ನಿನ್ನದೇ ನೆನಪಲ್ಲಿ ನಲಿದೆ.....(ಅಂದು).......ಅನಿಸುತಿದೆ ಯಾಕೋ ಇಂದು.....

ನನ್ನ ತಮ್ಮನ ಮಗ ಖುಷಿಯಿಂದ "ಅನಿಸುತಿದೆ ಯಾಕೊ ಇಂದು..ನೀನೇನೆ ನನ್ನವಳೆಂದು"
ಹಾಡುತಿದ್ದ. ಹಾಡಿನ ರಚನೆಕಾರ ಯಾರು ಅಂತ ಕೇಳಿದಾಗ, ಅವನು ತಕ್ಷಣ ಜಯಂತ ಕಾಯ್ಕಿಣಿ ಅಂತ ಸ್ಪಷ್ಟವಾಗಿ ಹೇಳಿದುದನ್ನು ಕೇಳಿ ನನಗೆ ಆಶ್ಚರ್ಯ ಆಯಿತು. ಕಾರಣ ಇಷ್ಟೇ... ಹಿಂದಿನ ವರ್ಷವಷ್ಟೇ ಅವನ ಪಠ್ಯ ಪುಸ್ತಕದಲ್ಲಿನ ಕನಕದಾಸರ "ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ" ಹಾಡುತ್ತಿದ್ದಾಗ,
ಅದನ್ನು ಬರೆದವರು ಯಾರು ಎಂದು ಕೇಳಿದಾಗ ಅವನಿಗೆ ಗೊತ್ತಿರಲಿಲ್ಲ. ಆದರೆ ಆ ಹಾಡನ್ನು ಹಾಡಿದವರು ಪಿ.ಬಿ.ಶ್ರೀನಿವಾಸ್ ಅಂತ ಹೇಳಿದ.
ನೋಡಿ...ಸಿನೆಮಾ ಹಾಡುಗಳ ಜನಪ್ರಿಯತೆ...ನನಗೆ ಖುಷಿ ಆದರೂ ದುಖಃವಾಗದೆ ಇರಲಿಲ್ಲ. ಸಂತೋಷಕ್ಕೆ ಕಾರಣ.....ದಶಕಗಳ ನಂತರವೂ ಸಿನೆಮ ಹಾಡುಗಳನ್ನು ಹಾಡಿದವರನ್ನು ಮರತಿಲ್ಲ ಜನ. ಗಾಯಕರ ಬಗ್ಗೆ ಗೌರವ ಭಕ್ತಿ ಇದೆ. ಆದರೆ ಅಂತಹ ಸುಮಧುರ ಹಾಡುಗಳಿಗೆ ಪದಗಳನ್ನು ಜೋಡಿಸಿದ ಮಹನೀಯರ ಬಗ್ಗೆ ಇವರಿಗೆ ಅರಿವೇ ಇಲ್ಲವಲ್ಲ ಎನಿಸಿತು. ನನ್ನ ಸಂತೋಷಕ್ಕೆ ಇನ್ನೊಂದು ಕಾರಣ ಅಂದರೆ....

ಸೋನು ನಿಗಮ್ ಹಾಡಿದ,ದಶಕಕ, ಯದ್ವಾ ತದ್ವಾ ಜನಪ್ರಿಯವಾದ ಹಾಡನ್ನು ಬರೆದವರು ನನ್ನ ಮಿತ್ರ ಅಂತ ಹೆಮ್ಮೆಯಿಂದ ಹೇಳಿಕೊಂಡು ಸಂತೋಷ ಪಟ್ಟೆ. ಇದು ನಿಜ.

ಜಯಂತನ ವಯಕ್ತಿಕ ಪರಿಚಯದ ಮುನ್ನ ಅವನ ಬರವಣಿಗೆಗಳ ಮೂಲಕ ಒಬ್ಬ ಕವಿಯಾಗಿ ಮತ್ತು ಕಥೆಗಾರನಾಗಿ ನನಗೆ ಪರಿಚಯ ವಿತ್ತು.

ಹೆಚ್ಚು ಕಡಿಮೆ 35 ವರ್ಷಗಳಿಂದ, ಅಂದರೆ ಎಪ್ಪತ್ತರ ದಶಕದಲ್ಲಿ, ಅವನು ಬಯೋ ಕೆಮಿಸ್ಟ್ರಿ, ಎಮ್.ಎಸ್. ಸಿ ವಿದ್ಯಾರ್ಥಿಯಾಗಿ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಯಕ್ತಿಕವಾಗಿ ಪರಿಚಯವಾಯಿತು.

ನಾನು ನನ್ನ ಬಿ.ಎಸ್ಸಿ ಪದವಿಯನ್ನು ಮುಗಿಸಿದ್ದೆ.ಜೊತೆಗೆ ಬಿ.ಎಡ್.ಸಹಾ ಕಂಪ್ಲೀಟ್ ಮಾಡಿ ಸಿಕ್ಕ ಕೆಲಸಗಳಿಗೆ ರಾಜಿನಾಮೆಕೊಟ್ಟು, ನೌಕರಿಗೆಂದು ಊರು,ಊರು ಅಲೆಯುತ್ತಿದ್ದೆ. ಧಾರವಾಡಕ್ಕೆ ಬರುವ ಮೊದಲು ಅಡ್ಯನಡ್ಕ ಎಂಬ

ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯ ಶಾಲೆಯಲ್ಲಿ ಮೇಷ್ಟ್ರಾಗಿ ಕೆಲಸ ಮಾಡಿ,ಅಲ್ಲಿನ ನನ್ನ ಸಹೋದ್ಯೋಗಿ ಮಿತ್ರರಾದ, ಶ್ರೀಕ್ರಿಷ್ಣ ಚೆನ್ನಂಗೋಡ್ ರವರೊಂದಿಗೆ "ಎರಡು ಧ್ವನಿ" ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದೆ. ಸಾಕಷ್ಟು ಒಳ್ಳೆಯ ಸಕಾರಾತ್ಮಕ ವಿಮರ್ಷೆಗಳು ನನ್ನ ಕವನಗಳಿಗೆ ದೊರೆತಿತ್ತು. ಇದಕ್ಕೆ ಮುಂಚೆ ಚಂದ್ರಶೇಖರ ಪಾಟಿಲರು ಮತ್ತು ಪಟ್ಟಣಶೆಟ್ಟಿಯವರು ತರುತಿದ್ದ "ಸಂಕ್ರಮಣ" ದಲ್ಲಿ ಕೆಲವು ಬಿಡಿ ಕವನಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ನಾನು ಬೆಂಗಳೂರು,ಮಂಗಳೂರು ಮತ್ತು ಧಾರವಾಡ ಎಂದು ಸುತ್ತುತ್ತಿದ್ದೆ. ಧಾರವಾಡದ ಕೃಷಿವಿಷ್ವವಿದ್ಯಾನಿಲಯ ಕಾಲೇಜ್ ನಲ್ಲಿ ನಮ್ಮ ಚಿಕ್ಕಪ್ಪನವರು ಪ್ರೊಫೆಸರ್ ಅಗಿದ್ದುದರಿಂದ ಎತ್ತಿನಗುಡ್ಡದ ಕಾಲೇಜ್ ಕ್ಯಾಂಪಸ್ ನಲ್ಲೇ ಇರುತ್ತಿದ್ದೆ. ಪಾಟಿಲರನ್ನು ಅವರ ಮನೆ ಟೋಲ್ ನಾಕದ ಹತ್ತಿರ ಇದ್ದುದರಿಂದ ಹೆಚ್ಚು ಕಡಿಮೆ ಪ್ರತಿದಿನ ಬೆಟ್ಟಿ ಆಗ್ತ ಇದ್ದೆ. ಆಗಾಗ್ಗೆ ಇಂಗ್ಲಿಷ್ ಸಾಹಿತ್ಯದ ಬಗ್ಗೆ ಚರ್ಚೆ ಮಾಡಿಕೊಂಡು ನಡ್ಕೊಂಡು ಹೋಗ್ತಾಇದ್ವಿ. ಅವರ ಮೂಲಕ ಕರ್ನಾಟಕ ವಿಷ್ವ ವಿದ್ಯಾನಿಲಯದ ಅನೇಕರ ಪರಿಚಯವಾಯ್ತು. ಪಟ್ಟಣ ಶೆಟ್ಟಿ, ಮೊಕಾಶಿ, ಬುದ್ದಣ್ಣ ಹಿಂಗಮಿರೆ, ಗಿರಡ್ಡಿಅವರು, ರಾಜಶೇಖರ ಕೋಟಿ, ವಿಜಯ ಪಾಟಿಲ್ (ಚಂಪ ಅವರ ತಮ್ಮ), ಶ್ರೀದರ ಕಲಿವೀರ, ಎಡ್ನೀರ್ ಮಹಾಬಲ ಮತ್ತು ಜಯಂತ ಕಾಯ್ಕಿಣಿ. ಇನ್ನೂ ಕೆಲವರ ನೆನಪು ಸರಿಯಾಗಿ ಬರುತ್ತಿಲ್ಲ. ಎಪ್ಪತ್ತರ ದಶಕದ ಆರಂಭದಲ್ಲಿ ಸಾಹಿತ್ಯ ಚಟುವಟಿಕೆ ಅತ್ಯಂತ ಬಿರಿಸಿನಿಂದ ನಡೆಯುತ್ತಿತ್ತು. ಆಗಾಗ್ಗೆ ದಾರವಾಡದ ಬಸ್ ಸ್ಟಾಂಡ್ ಬಳಿಇರುವ ವಿದ್ಯಾವರ್ದಕ ಸಂಸ್ಥೆಯ ಆವರಣದಲ್ಲಿ ಕವಿ ಗೋಷ್ಟಿ ಮಾಡುತ್ತಿದ್ದೆವು.

ಹೀಗೆ ಪಾಟೀಲರಿಂದ ಕವಿಯಾಗಿ ಜಯಂತನ ಪರಿಚಯವಾಗಿದ್ದು.ಅವನು ತನ್ನ ಬದುಕಿಗಾಗಿ ತನಗಿಷ್ಟವಿಲ್ಲದ ಯಾವ ಒಪ್ಪಂದವನ್ನು ಮಾಡಿಕೊಳ್ಳದೆ, ತನ್ನ ಹವ್ಯಾಸ ಮತ್ತು ಆಸಕ್ತಿಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರೆಯುತ್ತಾ ಹೋಗಿ ಇನ್ನೂ ಕವಿಯಾಗಿ ಜೀವಂತ ವಾಗಿರುವುದು ನಿಜಕ್ಕೂ ನನ್ನಂತವನಿಗೆ ಸಂತೋಷದಸಂಗತಿ.

ನಾನು ಕವಿಯಾಗಿ ಮೊಳಕೆ ಒಡೆದರೂ ಉಪಾಧ್ಯಾಯನಾಗಿ ಬೆಳೆದು ಈಗ ಮತ್ತೆ ಬರವಣಿಗೆ ಮುಂದುವರೆಸಿ, ಸಾಹಿತ್ಯದ ಫಲ ನೀಡಬೇಕೆಂಬ ನನ್ನ ಹಂಬಲ ಎಂತಹ ವಿಪರ್ಯಾಸ? ನಮ್ಮಿಬ್ಬರ ಪರಿಚಯದ ಕೊಂಡಿ ಸಾಹಿತ್ಯವಾದರೂ....ಬದುಕಿನ ಕೀಲಿಯನ್ನು ಕಳೆದುಕೊಂಡು ನಾನೀಗ ನನ್ನ ವಿಕಾಸದಲ್ಲಿ ನನಗೇ ನಾನೇ ಆಗಂತುಕ ಪ್ರಭೇದ ವಾಗಿದ್ದೇನೆ.

ಪರವಾಗಿಲ್ಲ. ಮರೆಯಲಾರದ ಅನುಭವದ ನೆನಪುಗಳು ಸಾಕಷ್ಟು ಇದೆ. ಅದನ್ನು ಮೆಲಕು ಹಾಕುವುದೇ ಒಂದು ಖುಶಿ. ಅದನ್ನು ಹಂಚಿ ಕೊಳ್ಳುವುದು ಇನ್ನು ಹೆಚ್ಚಿನ ಖುಷಿ ಕೊಡುವ ಸಂಗತಿ..

ಆಗಾಗ್ಗೆ ಬೇಡವೆಂದರೂ ಕಿವಿಗೆ ಬೀಳುವ ಇತ್ತೀಚಿನ ಜಯಂತನ ಹಾಡು, ಪದೇ,ಪದೇ ನನ್ನ ಧಾರವಾಡದ ನೆನಪನ್ನು ಕೆದಕುತ್ತದೆ.

ಎಪ್ಪತ್ತರ ದಶಕಕ ಆರಂಭದಲ್ಲೇ ಬಿಡುಗಡೆಯಾದ, ಅಮಿತಾಬ್ಬಚ್ಚನ್ ಮತ್ತು ಜಯಬಾಧುರಿ ನಟಿಸಿರುವ ಸೂಪರ್ ಹಿಟ್ ಹಿಂದಿ ಚಿತ್ರ 'ಆಭಿಮಾನ್' ಕಿಶೋರ್ ಕುಮಾರ್ ಹಾಡಿ ಜನಪ್ರಿಯವಾದ ಈ ಚಿತ್ರದ ಒಂದು ಹಾಡು..

"ಮಿತ್ ನಾ ಮಿಲಾರೆ ಮನ್ ಕಾ, ಕೋಯಿತೊ ಮಿಲನ್ ಕಾ ಕರೋರೇ ಉಪಾಯ್"

ನನಗೂ ಇಷ್ಟವಾಗಿತ್ತು. ಜಯಂತನಿಗೆ ಎಷ್ಟು ಇಷ್ಟ ಆಗಿತ್ತು ಅಂದರೆ ಅವನು ಆ ಹಾಡನ್ನು ಸುಂದರವಾಗಿ ಆ ಧಾಟಿಯಲ್ಲೇ

ಕನ್ನಡಕ್ಕೆ ಭಟ್ಟಿಇಳಿಸಿದ.

ಈ ಹಿಂದಿ ಹಾಡನ್ನು ಕೇಳಿದವರು ಕೆಳಗಿನ ಸಾಲುಗಳನ್ನು ಗುನುಗುನಿಸಿ..

"ನಿನ್ನದೇ ನೆನಪಲ್ಲಿ ನಲಿದೇ, ನಲಿವದು ಎಲ್ಲಿದೆ...ನೀನಿಲ್ಲದೆ"..... ರೆ ಮೀತ್ ನಾ ಮಿಲಾರೆ ಮನ್ ಕಾ... ಇದು ಪಲ್ಲವಿ.

ಇನ್ನು ಚರಣವನ್ನು ಗಮನಿಸಿ. ಹಾಡಲು ಪ್ರಯತ್ನಿಸಿ. ನಿಮಗೇ ಗೊತ್ತಾಗುತ್ತೆ ಜಯಂತನ ಕವನೀಕರಣದ ಸಾಮರ್ಥ್ಯ.

"ತಾರೆಯ ಬೆಳಕನ್ನು ಹೋಲುವ ಈ ಕಣ್ಣು,

ಕಾಮನ ಬಿಲ್ಲನ್ನು ಮಿಂಚುವ ತುಟಿ ಚೆನ್ನು .

ಮರೆಯಲಾರೆ, ಬೆರೆಯಲಾರೆ, ತೊರೆಯಲಾರೆ,

ಪ್ರೇಮದ ನೋವೇ ಹೂವಾಗಿದೆ..... ನಿನ್ನದೇ ನೆನಪಲ್ಲಿ ನಲಿದೆ....

ಈ ಮೇಲಿನ ಸಾಲುಗಳು ಜಯಂತನ ಕಾವ್ಯ ಶಕ್ತಿಗೆ ಒಂದು ಉದಾಹರಣೆ. ಇಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ ಸಹಜ ಪ್ರವೃತ್ತಿಯಾಗಿ ಪದಗಳು ಕವನದ ಸಾಲುಗಳನ್ನು ಅಲಂಕರಿಸುತ್ತವೆ. ಆ ಕಾಲದ ಇನ್ನೊಂದು ನನಗೆ ಇಷ್ಟವಾದ ಹಾಡೆಂದರೆ, ಕಿಶೋರ್ ಕುಮಾರ್ ಹಾಡಿದ "ಸಫರ್" ಚಿತ್ರದ

"ಜಿಂದಗೀ ಕಾ ಸಫರ್, ಹೈ ಏ ಕೈಸೀ ಸಫರ್, ಕೋಯೀ ಸಮ್ ಝಾ ನಹಿ ಕೋಯೀ ಜಾನ ನಹಿ......"

ಈ ಆಧ್ಯಾತ್ಮಿಕ ಹಾಗು ದುಖಭರಿತ ಹಾಡನ್ನು ನಾನು ಸಹಾ ಕನ್ನಡಕ್ಕೆ ತಂದಿದ್ದೆ.. ಅದು ಹೀಗೆ.....

"ಎಲ್ಲೆಗೇ ಏತಕೇ, ಜೀವನ ಪಯಣವು, ಮರಣವೋ ಮುಕ್ತಿಯೋ, ಅರಿಯೆ ಈ ಜಗದಲಿ"

ನನ್ನ ಈ ಚೇಷ್ಟೆಯನ್ನು ನಿಮ್ಮ ಮುಂದೆ ಇಡಲು ಮುಖ್ಯ ಕಾರಣ- ಹೋಲಿಕೆಗಾಗಿ.

ನನ್ನ ಸಾಲುಗಳು ಕಷ್ಟಪಟ್ಟು, ಕಸರತ್ ಮಾಡಿರುವ ನೇರ ಗದ್ಯದ ಭಾಷಾಂತರ ಎಂದು ಯಾರುಬೇಕಾದರೂ ಹೇಳಬಹುದು. ಹಾಡಿನ ಮಾಧುರ್ಯತೆ ಸಲುವಾಗಿ, ಸ್ನೇಹಿತರು ತುಂಬಾ ಚೆನ್ನಾಗಿದೆ ಅಂತ ಹೇಳಿದ್ದೂ ಉಂಟು. ಆದರೆ ನನ್ನ ಬರವಣಿಗೆಯ ಬಂಡವಾಳ ಹಾಗು ಇತಿ ಮಿತಿಗಳೆರಡರಬಗ್ಗೆಯೂ ನನಗೆ ಯಾವುದೆ ಭ್ರಮೆ ಇರಲಿಲ್ಲ. ಜಯಂತ ಹೇಳಿದ ಇನ್ನೊಂದು ಮಾತು ಈಗ ನೆನಪಿಗೆ ಬಂತು. ನೊಡಿ..ಯಾವಗ, ಎಲ್ಲಿ, ಏಕೆ ಅಥವಾ ಈಗಾಗಲೇ ಯಾವುದದರೂ ಕವನದಲ್ಲಿ ಮುದ್ರಿತ ವಾಗಿದೆಯೊ ಗೊತ್ತಿಲ್ಲ.

"ನಿನ್ನ ನೋಟಕ್ಕೆ ಭಾಷೆ ಇಲ್ಲ ಆದರೂ ಅಚ್ಚಾಗಿದೆ ಹೃದಯದಲ್ಲಿ"

ಪ್ರಾಯಶಃ ನಾನು ಜಯಂತನನ್ನು ನೋಡಲು ಕರ್ನಾಟಕ ವಿಷ್ವವಿದ್ಯಾನಿಲಯಕ್ಕೆ ಹೋಗುತ್ತಿದ್ದೆ. ಅಲ್ಲಿ ಯುನಿವರ್ಸಿಟಿ ಕ್ಯಾಂಟೀನ್ ನಲ್ಲಿ ಕೆ.ಟಿ.ಸ್ಪೆಷಲ್ ಚಾಯ್ ಕುಡಿಯುತ್ತಾ ಜೊತೆ ಮೆಣಸಿನಕಾಯಿ ಬೋಂಡ ತಿನ್ನುತ್ತಾ ಗಂಟೆಗಟ್ಟಲೆ ಹರಟೆಹೊಡೆಯುವ ಸಮಯದಲ್ಲಿ ಅನೇಕ ಹಿಂದಿ ಹಾಡುಗಳ ಮರುಸೃಷ್ಟಿ ಆಗುತ್ತಿತ್ತು.

ಅಂತಹ ಒಂದು ಸಮಯದಲ್ಲಿ ಮೇಲಿನಂತಹ ಸಾಲುಗಳು ಬರುತ್ತಿದ್ದವು. ಇನ್ನು ಅವನ ಕಾಲೇಜ್ ನಲ್ಲಿ ಅವನು ಕಾಣಲು ಸಿಕ್ಕುತ್ತಿದ್ದುದು ಅಪರೂಪ. ಎಕೆಂದರೆ ಯಾವಾಗಲೂ ಚರ್ಚೆ, ಕವಿಗೋಷ್ಟಿ, ಕವಿ ಸಮ್ಮೇಳನ ಅಂತಾ ಬಿಸಿ ಯಾಗಿರುತ್ತಿದ್ದ. ಕಾಲೇಜ್ ಮಿತ್ರರು ಇವನ ಈ ಹವ್ಯಾಸಕ್ಕೆ ಮತ್ತು ಚಟುವಟಿಕೆಗಳಿಗೆ ಒಂದು ಅನ್ವರ್ಥಕ ಹೆಸರನ್ನೂ ಸಹಾ ಕೊಟ್ಟಿದ್ದರು. ಜಯಂತ ಅಂದರೆ

"quick for functions and sick for exams " ಕರ್ನಾಟಕ ಯುನಿವರ್ಸಿಟಿಯ ಕಲೆ ಮತ್ತು ಸಾಹಿತ್ಯ ಚಟುವಟಿಕೆಗಳ ರಾಯಭಾರಿ ಆಗಿದ್ದ ಅಂತ ಹೇಳಬಹುದು. ಇಂತಹ ಹವ್ಯಾಸಗಳನ್ನೆಲ್ಲ ಇಟ್ಟುಕೊಂಡೂ ಸಹಾ ಸಕಾಲದಲ್ಲಿ ತನ್ನ ಕೋರ್ಸ್ ಮುಗಿಸಿ ತನ್ನ ಸ್ನಾತಕೊತ್ತರ ಪದವಿಯ ಗೌರವಕ್ಕೆ ತಕ್ಕ ನೌಕರಿಗೆಂದು ಮುಂಬೈ ಸೇರಿದನಂತರ ನಮ್ಮಿಬ್ಬರ ಭೆಟ್ಟಿ ಅಪರೂಪವಾಗುತ್ತಾ ಬಂತು. ನಾನು ಸಹ ಪತ್ರಕರ್ತನಾಗುವ ಕನಸನ್ನು ಹೊತ್ತು ಬೆಂಗಳೂರಿಗೆ ಬಂದೆ. ಬೆಂಗಳೂರಿನ ಜೀವನ ತುಂಬಾ ಕಷ್ಟಮಯ ವಾಗಿದ್ದರೂ, ಕನಸುಗಾರನಾದ ನನಗೆ ಹೊಸ ಸಾಹಸಮಯ ಬದುಕು ಅನಿಸುತ್ತಿತ್ತು. ಕೇವಲ ನನ್ನ ಇರುವಿಕೆಗಾಗಿಯೇ ನಾನು ಈ ನಗರದಲ್ಲಿ ಕಳೆದು ಹೋದೆ. ನಮ್ಮಿಬ್ಬರ ಸಂಪರ್ಕ ವಿರಳವಾಗುತ್ತಾ, ಕೊನೆಗೆ ನಮಗೆ ಅರಿವಿಲ್ಲದಂತೆ ನಗರಕರ್ಮಗಳಲ್ಲಿ ಮುಳುಗಿಹೋದರೂ ಆಗಾಗ್ಗೆ ಅವನ ಬಗ್ಗೆ ವಿಷಯಗಳು ತಿಳಿಯುತ್ತಿತ್ತು. ಮೊದಲೇ ಹೇಳಿದ ಹಾಗೆ ಕವಿಯಾಗುವ ಕನಸಿನ ಬೀಜ ಬಿತ್ತರೂ, ಮೊಳಕೆಒಡೆದು ಮರವಾದಾಗ, ಮೇಷ್ಟ್ರಾಗಿ ವಿದ್ಯಾರ್ಥಿಗಳ ಕನಸುಗಳಲ್ಲಿ ಕರಗಿ ಹೋದೆ. ಅನೇಕ ವರ್ಷಗಳ ವರೆಗೆ ಪತ್ರವಿನಿಮಯವಿಲ್ಲದೆ ಅಪರಿಚಿತನಾದೆ. ಬೆಂಗಳೂರು ಮತ್ತು ಮುಂಬೈ ನಡುವೆ ದೂರ ಅತಿಯಾಗಿ ವಯಕ್ತಿಕ ಒಡನಾಟ ಮಸುಕಾದರೂ, ಮರೆಯುವ ವ್ಯಕ್ತಿ ಆಗಿರಲಿಲ್ಲ. ಕಾರಣ ಅವನು ತನ್ನ ಬರವಣಿಗೆಗಳ ಮೂಲಕ ಆಗಾಗ ನನ್ನೆದುರು ಥಟಕ್ಕನೇ ಕಾಣಿಸಿಕೊಂಡು ಮಾಯವಾಗುತ್ತಿದ್ದ. ಆದರೆ ನಾನು ಅವನನ್ನು ಯಾವ ರೀತಿಯಲ್ಲೂ ಭೇಟಿಯಾಗಲು ಪ್ರಯತ್ನಿಸದೆ ಅವನ ನೆನಪಿನಿಂದ ಹಿಂದೆ ಸರಿದೆ. ಈಗ... "ನಿನ್ನದೇ ನೆನಪಲ್ಲಿ ನಲಿದೆ" ಎಂದು ನೆನೆದು,

"ಅನಿಸುತಿದೆ ಯಾಕೋ ಇಂದು" ಹಾಡಿಕೊಳ್ಳುತ್ತೇನೆ ಮನಸ್ಸಿನಲ್ಲೇ.

2000-2001 ರಲ್ಲಿ ನನ್ನ ಆಪ್ತ ಹಿರಿಯ ಮಿತ್ರ ರಮಾಕಾಂತ್ ಆಗತಾನೆ ಆರಂಭಗೊಳ್ಳುತ್ತಿದ್ದ 'ವಿಜಯ ಕರ್ನಾಟಕ'' ದೈನಿಕ ಪತ್ರಿಕೆ ಸೇರಿದ್ದರು. ಜಯಂತನೂ ಅಲ್ಲಿಗೆ ಬರುತ್ತಾನೆಂಬ ಸುದ್ದಿ ಇತ್ತು. ಬಂದು, 'ಭಾವನ'' ಮಾಸಿಕ ಪತ್ರಿಕೆಗೆ ಸಂಪಾದಕನಾದ ಸುದ್ದಿ ನಂತರ 'ಈ ಟೀವಿ' ಗೆ ಸೇರುವ ಸುದ್ದಿ ಹಾಗು ರವಿಯ 'ಹಾಯ್ ಬೆಂಗಳೂರ್'' ಗೆ ಸೇರಬಹುದೆಂಬ ವದಂತಿಗಳ ನಡುವೆ ಅವನು ನನ್ನನ್ನು ವಿಚಾರಿಸಿದ ವಿಷಯ, ನಾನು ಸಹಾ ಅವನನ್ನು ನೋಡಲು ಪಟ್ಟ ಪ್ರಯತ್ನದ ಸಂಗತಿ-

ಇವುಗಳ ನಡುವೆ ಹಿಂದೆ ಸರೆದ ನಾಲ್ಕೈದು ವರುಷಗಳು...

ಮತ್ತೆ..... ಇದ್ದಕ್ಕಿದ್ದಹಾಗೆ ತನ್ನೆಲ್ಲ ರುದ್ರ ರಮಣೀಯ, ವೈಭೋಗದಲ್ಲಿ ಭೋರ್ಗರೆದು ಸುರಿದ ಅನಿರೀಕ್ಷಿತ "ಮುಂಗಾರು ಮಳೆ".....

ಇಂದು, ಈಗ ಮತ್ತೆ ಕೇಳಿಬರುತ್ತಿದೆ ಮನಸ್ಸಿನಾಳದಿಂದ...ಅದೇ ಹಾಡು...

ಅನಿಸುತಿದೆ ಯಾಕೋ ಇಂದು.....

ಪ್ರತಿಧ್ವನಿಸುತ್ತಿದೆ ಮರೆಯದ ಅದೇ ಸಾಲು ಕಿವಿಯಲ್ಲಿ ಶಾಶ್ವತವಾಗಿ....

ನಿನ್ನದೇ ನೆನಪಲ್ಲಿ ನಲಿದೆ........

ಈ ನನ್ನ ಅಭಿವ್ಯಕ್ತಿ ಕೇವಲ ನನ್ನ ನೆನಪಿನ ಸಂತಸವನ್ನು ಅನುಭವಿಸುವ ಪ್ರಯತ್ನ. ಮೆಚ್ಚುಗೆ ಮಾತ್ರ...

ಸಾಹಿತ್ಯ ವಿಮರ್ಷೆ ಖಂಡಿತಾ ಅಲ್ಲ.







ಜಯಂತನ ಮತ್ತು ನನ್ನ ಧಾರವಾಡದ ಮುವತೈದುವರ್ಷಗಳ ಹಿಂದಿನ ಪಳಯುಳಿಕೆ ಫೋಟೋ.






Comments

Popular posts from this blog

ಕಾಗೆ....

Reunited...at last..