ಯಥಾಸ್ಥಿತಿ.



ಕಾಲವೇ....
ಕರೆದೆನೆಂದು ಬೇಸರಿಸಬೇಡ,
ನಿನ್ನ ಗಮನಕ್ಕೆ ಯಾರು ಬರಲಾರರು
ಇರುವು ನೀನೇ, ಇಲ್ಲದಿರುವ ಶೂನ್ಯವೇ 
ಎಲ್ಲವನು, ಎಲ್ಲರನು ತಿರಿಸ್ಕರಿಸುವ 
ನಿರುತ್ತರ ಶೇಷಪ್ರಶ್ನೆಯೇ
ಗೊತ್ತು, ನೀನೆಂದೂ ತಿರುಗಿನೋಡುವುದಿಲ್ಲ...
ಅನುಮಾನ, ಅಜ್ಞಾನ ನನ್ನಲ್ಲೇ ಇರಲಿ.

ನಿನ್ನ ಕೆಲಸ ನೀನು ಮಾಡು, ನೀನು ಕಾವಲುಗಾರ
ಕಾಳಜಿಬೇಡ, ಯಾವುದುನಿಂತಿಲ್ಲ, 
ಎಲ್ಲಾ ಯಥಾಪ್ರಕಾರ,
ಜಗತ್ತು ಕ್ರಿಯಾಶೀಲ, ನಿಲ್ಲುವುದಿಲ್ಲ ತಟಸ್ಥವಾಗಿ
ನಿಲ್ಲದ ಜೀವದ ಚಲನೆ, ಶಾಶ್ವತ ಚಟುವಟಿಕೆಯ ಚಿಲುಮೆ ಸದಾ ಸ್ತಿರ
ತನ್ನದೇ ಗುಂಗಿನಲಿ,ವೇಗದಪರಿವಿಲ್ಲದೆ,ಗಮನಿಸಲಾರದ ಘಟನೆಗಳಲ್ಲಿ
ಅದೃಶ್ಯ ನೋಟ, ಮರೆಯಲ್ಲೇ ಕೂಟ, 
ಸರಿಯುತ್ತಿದೆ ಎಂದಿನಂತೆ ಕಾಲ ನಿನ್ನ ಸುಪರ್ದಿಯಲ್ಲೇ.

ಗಡಿಯಾರದ ಮುಳ್ಳಾಗಲಿ, ಡಿಜಿಟಲ್ ಫಲಕವಾಗಲಿ,
ಎಲ್ಇಡಿ ಪಂಚಾಂಗವಾಗಲಿ
ಮಾಡಲಾರವು ಎಂದಿಗೂ ಕರ್ತವ್ಯಲೋಪ.
ಉದಾರತೆಯ ಅಮಲಲ್ಲಿ,ನಮ್ಮ ಸಣ್ಣತನಗಳ ಪರಿವಿಲ್ಲದೆ
ಖುಷಿಯಾಗಿದ್ದೇವೆ ಎಲ್ಲರು.
ಇಲ್ಲಿ ಎಲ್ಲರೂ ಕ್ಷೇಮ..

ಆಗಾಗ್ಗೆ ಬೇಸರ ವಿವರಿಸಲು ಎದ್ದು ಗುದ್ದಾಡುತ್ತಾರೆ
ತಮ್ಮೆದುರಿಲ್ಲದ ಅದೃಷ್ಯ ಜನಗಳ ಕೆಣಕುತ್ತಾರೆ
ನೆನಪಾದಾಗ, ಸೂಕ್ತಸನ್ನಿವೇಶದಲ್ಲಿ,ತಮ್ಮ ಗರುಡಿಯಲ್ಲಿ
ಲುಪ್ತಆಸೆಯ ಒಡೆತನಕೆ ಬಡತನದ ಹಸಿವಿನ ಭಾಷಣ,
ಬರೆಯುತ್ತಾರೆ, ಬೇಕಾದರೆ ಒಂದು ಲೇಖನ...
ಪ್ರಪಂಚದ ಅಂಕುಡೊಂಕುಗಳೆಲ್ಲಾ
ಪ್ರಜ್ವಲಿಸುತ್ತವೆ ಪ್ರಖರವಾಗಿ ಪ್ರತಿಫಲಿನ
ಇಲ್ಲಿ ಎಲ್ಲರೂ ಸೌಖ್ಯ.

ಮೆಚ್ಚುತ್ತಾರೆ ಸಹೃದಯಿಗಳು, ಭಾವುಕರು
ಆದರೂ ಎಲ್ಲರೂ ಅಲ್ಲಲ್ಲೇ ತಮ್ಮದೇ ವಾದದಲ್ಲಿ
ಪಠಿಸುತ್ತಿದ್ದಾರೆ ವೇದ ಘೋಷ, ತಮ್ಮದೇ ಧರ್ಮ ಸೂತ್ರ
ಮಗ್ನರಾಗಿದ್ದರೆ, ವಿವಾದಗಳಲ್ಲೇ ವಿಕೃತ ಸುಖಜೀವಿಗಳು
ವ್ಯಕ್ತಿತ್ವ ದುಮ್ಮಾನದ ಭಾರದಡಿ ಸಿಲುಕಿ,ಸಪಾಟಾಗಿದೆ
ನೋವುಗಳು,ಸಾವುಗಳು, ಗಲಭೆಗಳು, ಹೋರಾಟಗಳು
ತರ್ಕ,ಚರ್ಚೆ,ವಿಚಾರ,ಚಿಂತನೆ ತಮ್ಮದೇ ಪರಿಭಾಷೆಯಲಿ
ಸುತ್ತುತ್ತಲೇ ಇರುತ್ತವೆ, ಭೂಗೋಳದಲ್ಲಿ,
ಇಲ್ಲಿ ಎಲ್ಲವೂ ಕುಶಲ,

ಹೊಸತು ಏನಿಲ್ಲ ಚಿಂತಿಸಲು,
ವಿವಿಧತೆ ಪರಿಸರದ ಸಮತೋಲನ ಮಂತ್ರ
ಪಾಪ,ಅಳವಡಿಸಿಕೊಂಡಿದ್ದೇವೆ ಅದೇ ತಂತ್ರ
ಎಲ್ಲವೂ,ಸರಿಯಾಗಿದೆ,ಎಂದಿನಹಾಗೆ,ಹಾಯಾಗಿ
ಮಸ್ತ್ ಆಗಿ,ಮೋಜಿನಮಜಲುಗಳು,
ನಾಳೆ ಬಂದು ನೋಡು,ಬೇಕಾದರೆ
ನಿಲ್ಲದ ಶಕ್ತ,ಅಶಕ್ತರ ಹೋರಾಟ
ಕಣ್ಣುಕುಕ್ಕಬಹುದು.ಇದು ಯಥಾಸ್ಥಿತಿ
ಎಲ್ಲವೂ ಸರಿಯಾಗಿದೆ! 
ಹೀಗೆ.... ಉಳಿದ ಸಹಜತೆ ಸ್ಥಿರ,ಬಹಳಕಾಲದಿಂದ.
ಗೊತ್ತಲ್ಲಾ ನಿನಗೂ....ಚೆನ್ನಾಗಿ

Comments

Popular posts from this blog

ಕಾಗೆ....