನ...
ಬೆಳೆಯುತಿದೆ ದುರಾಸೆಯ ದೈತ್ಯ ಭ್ರೂಣ,
ಆದೀತೆ ಅನಿರೀಕ್ಷಿತ ಗರ್ಭಾಪಾತ?
ಬಿಸಿಲು ತಂಪಾಗುವ ಮುನ್ನ.
ತಂಗಾಳಿ ಮತ್ತೆ ಕೆಂಪಾಗುವ ತನಕ...
ನನ್ನೂರ ಬಂಡೆಗಳು ಕರಗಿ ಎರಗುವ ಲಾವ
ಮತ್ತೆ ಚಿಮ್ಮೀತೆ
ಸಿಹಿನೀರ ಬುಗ್ಗೆಯಾಗಿ????
Comments
Vibhav...
ವೈಭವ್.