ಜೋಗ...


ಪ್ರವಾಸದ ತಂಡ ಜೋಗ ತಲುಪಿದಾಗ ಗಂಟೆ ಮೂರೂವರೆ ಆಗಿತ್ತು. ಇನ್ನೂ ಊಟ ಮುಗಿದಿರಲಿಲ್ಲ. ಕಾರಣ, ಬೆಂಗಳೂರು ಬಿಡುವಾಗ ಲೇಟ್ ಆಗಿ, ಮದ್ಯ್ದದಲ್ಲಿ ಗಾಡಿ ಪಂಕ್ಚರ್ ಆಗಿ, ಭದ್ರಾವತಿಯಲ್ಲಿ ಮೈನರ್ ರಿಪೇರಿಯಾಗಿ ಕಡೆಗೆ ಜೊಗ್ ಸೇರಿದಾಗ ಎಲ್ಲರೂ ಸತ್ತು ಸುಣ್ಣಾಗಿದ್ದರು. ಬೆಂಗಳೂರು ಬಿಡುವಾಗ ಇದ್ದ ಚಿಲ್ಲಾಟ,ಕೂಗಾಟ, ಉತ್ಸಾಹ ಎಲ್ಲಾ ಮಾಯವಾಗಿ, ಕೆಲವರು ತೂಕಡಿಸುತ್ತಿದ್ದರು. ಉಪಾಧ್ಯಾಯರುಗಳೂ ಸಹಾ ನಿರುತ್ಸಾಹದಿಂದ ಸುಮ್ಮನೆ ಕೂತಿದ್ದರು.
ಬಸ್ ಹಾಸ್ಟೆಲ್ ಮುಂದೆ ನಿಂತಾಗ ಸಾಮಾನ್ಯವಾಗಿ ಕಂಡುಬರುವ ಲವಲವಿಕೆ ಯಾರಲ್ಲೂ ಉಳಿದಿರಲಿಲ್ಲ. ಆಚಾರ್ ಮಾಷ್ಟ್ರು, ಅಡುಗೆಯ ತಂಡದ ರಾಜು ಹೇಳಿದ ನಂತರ ಎಲ್ಲರು ತಮ್ಮ ತಮ್ಮ ಲಗೇಜ್ ಸಮೇತ ಇಳಿಯಬಹುದೆಂದು ಹೇಳಿದ ಕೂಡಲೇ, ಇದುವರೆಗೂ ಮೌನವಾಗಿದ್ದ ಹುಡುಗರು ಪಾದರಸದಂತೆ ಚುರುಕಾದರು. ತಾ ಮುಂದು ನಾ ಮುಂದು ಎಂದು ಎದ್ದು ಲಗೇಜ್ ಎತ್ತಿಕೊಂಡು ದಡ ದಡನೆ ಇಳಿದು ಹಾಸ್ಟೆಲ್ ಗೆ ಲಗ್ಗೆ ಹಾಕಿದರು. ತಮ್ಮ ತಮ್ಮ ಸ್ನೇಹಿತರೊಂದಿಗೆ, ತಮಗೆ ಇಷ್ಟ ಬಂದ ಕೊಠಡಿಗಳಿಗೆ ನುಗ್ಗಿ ಬ್ಯಾಗ್ ಗಳನ್ನು ಎಸೆದು ಕಾಲುಚಾಚಿ ಅಲ್ಲಲ್ಲೇ ಬಿದ್ದುಕೊಂಡರು. ಹಾಸ್ಟೆಲ್ ಮುಂದೆ ಇರುವ ಹೊಳೆ ಯಾರ ಗಮನಕ್ಕೆ ಯಾವಾಗ ಬಂತೊ, ಅಂತೂ ಹುಡುಗರೆಲ್ಲ ತಮ್ಮ ತಮ್ಮ ಒಳ ಉಡುಪುಗಳೊಂದಿಗೆ ಹೊರ ಹೋಗಲು ಆರಂಬಿಸಿದರು. ಉಪಾದ್ಯರುಗಳ ಸೂಚನೆ, ಎಚ್ಚರಿಕೆಗಳಿಗೂ ಕಾಯದೆ ಗುಂಪು ಗುಂಪಾಗಿ ಹೊರ ಹೊರಟರು.

ಹಾಸ್ಟೆಲ್ ಮುಂದೆ ಇದ್ದ ಕಟ್ಟೆಯ ಮೇಲೆ, ಬೇವಿನಮರದ ಕೆಳಗೆ ಕುಳಿತ ಎಮ್.ವಿ.ಎಸ್. ಮೇಷ್ಟ್ರನ್ನು ನೋಡಿ ಅಲ್ಲೇ ನಿಂತರು. ಕಾರಣ ಆ ಮಾಷ್ಟ್ರು ಬಹಳ ಸ್ಟ್ರಿಕ್ಟ್ ಅಂತ ಹೆಸರುವಾಸಿ ಯಾಗಿಡ್ಡರು. ಅವರನ್ನು ಕಂಡರೆ ಹುಡುಗರಿಗೆ ಗೌರವಕ್ಕಿಂತ,ಹೆದರಿಕೆಯೇ ಜಾಸ್ತಿ ಇತ್ತು. ಮಹಾ ಮುಂಗೋಪಿ ಮತ್ತು ಎಲ್ಲ ಟೀಚರ್ ಗಳಿಗಿಂತ ಹೆಚ್ಚು ಶಿಕ್ಷಿಸುತ್ತಿದ್ದರು. ಅವರು,

"ಹುಷಾರಾಗಿರಿ...ನೀರಿನ ತೀರ ಹತ್ತಿರಕ್ಕೆ ಯಾರು ಹೋಗ ಬಾರದು...ಗೊತ್ತಾಯ್ತ?...ಬೇಗ ಬಂದು ಬಿಡಬೇಕು" ಎಂದು ಹೇಳಿದಾಗ ಹುಡುಗರಿಗಾದ ಅನಂದ ಅಷ್ಟಿಷ್ಟಲ್ಲ. ಅವರಿಗೂ ಅದೇ ಬೇಕಾಗಿತ್ತು. ಆದರೂ ಒಬ್ಬ ತರ್ಲೆ ಹುಡುಗ ಜೇಮ್ಸ್, ಸಂತೋಷವನ್ನು ತೋರಿಸದೆ ಧೈರ್ಯದಿಂದ ಕೇಳಿಯೇಬಿಟ್ಟ.

"ಸಾರ್ ನೀವ್ ಬರೋಲ್ವ? ಬನ್ನಿ ಸಾರ್"

"ಇಲ್ಲಪ್ಪ...ನೀವೆ ನೋಡಿ,...ನನ್ನ ಕಾಲಿನ ಬ್ಯಾಂಡೇಜಿನ್ನೂ ಬಿಚ್ಚಿಲ್ಲ...ನನಗೆ ನಡೆಯೋದೆ ಕಷ್ಟ ಆಗಿದೆ.. ಇನ್ ನಿಮ್ ಜೊತೆ ಈಜಾಡಕ್ಕೆ ಆಗುತ್ತ? ನೋಡು.. ಜೇಮ್ಸ್,ನೀನು...ಪಟೇಲ್ ಮತ್ತೆ ಸುದರ್ಷನ್, ಎಲ್ಲರನ್ನು ನೋಡಿಕೊಳ್ಳಬೇಕು... ನಿಮ್ಮ ಜವಾಬ್ದಾರಿಅಪ್ಪ. ಯಾರದರು ನಿಮ್ಮ ಮಾತು ಕೇಳ್ ಲಿಲ್ಲ ಅಂದರೆ ನನಗೆ ರಿಪೋರ್ಟ್ ಮಾಡಿ..ಆಯ್ತಾ?"

ಎಚ್ಚರಿಸಿದ ಕುಂಟು ಮೇಷ್ಟ್ರು, ಪ್ರಶಾಂತವಾಗಿ ಕಾಣುತ್ತಿದ್ದ ಕೆರೆಯಕಡೆ ಮುಖ ಮಾಡಿದರು. ಕುಳಿತಲ್ಲಿಂದಲೇ ಎಲ್ಲರ ಮೇಲೆ ನಿಗಾ ಇಡಬಹುದೆಂದು ಸಮಾಧಾನ ಪಟ್ಟರು. ಅವರ ಹಿಂದೆಯೇ ಮಿಕ್ಕ ಹುಡುಗರು ತಮ್ಮ ತಮ್ಮ ಸ್ನೇಹಿತರ ಗುಂಪಿನೊಟ್ಟಿಗೆ ಹೊರಟರು. ಕೆಲವೇ ಸಮಯದಲ್ಲಿ ಮಕ್ಕಳು, ಅವರೊಂದಿಗೆ ಬಂದ ನಾಲ್ಕೈದು ಮೇಷ್ಟ್ರುಗಳು, ಮೇಡಮ್ ಗಳು ಅವರ ಪುಟ್ಟ ಮಕ್ಕಳೆಲ್ಲರು ಕೆರೆಯ ಅಂಗಳದಲ್ಲಿ, ದಡಕ್ಕೆ ಸಮೀಪದಲ್ಲೇ ಮುಖ ತೊಳೆಯಲು ಆರಂಭಿಸಿದರು. ಕೆರೆಯ ಇನ್ನೊಂದು ಬದಿ ಕುಳಿತ ಕುಂಟು ಮೇಷ್ಟ್ರಿಗೆ ಹಿರಿಯ ವಿದ್ಯಾರ್ಥಿಗಳ ಚಟುವಟಿಕೆಗಳು ಕಾಣಿಸ್ತಿರಲಿಲ್ಲ. ಕಾರಣ ಅಲ್ಲಿ ಕೆರೆಯ ಏರಿಯಂತೆ ದಿನ್ನೆ ಇದ್ದುದರಿಂದ ಹುಡುಗರು ಆಗಾಗ್ಗೆ ಕಾಣಿಸಿಕೊಂಡು ನಂತರ ಮಾಯವಾಗುತ್ತಿದ್ದರು.

ಸ್ವಲ್ಪ ಸಮಯದ ನಂತರ ಹಾಸ್ಟೆಲ್ ಒಳಗಿನಿಂದ ಇನ್ನಿಬ್ಬರು ಹುಡುಗರು,ಮಂಜುನಾಥ ಮತ್ತು ಕೀರ್ತಿ ನೀರಿನಬಳಿ ಹೋಗಲು ಅಣಿಯಾಗಿ ಬಂದರು.ಕುಳಿತುಕೊಂಡು ಹೊಳೆಯ ಕಡೆ ಮಕ್ಕಳ ಮೇಲೆ ನಿಗಾ ಇಡುತ್ತಿದ್ದ ಮೇಷ್ಟ್ರು ಆಗತಾನೆ ಬಂದ ಹುಡುಗರನ್ನು ಹೋಗುವುದು ಬೇಡ ಎಂದು ಹೇಳಿದರು.ಆದರೆ ಉತ್ಸಾಹದಿಂದ ಈಜಲು ಹೊರಟಿದ್ದ ಹುಡುಗರಿಗೆ ಹಿಡಿಸಲಿಲ್ಲ.ಕಾರಣ ಕೀರ್ತಿಗೆ ಆ ಟೀಚರ್ ಮೇಲೆ ಅತಿಯಾದ ಕೋಪ ಮತ್ತು ಅಸಮಧಾನ ಇತ್ತು. ಪ್ರವಾಸದ ಮುನ್ನ ಕೀರ್ತಿ ಪ್ರವಾಸಕ್ಕೆ ಹೊರಡುವುದನ್ನು ಹೆಚ್ಚು ಕಡಿಮೆ ತಪ್ಪಿಸಲು ಪ್ರಯತ್ನಿಸಿದ್ದರು.

ಕಾರಣ ಆ ಹುಡುಗನ ತಂದೆ ಕರಿಯಪ್ಪ ಅವರ ಶಾಲೆಯಲ್ಲೇ ಕಚೇರಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ನಾಲ್ಕುದಿನದ ಪ್ರವಾಸಕ್ಕೆ ಹಣಕೊಡುವ ಶಕ್ತಿ ಅವನಿಗೆ ಇರಲಿಲ್ಲ ಆದುದರಿಂದ ಮುಖ್ಯೋಪಾಧ್ಯಾಯನಿಯವರ ಬಳಿ ಬಂದು ತನ್ನ ಮಗನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲೇ ಬೇಕೆಂದು ಹಟ ಹಿಡಿದು ಒಪ್ಪಿಸಿದ್ದ.ಮುಖ್ಯೋಪಾಧ್ಯಾಯಿನಿ,ಶ್ರೀಮತಿಯವರು ತುಂಬಾ ಮೃದು ಸ್ವಭಾವದ ಯಾರಿಗೂ,ಎಂದಿಗೂ,ಏನನ್ನು ಇಲ್ಲ ಎಂದು ಹೇಳಲಾರದ ವ್ಯಕ್ತಿ.ಹೀಗಾಗಿ ಕರಿಯಪ್ಪನವರಿಗೆ ತಮ್ಮ ಮಗನನ್ನು ಪ್ರವಾಸಕ್ಕೆ ಒಪ್ಪಿಸಲು ಕಷ್ಟವಾಗಲಿಲ್ಲ.

ಅ ಸಂದರ್ಭದಲ್ಲಿ ಅ ಸ್ಟ್ರಿಕ್ಟ್ ಕುಂಟು ಮೇಷ್ಟ್ರು

"ಹಾಗೆ ಬರುವುದು ಒಳ್ಳೆಯದಲ್ಲ, ಇತರ ವಿದ್ಯಾರ್ಥಿಗಳು ತಮ್ಮ ಹಣದಿಂದ ಬಂದ ಎಂದು ಛೇಡಿಸಬಹುದು,ಅದು ಅವನಿಗೆ ನೋವು ಉಂಟು ಮಾಡಬಹುದು"

ಎಂದು ತಂದೆಗೆ ವಿವರಿಸಿದಾಗಲೂ ಸಹಾ ಒಪ್ಪದೆ,

"ನಿಮ್ದೇನ್ ತಕರಾರ್ ಸಾರ್. ಯಾಕಿಂಗೆ ಆಡ್ತೀರ? ದೇವ್ರು ವರ ಕೊಟ್ರು ಪೂಜಾರಿ ವರ ಕೊಡೋಲ್ಲಾ ಅಂತಾರಲ್ಲ ಹಾಗೆ ನಿಮ್ ಕಥೆ! ಅಮ್ಮ ಅವ್ರು(ಎಚ್.ಎಮ್..ಶ್ರೀಮತಿ ಅವರು) ಒಪ್ಕೊಂಡಿದ್ದಾರೆ..ಒಪ್ಕೊಳಿ..ಇಲ್ಲಾಂದ್ರೆ ಹೇಳಿ ನೀವ್ ಹೋಗಲ್ಲ ಅಂದ್ರೆ ನಾನು ನನ್ನ ಮಗನ್ನ ಕಳಿಸೋದಿಲ್ಲ..ಆಯ್ತು ಅನ್ನಿ ಸಾರ್..."

ಎಂದು ಹೇಳಿ ಆ ಮೇಷ್ಟ್ರ ಬಾಯಿ ಮುಚ್ಚಿಸಿದ್ದ.

"ಹಾಗಲ್ಲ ಕರಿಯಪ್ಪ ಅವ್ರೇ....ಅನುಕಂಪ ಆಮೇಲೆ ಅಧಿಕಾರ ಆಗ್ ಬಾರದು ನೋಡಿ..ಅವನ ಮುಂದಿನ ವೈಯಕ್ತಿಕ ಬೆಳವಣಿಗೆಗೆ ಒಳ್ಳೆಯದಲ್ಲ..ಅದಕ್ಕೆ ಹೇಳ್ತೀನಿ,ಅಷ್ಟೇ.." ಮೇಷ್ಟ್ರು ವಿರೋದಿಸಿದರು. ಕಡೆಗೆ ಮೇಡಮ್ ಮಾತಿಗೆ ಒಪ್ಪಿದ್ದರು.

ಈ ಹಿನ್ನೆಲೆಯಲ್ಲಿ ಬಂದ ಹುಡುಗ ಸ್ವಲ್ಪ ಗರಮ್ ಆಗೇ ಇರುತ್ತಿದ್ದ ತಂದೆಯ ಹೆದರಿಕೆಯಿಂದ ಪ್ರಾಯಶಹ ಹೆಚ್ಚು ಮಾತಿಲ್ಲದೆ ವಿಧೇಯನಾಗಿದ್ದ.ಆದರೂ ಅವನ ಮೌನದ ಹಿಂದೆ ಎಲ್ಲಾ ಹುಡುಗರಂತೆ ಹೆದರಿಕೆ ಇತ್ತೊ ಅಥವಾ ಕೋಪವೋ ಅಥವ ಗೌರವವೋ ಊಹಿಸುವುದು ಕಷ್ಟವಾಗಿತ್ತು. ಈ ಹಿನ್ನೆಲೆಯ ಕೀರ್ತಿ ಮತ್ತು ಇನ್ನೊಬ್ಬ ಹುಡುಗ ಮಂಜುನಾಥ ಈಗ ಎದುರಿಗಿದ್ದರು.
"ಎಲ್ಲ್ರೂ ಬರೋ ಟೈಮ್ ಆಯ್ತು.. ಈಗ ಹೊಗ್ ಬೇಡಿ". ನೋಡುತ್ತಿದ್ದ ಮಾಸ್ಟ್ರು ಹೇಳಿದರು.

ಕೀರ್ತಿ,ಮಂಜುನಾಥನ ಕಡೆಗೊಮ್ಮೆ ಮತ್ತು ಮೇಷ್ಟ್ರ ಮುಖವನ್ನೊಮ್ಮೆ ನೋಡಿ ಮೌನವಾದ.

"ಈಜೊಕ್ಕೆ ಹೋದೋರೆಲ್ಲ ವಾಪಸ್ ಬರ್ತ ಇದಾರೆ, ಆಗಲೇ... ನೀವ್ ಈಗ ಹೋಗೋದು ಬೇಡ".

ಎಂದು ಆಜ್ಞಾಪಿಸಿದರು ಗುರುಗಳು.

"ಇಲ್ಲ,..ಸಾರ್..ಟಾಯ್ಲೆಟ್ ಗೆ ಹೋಗಿದ್ವಿ,ಅದಕ್ಕೆ ತಡ ಆಯ್ತು.. ಬೇಗ ಹೋಗಿ ಬಂದ್ಬಿಡ್ತೀವಿ ಸಾರ್.." ಮಂಜುನಾಥ ತೊದಲಿದ.

"ಆಯ್ತು.ಈಜು ಬರುತ್ತೇತಾನೆ?" ಎಂದು ಪ್ರಷ್ನಿಸಿ ಮತ್ತೆ ಮುಂದುವರೆಸಿದರು. "ನೀರಲ್ಲಿ ಇಳಿಯಬೇಡಿ.....ದಡದಲ್ಲೇ ಇದ್ದು ಸ್ನಾನ ಮುಗಿಸಿಬರಬೇಕು,....ಬೇಗ..."

ಮಾತು ಮುಗಿಸುವ ಮುಂಚೆ,ಮೇಷ್ಟ್ರು ಮನಸ್ಸು ಬದಲಾಯಿಸುವ ಮುನ್ನ ಹುಡುಗರಿಬ್ಬರೂ ಹೊಳೆಯ ಕಡೆ ದೌಡಾಯಿಸಿದರು.

ಮದ್ಯರಾತ್ರಿ ಕಳೆದು ಗಂಟೆ ಒಂದುಒರೆ ಅಥವಾ ಎರಡರ ಸಮಯ. ಬೆಂಗಳೂರಿನಿಂದ ಕುಣಿಗಲ್ ಕಡೆಗೆ ಅಂಬಾಸಿಡರ್ ಕಾರ್, ಆ ಡಿಸೆಂಬರ್ ತಿಂಗಳ ಕೊರೆಯುವ ಛಳಿ ರಾತ್ರಿಯಲ್ಲಿ ಹೊರಟಿತ್ತು. ಕಾರಿನಲ್ಲಿ ಡ್ರೈವರ್ ಸೇರಿ ಐದು ಜನರಿದ್ದರು. ಅದರಲ್ಲಿ ಇಬ್ಬರು ಶಾಲೆಯ ಮೇಷ್ಟ್ರುಗಳು ಮತ್ತು ಇನ್ನಿಬ್ಬರ ಪೈಕಿ, ಒಬ್ಬ, ಕರಿಯಪ್ಪನವರ ತಮ್ಮ ಇನ್ನೊಬ್ಬ ಅವರ ಸ್ನೇಹಿತ. ಯಾರು ನಿದ್ರೆ ಮಾಡಿರಲಿಲ್ಲವಾದರೂ,ಅವರುಗಳ ನಡುವೆ ಯಾವುದೆವಿಧದ ಸಂಭಾಷಣೆ ಇರಲಿಲ್ಲ. ಒಂದು ರೀತಿಯ ಭಯಾನಕ, ಕಿವಿಸೀಳುವ ಮೌನ ಆವರಿಸಿತ್ತು.ಕಾರಣ ಅವರು ಹೊರಟಿರುವ ಉದ್ದೇಶ ಹಾಗಿತ್ತು.ಮಗನ ಸಾವಿನ ಸುದ್ದಿಯನ್ನು ತಂದೆಗೆ ತಲುಪಿಸುವ ಅತಿ ಕಷ್ಟಕರ ಜವಾಬ್ದಾರಿ ಅವರದಾಗಿತ್ತು. ಆದರಲ್ಲೂ ಆ ಇಬ್ಬರು ಟೀಚರ್ ಗಳ ಅವಸ್ಥೆ ಇಪ್ಪತ್ನಾಲ್ಕು ಗಂಟೆಗಳಿಂದ ನಿದ್ರೆ ನೀರಡಿಕೆಯಿಂದ ಬಳಲಿದ ದೇಹ, ಹಿಂದಿನಸಂಜೆ ನಡೆದ ಆಘಾತಕಾರಿ ಘಟನೆಯಿಂದ ಜರ್ಝರಿತವಾಗಿತ್ತು.ಅದರಲ್ಲೂ ಎಮ್.ವಿ.ಎಸ್. ಮೇಷ್ಟ್ರು ತಮ್ಮ ಕಾಲಿಗಾದ ಚಿಕ್ಕ ಆಪರೇಷನ್ನಿಂದ ಸರಿಯಾಗಿ ನಡೆಯಲೂ ಆಗದೆ ಕುಳಿತುಕೊಳ್ಳಲೂ ಆಗದೆ, ಸಿಗರೇಟ್ ಮೇಲೆ ಸಿಗರೇಟ್ ಸೇದಿ ಸುಸ್ತಾಗಿದ್ದರು. ಸ್ವಲ್ಪ ಹೊತ್ತು ನಿದ್ದೆ ಹತ್ತಿ ಮತ್ತೆ ಎದ್ದುಕುಳಿತುಕೊಂಡು,

"ಹಳ್ಳಿ ಬಂತಾ?" ಎಂದು ಕೇಳುತ್ತಿದ್ದವರು ಎಮ್.ಜಿ.ಆರ್.

ನಡು ನಡುವೆ ಕರಿಯಪ್ಪನ ತಮ್ಮ ಮತ್ತು ಅವರ ಸ್ನೇಹಿತರಿಬ್ಬರು ತೂಕಡಿಸುತ್ತಾ ತಲೆ ಕೆಳಕ್ಕೆ ಬಂದಾಗ ಫಕ್ಕನೆ ಎದ್ದು ಮತ್ತೆ ಅದೇ ಗೊರಕೆಯ ಸ್ಥಿತಿ ತಲುಪುತ್ತಿದ್ದರು. ಹೀಗೆ ತಮ್ಮ ಭುಜದ ಮೇಲೆ ಬಂದ ತೂಕಡಿಕೆ ತಲೆಯನ್ನು ನಿಧಾನವಾಗಿ ಸರಿಸುತಿದ್ದ ಎಮ್.ವಿ.ಎಸ್, ಅವರಿಗೆ ಸಿಗರೇಟ್ ನಿಂದ ತಲೆ ನೋವು ಪ್ರಾರಂಭವಾಗಿತ್ತು. ಖಾಲಿ ಹೊಟ್ಟೆ, ಮರೆತ ಬಾಯರಿಕೆ,ಆದರೆ ಒಣಗಿದ ನಾಲಿಗೆ,ನಿದ್ರೆಇಲ್ಲದ ಕೆಂಪಾದ ಉರಿಯುವಕಣ್ಣಿಂದ ಹೊರಗಿನ ಕತ್ತಲಿನ ಶೂನ್ಯತೆಯನ್ನು ದಿಟ್ಟಿಸುತ್ತಿದ್ದರು. ನೂರಾರು ಯೋಚನೆಗಳು ಅವರನ್ನು ಕಾಡುತ್ತಿದ್ದವು. ಎಷ್ಟು ಮರೆಯುವ ಪ್ರಯತ್ನ ಮಾಡಿದರೂ ಮರೆಯಲಾಗದ ಆ ಹುಡುಗ ಕೀರ್ತಿ ಮುಖ,ಅವನ ಕಟ್ಟ ಕಡೆಯ ನೋಟ,ಆ ಮೇಷ್ಟ್ರನ್ನು ಕಾಡುತ್ತಿತ್ತು.ಕರಿಯಪ್ಪನನ್ನು ಎದುರಿಸುವುದು, ಆತನ ಮಗನ ಸಾವಿನ ವಿಷಯ ಅವರಿಗೆ ತಿಳಿಸುವುದು ಹೇಗೆ? ಅವರ ಪ್ರತಿಕ್ರಿಯೆಯನ್ನು ಹೇಗೆ ಎದುರಿಸುವುದು.....ನೆನಸಿಕೊಂಡು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದರು.ಮುಂದೆ ಒದಗಬಹುದಾದ ಯಾವುದೇ ಸನ್ನಿವೇಶವನ್ನು ಎದುರಿಸಲು ಮಾನಸಿಕ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಇನ್ನೇನು ಆಗಬಹುದು....?..ಹೆಚ್ಚೆಂದರೆ ನಾಲ್ಕು ಹೊಡೆತ ಬೀಳಬಹುದು ಆಷ್ಟೆ ತಾನೆ?. ಅವರ ಮಗನ ಸಾವಿನ ಆಘಾತಕ್ಕೆ ಯಾವ ಪ್ರತಿಕ್ರಿಯೆ ಬಂದರೂ ತಾನು ಎದುರಿಸಲೇ ಬೇಕು.ಆ ದುರದ್ರುಷ್ಟಕರ ದುರಂತ ನಡೆಯಬಾರದಿತ್ತು. ಆದರೆ ಈಗ ಆಗಿಹೋಗಿದೆ.ಏನನ್ನು ಬದಲಾಯಿಸಲು ಸಾದ್ಯವಿಲ್ಲ, ಏನೇ ಬಂದರೂ ಅದನ್ನು ಎದುರಿಸಲೇ ಬೇಕು ಎಂದು ಪದೆ ಪದೆ ತಮಗೆ ತಾವೆ ಸಮಾಧಾನ ಹೇಳಿಕೊಳ್ಳುತ್ತಿದ್ದರು.ಆದರೂ ಅವ್ಯಕ್ತ ನೋವು,ಕಾತುರತೆ ಬಲವಾಗಿತ್ತು.ಸನ್ನಿವೇಶದ ತೀವ್ರತೆಯ ಅರಿವು ಡ್ರೈವರ್ ಗೆ ಇದ್ದುದರಿಂದ ತನ್ನ ಪ್ರಯಾಣಿಕರಿಗೆ ಮುಜುಗರವಾಗುವ ಯಾವ ತಲೆಹರಟೆ ಪ್ರಶ್ನೆಯನ್ನು ಕೇಳದೆ ತನ್ನ ಪಾಡಿಗೆ ತನ್ನ ಬೀಡಿಯನ್ನು ಎಳೆಯುತ್ತಾ ಗಾಡಿ ನಡೆಸುತ್ತಾ, ಅಗೊಮ್ಮೆ,ಈಗೊಮ್ಮೆ ತಾನು ತಲುಪಬೇಕಿರುವ ಹಳ್ಳಿಯ ಹಾದಿಗಾಗಿ,ಹಿಂದೆ ತಿರುಗಿ ತೂಕಡಿಸುತ್ತಾ ಗೊರಕೆಯ ಘರ್ಜನೆಯಲ್ಲಿರುತ್ತಿದ್ದ ಕರಿಯಪ್ಪನ ತಮ್ಮನನ್ನು ಕೇಳಿ ಸರಿಯಾದ ದಾರಿಯಲ್ಲಿ ಹೋಗುತ್ತಿರುವುದನ್ನು ಖಚಿತ ಪಡಿಸಿಕೊಂಡು ಮತ್ತೆ ಮುಂದೆ, ರಸ್ತೆಯ ಮೇಲೆ ಬೀಳುತ್ತಿದ್ದ ಕಾರಿನ ಬೆಳಕನ್ನು ಹಿಂಬಾಲಿಸುತ್ತಿದ್ದ.ಎಮ್.ವಿ.ಎಸ್,ಮೇಷ್ಟ್ರು ಮತ್ತೊಂದು ಸಿಗರೇಟ್ ಸೇದಲಾರಂಭಿಸಿದರು.ಇದ್ದಕ್ಕಿದಂತೆ ಡ್ರೈವರ್ ಬ್ರೇಕ್ ಹಾಕಿ ಕಾರನ್ನು ಪಕ್ಕಕ್ಕೆ ನಿಲ್ಲಿಸಿದಾಗ,ಮಬ್ಬಾದ ಬೆಳಕಲ್ಲಿ ಇನ್ನೊಂದು ಕಾರ್ ಎಡಪಕ್ಕದಲ್ಲಿ ನಿಂತುಕೊಂಡಿರುವುದನ್ನು ಗಮನಿಸಿದ ಎಮ್.ವಿ.ಎಸ್ ಗೆ ಆಶ್ಚರ್ಯ ವಾಯಿತು.ಕಾರ್ ಅನಿರೀಕ್ಷಿತವಾಗಿ ನಿಶ್ಚಲಸ್ಥಿತಿಗೆ ಬಂದ ಕಾರಣದಿಂದ ತೂಕಡಿಸುತ್ತಿದ್ದವರು ನಿದ್ರೆಗಣ್ಣಲ್ಲೇ ಏನಾಯ್ತು? ಎಂದು ಕೇಳಿದರು.

ಪ್ರಶ್ನೆಯನ್ನು ಉತ್ತರಿಸದ ಡ್ರೈವರ್ ಕಾರ್ ನಿಂದ ಇಳಿದು,ಕತ್ತಲಲ್ಲಿ ನಿಂತ ಕಾರಿನ ಸಹಾಯಕ್ಕೆಂದು ಹೊರಟ. ಅವನೊಟ್ಟಿಗೆ ಹೊರಟ ಎಮ್.ವಿ.ಎಸ್.ಅವರನ್ನು,ಉಳಿದ ಮೂರುಜನ ಸೇರಿಕೊಂಡರು.

ರಸ್ತೆಯ ಎಡ ಪಕ್ಕದಲ್ಲಿ ನಿಂತ ಕಾರಿನ ಹಿಂಭಾಗದಲ್ಲಿ ಮದ್ಯ ವಯಸ್ಸಿನ ವ್ಯಕ್ತಿ ಗಂಡಸು,ಜೊತೆಯಲ್ಲಿ ಇಪ್ಪತ್ತು,ಇಪ್ಪತ್ತೆರಡರ ಹುಡುಗಿ ನಿಂತಿದ್ದರು.ಕಾರಿನ ಎಡಭಾಗದ ಬಾಗಿಲು ತೆರೆದಿತ್ತು.ರಸ್ತೆಯ ಪಕ್ಕದಲ್ಲಿದ್ದ ಸುಮಾರು ಒಂದು, ಒಂದುವರೆ ಅಡಿ ಆಳವಿದ್ದ ಗುಂಡಿಯಲ್ಲಿ ಬಿಳಿ ಮೂಟೆಯೊಂದು ಬಿದ್ದಿತ್ತು.ಡ್ರೈವರ್ ಆ ಮೂಟೆಯ ಬಳಿಯೇ ನಿಂತಿದ್ದ.ಆ ಮೂವರು ಸೇರಿ ಆ ಮೂಟೆಯನ್ನು ಕಾರಿನ ಡಿಕ್ಕಿಯಲ್ಲಿ ಹಾಕುವ ಪ್ರಯತ್ನ ಮಾಡಿ,ಸಾರ್ಥಕವಾಗದೆ ಕೊನೆಗೆ ಏನು ತೋಚದೆ ಸುಮ್ಮನೆ ಕಾಯುತ್ತಿದ್ದರು ಸಹಾಯದ ನಿರಿಕ್ಷೆಯಲ್ಲಿ. ಎಮ್.ಜಿ.ಅರ್, ಡ್ರೈವರ್ ಸಹಾಯಕ್ಕೆ ಹೊರಟರು.ತೂಕಡಿಸುತ್ತಿದ್ದ ಕರಿಯಪ್ಪನ ತಮ್ಮ ಮತ್ತು ಅವರ ಸ್ನೇಹಿತ ಬೀಡಿ ಹಚ್ಚಿ ಜಲಬಾದೆಗೆಂದು ರಸ್ತೆಯ ಇನ್ನೊಂದು ಪಕ್ಕಕ್ಕೆ ಹೋದರು.ಎಮ್.ವಿ.ಎಸ್.ತೆರೆದ ಕಾರಿನ ಬಾಗಿಲ ಬಳಿ ಸಹಕರಿಸಲು ನಿಂತರು.ಹುಡುಗಿ ಡಿಕ್ಕಿಯ ಬದಿಯಲ್ಲಿ ನಿಂತಿದ್ದಳೂ. ಆ ಕತ್ತಲಲ್ಲೇ ಮೂಟೆಯನ್ನು ಎತ್ತುವ ಕಾರ್ಯ ಆರಂಭವಾಯ್ತು.ಮೂರು ಜನ ಎಷ್ಟು ಪ್ರಯತ್ನ ಪಟ್ಟರೂ ಆ ಮೆತ್ತಗಿದ್ದ ಆದರೆ ಭಾರವಾಗಿದ್ದ ಮೂಟೆಯನ್ನು ಎತ್ತಲು ಆಗಲಿಲ್ಲ.ಕಾರಿಗೆ ಮತ್ತು ಆ ಮೂಟೆಯ ನಡುವಿನ ಅಂತರ ಕೇವಲ ಮೂರು ನಾಲ್ಕು ಅಡಿ ಮಾತ್ರ.ಆದರೂ ಮೂರುಜನ ಸೇರಿಸಹಾ ಅದನ್ನು ಡಿಕ್ಕಿಯಲ್ಲಿ ಹಾಕಲಾಗಲಿಲ್ಲ.ಕಡೆಗೆ ಡ್ರೈವರ್ ಕೇಳಿಡ"ಏನಿದೆ ಸಾರ್,ಈ ಮೂಟೆಲಿ.?ಇಷ್ಟೊಂದು ಭಾರ!"ಇನ್ನೊಂದು ಕಾರಿನ ಡ್ರೈವರ್ ಹೇಳಿದ.

"ಆ ಹುಡುಗಿಯ ತಂದೆಯ ಬಾಡಿ.....ಮಂಗಳೂರಿಗೆ ತಗೊಂಡು ಹೋಗ್ತಿದಿವಿ...." "ಬಾಡಿ" ಎಂದು ಕೇಳಿದ್ದೇ ತಡ, ಸಹಾಯಕ್ಕೆಂದು ಹೋದ ಎಮ್.ಜಿ.ಆರ್.ಹಾಗು ಡ್ರೈವರ್ ಇಬ್ಬರೂ ತಕ್ಷಣ ಹೌಹಾರಿ ಹಿಂದೆ ಸರಿದರು. ಎಮ್.ವಿ.ಎಸ್.ನಿಂತಲ್ಲೇ ನಡುಗಿ ಕಾರಿನಿಂದ ದೂರ ಸರಿದರು.ಜಲಬಾಧೆಗೆನಂದು ಹೋಗಿದ್ದ ವ್ಯಕ್ತಿಗಳು ತಮ್ಮ ಕಾರಿನ ಬಳಿ ಓಡಿದರು.

"ಮೊದ್ಲೇ ಹೇಳ್ ಬಾರ್ದೇನ್ರಿ? ನಾನ್ ತರಕಾರಿನೋ ಗಿರಕಾರಿ ಅಂದ್ಕೊಂಡ್ ಬಂದೆ"

ಸಹಾಯಕ್ಕೆಂದು ತನ್ನ ಗಾಡಿಯನ್ನು ನಿಲ್ಲಿಸಿ ಬಂದ ಡ್ರೈವರ್ ಹೇಳಿದ.ಆ ಹುಡುಗಿಯ ಚಿಕ್ಕಪ್ಪ ವಿಷಯ ತಿಳಿಸಿದರು. ಮಂಗಳೂರಿನಿಂದ ಬೆಂಗಳೂರಿಗೆ ತಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡೋಕ್ ಮುಂಚೇನೇ ಪ್ರಾಣ ಹೋಗಿತ್ತಂತೆ.ವಿಧಿ ಇಲ್ಲದೆ ಹೆಣವನ್ನು ಹುಟ್ಟೂರಿಗೆ, ಅಂತ್ಯಕ್ರಿಯೆಗಾಗಿ ಆ ರಾತ್ರಿಯಲ್ಲಿ ಸಾಗಿಸುತ್ತಿದ್ದರು. ಆದರೆ ಅವರ ಹಣೆಬರಹ ಸರಿ ಇರಲಿಲ್ಲವೆಂದು ಕಾಣುತ್ತೆ.ಕಾರಿನ ಹಿಂದಿನ ಸೀಟ್ ನಲ್ಲಿ ಮಲಗಿಸಿದ ಹೆಣ, ಬಾಗಿಲು ತೆಗೆದುಕೊಂಡಾಗ ಹೊರಗೆ ಬಿದ್ದಿದೆ.ಹಿಂದಿನ ಬಾಗಿಲು ಜಾಮ್ ಆಗಿದ್ದಕಾರಣ ಇದ್ದಕ್ಕಿದ್ದಹಾಗೆ ತೆಗೆದುಕೊಂಡಿರಬಹುದೆಂದು ವಿಷ್ಲೇಶಿಸಿದರು. ಆ ಅನಿರೀಕ್ಷಿತ ಸನ್ನಿವೇಷದಲ್ಲಿ ಸಿಕ್ಕಿಕೊಂಡು, ಹೇಗ

ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಮೌನವಾಗಿ ಹೆದರಿಕೆ,ಸಂಕಟ ಹಾಗು ಆಶ್ಚರ್ಯ ಎಲ್ಲ ಭಾವನೆಗಳ ಸಂಘರ್ಷಣೆಯಿಂದ ಕಕ್ಕಾಬಿಕ್ಕಿಯಾಗಿ ಒದ್ದಾಡುತ್ತಿದ್ದರು.

ಕಾರಿನಲ್ಲಿ ಕುಳಿತುಕೊಂಡ್ ಎಮ್.ವಿ.ಎಸ್ ಅವರ ಮನಸ್ಸು,ಬುಧ್ದಿ ತೀರ ವಿಚಲಿತವಾಗಿತ್ತು. ಹಿಂದಿನದಿನದಿಂದ ಕಲ್ಪನೆಗೆಮೀರಿದ ಘಟನೆಗಳು ನಡೆಯುತ್ತಿದೆ.ಸಾವಿನ ಸುದ್ದಿ ತಿಳಿಸಲೆಂದೇ ಆ ರಾತ್ರಿಯಲ್ಲಿ ಹೊರಟ ಅನ್ವೇಷಣೆಯಲ್ಲಿ, ತಾನು ಆಗತಾನೆ ಕಂಡ ಅನಾಥ,ಅನಾಮಧೇಯ ರಸ್ತೆಯಲ್ಲಿ ಬಿದ್ದ ಹೆಣ,ಅದರ ಬಳಿ ಆ ರಾತ್ರಿಯಲ್ಲಿ ನಿಂತ ಆ ಹೆಣದ ಮಗಳು,ಒಂದಕ್ಕೊಂದು ತಾಳೆಯಾಗದ, ಅರ್ಥವಾಗದ ಅನುಭವಗಳು.ತನಗೆ ದುಖವಾಗಿದೆಯೊ,ಬೇಸರವಾಗಿದೆಯೋ,ಹೆದರಿಕೆಯಾಗಿದೆಯೋ ಯಾವುದನ್ನು ಯೋಚಿಸಲು ಆಗದಷ್ಟು ಬಳಲಿಕೆಯಾಗಿದೆಯೊ ಯಾವುದಕ್ಕೂ ಉತ್ತರಸಿಗದ ವಿಚಿತ್ರ ಸಂಗತಿಗಳು ತನ್ನನ್ನು ಆ ಸ್ಥಿತಿಗೆ ಮುಟ್ಟಿಸಿತ್ತೋ?? ಆ ಎಲ್ಲ ಘಟನೆಗಳಲ್ಲಿ ತನ್ನ ಪಾತ್ರವೇನು? ಜರುಗಿದ ಎಲ್ಲ ಘಟೆನೆಗಳನ್ನು ತಾನು ತಪ್ಪಿಸಬಹುದಿತ್ತೆ? ಮುಂದಿನ ಕ್ಷಣ ಏನಾಗಬಹುದು,ಕರಿಯಪ್ಪ ಅವರ ಪ್ರತಿಕ್ರಿಯೆ......ಸುತ್ತಿ ಬಳಸಿ ಎಲ್ಲಾ ಕ್ರಿಯೆಗಳು, ಜರುಗುತ್ತಿರುವ ಘಟನೆಗಳು ಆ ಹುಡುಗ... ಕೀರ್ತಿಯ ಸಾವಿನ ಕೇಂದ್ರದ ಸುತ್ತ, ಜೊಗದಲ್ಲಿನ ಶರಾವತಿ ನದಿಯ ಸುಳಿಯಂತೆ ತನ್ನನ್ನು ಸುತ್ತುತ್ತಿದೆ ಎನಿಸಿತು. ಯಾಂತ್ರಿಕವಾಗಿ ಸಿಗರೇಟ್ ಸುಡುತ್ತಿದ್ದ ಕುಂಟು ಮೇಷ್ಟ್ರಿಗೆ ಅರ್ಥವಾಗಲಿಲ್ಲ.ರಸ್ತೆಯಲ್ಲಿನ ಹೆಣ ಒಂದು ಬಿಡಿಸಲಾಗದ ಕಗ್ಗಂಟಾಗಿತ್ತು.ಎಮ್.ಜಿ.ಆರ್ ಅನ್ನು ಕರೆದು, ಡ್ರೈವರ್ ಗೆ ಹೋಗೋಣವೆಂದು ಸೂಚಿಸಿದರು.ಡ್ರೈವರ್ ನಿಧಾನವಾಗಿ ಹಿಂದೆ ನೋಡಿಕೊಂಡು ಕಾರನ್ನು ಹತ್ತಿ ಗಾಡಿ ಸ್ಟಾರ್ಟ್ ಮಾಡಿ,"ಇನ್ನೆಷ್ಟು ದೂರ ಇದೆ...ಆ ಹಳ್ಳಿ?" ಎಂದು ಕರಿಯಪ್ಪನ ತಮ್ಮನನ್ನು ಉದ್ದೇಶಿಸಿ ಕೇಳಿದ."ಹೆಚ್ಚು ದೂರ ವಿಲ್ಲ,ಮುಂದಿನ ತೆಂಗಿನ ತೋಟ ಆದಮೇಲೆ ಬರುವ ಸೇತುವೆಯ ಬಲಭಾಗದಲ್ಲಿ ಒಂದು ಮಣ್ಣಿನ ರಸ್ತೆ ಇದೆ.ಅದರಲ್ಲಿ ಒಂದೂವರೆ ಕಿಲೋಮೀಟರ್ ಹೋದರೆ ಆಯ್ತು....ಹಳ್ಳಿ ಬಂದ ಹಾಗೆ..ಅಷ್ಟೆ..."ಉತ್ತರಿಸಿದ..

ಕತ್ತಲ ಆ ರಾತ್ರಿಯಲ್ಲಿ,ಮಣ್ಣಿನ ಕಚ್ಚಾ ರಸ್ತೆಯಲ್ಲಿ ಹಳ್ಳಿ ಸೇರಲು ಅಂದು ಕೊಂಡಿದ್ದಿಕ್ಕಿಂತ ಹೆಚ್ಚು ಸಮಯ ಹಿಡಿಯಿತು. ಕೆರೆಯ ಏರಿಯನ್ನು ಹಾದು ಮಂಗಳೂರು ಹೆಂಚಿನ ಮನೆಗಳು ಹತ್ತಿರ ವಾದಂತೆ ಕೊಟ್ಟಿಗೆಯ ಸಗಣಿಯ ವಾಸನೆ ಮೂಗಿಗೆ ನಾಟಿತು.ರಸ್ತೆಯಲ್ಲೇ ಮಲಗಿದ ಹಸು,ಕರುಗಳ ತಮ್ಮ ನಿದ್ರೆಗೆ ಅಡಚಣೆ ಉಂಟಾಗಿ ಕೋಪಗೊಂಡಂತೆ ಕತ್ತನ್ನು ಎತ್ತಿ, ಮೆಲಕುಹಾಕುವುದನ್ನು ಮುಂದುವರಿಸುತ್ತಲೇ ಬೆಳಕು ಚೆಲ್ಲುತ್ತಿದ್ದ ಗಾಡಿಯ ಕಡೆ ನೋಡಿದಾಗ, ಅವುಗಳ ಕಣ್ಣುಗಳು ರೇಡಿಯಮ್ ಹಸಿರಿನ ಗೋಲಿಗಳಂತೆ ಹೊಳೆಯುತ್ತಿದ್ದವು.ಕತ್ತನ್ನು ಅಲ್ಲ್ಲಾಡಿಸಿದರೂ, ಅಲ್ಲಿಂದ ಹೆದರಿ ಏಳಲಿಲ್ಲ. ಕಾರನ್ನು ಅಲ್ಲೇ ನಿಲ್ಲಿಸಿ, ಹೆಡ್ ಲೈಟ್ ಆರಿಸಿದ ಡ್ರೈವರ್. ಮೊದಲೇ ನಿಶ್ಚಯವಾದಂತೆ ಕರಿಯಪ್ಪನ ತಮ್ಮ ಮಾತ್ರ ಇಳಿದು ನಡೆದುಕೊಂಡು ಸ್ವಲ್ಪ ದೂರ ಹೋಗಿ,ಕತ್ತಲಲ್ಲಿ ಮಾಯವಾದರು.ಎಮ್.ವಿ.ಎಸ್.ಗೆ ಏನೂ ತೋಚದೆ ಇನ್ನೊಂದು ಸಿಗರೇಟ್ ಹಚ್ಚಿದರು.

"ಕರಿಯಪ್ಪ ಸಿಕ್ಕರೇ ಸಾಕಪ್ಪ" ಎಮ್.ಜಿ.ಆರ್.ಗೊಣಗಿದರು.

ಕೆಲವೇ ನಿಮಿಷಗಳಲ್ಲಿ ಅವರು ವಾಪಸ್ ಬಂದಂದ್ದನ್ನು ನೋಡಿ,ಮೌನವಾಗಿ ಕಾರಿನವರೆಲ್ಲರು ನೋಡಿದರು.ಕರಿಯಪ್ಪ ಆ ಹಳ್ಳಿಯನ್ನು ಬಿಟ್ಟು ಆಗಲೇ ಮೂರು ನಾಲ್ಕು ತಾಸುಗಳಾಗಿತ್ತು. ಅವರಿಗೆ ವಿಷಯ ತಿಳಿದ ನಂತರವೇ ಯಾರಿಗೂ ಹೇಳದೆ ಆ ಜಾಗವನ್ನು ಖಾಲಿ ಮಾಡಿದ್ದರು.ಎಲ್ಲಿಗೆ ಹೋಗಿರಬಹುದೆಂಬ ಆಲೋಚನೆ ಅಲ್ಲಿ ಯಾರು ಮಾಡಲು ಹೋಗಲಿಲ್ಲ.ತಮ್ಮ ವಿಡ್ಯಾರ್ಥಿಯ ಸಾವಿನ ಸುದ್ದಿ ತಂದೆಗೆ ತಿಳಿದಿದೆ ಎಂದು ಗೊತ್ತಾದಾಗ ಎಮ್.ವಿ.ಎಸ್.ಗೆ ತಮ್ಮ ಹೃದಯದಮೇಲೆ ಬಿದ್ದಿದ್ದ ದೊಡ್ಡ ಬಂಡೆ ಇಳಿಸಿದಷ್ಟು ಹಗುರವಾಯಿತು.ಅವರಿಗೆ ಅರಿವಿಲ್ಲದೆ ಎಲ್ಲೋ ಒಂದು ಕಡೆ ಸಂತೋಷ ಎನ್ನುವುದಕ್ಕಿಂತ ಸಮಾಧಾನ ವಾಯಿತು.ಆ ತಾತ್ಕಾಲಿಕ ಮಾನಸಿಕ ವಿಶ್ರಾಂತಿಯಿಂದ ಒಂದು ರೀತಿಯ ಪಾಪ ಪ್ರಜ್ನೆ ಅವರನ್ನು ಕಾಡಿತು. ಆ ಸಾವಿನ ವಿಷಯವನ್ನು ತಂದೆಗೆ ತಿಳಿಸುವ ಜವಾಬ್ದಾರಿತನದಿಂದ ತಪ್ಪಿಸಿಕೊಂಡು ಸಮಾದಾನ ಪಡುವ ಹೇಡಿ ತಾನು ಎಂಬ ಆತ್ಮವಿಶ್ಲೇಷಣೆಯೂ ಆಗದೆ ಇರಲಿಲ್ಲ.

ಆದರೆ, ಆ ಕ್ಷಣದ ಸಮಾಧಾನ ಅಥವ ಶೂನ್ಯತೆಯ ಭಾವನೆ ಕ್ರಮೇಣ ಮಾನಸಿಕ ತುಮಲ, ದ್ವಂದ್ವಗಳ ಸ್ಥಿತಿಯನ್ನು ತಲುಪಿದ ಕೆಲ ಕ್ಷಣಗಳಲ್ಲೇ, ವಿಚಿತ್ರ ಮನಸ್ಸಿನ ಯಾವುದೋ ಅರಿಯದ ಆಳದಿಂದ ಅಲ್ಲಾ ಪ್ರಪಾತದಿಂದ ಹೆದರಿಕೆಯ ಮತ್ತೊಂದು ಸುಳಿ ಚಕ್ರತೀರ್ಥವಾಗಿ ರೂಪಪಡೆಯಿತು.......

ನಿಜ.....ಕರಿಯಪ್ಪನವರಿಗೆ ವಿಷಯ ಗೊತ್ತಾಗಿದೆ...ಆದರೆ????

ತಾವಿನ್ನೂ, ಅವರನ್ನು, ಮಗನ ಸಾವಿನ ನಂತರ ಪ್ರತ್ಯಕ್ಷವಾಗಿ ಕಂಡಿಲ್ಲ. ಅವರ ನೋವಿನ, ಕೋಪದ, ಅಸಹಾಯಕ ಗೊಂದಲಮಯ, ಸಂಭವನೀಯ ಪ್ರತಿಕ್ರಿಯೆಯ ಕಲ್ಪನೆ ಎಳ್ಳಷ್ಟೂ ಎಮ್.ವಿ.ಎಸ್.ಗಾಗಲಿ, ಎಮ್.ಜಿ.ಆರ್.ಗಾಗಲಿ ಇರಲಿಲ್ಲ. ಹಾಗಾಗಿ ಆ ಇಬ್ಬರು ಉಪಾದ್ಯಾಯರ ಮನಸ್ಥಿತಿ ಯಥಾಸ್ಥಿತಿ ಯಾಯಿತು.ಮತ್ತೊಂದು ಪ್ರಶ್ನೆ ಎಮ್.ವಿ.ಎಸ್.ಅವರನ್ನು ಕಾಡುತ್ತಿತ್ತು.ಹಳ್ಳಿಯಿಂದ ವಾಪಸ್ ನೇರವಾಗಿ ಬೆಂಗಳೂರಿಗೆ ಹೋಗುವುದೋ ಅಥವ ಕರಿಯಪ್ಪನವರ ಅನ್ವೇಷಣೆಯಲ್ಲಿ ಮತ್ತೊಂದು ಹಳ್ಳಿಗೆ ಹೋಗುವುದೋ? ನಿರ್ಧರಿಸಬೇಕಾಗಿತ್ತು ಆಗಲೆ. ಕಾರಣ ಕರಿಯಪ್ಪನವರ ತಮ್ಮ ಮತ್ತು ಸ್ನೇಹಿತರ ಪ್ರಕಾರ, ಸುದ್ದಿಯನ್ನು ತಿಳಿದ ತಕ್ಷಣ ಅವರ ಅಣ್ಣ ಬೆಂಗಳೂರಿಗೇ ಹೋಗಿರುತ್ತಾರೆ. ಇನ್ನೊಂದು ಸಮೀಪದ ಹಳ್ಳಿಯ ಸಂಭಂದಿಕರ ಮನೆಗೆ ಹೋಗುವ ಛಾನ್ಸ್ ಇಲ್ಲೇ ಇಲ್ಲ.

ಆದರೆ ಅದೇಕೊ ಎಮ್.ವಿ.ಎಸ್. ಅವರ ಸುಪ್ತ ಪ್ರಜ್ನೆಗೆ ಕರಿಯಪ್ಪನವರು ಇಲ್ಲದೆ ಬೆಂಗಳೂರಿಗೆ ಹೋಗುವುದು ಅಷ್ಟು ಸೂಕ್ತ ಎಂದು ತೋರಲಿಲ್ಲ. ಕರಿಯಪ್ಪನವರು ಬೆಂಗಳೂರು ತಲುಪಿ ಮನೆ ಸೇರಿದ್ದರೆ. ಪರವಾಗಿಲ್ಲ. ಒಂದು ವೇಳೆ ಅವರು ಇನ್ನು ತಲುಪದಿದ್ದರೆಅವರ ಕುಟುಂಬದ ಸದಸ್ಯರುಗಳನ್ನೆದುರಿಸುವುದು ಕಷ್ಟ ಹಾಗು ತಾವುಗಳೇ ಆ ಹಳ್ಳಿಗೂ ಹೋಗಿಬರಬೇಕಿತ್ತು ಎಂದು ಅನವಶ್ಯಕವಾಗಿ ಪರಿತಪಿಸಬೇಕಾಗುತ್ತದೆ. ಕೊನೆಗೆ ಆ ಹಳ್ಳಿಗೂ ಹೋಗಿ ನೋಡಿಕೊಂಡು ಹೋಗುವುದು ಒಳ್ಳೆಯದೆಂದು ನಿರ್ಧರಿಸಿ ಮುಖ್ಯ ರಸ್ತೆ ತಲುಪಿ ಮೂರು, ನಾಲ್ಕು ಕಿಲೊಮೇಟರ್ ಮುಂದೆ ಸಾಗಿ ರಸ್ತೆಯ ಎಡಬದಿಗೆ ತಿರುಗಿ ಮತ್ತೆ ಕಚ್ಚಾ ರಸ್ತೆಯಿಂದ ಹಳ್ಳಿ ತಲುಪಿ ಅವರ ಪ್ರಯಾಸದ ಪ್ರಯಾಣ ಯಶಸ್ವಿ ಯಾಗದೆ ಮುಖ್ಯ ರಸ್ತೆ ತಲುಪಿ ಬೆಂಗಳೂರಿನ ಕಡೆಗೆ ಹೊರಟಾಗ ಬೆಳಗಿನ ಜಾವ ಆಗಿತ್ತು.

ಬೆಂಗಳೂರನ್ನು ತಲುಪಿ ಕರಿಯಪ್ಪನವರ ಮನೆಗೆ ಬಂದಾಗ, ಎಮ್.ವಿ.ಎಸ್, ಅವರ ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಮುಖ್ಯ ರಸ್ತೆಯಲ್ಲಿಯೇ ಕಾರ್ ನಿಂದ ಎಲ್ಲರು ಇಳಿದು ಡ್ರೈವರ್ ನ ಹಣ ಸೆಟಲ್ ಮಾಡಿ, ನಾಲ್ಕು ವ್ಯಕ್ತಿಗಳು ಅಡ್ಡರಸ್ತೆಯಲ್ಲಿದ್ದ ಮನೆಗೆ ಬಂದಾಗ ಸಾವಿನ ಭಯಾನಕ ಮೌನ ಆವರಿಸಿದಂತ್ತಿತ್ತು. ಯಾವುದೇ ವಿಧದ ಚಟುವಟಿಕೆಗಳು ಕಂಡುಬರಲಿಲ್ಲ. ಕರಿಯಪ್ಪನವರು ಬಂದಿದ್ದರೆ, ಅಷ್ಟು ಹೊತ್ತಿಗಾಗಲೇ ಕುಟುಂಬದವರೊಡನೆ ದುಖದ ವಿನಿಮಯವಾಗಿ ಒಂದು ವಿಧದ ನಿಶ್ಚಲ ವೈರಾಗ್ಯ ಸ್ಥಿತಿ ತಲುಪಿರುತ್ತಾರೆಂದು ಊಹಿಸಿದ್ದ ಎಮ್.ವಿ.ಎಸ್, ಗೆ ಕರಿಯಪ್ಪನವರು ಇನ್ನೂ ಮನೆ ಸೇರಿಲ್ಲವೆಂಬ ವಿಷಯ ತಿಳಿದು ಆಘಾತ ವಾಯಿತು. ಎನೇನೋ ಯೋಚನೆಗಳೂ ಕಾಡಲು ಶುರು ಮಾಡಿದವು. ಎಲ್ಲಿಗೆ ಹೋಗಿರಬಹುದು? ಅವರು ಹೋಗಿರಬಹುದೆಂದು ಅನುಮಾನಿಸಲಾದ ಎಲ್ಲಾ ಕಡೆಯಲ್ಲು ಹುಡುಕಿ, ಖಂಡಿತಾ ಮನೆ ಸೇರಿರುತ್ತಾರೆಂದುಕೊಂಡಿದ್ದರೆ, ಆ ಆಸಾಮಿ ಮನೆಗೆ ಬಾರದೆ ಎಲ್ಲಿಗೆ ಹೋಗಿರಬಹುದು ಇದುವರೆಗೂ ಯಾರಿಗು ತಿಳಿದಿಲ್ಲ. ಕೆಟ್ಟ ಯೋಚನೆಗಳು ಸುಳಿಯಲಾರಂಭಿಸಿತು...ಇಲ್ಲ..ಇಲ್ಲ...ಹಾಗೆಲ್ಲ ಮಾಡಿಕೊಳ್ಳುವಷ್ಟು ಹೇಡಿತನದ ವ್ಯಕ್ತಿತ್ವ ಅವರದಲ್ಲ. ಆದರೂ.....ಕರಿಯಪ್ಪನವರನ್ನು ನಿರೀಕ್ಷಿಸಿದ್ದ ಅವರ ಕುಟುಂಬದವರು, ವಾಪಸ್ ಬಂದ ಮೇಷ್ಟ್ರುಗಳನ್ನು ಮಾತ್ರ ನೋಡಿ ಅವರಿಗೂ ಶಾಕ್ ಆಯಿತು. ಮತ್ತೊಮ್ಮೆ ಹೆಂಡತಿ, ಮಕ್ಕಳ ದುಖದ ಕಟ್ಟೆ ಒಡೆದು ಬೀದಿಗೆಲ್ಲ ಹರಡಿತು. ಸಮಾಧಾನ ಮಾಡುವ ಶಕ್ತಿ ಕಳೆದುಕೊಂಡಿದ್ದ ಉಪಾಧ್ಯಾಯರಿಬ್ಬರು ಏನು ಮಾಡಲು ತೊಚದೆ ಮಾತಿಲ್ಲದೆ ಹೊರಗೆ ನಡೆದರು.ಯಾಕಿಷ್ಟು ತಮ್ಮ ತಾಳ್ಮೆಯ ಪರಿಕ್ಷೆ ಆಗುತ್ತಿದೆ? ಸತತವಾಗಿ ಊಟ ನೀರಿಲ್ಲದೆ ಹುಡುಕಿದರೂ ಕಣ್ಣಾ ಮುಚ್ಚಾಲೆಯ ಆಟ ಮುಗಿಯುತ್ತಿಲ್ಲ....

ಓ....ಗಾಡ್.....ಈಟ್ ಈಸ್ ಎನಫ್.....ಎಂದು ನಿಸ್ಸಹಾಯಕರಾಗಿ ದೇವರ ಮೊರೆ ಹೋದರು ಎಮ್.ಜಿ.ಆರ್.

ದಿಕ್ಕು ತೋಚದ, ಎಮ್.ವಿ.ಎಸ್. ಆದದ್ದಾಗಲಿ ಎಂಬ ಸಾಂದರ್ಭಿಕ ವೈರಾಗ್ಯಕ್ಕೆ ಶರಣು ಹೋಗಿ, ತನ್ನ ಸಹೋದ್ಯೋಗಿ ಎಮ್.ಜಿ.ಆರ್ ಅವರನ್ನು ಎಳೆದು ಕೊಂಡು ಮುಖ್ಯ ರಸ್ತೆಗೆ ಬಂದು, ಫುಟ್ ಪಾತ್ ನಲ್ಲಿ ಕಟ್ಟೆಯಮೇಲೆ ಆಸ್ಟ್ರಿಚ್ ಪಕ್ಷಿಯಂತೆ ಎರಡು ಮೊಳಕಾಲುಗಳ ನಡುವೆ ತಲೆಯಿಟ್ಟು ಕುಳಿತು ಕೊಂಡರು. ಸಿಗರೇಟನ್ನೂ ಮರೆಯುವಷ್ಟು ದುಖ, ಬೇಸರ, ಖಿನ್ನತೆ ಮತ್ತು ಅವ್ಯಕ್ತ ನಿರಾಶಾಭಾವನೆಗಳು ಎಮ್.ವಿ.ಎಸ್.ಅವರನ್ನು ಆವರಿಸಿತ್ತು. ಸಮಯ ಸರಿಯುತ್ತಿತ್ತು ನಿಧಾನವಾಗಿ ತನ್ನದೆ ಗತಿಯಲ್ಲಿ ಯಾರನ್ನು ಲೆಕ್ಕಿಸದೆ.....

ಎಷ್ಟೇ ಕಳೆದುಕೊಂಡ ದುಖವಾಗಲಿ, ಏನನ್ನೇಆಗಲಿ, ಅನಿರೀಕ್ಷಿತವಾಗಿ ಪಡೆಯುವುದರಿಂದ ಉಂಟಾಗುವ ಸಂತಸ, ಸಂಭ್ರಮಗಳಾಗಲಿ, ಅಥವಾ ಯಾವುದೇ ತೀವ್ರ ಭಾವನೆಗಳಿಂದ ಮನಸ್ಸಿನಲ್ಲಿ ಉಳಿಯುವ ವೈರಾಗ್ಯಭಾವ ಕ್ಷಣಕಾಲ ಮಾತ್ರ. ಆತಿ ದುಖದಿಂದಾಗುವ ಸ್ಮಶಾನ ವೈರಾಗ್ಯ ಸಹಾ ದೇಹದ ಅವಶ್ಯಕತೆಗಳೊಂದಿಗೆ ಛಾಲೆಂಜ್ ಮಾಡುವುದಿಲ್ಲ. ದೇಹದ ಎಲ್ಲಾ ಸಹಜ ಪ್ರವೃತ್ತಿಯ ಬೇಕುಗಳು ಮನಸ್ಸಿನ ಸುಖವನ್ನಾಗಲಿ, ದುಖ ವನ್ನಾಗಲಿ ಬಹಳ ಕಾಲ ಮರೆಸಲು ಸಾದ್ಯವಿಲ್ಲ. ಕೆಲವೊಮ್ಮೆ, ಸಮಾಜದ ರೀತಿ ನೀತಿಗಳ ಯಾಂತ್ರಿಕ ಆಚರಣೆಯಿಂದ ಅಥವ ಅನುಕರಣೆಯಿಂದ ಪ್ರಾಯಶಹ ನಮ್ಮ ದೇಹ ಕೆಲವು ಗಂಟೆಗಳು, ಹೆಚ್ಚೆಂದರೆ ಕೆಲವು ದಿನಗಳು ಬಲವಂತದಿಂದ ಹಸಿವು, ನಿದ್ರೆ, ನೀರಡಿಕೆ ಹಾಗು ಸಾಮಾನ್ಯ ದೈನಂದಿಕ ಚಟುವಟಿಕೆಗಳಿಂದ ದೂರವಿರುವಂತೆ ಮಾಡಬಹುದು.ಆದರೆ ಜೈವಿಕ ಗಡಿಯಾರ ಎಲ್ಲಾ ಕ್ರಿಯೆಗಳನ್ನೂ ಮರೆಯದಂತೆ ಎಚ್ಚೆರಿಸಿ ದೈನಂದಿಕ ಸರ್ಕ್ಯಾಡಿಯನ್ ತಾಳಗತಿಯನ್ನು ನಿರ್ವಹಿಸುತ್ತದೆ. ಎಮ್.ವಿ.ಎಸ್,ಮತ್ತು ಎಮ್.ಜಿ.ಆರ್. ಮೇಷ್ಟ್ರುಗಳೂ ಸಹಾ ಜೀವಪ್ರಭೇದಗಳಿಗಿಂತ ಭಿನ್ನವಾಗಿರಲಿಲ್ಲ. ಮೂರುದಿನದ ಆಘಾತಕಾರಿ ಘಟನೆಗಳು ಸ್ಥೈರ್ಯವನ್ನು ಕುಗ್ಗಿಸಿತ್ತಾದರು, ಸಂಪೂರ್ಣ ಸಮಯಪ್ರಜ್ನೆಯನ್ನು ಕಳೆದುಕೊಂಡಿರುವಂತೆ ಮಾಡಿರಲಿಲ್ಲ. ಉರಿಸುತ್ತಿದ್ದ ಸಿಗರೇಟನ್ನು ಹೊಸುಕಿಹಾಕಿ, ಎಮ್.ವಿ.ಎಸ್.ಎದ್ದು ಮಾತಿಲ್ಲದೇಮೌನವಾಗಿ ಚಡಪಡಿಸುತ್ತಿದ್ದರು. ಉಪಾದ್ಯರಿಬ್ಬರು ಕರಿಯಪ್ಪನವರ ಬರುವಿಕೆಗೆ ಕಾದು, ಕಾದು ಸಾಕಾಗಿ, ಏನೂ ಮಾಡಲು ತೋಚದೆ ಹೋಟೆಲ್ ಗೆ ಹೋಗಿ ಕಾಫಿ ಕುಡಿದು ಬೇಗ ಹಿಂದಿರುಗಿ, ರಸ್ತೆಯ ಮೊದಲು ಕುಳಿತ ಜಾಗದಲ್ಲೇ ಕುಳಿತುಕೊಂಡರು. ಗಂಟೆ ಎಂಟಾದರೂ ಎಲ್ಲಾ ಅಂಗಡಿಗಳ ಬಾಗಿಲು ಇನ್ನೂ ತೆರೆದಿರಲಿಲ್ಲ. ಕರಿಯಪ್ಪನವರ ಮನೆಯಲ್ಲಿ ಯಾವ ಚಟುವಟಿಕೆ ಇಲ್ಲದೆ, ಭೀಕರ

ನೀರವತೆ ಆವರಿಸಿತ್ತು. ಜನಗಳ ಓಡಾಟ ಆರಂಭವಾಗಿ, ಸಣ್ಣ ಗುಂಪೊಂದು ಅವರ ಮನೆ ಮುಂದೆ ಜಮಾಯಿಸಿತ್ತು...

ರಸ್ತೆಯಲ್ಲಿ ಫುಟ್ ಪಾತ್ ಮೇಲೆ ಕುಳುತ ಎಮ್.ವಿ.ಎಸ್. ಕಾತುರದಿಂದ ಟೆನ್ನೀಸ್ ಪಂದ್ಯ ನೋಡುವ ವೀಕ್ಷಕರಂತೆ ರಸ್ತೆಯ ಎರಡೂ ಪಕ್ಕಗಳಿಗೂ ತಲೆ ತಿರುಗಿಸುತ್ತಾ ಕರಿಯಪ್ಪನವರ ಬರುವಿಕೆಗಾಗಿ ಕಾಯುತ್ತಿದ್ದರು. ಸಾವಿನ ಮನೆಯ ಮುಂದೆ ನೆರೆದಿದ್ದ ಜನ ಈಗ ಹೆಚ್ಚಾಗಿದ್ದರು. ಅವರೆಲ್ಲರೂ ರಸ್ತೆಯ ಬದಿಯಲ್ಲಿ ಫುಟ್ ಪಾತ್ ಮೇಲೆ ಕುಳಿತ ಉಪಾದ್ಯಾಯರಿಬ್ಬರನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು. ಆವೇಶದಲ್ಲಿ ಏನನ್ನೋ ತಮ್ಮ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ಅನಿಸಿ ಸ್ವಲ್ಪ ಅಧೀರರಾದರು ಮೇಷ್ಟ್ರುಗಳಿಬ್ಬರು. ಮನೆಯ ಮುಂದೆ ನೆರೆದ ಜನಗಳ ಗುಂಪಿನಲ್ಲಿ ಕೋಪ ಇದ್ದುದು ಸ್ಪಷ್ಟವಾಗಿ ಕಂಡುಬರುತ್ತಿತು.ಆದರೆ,ಕಾರಣ ತಿಳಿಯದೆ ಗೊಂದಲಮಯವಾಗಿತ್ತು ಅವರಿಬ್ಬರ ಮನಸ್ಸು. ಜನಗಳ ಗುಂಪು ಇವರಕಡೆಯೇ ಬರುತ್ತಿತ್ತು. ಹತ್ತಿರಬಂದ ಗುಂಪಿನಲ್ಲಿ ಒಬ್ಬ ವ್ಯಕ್ತಿ ಹೇಳುತಿದ್ದ "ಅವನೆ ಕಣ್ರೋ ನೆನ್ನೆ ಮನೆಗೆ ಹೊದ್ರೆ, ಬಾಯಿಗೆಬಂದಹಾಗೆ ಮಾತಾಡಿ ಕಳ್ಸಿದ್ದಾನೆ, ಈಗ ಇಲ್ಲಿಗೆ ಯಾಕೆ ಬಂದಿದ್ದಾನಂತೆ?.... ನಡೀರೀ ಸರಿಯಾಗಿ ಬುದ್ದಿ ಕಲಿಸುವ ನನ್ ಮಗನ್ ಗೆ" ಎನ್ನುತ್ತಾ ದಾವಿಸಿಬಂದರು. ಎಮ್.ವಿ.ಎಸ್.ಗೆ ಅಪಾಯ ಕಾದಿದೆ ಎನ್ನುವುದು ಖಾತ್ರಿ ಯಯಿತು. ಮೊದಲೇ ಎಲ್ಲ ಸಂದರ್ಭಗಳನ್ನು ನಿರೀಕ್ಷಿಸಿದ್ದುದರಿಂದ, ನಿಧಾನವಾಗಿ ಮೇಲೆದ್ದರು. ಸಮೀಪಿಸಿದ ಗುಂಪಿನಲ್ಲಿ ಕೆಂಪು ಶರ್ಟ್ ಹಾಕಿಕೊಂಡ ಒಬ್ಬ ಕಟ್ಟುಮಸ್ತಾದ ಆಳು,ಎಮ್.ವಿ.ಎಸ್. ಬಳಿ ಬಂದು...."ಏನ್ರಿ..ಹುಡುಗನ್ನ ಸಾಯಿಸಿ, ಮನೆಗೆ ಬಂದ್ ಕೇಳಿದರೆ.. ಗೊತ್ತಿಲ್ಲ ಅನ್ತಿಯಾ...ಏನ್ ನೋಡ್ತೀರೋ ಹಾಕ್ರೊ,...ನಾಲ್ಕು ಬಾರಿಸ್ರೋ" ಎಂದು ಎಮ್.ವಿ.ಎಸ್. ಅವರ ಕತ್ತಿನ ಪಟ್ಟಿ ಹಿಡಿದು, ಹೊಡೆಯಲಾರಂಭಿಸಿದರು. ಕೋಪಗೊಂಡ ಗುಂಪನ್ನು ಎದುರಿಸುವ ಮಾನಸಿಕ ಸ್ಥಿರತೆ ಯಾಗಲಿ, ಅಥವ ದೈಹಿಕ ಶಕ್ತಿಯಾಗಲಿ ಕಿಂಚಿತ್ತೂ ಉಳಿದಿರಲಿಲ್ಲ. ವಿರೊದಿಸದೆ, ಸುಮ್ಮನೆ ಹೊಡೆತಗಳಿಗೆ ಮೈಒಡ್ಡಿದ್ದರು ಎಮ್.ವಿ.ಎಸ್, ನಿಸ್ಸಹಾಯಕರಾಗಿ. ತಮ್ಮ ಸಹೋದೋಗಿಯನ್ನು ಬಿಡಿಸಲು,ಎಮ್.ಜಿ.ಆರ್, ಮಾಡಿದ ಪ್ರಯತ್ನ ವಿಫಲ ವಾಯಿತು. ಅವರನ್ನು ಪಕ್ಕಕ್ಕೆ ತಳ್ಳಿದರು. ಆಶ್ಚರ್ಯ ಎಂದರೆ ಇದುವರೆವಿಗೂ ಕಾಡುತ್ತಿದ್ದ ಭಯ ಮಾಯವಾಗಿ, ಏನನ್ನಾದರೂ ಎದಿರಿಸುವ ಒಂದು ಕೆಟ್ಟ ಧೈರ್ಯ ಬಂದಿತ್ತು ಆ ಕುಂಟು ಎಮ್.ವಿ.ಎಸ್, ಅವರಿಗೆ.

ಆ ಗುಂಪಿನಲ್ಲಿ ಯಾರೋ ಒಬ್ಬ,

",...ನಿಲ್ಲಿಸ್ರೋ....ಅವರು...ನಮ್ ಮೇಷ್ಟ್ರು...ಎಮ್.ವಿ.ಎಸ್..... ಸ್ಕೂಲ್ ಡೈರೆಕ್ಟರ್ ಅಲ್ಲ... ನೀವ್ ಅಂದುಕೊಂಡ ಹಾಗೆ... ಮಾಸ್ಠ್ರು ರಾತ್ರಿಯೆಲ್ಲ ಕರಿಯಪ್ಪನನ್ನು ಹುಡುಕೊಂಡುಹೋಗಿ ಈಗ್ ಬಂದಿದ್ದಾರೆ...ಪಾಪ" ಎಂದು ಸಿಟ್ಟಿನಿಂದಲೇ ಜೋರಾಗಿ ಹೇಳಿದಾಗ, ಗುಂಪಿನ ಗಲಾಟೆ, ತಕ್ಷಣ ಗುಸು, ಗುಸು ಸದ್ದಾಗಿ ಬದಲಾಯಿತು. ಕೆಂಪು ಶರ್ಟ್ ಹುಡುಗ ತಕ್ಷಣ ತನ್ನ ಕೈ ಅನ್ನು ಮೇಷ್ಟ್ರ ಕತ್ತಿನಿಂದ ಸರಿಸಿದ.

"ಸಾರ್...ಹೇಳ್ಬೇಕೊ ಇಲ್ವೋ ನೀವು, ನಮ್ಗೇನ್ ಗೊತ್ತು? ನಿಮ್ಮ ಡೈರೆಕ್ಟರ್ ವಿಷಯತಿಳ್ಕೊಬೇಕು ಅಂತ, ಮನೆ ಹತ್ತಿರ ಹೋದರೆ, ಒಳಗೇ ಇದ್ದ್ಕೊಂಡು ಇಲ್ಲಾ ಅಂತ ಹೇಳ್ ಕಳಿಸಿದರು...ಸಾರ್.....ನಿಮ್ಮ್ ಹೆಸರು ನಿಮ್ ಡೈರೆಕ್ಟರ್ ಹೆಸರು ಒಂದೇ ಆಗಿ...ಎಡ್ವಟ್ ಆಯ್ತು ಸಾರ್...."

ಎಂದು ಕೆಂಪು ಶರ್ಟಿನ ಹುಡುಗ ಹೇಳಿ ಗುಂಪನ್ನು ಚದುರಿಸಿ,ಎಮ್.ವಿ.ಎಸ್. ಅವರ ನಿಜವಾದ ಅಸ್ತಿತ್ವನ್ನು ತಿಳಿಸಿ, ಮಾಷ್ಟ್ರನ್ನು ಸಾರ್ವಜನಿಕರ ಕೋಪದಿಂದ ರಕ್ಷಿಸಿದ ಆದಿಶೇಷನನ್ನು ಉದ್ದೇಶಿಸಿ ಹೇಳಿದ..

"ಗೊತ್ತಾಗ್ಲಿಲ್ಲ ಕಣಣ್ಣ.." ಮತ್ತೆ ಮೇಷ್ಟ್ರು ಕಡೆ ನೋಡಿ ಹೇಳಿದ.

"ಎಲ್ಲಿ ಸಾರ್, ಜಾಸ್ತಿ ಹೊಡೆತ ಬಿದ್ದಿಲ್ಲತಾನೆ? ನಮ್ಮಣ್ಣ ಬೇಗ್ ಹೇಳ್ದ ಸರಿಹೋಯ್ತು....ಇಲ್ಲಂದ್ರೆ ಸಾರ್...."

"ಅಲ್ಲಯ್ಯ ಆ ಡೈರೆಕ್ಟರ್ ಎಪ್ಪತ್ತು ವರ್ಷದ ಮುದ್ಕ್ರು....ಈ ಸಾರ್ ಹಂಗ್ ಕಾಣ್ತಾರ? ಸ್ವಲ್ಪ ಯೋಚನೆ ಮಾಡ್ಬೇಕು, ಆಯ್ತು ನೀವೆಲ್ಲಾ ಹೊರಡಿ... ಸಾರ್...ಬನ್ನಿ..ಸಾರ್..(ಎಮ್.ಜಿ.ಆರ್,ಕಡೆ ನೋಡಿ) ನೀವು ಬನ್ನಿ, ನಿಮ್ ಅವಸ್ತೆ ನೋಡಿ ಹೆಂಗಾಗಿದೆ?" ಆದಿಶೇಷ ತನ್ನ ಶಾಲ ಮಾಷ್ಟ್ರುಗಳ ಕರುಣಾಜನಕ ಸ್ಥಿತಿಯನ್ನು ಕಂಡು ಮರುಕದಿಂದ ಹೇಳಿದ. ಅಷ್ಟರಲ್ಲಿ, ಹೊರಗಿನ ಆ ಉದ್ವಿಗ್ನ ಸ್ಥಿತಿ, ಗಲಾಟೆಯನ್ನು ಕೇಳಿ ಕರಿಯಪ್ಪನವರ ತಮ್ಮ ಓಡಿ ಬಂದು ಹರಿದ ಬಟ್ಟೆ, ಕೆದರಿದ ಕೂದಲು, ನಿರ್ಭಾವ ಮುಖದ ಎಮ್.ವಿ.ಎಸ್, ಅವರನ್ನು ಕಂಡು

"ಏನ್ ಸಾರ್..ಇದು, ಬನ್ನಿ ಒಳಗೆ"ಅಂತ ಕರೆದರು.
"ಇಲ್ಲ ಸಾರ್, ಬಿಡಿ, ಪರವಾಗಿಲ್ಲ,ಇನ್ನೇನು, ಕರಿಯಪ್ಪನವರು ಬರಬಹುದು...ನಂಗೇನು ಆಗಿಲ್ಲ, ಇನ್ನೆರಡು ನಿಮಿಷ ಇಲ್ಲೇ ಕುತ್ತ್ಕೊಳ್ತೀವಿ" ಎಂದ ಎಮ್.ವಿ.ಎಸ್, ಮಾತಿಗೆ ಹೌದು ಎಂದು ತಲೆಯಾಡಿಸಿದರು ಎಮ್.ಜಿ.ಆರ್.

ಇಬ್ಬರಿಗೂ ಒಳಗೆ ಹೋಗಿ ಆ ನೊಂದಜೀವಗಳನ್ನು ನೋಡಿ ಸಂತೈಸುವ ತಾಳ್ಮೆಯಾಗಲಿ,ಧೈರ್ಯವಾಗಲಿ ಇರಲಿಲ್ಲ, ಅದರಬದಲು ರಸ್ತೆಯಲ್ಲೇ ಇದ್ದು ಜನಗಳಿಂದ ಮತ್ತೆರಡು ಹೊಡೆತಗಳನ್ನು ತಿನ್ನಲು ಸಿಧ್ದವಾಗಿದ್ದರು.

ಗುಂಪು ಚದುರಿ ರಸ್ತೆಯಲ್ಲಿನ ಜನಸಂದಣಿ ಯಥಾ ಸ್ಥಿತಿಗೆ ಬಂದ ನಂತರ ಮತ್ತೇ ಆ ಫುಟ್ ಪಾತಿನ, ಆ ಜಾಗದಲ್ಲೇ ಕುಳಿತುಕೋಂಡು ಕೋಳಿಗಳಂತೆ ಕತ್ತನ್ನು ಹೊರಳಿಸುತ್ತಾ, ಕರಿಯಪ್ಪನವರನ್ನು ಕಾಯುತ್ತಾ...ನಿಶ್ಚಲನಿಂತ ಸಮಯವನ್ನು ಶಪಿಸುತ್ತಾ, ಅರ್ಥವಾಗದ ರಸ್ತೆಯನ್ನು ದಿಟ್ಟಿಸುತ್ತಿದ್ದರು. ರಸ್ತೆಯ ಎಡ ಪಕ್ಕಕ್ಕೆ ಹೊರಳಿತು ಎಮ್.ವಿ.ಎಸ್, ಅವರ ಕತ್ತು ಯಾಂತ್ರಿಕವಾಗಿ.....
ಕರಿಯಪ್ಪ ಕಡೆಗೆ ಪ್ರತ್ಯಕ್ಷ ವಾಗಿದ್ದರು....
ದೂರದಿಂದಲೇ ಅವರನ್ನು ನೋಡಿ ಎಮ್.ವಿ.ಎಸ್,ನಿಬ್ಬೆರಗಾದರು. ನಾಲ್ಕೈದು ದಿನಗಗಳಲ್ಲೇ ಅವರಲ್ಲಿ ಅಗಾಧ ಬದಲಾವಣೆಗಳಾಗಿತ್ತು. ದೇಹ ಬಾಗಿತ್ತು, ಯಥಾ ಪ್ರಕಾರ ಎರಡೂ ಕೈಗಳು ಬೆನ್ನ ಹಿಂದೆ ಜೋಡಿಸಿದ್ದರೂ, ತಲೆ ತಗ್ಗಿತ್ತು. ನಡಿಗೆ ನಿದಾನವಾಗಿ, ನೋಟ ಶೂನ್ಯವಾಗಿ, ಮುಖದಲ್ಲಿ ನೆರಿಗೆಗಳು ರಾತ್ರೋ ರಾತ್ರಿ ಹೆಚ್ಚಾದಂತೆ ಕಂಡಿತು... ಆತ್ಮ ವಿಶ್ವಾಸದಿಂದ, ನ್ಯಾಯ, ಹಕ್ಕಿಗಾಗಿ, ಹೋರಾಟಗಾರನಾಗಿದ್ದ ಅದೇ ಕರಿಯಪ್ಪನವರಾ? ನಡೆದುಕೊಂಡುಬರುತ್ತಿರುವ ಆ ವ್ಯಕ್ತಿ? ಎಮ್.ವಿ.ಎಸ್,ಗೆ ಅರಿವಿಲ್ಲದೆ ಸಂಕಟ,ನೋವು ಮತ್ತು ಭುಗಿಲೆದ್ದ ಹೆದರಿಕೆ ಯಿಂದ ಏನು ಮಾಡಲು ತೋಚದೆ, ಸುಮ್ಮನೆ ಎದ್ದು ನಿಂತರು. ಯಾರ ಬರುವಿಕೆಗಾಗಿ ಮೂರುದಿನಗಳಿಂದ ಹೃದಯ ಹಾತೊರೆಯುತ್ತಿತ್ತೋ.... ಅದೇ ವ್ಯಕ್ತಿ ಎದುರಿಗೆ ಬಂದಾಗ ಈಗ ಅಲ್ಲಿಂದ ಓಡಿಹೋಗಬೇಕೆನಿಸಿತು ಕುಂಟು ಎಮ್.ವಿ.ಎಸ್,ಗೆ. ತಮ್ಮ ಈ ಅನಿರೀಕ್ಷಿತ ಭಾವನೆಗೆ ಅವರಲ್ಲಿ ಉತ್ತರವಿರಲಿಲ್ಲ. ಪ್ರಾಯಶಹ...ಪಲಾಯನ ವಾದಿ ತಾವು ಎಂದುಕೊಂಡರು.

ಹತ್ತಿರ ಬಂದರು, ಎದುರಿಗೆ ರಸ್ತೆಯಲ್ಲಿ ನಿಂತಿದ್ದ ಮಾಷ್ಟ್ರನ್ನು ನೋಡಿದರು. ಉಪಾದ್ಯಾಯರಿಬ್ಬರೂ ನಿಂತ ಜಾಗದಿಂದ ಕದಲುವ ಸ್ಥಿತಿಯಲ್ಲೂ ಇರಲಿಲ್ಲ.....ಕರಿಯಪ್ಪನವರ ನಿಧಾನ ನಡಿಗೆ ಜೋರಾಗಿ, ಕ್ಷಣದಲ್ಲಿ ಓಟವಾಗಿ, ಎಮ್.ವಿ.ಎಸ್ ಬಳಿ ಬಂದು, ಮುಖ ಮುಚ್ಚಿಕೊಂಡು ಜೋರಾಗಿ, ಬಿಕ್ಕಿ,ಬಿಕ್ಕಿ ಅಳಲಾರಂಭಿಸಿ, ಮಧ್ಯದಲ್ಲೇ ಅಸ್ಪಷ್ಟ ಮಾತುಗಳನ್ನು ಹೊರಹಾಕಲು ಶುರುಮಾಡಿ, ಇದ್ದಕ್ಕಿದ್ದಂತೆ ಕುಸಿದರು ಮೇಷ್ಟ್ರ ಕಾಲ ಬಳಿ....

"ಕರಿಯಪ್ಪನವರೆ...ಏನ್ ಮಾಡ್ತಾ ಇದೀರ? ನೀವ್, ದೊಡ್ಡವರು....ಧರ್ಯ ತಂದ್ಕೊಳ್ಳಿ" ಎಂದು ನಿಸ್ಸಾಹಯಕರಾಗಿ ತೊದಲಿದರು..

"ನಾನೆ ನನ್ ಮಗನನ್ನ ಕಯ್ಯಾರೆ ಕೊಂದೆ...ಸಾರ್, ನೀವು ಎಷ್ಟು ಹೇಳಿದರೂ, ಸಾಯೋಕ್ಕೆ ನಿಮ್ ಜೊತೆ ಕಳಿಸಿದೆ...ನೀವಿದ್ದೂ ನನ್ ಮಗ ಕೀರ್ತಿ ನಿರ್ ಪಾಲಾದ ಅಂದರೆ ನಾನೇನ್ ಮಾಡ್ಲಿ...? ದೇವರೇ..ನನಗ್ಯಾಕಪ್ಪ..ಈ ಶೀಕ್ಷೆ?...ಯಾಕ್ ಹಿಂಗೆ ಮಾಡ್ದಿ? ಕೀರ್ತಿ? ಅಲ್ಲಿಗೆ ಹೋಗಿ ಯಾಕೆ ಸತ್ತಿ?"

ಕರಳು ಕಿತ್ತು ಬಂದಂತಾಗಿ, ಎಮ್.ವಿ.ಎಸ್ ಬಗ್ಗಿ, ಕರಿಯಪ್ಪನವರನ್ನು ಮೇಲೆತ್ತಿ, ಬಲವಾಗಿ ಅವರ ಮುಖವನ್ನು ತಮ್ಮ ಎದೆಯೊಳಗೆ ಅವುಚಿ ತಬ್ಬಿಕೊಂಡರು. ಅವರ, ಅಸ್ಪಷ್ಟ ಮಾತುಗಳು ಕಡಿಮೆಯಾದರೂ ಅವರ ಅಳು ಮತ್ತು ಕಣ್ಣೀರು ಹರಿಯುತ್ತಿತ್ತು. ಅದುಮಿಟ್ಟ ದುಖದ ಕಟ್ಟೆ ಒಡೆದು ದೀನತೆ, ನಿಸ್ಸಾಹಯಕತೆಯ ಪ್ರವಾಹ ಹರಿದಿತ್ತು..

ಎತ್ತರ ಮೈಕಟ್ಟಿನ ಎಮ್.ವಿ.ಎಸ್, ಅವರ ಗದ್ದ, ಕರಿಯಪ್ಪನವರ ತಲೆಯ ನೆತ್ತಿಯನ್ನು ಆದರಿಸಿತ್ತು. ಬೆನ್ನು ಸವರುವ, ಎಮ್.ವಿ.ಎಸ್. ಅವರ ಕ್ರಿಯೆ ಕ್ರಮೇಣ ನಿಶ್ಚಲ ಸ್ಥಿತಿಗೆ ಬರುವ ಹೊತ್ತಿಗೆ, ಕರಿಯಪ್ಪನವರ ಅಳು ಕಡಿಮೆಯಾಗಿ ಕೇವಲ ತಾಳಬದ್ದ ಮುಲುಗುವಿಕೆಯ ಮಟ್ಟ ತಲುಪಿತ್ತು. ಇದ್ದಕ್ಕಿದ್ದಹಾಗೆ ಕರಿಯಪ್ಪನವ್ರು, ಎಮ್.ವಿ.ಎಸ್, ಅವರ ಆಲಿಂಗನದಿಂದ ತಪ್ಪಿಸಿಕೊಂಡು ಮನೆಯ ಕಡೆ ಹೆಜ್ಜೆ ಹಾಕಿದ ಕೆಲವೆ ಕ್ಷಣಗಳಲ್ಲಿ, ಮನೆಯ ಮೌನ ಮತ್ತೊಮ್ಮೆ ಕದಡಿ, ಕುಟುಂಬದವರ ಪ್ರಲಾಪ, ಚೀರಾಟ, ಚೀತ್ಕಾರ ಮುಗಿಲು ಮುಟ್ಟಿತು.

ಎಮ್.ವಿ.ಎಸ್.ಗೆ ಏನು ತಿಳಿಯದೆ, ಎಮ್.ಜಿ.ಆರ್, ಅನ್ನು ಎಳೆದುಕೊಂಡು, ಕರಿಯಪ್ಪನವರನ್ನು ಹಿಂಬಾಲಿಸಿ, ಅವರ ಮನೆಯೊಳಗೆ ಹೋದರು. ಹೆಂದತಿ,ಮೂರು ಹೆಣ್ಣು ಮಕ್ಕಳು,ತಮ್ಮಂದಿರು ಹಾಗೂ ಇನ್ನೂ ಕೆಲವು ಅಪರಿಚಿತ ಮುಖಗಳು ಅಲ್ಲಿ ಕಂಡಿತು. ಮಕ್ಕಳು ಅತ್ತೂ..ಅತ್ತೂ ಸುಸ್ತಾದಂತಿತ್ತು. ಆಗತಾನೆ ತಮ್ಮ ಮನೆಯನ್ನು ಪ್ರವೇಶಿಸಿದ ವ್ಯಕ್ತಿಗಳನ್ನು ನೋಡಿ ತಲೆ ತಗ್ಗಿಸಿದರು. ಯಾರನ್ನೂ ಗಮನಿಸದೆ, ತಲೆ ತಗ್ಗಿಸಿಯೇ ಜೋಗದಲ್ಲಿ ನಡೆದ ಎಲ್ಲಾ ಘಟನೆಗಳನ್ನು ವಿವರವಾಗಿ ಹೇಳಿ ಬಾಡಿ ಆ ರಾತ್ರಿಯೇ ಮೇಲೆಬರಬಹುದು ಎಂದು ಪೋಲೀಸ್ ತಿಳಿಸಿರುವುದಾಗಿ ಹೇಳಿ ಸುಮ್ಮನಾದರು. ಯಾರು ಮಾತನಾಡಲಿಲ್ಲ. ಮುಂದುವರೆದ ಆ ಅಸಹನೀಯ ನಿಶ್ಯಬ್ಧತೆಯನ್ನು ಮುರಿದು, ಎಮ್.ವಿ.ಎಸ್, ಹೇಳಿದರು

"ಕರಿಯಪ್ಪ ಅವ್ರೇ...ನಾವೀಗ ಹನ್ನೊಂದುವರೆ ಬಸ್ ನಲ್ಲಿ ಜೋಗಕ್ಕೆ ಹೊರಟಿದ್ದೀನಿ, ನೀವು ಬರಬೇಕು...." ಅವರ ಉತ್ತರಕ್ಕೂ ಕಾಯದೆ, "ನಿಮ್ಮ ಜೊತೆ ನಿಮ್ಮ ಜನಗಳು ಯಾರಾದರೂ ಬರಬಹುದು" ಮುಂದುವರೆಸಿದರು.

ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ.

"ಎಲ್ಲರೂ ಅಲ್ಲಿ ನಿಮಗೋಸ್ಕರ ಕಾಯುತ್ತಿದ್ದಾರೆ. ನಾನು ಮನೆಗೆ ಹೋಗಿ, ಬಟ್ಟೆ ಬದಲಾಯಿಸಿಕೊಂಡು ಬರ್ಲಾ?" ಕರಿಯಪ್ಪ ಆಗಲಿ ಎನ್ನುವಂತೆ ತಲೆಯಾಡಿಸಿ ತಮ್ಮ,ತಮ್ಮನ ಕಡೆ ನೋಡಿದರು. ಮೌನ ಸಮ್ಮತಿ ದೊರೆತದ್ದೇ ತಡ, ಮೇಷ್ಟ್ರಿಬ್ಬರೂ, ಹೊರಗೆ ಓಡಿದರು. ಆಲ್ಲಿಗೆ, ಎಮ್.ಜಿ.ಆರ್, ಅವರ ಕಾರ್ಯ ಕೊನೆಗೊಂಡು ತಮ್ಮ ಜವಾಬ್ದಾರಿ ಮುಗಿದಿರುವುದರಿಂದ ತಾವು ಇನ್ನು ಮನೆಗೆ ಹೋಗಬಹುದಾ ಎಂದು ಕೇಳಿದಾಗ, ಬೆಪ್ಪಾಗಿ ಎಮ್.ವಿ.ಎಸ್, ಆಯಿತು ಎಂದು ಹೇಳಿ ತಾವು ಸಹಾ ಬಟ್ಟೆ ಬದಲಿಸಲು ಮನೆಗೆ ಹೊರಟರು.....

ಸಂಜೆ ಜೋಗ್ ತಲುಪಿದಾಗ ಗಂಟೆ ಎಂಟೂವರೆ ಆಗಿತ್ತು.....

ಪ್ರಯಾಣ ತುಂಬಾ ಕೆಟ್ಟದಾಗಿತ್ತು. ಮಗನನ್ನು ಕಳೆದುಕೊಂಡ ಅಪ್ಪ, ಅವರ ತಮ್ಮ-ಚಿಕ್ಕಪ್ಪ. ಮಾತನಾಡುವ ವಿಷಯ ಯಾವುದೂ ಇಲ್ಲ. ಮಾತು ಆರಂಭಿಸಿದರೂ ಕೊನೆಗೆ ಆ ಸಂಭಾಷಣೆ ಕೀರ್ತಿಯ ಸಾವಿನಲ್ಲೇ ಅಂತ್ಯಗೊಳ್ಳಬೇಕಾಗಿತ್ತು. ಸಿಗರೇಟ್ ಬಿಟ್ಟರೆ ಟೈಮ್ ಪಾಸ್ ಗೆ ಏನು ಇಲ್ಲ. ಮನೆಗೆ ಹೋದ ಎಮ್.ವಿ.ಎಸ್, ಸ್ನಾನವನ್ನೂ ಮಾಡದೆ, ಬಟ್ಟೆ ಬದಲಾಯಿಸಿಕೊಂಡು ಆತುರದಿಂದ ಬಂದುಬಿಟ್ಟಿದ್ದರು. ಕಾರಣ...ಮನಸ್ಸಿನ ಅವ್ಯಕ್ತ ಚಡಪಡಿಕೆ. ಅನುಭವಿಸಲಾಗದ ಸಂಕಟ. ಯಾವುದಕ್ಕೂ ಮನಸ್ಸು ಒಪ್ಪದೆಇರುವ ಸ್ಥಿತಿ. ಕೆಲಸ ಮತ್ತು ತಮ್ಮ ಮೇಲಿನ ಜವಾಬ್ದಾರಿತನದ ಹೊರೆ ಬೇರೆ. ಅದರಿಂದ ಮುಕ್ತಿ ಸಿಗುವುದು ಇನ್ನೂ ಬಹು ದೂರ. ಸಿಗರೇಟ್ ಕರಿಯಪ್ಪ್ನವರಿಗೆ ಕೊಟ್ಟಾಗ, ತಮಗೆ ಬೀಡಿಯೇ ಸರಿ ಎಂದು ನಿರಾಕರಿಸಿದ್ದರು. ಬಲವಂತ ಮಾಡುವ ವಿಷಯವಂತೂ ಅದು ಆಗಿರಲಿಲ್ಲ. ವಿಚಿತ್ರ, ದುಖದಲ್ಲಿ ನಾವು ಊಟ, ತಿಂಡಿ ಇತ್ಯಾದಿ ಬಿಟ್ಟು ನಮ್ಮ ಸಂಬಂಧವನ್ನು ಜಗತ್ ಜಾಹಿರ ಗೊಳಿಸುತ್ತೇವೆ. ಆದರೆ ಕೆಟ್ಟ ಅಂಟಿದ ಅಭ್ಯಾಸಗಳನ್ನು ಸಾಮಾನ್ಯ ಸನ್ನಿವೇಶಗಳಿಗಿಂತ ಹೆಚ್ಚು ಮಾಡುತ್ತೇವೆ. ಅದಕ್ಕೆ ಯಾವ ಪಾಪ ಪ್ರಜ್ನೆಯೂ ಕಾಡುವುದಿಲ್ಲ. ಎರಡು ಕಡೆ, ಪ್ರಯಾಣದಲ್ಲಿ ಅನಿವಾರ್ಯವಾಗಿ ಇಳಿಯಬೇಕಾದುದರಿಂದ ಇಳಿದು ಊಟ ಮತ್ತು ಕಾಫಿ ಮುಗಿಸುವ ಶಾಸ್ತ್ರ ಮುಗಿಸಿದ್ದರು. 9-10 ಗಂಟೆಗಳ ಆಯಾಸದ ಪ್ರಯಾಣದಲ್ಲಿ, ಎಲ್ಲರೂ ತಮಗೆ ಅರಿವಿಲ್ಲದೆ ಅಲ್ಲಲ್ಲಿ ನಿದ್ರೆ ಪೂರೈಸಿದ್ದರು.

ಬಸ್ಸಿನಿಂದ ಇಳಿದ ಮೂವರನ್ನು ಎಚ್.ಎ.ಅರ್, ಬರಮಾಡಿಕೊಂಡರು. ಜೋಗದ ಬಸ್ ನಿಲ್ದಾಣದಲ್ಲಿ ಆ ಹೊತ್ತಿನಲ್ಲಿ ಬಸ್ಸಿನಿಂದ ಬರುವ ಜನಗಳನ್ನು ಬಿಟ್ಟರೆ ಇನ್ನಾವ ನರಪಿಳ್ಳೆಯೂ ಸುಳಿಯುತ್ತಿರಲಿಲ್ಲ. ನಾಲ್ಕು ಹುಡುಗರ ಜೊತೆಯೇ ಎಚ್.ಎ.ಆರ್, ಮತ್ತು ಬಿ.ಆರ್.ಎಸ್. (ಹಿಂದಿನ ದಿನ ಅವರನ್ನು ಬೆಂಗಳೂರಿನಿಂದ ಸಹಾಯಕ್ಕೆಂದು ಕರೆಸಿಕೊಳ್ಳಲಾಗಿತ್ತು) ಅವರುಗಳು ಕರಿಯಪ್ಪನವರನ್ನು ಕರೆದುಕೊಂಡು ಹೋಗಲು ಬಂದಿದ್ದರು. ಇಳಿದ ತಕ್ಷಣ ಎಮ್.ವಿ.ಎಸ್, ಕೀರ್ತಿಯ ಬಾಡಿ ಸಿಕ್ಕಿತೊ ಇಲ್ಲವೊ ಎಂದು ಮಂಜುನಾಥನನ್ನು ಬದಿಗೆ ಕರೆದು ವಿಚಾರಿಸಿಕೊಂಡರು. ಇನ್ನು ಬಾಡಿಗೆ ಕಾಯುವುದೊಂದೆ ಅವರ ಕೆಲಸ ವಾಗಿತ್ತು. ಎಲ್ಲರೂ ನಡೆದುಕೊಂಡೇ ಹಾಸ್ಟೆಲ್ ಬಳಿಗೆ ಬಂದರು. ಆಗ ಎಲ್ಲರ ಮನಸ್ಸಿನಲ್ಲಿದ್ದುದು ಆತಂಕ ಮಾತ್ರ. ಕರಿಯಪ್ಪ ಮತ್ತು ಮುಖ್ಯೋಪಾದ್ಯಾಯನಿ ಶ್ರೀಮತಿ....ಯವರ ನಡುವಿನ ಆ ಆಕಸ್ಮಿಕ ಸಾವಿನ ಘಟನೆಯ ನಂತರದ ಪ್ರಥಮ ಭೇಟಿ.......

ಎಲ್ಲಾ ಟೀಚರ್ ಗಳನ್ನು ಕಾಡುತ್ತಿದ್ದ ಪ್ರಷ್ನೆ ಅಂದರೆ, ಮರಿಯಪ್ಪ, ತಮ್ಮ ಮಗನ ಸಾವನ್ನು ಆಕಸ್ಮಿಕ ಎಂದು ಒಪ್ಪಿಕೊಳ್ಳುತ್ತಾರೆಯೇ? ಒಪ್ಪಿಕೊಂಡರೆ ಪರವಾಗಿಲ್ಲ. ಪೋಲೀಸ್ ಜಂಜಾಟ, ಕೇಸಿನ ರಗಳೆ ಎಲ್ಲದರಿಂದ ತಪ್ಪಿಸಿಕೊಳ್ಳಬಹುದಿತ್ತು. ಅವರು ಒಪ್ಪಿಕೊಳ್ಳದಿದ್ದರೆ ಸಂಶಾಯಸ್ಪದ ಸಾವಾಗಿ ಇಲ್ಲದ ಗೊಂದಲಗಳನ್ನು ಹುಟ್ಟಿಹಾಕುತ್ತಿತ್ತು. ಈ ಆತಂಕ ಎಲ್ಲರಿಗಿಂತ ಎಮ್.ವಿ.ಎಸ್ ಅವರನ್ನು ಹೆಚ್ಚು ಕಾಡುತ್ತಿತ್ತು. ಕಾರಣ, ಬೆಂಗಳೂರಲ್ಲಿ ಕರಿಯಪ್ಪನವರ ತಮ್ಮ ಮತ್ತು ಇತರ ಆಪ್ತರ ನಡುವಿನ ಸಂಭಾಷಣೆ ಆ ರೀತಿ ಯೋಚಿಸುವಂತೆ ಮಾಡಿತ್ತು. ಅಷ್ಟೊಂದು ಮೇಷ್ಟ್ರುಗಳಿದ್ದು,ಆ ಹುಡುಗನ ಸಾವು ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತಿತ್ತು. ಸಾವಿಗೆ ಯಾರು ಹೊಣೆ? ಒಬ್ಬ ತಂದೆಗಾದ ತುಂಬಲಾರದ ನಷ್ಟವನ್ನು ಭರಿಸುವರುಯಾರು. ಉಪಾದ್ಯಾರುಗಳೆ? ಆಡಳಿತ ಮಂಡಳಿಯೆ?ಅಥವ ಪ್ರವಾಸಕ್ಕೆ ಹೋಗಲು ಅನುಮತಿ ಕೊಟ್ಟ ಇಲಾಖೆಯೆ? ಒಟ್ಟಿನಲ್ಲಿ ಆ ಸೂಕ್ಷ್ಮ, ಸಂವೇದನಾಶೀಲ ವಿಷಯ ಹೇಗೆ ಕೊನೆಗೊಳ್ಳುತ್ತದೆ. ಎಂಬ ಹಲವಾರು ಪ್ರಶ್ನೆಗಳು ಕೊರೆಯುತ್ತಿತ್ತು. ಕರಿಯಪ್ಪನವರಿಗೆ ಆ ಸನ್ನಿವೇಶವನ್ನು ಉಪಯೋಗಿಸಿಕೊಳ್ಳುವಂತಹ ಸಲಹೆ ಕೊಡುವ, ಆಫ್ತರು ಬಹಳಷ್ಟಿದ್ದರು. ಕರಿಯಪ್ಪ್ನವರೇನಾದರು ಅವರ ಮಾತು ಕೇಳಿ ಹೆಜ್ಜೆ ಹಾಕಿದರೆ ಶಿಕ್ಷಕರುಗಳಿಗೆ ಆಗಾಗ್ಗೆ ಜೊಗಕ್ಕೆ ಬರುವುದು ಅನಿವಾರ್ಯ ವಾಗುವ ಚಿಂತೆ. ಮೂರು ತಿಂಗಳಲ್ಲಿ ಹುಡುಗರನ್ನು ಪರೀಕ್ಷೆಗೆ ತಯಾರಿ ಮಾಡಬೇಕು. ಸಾವು ಆಕಸ್ಮಿಕ ಎಂದು ಕರಿಯಪ್ಪನವರು ಲಿಖಿತ ಹೇಳಿಕೆ ಕೊಟ್ಟರೆ ಸಾಕು, ಎಂದು ಕೆಲವರು ದೇವರನ್ನು ವ್ಯಸ್ತ. ಎಲ್ಲರಿಗೂ ಗೊತ್ತಿರುವ ವಿಷಯ. ಯಾರಿಗೂ ಏನು ಆಗುವುದಿಲ್ಲ ಎಂದು ವಿಶ್ವಾಸ ಇದ್ದರೂ, ಉದ್ದೇಶಪೂರ್ವಕವಾಗಿ ತೊಂದರೆ ಕೊಡಬೇಕೆಂದೇ ಕರಿಯಪ್ಪನವರು ನೀರ್ದರಿಸಿದರೆ.....? ಎದುರಿಸಲೇ ಬೇಕು ಬಂದದ್ದನ್ನು....ಎಂದುಕೊಂಡು ಯೋಚಿಸುತ್ತಿರುವಂತೆಯೇ ಹಾಸ್ಟೆಲ್ ಮೆಟ್ಟಿಲುಗಳ ಮೇಲೆ ನಿಂತಿದ್ದರು ಎಚ್.ಎಮ್.

ಜೆ.ಎಸ್.ಡಿ., ಎಮ್.ಜಿ, ಕೆ.ವಿ.ಆರ್, ಮತ್ತು ಎಚ್.ಎನ್.ಎಸ್ ಹಾಗು ವಿದ್ಯಾರ್ಥಿಗಳಾದ ಪಟೇಲ್, ಜೇಮ್ಸ್, ಮನ್ಸೂರ್ ಸಹಾ ಪೋರ್ಟಿಕೋದಲ್ಲೇ ಕಾಯುತ್ತಿದ್ದರು.ಕರಿಯಪ್ಪನವರು ಶ್ರೀಮತಿಯವರನ್ನು ನೋಡಿದ ತಕ್ಷಣ ಓಡಿ ಬಂದು,
"ಅಮ್ಮಾ,ಅಮ್ಮಾ...."
ಜೋರಾಗಿ ಕೂಗಿ, ಅಳಲಾರಂಭಿಸಿ, ಬಿಕ್ಕಳಿಸುತ್ತಾ ಮಾತು ಮುಂದುವರೆಸಿದರು.

"ಯಾಕಮ್ಮ, ನನ್ ಮಗನ್ನ ನೀವೇ ಕೊಂದ್ರಿ? ಅವ್ನು ಬರೋಕೆ ಯಾಕೆ ಒಪ್ಪ್ಗೆ ಕೊಟ್ರಿ....ಅವನು ಬರ್ದೆ ಇದ್ದರೆ, ಬದ್ಕೊಳ್ತಿದ್ದ......ನಾನೆ ಸಾಯಕ್ಕೆ ಇಲ್ಲಿಗೆ, ನನ್ ಕೀರ್ತಿನ ಕಳ್ಸ್ದೆ...ಏನಮ್ಮ ಮಾಡ್ಲಿ? ನಾನು, ಈ ವಯಸ್ಸಿನಲ್ಲಿ ನನಗೆ ಮೋಸ ಮಾಡಿ, ಹೊರಟೋದ ನನ್ನ ಮಗ...ಎಮ್.ವಿ.ಎಸ್,ಸಾರ್ ಇದ್ದ್ ಕೊಂಡು ಹೀಗಾಯ್ತಲ್ಲಮ್ಮ...ಇಷ್ಟೊಂದು ಜನ ಇದ್ದು, ಅವನ್ನ ಯಾಕೆ ನೀರಿಗೆ ಕಳ್ಸಿದ್ರಿ....ಮೊದ್ಲೇ ಹೇಳಿದ್ದೆ ನಾನು ಸಾರ್ ಗೆ, ನೀರಿನ ಹತ್ತಿರ ಕಳಿಸಬೇಡಿ...ಅಂತ..."ಬಿಕ್ಕಳಿಸುತ್ತಾ ಕುಸಿದರು.... ಶ್ರೀಮತಿ ಯವರ ಕಣ್ಣಿನಲ್ಲಿ ನೀರು ಹರಿಯುತ್ತಿತ್ತು. ನೀರು ತುಂಬಿದ ಕಣ್ಣನ್ನು ಎಡಗೈಲಿ ಸೆರೆಗಿನ ಅಂಚಿನಿಂದ ಒರೆಸಿಕೊಳ್ಳುತ್ತಾ ಕರಿಯಪ್ಪನವರನ್ನು ಸಮಾದಾನ ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ, ಮಾತುಗಳು ಹೊರಡುತ್ತಿರಲಿಲ್ಲ. ಮೃದುವಾಗಿ ಬೆನ್ನನ್ನು ಸವರುತ್ತಾ,ಸ್ವಲ್ಪ ಕನ್ನಡ ಸ್ವಲ್ಪ ಇಂಗ್ಲಿಶ್ ನಲ್ಲಿ ಸಂತೈಸುತಿದ್ದರು. ಪದಗಳ ಉಛ್ಛಾರಣೆ ಸ್ಪಷ್ಟವಾಗಿಲ್ಲದಿದ್ದರೂ, ಆ ಭಾಷೆ ಹೃದಯಾಳದಿಂದ ಬಂದ ಸಹಜವಾದ ಮಾತೃ ಪ್ರೇಮ ಎಂಬುದು ಎಲ್ಲರಿಗೂ ಗೊತ್ತಿತ್ತು. ಹಾಗಾಗಿಯೇ ಅವರನ್ನು ಎಲ್ಲರೂ ತಾಯಿಯಂತೆ ಗೌರವದಿಂದಲೇ ಕಾಣುತ್ತಿದ್ದರು. ಅವರ ಭಾವನೆಯಲ್ಲಿ ಎಳ್ಳಷ್ಟೂ ಕೃತಿಮತೆ ಇರಲಿಲ್ಲ,

"ಕರಿಯಪ್ಪ ಬೀ ಬೋಲ್ಡ್.... ಧೈರ್ಯ ತಗೋಳಿ... ಯೋಚನೆ ಬೇಡ...ಎಲ್ಲಾ ಗಾಡ್ಸ್ ಮರ್ಸಿ...ಅಲ್ವಾ?.ನಿಮ್ ಫ್ಯಾಮಿಲಿ ಗೆ ನೀವೇ ಕಾನ್ಫಿಡೆನ್ಸ್ ಕೊಡಬೇಡ ಇಲ್ವ?" ಆಯ್ತಮ್ಮ.. ನೀವ್ ಹೇಳ್ದಂಗೆ ಆಗಲಿ...ಎಂದು ಬಿಕ್ಕಳಿಸುತ್ತಾ ನುಡಿದರು ಕರಿಯಪ್ಪ."ಬನ್ನಿ, ಕರಿಯಪ್ಪ ಬೆಳಗಿನಿಂದ ಬಸ್ನಲ್ಲಿ ಕುಳಿತು ಸುಸ್ತಾಗಿದ್ದೀರ..ಸ್ವಲ್ಪ ಊಟಮಾಡಿ ಮಲಗಿಕೊಳ್ಳಿ ಮೊದಲು"

ಎಂದು ಜೆ.ಎಸ್.ಡಿ, ಮೇಡಮ್ ಹೇಳಿದರು.ತೇಲುತ್ತಿದ್ದ.ವಿ.ಎಸ್.ಸಾರ್ ಯೂ ಅಲ್ಸೋ ಟೇಕ್ ಸಮ್ ರೆಸ್ಟ್" ತೇಲುತ್ತಿದ್ದ ಕುಂಟು ಮೇಷ್ಟ್ರಿಗೆ ಹೇಳಿ, ಎಲ್ಲರು ಹೊರಟರು ಒಳಗೆ ಊಟ ಮುಗಿಸಲು.ಮಾಡಿದ ಕೇವಲ ಅನ್ನಾ, ಸಾಂಬಾರ್ ಮತ್ತು ಮಜ್ಜಿಗೆ ಮೃಷ್ಟಾನ್ನಾ ಭೋಜನ ವಾಗಿ ತೋರಿತು ಬೆಂಗಳೂರಿನಿಂದ ಬಂದ ಮೂವರಿಗೂ....ಎಷ್ಟು ಹಸಿವಾಗಿತ್ತೆಂದರೆ, ವ್ಯಸ್ತ ಕಾಲ ಸಾವನ್ನೆ ಮರೆತಿದ್ದರು. ಮಾತೇ ಇಲ್ಲದೆ ಉಟ ಮುಗಿಸಿ, ಮಲಗುವುದೆಂದು ನಿಶ್ಚಯಿಸಿದರು. ಮೇಡಮ್ ಗಳು,ಹುಡುಗರು ಮತ್ತು ಕರಿಯಪ್ಪ ಅವರ ತಮ್ಮ ತಮ್ಮ, ಕೊಠಡಿಯೊಳಗೆ ಹೊರಟರು. ಸಿಗರೇಟ್ ಪ್ರಿಯ, ಎಮ್.ವಿ.ಎಸ್, ಎಹ್.ಎ.ಆರ್, ಕೆ.ವಿ.ಆರ್, ಬಿ.ಆರ್.ಎಸ್, ಮತ್ತು ಎಹ್.ವಿ.ಎನ್, ಎಲ್ಲರೂ ಸ್ವಲ್ಪ ಹೊತ್ತು ಹೊರಗೆ ಕುಳಿತು ಬರುವುದಾಗಿ ಹೇಳಿ ಹೊರಗಡೆಯಿದ್ದ ಬೇವಿನಮರದ ಕೆಳಗೆ ಕುಳಿತುಕೊಂಡು ಸಿಗರೇಟ್ ಹಚ್ಚಿ ಮಾತಿಗೆ ಆರಂಭಿಸಿದರು. ಯೋಚನಾಮಗ್ನರಾಗಿದ್ದ ಎಮ್.ವಿ.ಎಸ್, ಕೆಲವು ವಿಷಯಗಳನ್ನು ಸಹೋದ್ಯೋಗಿಗಳೊಡನೆ ಚರ್ಚಿಸಬೇಕಿತ್ತು.... ಅದಕ್ಕಿಂತ ಹೆಚ್ಚಾಗಿ ಹೆಣ ತೇಲುವುದನ್ನು ಕಾಯಲೇ ಬೇಕಿತ್ತು....

ಮೂರುದಿನಗಳಿಂದ ದಿನನಿತ್ಯದ ಸಾಮಾನ್ಯ ಚಟುವಟಿಕೆಗಳಿಂದ ವಂಚಿತರಾದ ಎಮ್.ವಿ.ಎಸ್, ಈಗ ಸಂತೋಷದಿಂದ ಕುಣಿಸಿ ಕುಪ್ಪಳಿಸುವ ಉನ್ಮತ್ತ ಸ್ಥಿತಿಯನ್ನು ತಲುಪದಿದ್ದರೂ, ಕರಿಯಪ್ಪನವರು ಜೋಗವನ್ನು ತಲುಪುವ ಮುನ್ನ ಇದ್ದ ಮನಸ್ಸಿನ ವ್ಯಾಕುಲತೆ, ತೊಲಳಾಟ ಕಡಿಮೆಯಾಗಿ ನಿರಾಳವಾಗಿ ಉಸಿರಾಡುತ್ತಿದ್ದರು. ಆತಂಕದ ಮೋಡ ಕರಗಿದ್ದರೂ ಮನಸ್ಸು ಸಂಪೂರ್ಣವಾಗಿ ತಿಳಿಯಾಗಿರಲಿಲ್ಲ. ಊಟ ಮುಗಿದ ನಂತರ ಶಿಕ್ಷಕರು ಹೊರಗಡೆ ಬಂದು, ಬೇವಿನಮರದ ಕೆಳಗೆ, ಕಟ್ಟೆಯ ಮೇಲೆ ಕುಳಿತರು. ಆ ಛಳಿಯಲ್ಲಿಯೂ ಅವರ ಸಂಭಾಷಣೆ ಅನಿವಾರ್ಯ ವಾಗಿತ್ತು. ಎಲ್ಲರ ಮನಸ್ಸು ತೇಲಲಿರುವ ಹೆಣ, ನಂತರ ಅವರೆಲ್ಲರೂ ಎದುರಿಸಲೇಬೇಕಾದ ಸೂಕ್ಷ್ಮ ಸನ್ನಿವೇಷ, ರಹಸ್ಯವಾಗೇ ಇರುವ ಕರಿಯಪ್ಪನವರ ನಿಲುವು, ತಮ್ಮ ಮಗನ ಸಾವಿನ ಬಗ್ಗೆ ಅವರ ಹೇಳಿಕೆಯ 'ಹೌದು' 'ಇಲ್ಲ' ಗಳ ಮೇಲೆ ನಿಂತಿರುವ ತಮ್ಮಲ್ಲರ ಮನಸ್ಸಿನ ನೆಮ್ಮದಿ.....ಎಲ್ಲಾ ಅನುಮಾನಗಳಿಂದ ವ್ಯಾಕುಲ ಸ್ಥಿತಿಯಲ್ಲಿರುವ ಅವರುಗಳ ಮನಸ್ಸಿಗೆ ಸಾಂತ್ವನ ಹೇಳುವವರೂ, ಧೈರ್ಯ ತುಂಬುವವರೂ ಬೇಕಾಗಿದ್ದರು.

ಆದರೆ.......ಎಲ್ಲರೂ ಮಾನಸಿಕವಾಗಿ ಬಳಲಿ ಕಂಗಾಲಾಗಿರುವ ವ್ಯಕ್ತಿಗಳು. ಅದಕ್ಕಾಗಿಯೇ ತಮ್ಮ ತುಮಲದಿಂದ ತಪ್ಪಿಸಿಕೊಳ್ಳಲು ಅವರೆಲ್ಲರಿಗೂ ಇದ್ದದ್ದು, ಒಂದೇ ಮಾರ್ಗ.... ಅದು ಒಬ್ಬರಿಗೊಬ್ಬರು ಮಾತಿನ ಮೂಲಕ ಧೈರ್ಯ ಹೇಳಿಕೊಳ್ಳುವ, ಸಂಭಾಷಣೆ...

" ಆಚಾರ್.. ನಿಮ್ಗೆ ಏನನ್ಸುತ್ತೆ ಕರಿಯಪ್ಪನವರ ಬಗ್ಗೆ? ಅಂದ್ರೆ.. ಐ ಮೀನ್...ನಾಳೆ ಅವರು ಏನ್ ಹೇಳಿಕೆ ಕೊಡ್ಬಹುದು?" ಎಂದು ಮಾತು ಅರಂಭಿಸಿದರು ಎಮ್.ವಿ.ಎಸ್. ಆಚಾರ್ ತಕ್ಷಣ ಉತ್ತರಿಸಲಿಲ್ಲ... ಯೋಚಿಸುತ್ತಿದ್ದರು...

ಬಿ.ಆರ್.ಎಸ್, ಉತ್ತರಿಸಿದರು. "ನನ್ ಪ್ರಕಾರ ಅವ್ರು ಇನ್ನೇನ್ ಹೇಳಿಕೆ ಕೊಡಲು ಸಾದ್ಯ...?ಎಲ್ಲರಿಗೂ ಗೊತ್ತಿರುವ ಸತ್ಯ. ಮುಳುಗಿ, ಸತ್ತಿರುವ ವಿಚಾರ.. ಆಮೇಲೆ....ನೀವೆ ನೋಡಿದ್ರಲ್ಲ ಅವರು ಅಮ್ಮ್ನ ಹತ್ತಿರ ಹ್ಯಾಗ್ ವರ್ತಿಸಿದರೂ ಅಂತ.." "ಹಾಗಲ್ಲ...ಬಿ.ಆರ್.ಏಸ್,....ನೀವ್ ಅಂದುಕೊಂಡಷ್ಟು ಸರಳವಾಗಿಲ್ಲ. ನಾನು ಒಪ್ಕೊಳ್ತೇನೆ...ಅವರಿಗೆ, ಅಮ್ಮನ ಬಗ್ಗೆ ಅಪಾರ ಗೌರವ, ಭಕ್ತಿ....ಸಮಸ್ಯೆ, ಕರಿಯಪ್ಪನವರದಲ್ಲ..... ಅವರ ಹಿತೈಷಿಗಳ ಬುದ್ದಿವಾದ, ಪ್ರೇರಣೆ...ಮೊದಲೇ ನೊಂದ ಜೀವ... ಬಾಯಿಗೆ ಬಂದ ಪುಕ್ಕಟೆ ಅಭಿಪ್ರಾಯ ಕೊಡೋದಿಕ್ಕೆ ಯಾರ್ ಏನ್ ಸವ್ಕೊಬೇಕು? ಹೇಳಿ" "ಹೌದು....ಸಾರ್. ಎಮ್.ವಿ.ಎಸ್ ಹೇಳೋದು ನಿಜ. ನೀವ್ ಅಂದ್ ಕೊಂಡಷ್ಟು ಸರಳ ಅಲ್ಲ ಸಾರ್" ನಿಧಾನವಾಗಿ ಉತ್ತರಿಸಿದರು.

"ಇಂತಹ ಸನ್ನಿವೇಶಗಳನ್ನು ಲಾಭಕ್ಕಾಗಿ ಬಳಸಿಕೊಳ್ಳಲು ಪ್ರೇರೇಪಿಸುವರು ಬಹಳ ಜನ" ಮುಂದುವರೆಸಿದರು, ಎಹ್.ಎ.ಆರ್.
"ಯಾರು ಏನು ಮಾಡೊಕ್ಕೆ ಸಾಧ್ಯವಿಲ್ಲ,ಯಾಕೆಂದರೆ, ನಾವು ಪೋಷಕರಿಂದ ಪರ್ಮಿಷನ್, ಡಿಪಾರ್ಟ್ ಮೆಂಟ್ ಅನುಮತಿ,ಲಿಸ್ಟ್ ಸಮೇತ ತಗೊಂಡಿದ್ದೀವಿ. ಹಾಗಿದ್ದರೆ ನಾವ್ಯಾಕೆ ಹೆದರ್ ಬೇಕು ಹೇಳೀ" ಎಂದು ಮದ್ಯ ಅಭಿಪ್ರಾಯ ಕೊಟ್ಟರು,ಕೆ.ವಿ.ಆರ್.

"ಅದರ ಬಗ್ಗೆ ನನಗೆ ಯೋಚನೆ ಇಲ್ಲ,...ಅ ವಿಷಯ ನಾನ್ ಹೇಳ್ತಾನೂ ಇಲ್ಲ...ಮಗನನ್ನು ಕಳೆದುಕೊಂಡ ವ್ಯಕ್ತಿ ಇಂಥಾ ಸಂಧರ್ಭದಲ್ಲಿ ಯಾವ ನೋವು ಅನುಭವಿಸುತ್ತಿರುತ್ತಾರೋ ಕಲ್ಪನೆ ಮಾಡಿಕೊಳ್ಳುವುದು ಸಹಾ ಕಷ್ಟ. ಅ ಇಲಾಖೆ, ಅನುಮತಿ, ನಮ್ಮ ಸೇಫ್ಟಿ, ಇದೆಲ್ಲದರ ಬಗ್ಗೆ ಯೋಚಿಸುವ ಬದಲು, ಅವರ ಮನಸ್ಸಿನಲ್ಲಿ ಏನಿರಬಹುದು? ಎಲ್ಲೋ ಒಂದು ಕಡೆ ನಾವು ತಪ್ಪಿತಸ್ತರು ಅನಿಸುತ್ತದೆ... ಇಷ್ಟೊಂದು ಟಿಚರ್ಸ್ ಇದ್ದು ಸಹ ನಮ್ಮ ಒಬ್ಬ ಹುಡುಗ ಪ್ರಾಣ ಕಳೆದುಕೊಂಡಿದ್ದಾನೆ ಎಂದರೆ, ನಮ್ಮ ಬಳಿ ಸರಿಯಾದ ಸಮಜಾಯಿಷಿ ಇಲ್ಲ, ಎಲ್ಲರಿಗು ಅದು ಯಕ್ಷ ಪ್ರಶ್ನೆಯಾಗುತ್ತದೆ".... ಎಂದು ಎಂ.ವಿ.ಎಸ್, ಮಾತು ಮುಗಿಸುವ ಮೊದಲೇ ಗರಮ್ ಆಗಿದ್ದ ಎಚ್. ಎ. ಅರ್, ಕೋಪದಿಂದಲೇ ಹೇಳಿದರು..

" ಆಧ್ಯಾಗೆ, ನಮ್ಮ ತಪ್ಪಾಗುತ್ತೆ ಸಾರ್, ನೀವು ಬೇಡ ಅಂದ್ರು ಸಹಾ ನಿಮ್ಮ ಮಾತನ್ನು ಮೀರಿ ಅವನು ನಿರಿಗೆ ಹೋಗಿದ್ದು ಅ ಹುಡುಗನ ತಪ್ಪು. ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದೇವೆ. ನೀವು ಮೊಧ್ಲೇ ಬರುವುದನ್ನು ಬೇಡಾ ಎಂದಿದ್ದೀರಿ, ಆದರೆ ಆ ಮಾತನ್ನು ಕೇಳದೇ, ಮಗನನ್ನು ಕಳಿಸಿದ್ದು ಆ ಹುಡುಗನ ತಂದೆಯ ತಪ್ಪು, ಈಗ ನಮ್ಮ ಮೇಲೆ ಗೂಬೆ ಕೂರಿಸಿದರೆ ಯಾರು ಕೇಳ್ತಾರೆ? ನಿಜ.... ಮಾನವೀಯ ದೃಷ್ಟಿ ಇಂದ ನಮಗೂ ತುಂಬಾ ನೋವಾಗಿದೆ. ಆದರೆ, ಒಳ್ಳೆತನವನ್ನೇ ಅವರು ದೌರ್ಬಲ್ಯ ಎಂದು ಕೊಂದರೆ ಅದು ಒಳ್ಳೆಯದಲ್ಲ"
"ಅದೆಲ್ಲಾ ಸರಿ ಆಚಾರ್ರೆ... ಆದರೆ ನಾಳೆ ಬಾಡಿ ಸಿಕ್ಕ ಮೇಲೆ ಕರಿಯಪ್ಪನವರ ಹೇಳಿಕೆ ಏನಾಗಿರಬಹುದು ಎಂದು ನನ್ನ ಯೋಚನೆ. ಆಕಸ್ಮಿಕ ಅಲ್ಲ, ಅನುಮಾನ ಇದೆ ಎಂದು ಹೇಳಿಕೆ ನೀಡಿದರೆ, ನಾವೆಲ್ಲರೂ..... ಏನು ಮಾಡಲು ಆಗುವುದಿಲ್ಲ.. ಮುಂದಿನ ಕ್ರಮ, ಕೋರ್ಟು, ಕಚೇರಿ ಅಂತ ಅಲೆದಾಡುವುದು ಇತ್ಯಾದಿಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯ...." ನಾನು ಹೇಳುವುದು ಇಷ್ಟೇ....ಎಲ್ಲದಕ್ಕೂ ನಾವು ಸಿದ್ದರಿರಬೇಕು... ಆಲ್ವಾ?" ಎಂ.ವಿ.ಎಸ್. ನಿರ್ವಿಕಾರದಿಂದ ಹೇಳಿದರು.
" ಸಾರ್, ಸುಮ್ಮನೆ ಯಾಕೆ ಏನೇನೋ ಯೋಚಿಸುತ್ತೀರ? ಹಾಗೇನೂ ಆಗುವುದಿಲ್ಲ..ತಿಳಿತಾ? ನನಗೆ ಗೊತ್ತು ಕರಿಯಪ್ಪನವರು ಅಷ್ಟು ದಡ್ಡರಲ್ಲ....ಅವರಿಗೆ, ಎಲ್ಲಾ ಆಗು ಹೋಗುಗಳು, ಕಾನೂನುಗಳು, ಚೆನ್ನಾಗಿ ಗೊತ್ತಿದೆ...ಯಾರಾದರು ತಲೆ ಕೆಡಿಸಿದರು ಅವರು ಕೆಳುವುದಿಲ್ಲ" ಬಿ. ಆರ್.ಎಸ್, ಅಭಿಪ್ರಾಯ ಪಟ್ಟರು.
"ನಿಜ.... ಇದೆ ಕರಿಯಪ್ಪನವರೆ...... ಆಡಳಿತ ಮಂಡಳಿ ವಿರುದ್ದ ಹೋರಾಡಿದ್ದು, ಕೋರ್ಟಿಗೆ ಹೋಗಿದ್ದು, ನಮಗೆ ಚೆನ್ನಾಗಿ ನೆನಪಿದೆ. ಒಂದ್ ರೀತಿ ಟ್ರೇಡ್ ಯುನಿಯನ್ ನಾಯಕರಂತೆ ಹೋರಾಟಮಾಡುವ ಪ್ರವೃತ್ತಿ ಅವರದು. ಜೊತೇಲಿ..... ಅವರಿಗೆ ಹಾಗು ನಮ್ಮ ಡೈರೆಕ್ಟರ್ ಅವರುಗಳಿಗೆ ಅಷ್ಟಕ್ಕಷ್ಟೇ..... ಈ ಸಂದರ್ಭವನ್ನೇ ಉಪಯೋಗಿಸಿಕೊಂಡು ಅವರ್ಯಾಕೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಬಾರದು? ಅಥವಾ ಮಾಡುವುದಿಲ್ಲ ಎಂದು ಏನ್ ಗ್ಯಾರಂಟಿ?" ಎಂದು ಕೆ. ವಿ. ಆರ್. ಅನುಮಾನಿಸಿದರು.

"ಹೌದು........ಹಾಗೆ ಸಂದರ್ಭವನ್ನು ಬಳಸಿಕೊಳ್ಳಲು ಯೋಚಿಸಿದ್ದರು ಆಶ್ಚರ್ಯ ಪಡಬೇಕಾಗಿಲ್ಲ. ಅವರಿಗೆ ಆರೀತಿ ಸಲಹೆಯನ್ನು ಸಹಾ ಕೊಟ್ಟಿರಲು ಬಹುದು. ಕೊಟ್ಟಿರುವ ಸಂಗತಿ ನಾನೇ ಕೇಳಿಸಿಕೊಂಡಿದ್ದೇನೆ.ಅವರ ಪ್ರಕಾರ ಮಕ್ಕಳ ಸಂಪೂರ್ಣ ಜವಾಬ್ದಾರಿ ನಮ್ಮದು, ಏನಾದರು ಹೆಚ್ಚು ಕಡಿಮೆ ಆದರೆ ಅದಕ್ಕೆ ಆಡಳಿತ ಮಂಡಳಿ ಅಥವಾ ಇಲಾಖೆಯವರಾಗಲಿ ಅಥವಾ ಸರ್ಕಾರ ದವರಾಗಲಿ ಅವರಿಗೆ ಪರಿಹಾರ ಕೊಡಬೇಕಂತೆ. ಏನೇ ಆದರು ನಾವೇ ಹೊಣೆ ಎಂಬುದು ಅವರ ವಾದ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಇನ್ನೊಂದು ಅನುಮಾನ.... ಯಾವುದಾದರು ಹುಡುಗರು ಬೇಕಂತಲೇ ತಳ್ಳಿರಬಹುದು,.........ಆಡುವಾಗ..... ಹಾಗೇನಾದರು ಅವರ ಹೇಳಿಕೆ ಕೊಟ್ಟರೆ.......ವಿದ್ಯಾರ್ಥಿಗಳು, ಅವರ ತಂದೆ ತಾಯಿ, ಎಲ್ಲರು ಪರದಾಡ ಬೇಕಾಗುತ್ತದೆ"
ಎಂದು ಹೇಳಿದಾಗ ಎಲ್ಲರೂ ಪೆಚ್ಚಾದರು.

ಈ ವರೆವಿಗೂ ಆ ವಿಷಯ ಅವರಿಗೆ ಹೊಳೆದಿರಲಿಲ್ಲ. ಎಲ್ಲಾ ಉಪಾಧ್ಯಾಯರುಗಳು ತಮ್ಮ ಸ್ವಾರ್ಥದ, ತಮ್ಮ ಕರ್ತವ್ಯಚ್ಯುತಿಯ ಬಗ್ಗೆಯೇ ತಲೆಕೆಡಸಿಕೊಂಡು,ತಮಗೆ ಅರಿವಿಲ್ಲದೆ ನೈತಿಕತೆಯ ತುಮಲ, ಅನಿಶ್ಚಿತ ಮುಂಬರುವ ಕ್ಷಣಗಳ ಬಗ್ಗೆ ತಲೆ ಕೆಡಸಿಕೊಂಡು ವಿಲಿ ವಿಲಿ ಒದ್ದಾಡುತ್ತಿದ್ದರು.
" ಹಾಗೇನೂ ಆಗಲಿಕ್ಕಿಲ್ಲ ಎಂದು ನನಗೆ ಅನಿಸುತ್ತೆ. ಕೊನೆ ಪಕ್ಷ ಎಚ್.ಎಮ್,ಅವರಿಗಾದರೂ ತೊಂದರೆ ಯಾಗದಿರಲೆಂದು ಆಕಸ್ಮಿಕ ಎಂಬ ಹೇಳಿಕೆಯನ್ನೇ ಕೊಡುತ್ತಾರೆ. ನೋಡ್ತಾ ಇರೀ" ಎಂದರು ಬಿ.ಆರ್.ಎಸ್.
" ಹಾಗಾಗಲಿ ಎಂದು ಅಪೇಕ್ಷಿಸುವ ನಿಮ್ಮ ಮನಸ್ಸಿನ ಮಾತು...ಇದು..." ಆಯ್ತು.. all right.... hope for the best and ........ ನೋಡೋಣ ಎನೆಆದ್ರು ಎದುರಿಸಲೇ ಬೇಕು.... ಬನ್ನಿ.. ಹೊತ್ತಾಯ್ತು...ಸ್ವಲ್ಪ ನಿದ್ರೆ ಮಾಡೋಣ... ಬೆಳಗ್ಗೆ ಮಿಕ್ಕೆಲ್ಲ ವಿಷಯ"
" ಹೌದು, ಪಾಪ ಎಮ್.ವಿ. ಎಸ್, ನಿದ್ರೆ ಮಾಡಿ ಮೂರೂ ರಾತ್ರಿ ಆಗಿದೆ ಅಂತ ಕಾಣುತ್ತೆ. ಮಲ್ಕೊಳ್ಳಿ ಸಾರ್..ನಿವ್ ಹೋಗಿ...ನಾವು ಇನ್ನೊಂದ್ಸಲ ಬಾಡಿ ಬಗ್ಗೆ ವಿಚಾರಿಸಿ ಬರ್ತಿವಿ" ಎಂದು ಹೇಳಿ ಎಚ್.ಎ.ಅರ್, ಇತರ ಮೇಷ್ಟ್ರುಗಳ ಜೊತೆಯಲ್ಲಿ ಹೊರನಡೆದರು.
ಎಮ್.ವಿ. ಎಸ್. ಹಾಸ್ಟೆಲ್ ಒಳಗೆ ಹೊರಟಾಗ, ವಾಚ್ ಮನ್ ಓಡಿ ಬಂದು, ಬಾಡಿ ತೇಲಿದೆ ಎಂದು ಪ್ರಕಟಿಸಿದ......
ಸಮಯ ರಾತ್ರಿ ೧.೩೦...ರ ಸಮಯ.
ಬಳಲಿದವರ ನಿದ್ರೆಯ ಹಂಬಲ ಮಾಯ ವಾಯಿತು. ಮಿದುಳು ಚುರುಕಾಯಿತು.
ಯೋಚನೆಗಳು ಪುನಃ ಕಿತ್ತು ತಿನ್ನಲಾರಂಭಿಸಿದವು.....ಬಾಡಿ ಕಾಣೆಯಾಗಿ ಮೂರೂ ರಾತ್ರಿ ಕಳೆದಿದ್ದರೂ, ಅದರ ಬಗ್ಗೆ ಯಾರಿಗೂ ಇದುವರೆಗೂ ಯಾವ ಯೋಚನೆಯೂ ಬಂದಿರಲಿಲ್ಲ. ಅ ನಾಲೆಯ ಯಾವ ಕೊರಕಲಿನಲ್ಲಿ ಸಿಕ್ಕಿ, ಎಷ್ಟು ಮೀನುಗಳಿಗೆ ಆಹಾರವಾಗಿದ್ದನೋ ಕೀರ್ತಿ...ಈಗ ಎಮ್.ವಿ. ಎಸ್,ತಲೆ ಮತ್ತೆ ಪ್ರಶ್ನೆಗಳ ಗಣಿಯಾಯಿತು. ದೇಹ ಹೇಗಿರಬಹುದು? ದೇಹದ ಎಲ್ಲಾ ಅಂಗಾಂಗಗಳು ಸುಸ್ಥಿತಿಯಲ್ಲಿ ಇರಬಹುದೇ? ಪೂರ್ಣ ದೇಹ ನೀರು ತುಂಬಿ ಉಬ್ಬಿರಬಹುದೇ? ಕೀರ್ತಿಯ ದೇಹವೆಂದೆ ಪತ್ತೆ ಹಚ್ಚಲು ಸಾಧ್ಯವಾಗಬಹುದೇ? ಜೀವ ವಿಜ್ಞಾನದ ಉಪಾಧ್ಯಯನಾದುದರಿಂದ ಅಲ್ಪ,ಸ್ವಲ್ಪ ವಿಷಯ ತಿಳಿದಿತ್ತಾದರೂ, ಅ ಜ್ಞಾನ ಅವರಿಗೆ ಯಾವುದೇ ರೀತಿಯ ಸಮಾಧಾನ ಕೊಡುವ ಬದಲು, ತಾನು ಪ್ರಯೋಗಶಾಲೆಯಲ್ಲಿ ಕಂಡ ಫಾರ್ಮಾಲ್ಡಿಹೈಡ್ ನಲ್ಲಿನ bottle specimen ಗಳ ಸುಕ್ಕಾದ ಅಂಗಾಂಶ ಗಳ ನೆನಪನ್ನು ತಂದು ಕೊಡುವುದರಲ್ಲಿ ಯಶಸ್ವಿ ಯಾಯಿತು.
'half knowledge is always dangerous' ಎಂದು ಮನಸ್ಸಿನಲ್ಲೇ ಗೊಣಗಿಕೊಂಡು, ಒಳಗೆ ಹೋಗುವ ಬದಲು ಹೊರಗೆ ಬಂದು ನಿಂತರು.

ರಾತ್ರಿಯ ಆ ಅವೇಳ್ಯ ದ ಹೊತ್ತಿನಲ್ಲೂ ಹೆಣ ಮೇಲೆಬಂದಿರುವ ವಿಷಯ ತಿಳಿದ ಹೊರಗೆ ಹೋದ ಎಚ್.ಎ.ಅರ್, ಮತ್ತು ಕಂಪನಿ ಸಹಾ ಬಂದರು. ಮಲಗಲು ಪ್ರಯತ್ನಿಸುತ್ತಿದ್ದ ಎಲ್ಲಾ ಮೇಡಮ್ ಗಳು, ಅಲ್ಲೇ ಉಳಿದ ವಿದ್ಯಾರ್ಥಿಗಳು ಸಹಾ ಬಂದು, ಕಾರಿಡಾರ್ ನಲ್ಲಿ ಸೇರಿದರು. ನೊಂದು, ಬೆಂದು,ಸುಸ್ತಾದ ಕರಿಯಪ್ಪನವರನ್ನು ಎಚ್ಚರ ಗೊಳಿಸಲು ಯಾರು ಪ್ರಯತ್ನಿಸಲಿಲ್ಲ. ಆಗಲೇ ಹೋಗಿ ನೋಡುವ ಸಾಹಸ ಕೈ ಬಿಟ್ಟರು. ಕಾರಣ, ಕಾಲುವೆಯ ನೀರಿನಲ್ಲಿ ತೇಲಿಬಂದ ಎಲ್ಲವನ್ನು ತಡೆಯುತ್ತಿದ್ದ ಅ ಫಿಲ್ಟರ್ ಗೆಟ್ ಹತ್ತಿರ ಫ್ಲಡ್ ಲೈಟ್ ಗಳು ಇರಲಿಲ್ಲ. ಹಾಗು ಆ ರಾತ್ರಿಯಲ್ಲಿ, ಅ ಚಳಿಯಲ್ಲಿ ಅಲ್ಲಿಗೆ ಹೋಗಿ ಬರಲು ಎಲ್ಲರಿಗೂ ಒಳಗೆ ಹೆದರಿಕೆ. ವಿಚಿತ್ರ....... ಅನಾಥವಾಗಿ ರಾತ್ರಿಯೆಲ್ಲಾ ಕಳೆಯುವ ಕೀರ್ತಿಯ, ನೀರು ತುಂಬಿ ಕೊಂಡಿರುವ ಕಬ್ಬಿಣದ ದಪ್ಪ ಸರಳುಗಳಿಗೆ ಒತ್ತಿಕೊಂಡ ದೇಹದ ಕಲ್ಪನೆಗೆ ಬೆಚ್ಚಿ ಬಿದ್ದರು ಎಮ್.ವಿ.ಎಸ್. ಅ ಚಳಿಯ ನಡುಕದಲ್ಲೂ ಬೆವರಿದ ಅನುಭವ. ಎಲ್ಲೋ, ಶರಾವತಿಯ ಅ balanced reservoir ನಿಂದ ಮುಂದುವರೆದು ಕಾಲುವೆ ಯಂತೆ ಹರಿಯುವ ೨೫-೩೦ ಅಡಿ ಆಳದ ನೀರಿನ ಪ್ರಹಾವದಲ್ಲಿ, ಯಾವುದೋ ಭಯಾನಕ ಕೊರಕಲಿನಲ್ಲಿ ಸಿಕ್ಕಿ ಕೊಂಡ, ಮೀನುಗಳಿಗೆ ಔತಣವಾದ ಕೀರ್ತಿಯ ವಿರೂಪ ನಿಶ್ಚಲ ದೇಹದ ಚಿತ್ರ ಪದೇ,ಪದೇ ಬಂದು ಹಿಂಸಿಸುತ್ತಿತ್ತು. ಇದುವರೆಗೂ ಎಲ್ಲರ ಮನಸ್ಸನ್ನು ಕಾಡುತ್ತಿದ್ದ ನೋವು, ದುಖ, ಹೆದರಿಕೆ, ಆಯಾಸ, ಒದಗಬಹುದಾದ ತೊಡಕುಗಳು, ಎಲ್ಲವು ಮಾಯವಾಗಿ, ಕೇವಲ ಮನಸ್ಸಿನಾಳದವರೆಗೆ ಭಯ ವ್ಯಾಪಿಸಿತು. ಇದುವರೆಗೂ ಒಂದು ಸಲ ಬಾಡಿ ಮೇಲೆ ಬಂದರೆ ಸಾಕು ಎಂದು ಕಾಯುತ್ತಿದ್ದ ಮನಸ್ಸು,ಗೇಟಿನ ಬಳಿ ತೇಲುತ್ತಿರುವ ಕೀರ್ತಿಯ ದೇಹವನ್ನು ನೋಡಲು ನಿರಾಕರಿಸುತ್ತಿತ್ತು. ಯಾವುದಕ್ಕಾಗಿ ಪರಿತಪಿಸಿ ಕಾಯುತ್ತೆವೆಯೋ, ಅದು ಎದುರಾದಾಗ ತಲೆ ಎತ್ತಿ ಎದುರಿಸಲು ಧೈರ್ಯ ಇಲ್ಲವಾಗುತ್ತದೆ ಒಮ್ಮೊಮ್ಮೆ......

ಆದರು, ಎಲ್ಲರೂ, ಎಲ್ಲವನ್ನು ಎದುರಿಸಲೇ ಬೇಕು......

ಹೌದು....ಅವರೆಲ್ಲರೂ ಎದುರಿಸುತ್ತಾರೆ. ಅಂತು, ಇಂತೂ, ಹೇಗೋ ರಾತ್ರಿ ಸರಿಯಿತು...ಯಾರು, ಯಾವಾಗ, ಎಲ್ಲಿ, ಹೇಗೆ ಮಲಗಿದರೋ ಹೇಳುವುದು ಕಷ್ಟ.
ಬೆಳಗ್ಗೆ ಎಲ್ಲರೂ ಗೇಟಿನ ಬಳಿ ಹೋಗಲು ಸಿದ್ಧವಾದರು. ಆದರೆ ಎಲ್ಲರೂ ಅಲ್ಲಿಗೆ ಹೋಗುವ ಅವಶ್ಯಕತೆ ಇರಲಿಲ್ಲ. ಕೇವಲ ಎಚ್.ಎಮ್, ಜೆ.ಎಸ್.ಡಿ, ಕರಿಯಪ್ಪ, ಎಚ್.ಎ,ಆರ್.ಮತ್ತು ಎಮ್.ವಿ.ಎಸ್. ಮಾತ್ರ ಗೆಟ್ ಬಳಿ ಹೋಗಿ, ಅಲ್ಲಿನ ವಿಧಿ ವಿಧಾನಗಳನ್ನು ಮುಗಿಸಿಕೊಂಡು ಬರುವುದು, ಉಳಿದ ಎಲ್ಲರೂ ಆಸ್ಪತ್ರೆಯ ಬಳಿ ಸೇರಬೇಕೆಂದು ನಿರ್ಧರಿಸಲಾಯಿತು. ಬಾಡಿಯನ್ನು ಹೊರತರಲು ಮನುಷ್ಯನನ್ನು ಗೊತ್ತು ಮಾಡಿದ್ದರು. ಎಲ್ಲರಿಗೂ ಸಾಧ್ಯವಾಗದ ಸಾಹಸದ ಕೆಲಸವೇ ಸರಿ. ಬಂದ ವ್ಯಕ್ತಿ ಕಂಠ ಮಟ್ಟ ಕುಡಿದಿದ್ದ. ಅದು ಅನಿವಾರ್ಯ ಎಂದು ಎಲ್ಲರಿಗೂ ಮನವರಿಕೆ ಆಗಿತ್ತು. ಸಾಮಾನ್ಯ ಸ್ಥಿತಿಯಲ್ಲಿ ಯಾವ ಮನುಷ್ಯನು ಅ ಭಯಾನಕ, ರಾವು ಬಡಿದ ಜಾಗದಲ್ಲಿ, ಮೂಗು ಮುಚ್ಚಿ ಕೊಂಡರು ಸಹಿಸಲಾಗದ ದುರ್ನಾಥ ದಲ್ಲಿ, ಬೆಳಗಿನ ಚಳಿಯಲ್ಲಿ, ಕೊರೆಯುವ ನಿರಿನಲ್ಲಿಳಿದು ಹೆಣವನ್ನು ಹೊರಗೆ ತೆಗೆಯುವುದು ಅಸಾಧ್ಯದ ಮಾತಾಗಿತ್ತು. ಪೋಲಿಸ್ ಜೊತೆಯಲ್ಲಿ ಇದ್ದರು. ಗೇಟಿನ ಬಲ ಬದಿಯಲ್ಲಿ, ಕಾವಲುಗಾರನಿಗಾಗಿ ಎಂದು ನಿರ್ಮಿಸಲಾದ ಒಂದು ಸಣ್ಣ ಗೂಡಿನ ಹಾಗೆ ಇದ್ದ ಒಂದು ಪುಟ್ಟ ರೂಮಿನ ಬಳಿ ಕರಿಯಪ್ಪನವರೊಟ್ಟಿಗೆ ಎಮ್.ವಿ.ಎಸ್. ಮತ್ತು ಎಚ್.ಎ.ಆರ್,ನಿಂತಿದ್ದರು. ನಿರೀಕ್ಷಿತ ಭಾವೋದ್ವೇಗ ಪ್ರತಿಕ್ರಿಯೆ ನಿಯಂತ್ರಿಸಲು ಅವರಿಬ್ಬರೂ ಸಿಧ್ಧವಾಗಿದ್ದರು. ಸ್ಟ್ರೆಚರ್ ತೆಗೆದುಕೊಂಡು ವ್ಯಕ್ತಿಯೊಬ್ಬ ಅವರ ಎದುರಿಗೆ ಹೋದ. ಕಬ್ಬಿಣದ ಸರಳುಗಳ ಹತ್ತಿರ ಅಸ್ತವ್ಯಸ್ತವಾಗಿ ನೀರಿನ ಅಲೆಯೊಂದಿಗೆ, ಅಸ್ತ ವ್ಯಸ್ತ ಉಬ್ಬಿದ್ದ ಮಗನ ದೇಹವನ್ನು ದೂರದಿಂದ ತೋರಿಸಿದಾಗ, ಕ್ಷಣಕಾಲ ಹೆಣವನ್ನು ಅಕ್ಕ ಪಕ್ಕದಲ್ಲಿದ್ದ ಕಸದೊಟ್ಟಿಗೆ ಗುರುತಿಸಲಾಗಲಿಲ್ಲ. ಪೋಲಿಸ್ ನವರು ಬೊಟ್ಟು ಮಾಡಿ ತೋರಿಸಿದಾಗ ಕಡೆಗೆ ಗುರುತು ಹತ್ತಿ, "ಕೀರ್ತಿ" ಎಂದು ಜೋರಾಗಿ ಕೂಗಿ ಅ ಕಡೆ ಧಾವಿಸಲು ಪ್ರಯತ್ನಿಸಿದಾಗ ಉಪಾಧ್ಯಾಯರಿಬ್ಬರು ಬಲವಾಗಿ ಹಿಡಿದರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದ ತಂದೆಯನ್ನು ತಡೆಯಲು ಪೋಲಿಸ್ ಸಹಾ ಹೆಣಗಾಡಿದರು.,

ಕರಿಯಪ್ಪನವರ ಗೋಳು ಮುಗಿಲುಮುಟ್ಟಿತ್ತು, ವರ್ಣಿಸಲಾರದ ಹೃದಯ ವಿದ್ರಾವಕ ದೃಶ್ಯ ಎಲ್ಲರ ಕಣ್ಣುಗಳನ್ನು ತೋಯಿಸಿತ್ತು. ಅರ್ಥವಾಗದ ಅಸ್ಪಷ್ಟ ಪದಗಳು, ಕರಿಯಪ್ಪನವರ ಚೀರಿಬರುವ ಅಳು,...ಕಡೆಗೂ, ಗುರುತುಸಿಗದಷ್ಟು,ಸ್ತ್ರೆಚೆರ್ ಸಹಾ ಸಾಕಾಗದಷ್ಟು ಉಬ್ಬಿದ ಬಾಡಿಯನ್ನು ತಂದೆಯ ಮುಂದೆ ತೆಗೆದು ಕೊಂಡು ಹೋದಾಗ, ಎಲ್ಲರ ಹಿಡಿತದಿಂದ ತಪ್ಪಿಸಿಕೊಂಡು ಕಾರಿಯಪ್ಪನವರು ಬಾಡಿಯನ್ನು ಮುಟ್ಟಲು ಹೋದಾಗ ಎಂ.ವಿ.ಎಸ್, ಎಚ್.ಎ.ಆರ್ ಮತ್ತು ಪೋಲಿಸ್ ಎಲ್ಲರು ಬಹಳ ಕಷ್ಟಪಟ್ಟು ಅವರನ್ನು ತಡೆದರು.ಬಾಡಿಯನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಒಯ್ಯಲಾಯಿತು. ಗೆಟ್ ಬಳಿಯಿದ್ದವರು, ಶಾರ್ಟ್ ಕಟ್ ಕಾಲು ದಾರಿಯಲ್ಲಿ ಆಸ್ಪತ್ರೆಗೆ ಬಂದು ಮುಂದಿನ ಹುಲ್ಲು ಹಾಸಿನ ಮೇಲೆ ಪ್ರವಾಸಕ್ಕೆಂದು ಬಂದು ನಾಲ್ಕು ದಿನಗಳಿಂದ ಅಲ್ಲೇ ಉಳಿದ ಎಲ್ಲಾ ಶಾಲಾ ಉಪಾಧ್ಯಾಯರುಗಳು, ಕೆಲವು ವಿದ್ಯಾರ್ಥಿಗಳು, ಬೆಂಗಳೂರಿನಿಂದ ಬಂದ ಕರಿಯಪ್ಪ,ಅವರ ತಮ್ಮ..... ಎಲ್ಲರು ಮಾತಿಲ್ಲದೆ ಸುಮ್ಮನೆ ಕುಳಿತುಕೊಂಡರು. ಪೋಸ್ಟ್ ಮಾರ್ಟಮ್ ನ ವರದಿಗಾಗಿ ತವಕದಿಂದ ಆಸ್ಪತ್ರೆಯ ಕಡೆ ಕಾತುರದಿಂದ ನೋಡುತ್ತಿದ್ದರು. ಜೋಗ ದ ಅರ್ಧ ಜನಗಳು ಸಹಾ ನೆರೆದಿದ್ದರು ಅಲ್ಲಿ, ಅವರ ಅಸಾಧಾರಣ ಹೃದಯವಂತಿಕೆ, ಮಾನವಿಯ ಅಭಿವ್ಯಕ್ತಿ, ಅಸಾಮಾನ್ಯ ಅನುಕಂಪ, ಅವರುಗಳು ಕೊಟ್ಟ ಸಹಕಾರ ಬೆಂಗಳೂರಿನ ತಂಡದವರನ್ನು ಮೂಕರನ್ನಾಗಿ ಮಾಡಿತ್ತು. ಅವರ ಈ ದಿಕ್ಕುತೋಚದ ಪರಿಸ್ಥಿತಿಯಲ್ಲಿ ಅವರೊಟ್ಟಿಗೆ ಟೊಂಕ ಕಟ್ಟಿ ನಿಂತು ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದ ಜೋಗದ ಅ ಜನ ಅಪರೂಪದ ಮರೆಯಲಾರದ ಜೀವಿಗಳು.ಎಲ್ಲರ ಮನಸ್ಸನ್ನೂ ಕಾಡುತ್ತಿದ್ದ ಪ್ರಶ್ನೆ ಒಂದೇ ಒಂದು.....ಕರಿಯಪ್ಪನವರ ಹೇಳಿಕೆ..... ಪೋಲಿಸ್ ನವರ ಬಳಿ ಅವರು ಕೊಡುವ ಹೇಳಿಕೆ.... ಆಕಸ್ಮಿಕವೋ, ಅನುಮಾನವೋ....... ಅವರ ಎಲ್ಲಾ ಸಂದೇಹಗಳಿಗೂ ಪರಿಹಾರ ದೊರೆಯುವ ಸಂಗ್ದಿಗ್ಧ ಕಾಲ. ಮೌನವನ್ನು ಮುರಿಯಲು, ಆಗೊಮ್ಮೆ ಈಗೊಮ್ಮೆ ಕೆಲವರು ಬಲವಂತವಾಗಿ ಆಡಿದ ಅರ್ಥರಹಿತ ಮಾತು ಗಳನ್ನೂ ಯಾರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಎಂ.ವಿ. ಎಸ್, ನಾಲ್ಕೈದು ಸಿಗರೆಟ್ ಗಳನ್ನು ಸುಟ್ಟಿದ್ದರು. ತಿರಾ restless ಆಗಿ, ಬೋನಿನಲ್ಲಿದ್ದ ಪ್ರಾಣಿಯಂತೆ ಕಂಪೌಂಡ್ ನ ಹೊರಗೆ,ಒಳಗೆ ಸುತ್ತು ಹಾಕುತ್ತಿದ್ದರು. ಎಚ್.ಎ.ಆರ್, ಕೆ,ವಿ.ಆರ್, ಎಚ್.ಏನ್.ಎಸ್, ಬಿ.ಆರ್.ಎಸ್. ಮತ್ತು ಜೆ.ಡಿ.ಎಸ್, ಅವರ ಎಚ್.ಎಂ, ಶ್ರೀಮತಿಯವರ ಬಳಿ ಇದ್ದರು. ಕರಿಯಪ್ಪನವರು ಸಹ ಅವರೊಟ್ಟಿಗೆ ಇದ್ದರು ಇದುವೆರೆಗೂ.....

ಮಾತಿಲ್ಲದೆ, ಹುಲ್ಲನ್ನು ನೋಡುತ್ತಾ, ಅಥವಾ ಅದರೊಡನೆ ಅರಿವಿಲ್ಲದೆ ಆಟವಾಡುತ್ತಾ ಮೌನವಾಗಿ ಶೂನ್ಯ ದೃಷ್ಟಿಯಿಂದ ಏನನ್ನೋನೋಡುತ್ತಿದ್ದರು. ನಿರೀಕ್ಷಿಸುತ್ತಿತ್ತು ಅವರಿಗೆ ಅರಿವಿಲ್ಲದೆ ಪರಾವರ್ತಿತ ಪ್ರತಿಕ್ರಿಯೆಯ ಹಾಗೆ ಅವರ ಸುಪ್ತ ಮನಸ್ಸು ಪದೇ ಪದೇ ಅದನ್ನೇ. ಆಸ್ಪತ್ರೆಯ ಕಡೆಗೆ ಅವರುಗಳ ತಲೆ ಆಗಾಗ್ಗೆ ತಿರುಗುತ್ತಿತ್ತು. ಎಲ್ಲರ ಕಾತುರ, ಆತುರದ ನಿರೀಕ್ಷೆ, ಇಚ್ಚಿಸುವ ಅಪೇಕ್ಷೆ ಒಂದೇ ಆಗಿತ್ತು. ಯಾರು ಬಾಯಿ ಬಿಡುತ್ತಿರಲಿಲ್ಲ. ಒಬ್ಬರನ್ನು ನೋಡಿದರು, ಹಿಮ್ಮೆದುಳಿನ, ಪಾನ್ಸ್ ವರೆಲಿ ಭಾಗದ ನಿಯಂತ್ರಣಕ್ಕೆ ಒಳಗಾದ ಮುಖಭಾವದಂತೆ ಯಾಂತ್ರಿಕವಾಗಿ ಮುಖದ ಸ್ನಾಯುಗಳು ಹಿಗ್ಗಿ,ಕುಗ್ಗಿ, ಬೀಳುವ ನೆರಿಗೆಗಳಲ್ಲಿ ಮನಸ್ಸಿನ ನಿಜ ಆಲೋಚನೆಗಳು ಪ್ರತಿಫಲನ ಗೊಳ್ಳುತ್ತಿರಲಿಲ್ಲ. ಅಂಡು ಸುತ್ತ ಬೆಕ್ಕಿನಂತೆ ಚಡಪಡಿಸುತ್ತಿದ್ದರು ಎಂ.ವಿ. ಎಸ್. ಸಿಗರೆಟ್ ಎದೆಷ್ಟು ಸುಟ್ಟಿದ್ದರೋ ಅವರಿಗೆ ಗೊತ್ತಿರಲಿಲ್ಲ. ಎಲ್ಲರು ಕುಳಿತ ಜಾಗದಿಂದ ಏಳುವುದು ಕಾಂಪೌಂಡ್ ಬಳಿ ಹೋಗುವುದು, ಪುನಃ ವಾಪಸ್ ಬಂದು ಎಲ್ಲರ ಮುಖ ನೋಡಿ ಮರಳಿ ಅದೇ ಕ್ರಿಯೆಯಲ್ಲಿ ತೊಡಗಿತ್ತಿದ್ದರು. ಒಬ್ಬರನ್ನು ನೋಡಿ ಇನ್ನೊಬ್ಬರು ಹುಚ್ಚನಂತೆ ಯಾಕೆ ಆಡುತ್ತಿದ್ದಾನೆ ಎಂದುಕೊಳ್ಳುತ್ತಿದ್ದರು. ಈಗ ಯಾರು ಯಾರಿಗೂ ಸಮಾಧಾನ ಹೇಳುವ ಸ್ಥಿತಿಯಲ್ಲಾಗಲಿ, ಸಂತೈಸುವ ತಾಳ್ಮೆ ಯಾಗಲಿ ಇರಲಿಲ್ಲ.ಪೋಸ್ಟ್ ಮಾರ್ಟಮ್ ವರದಿ,ನಂತರ ಕರಿಯಪ್ಪನವರ ಪ್ರತಿಕ್ರಿಯೆ ಮಾತ್ರ ಅವರ ತಲೆ ತುಂಬಿಕೊಂಡಿತ್ತು.

ಪ್ರಪಂಚದಲ್ಲಿ ಇನ್ನಾವ ಘಟನೆಗಳು ನಡೆಯುತ್ತಿರಲಿಲ್ಲ.

ಕಾಲ ಯಾಕೋ ಸುಸ್ತಾಗಿ ನಿಂತಂತಿತ್ತು ಅವರ ಪಾಲಿಗೆ. ಕರಿಯಪ್ಪನವರು ಸಹ ಮಾತಿಲ್ಲದೆ ನೆಲವನ್ನು ಕೆರೆಯುತ್ತಾ ಅದೇನು ಯೋಚಿಸುತ್ತಿದ್ದರೋ ಅ ಭಗವಂತನಿಗೆ ಗೊತ್ತಿತ್ತು!....

ಪೋಸ್ಟ್ ಮಾರ್ಟಂ ಮುಗಿಯಿತು....ಡಾಕ್ಟರ್ ಹೊರಗೆ ಬಂದರು. ಮತ್ತೊಂದು ಕೊಠಡಿಗೆ ಹೋದರು.....

ವರದಿ ಪೋಲಿಸ್ ಇನ್ಸ್ಪೆಕ್ಟರ್ ಅವರ ಕೈ ಸೇರಿತು.

ಪೇದೆಯೊಂದಿಗೆ ಇನ್ಸ್ಪೆಕ್ಟರ್ ಕರಿಯಪ್ಪನವರು ಕುಳಿತ ಜಾಗಕ್ಕೆ ಬಂದರು.....ವರದಿ ಓದಿ ಹೇಳಿದರು....

ಮೌನ.. ಕಿವಿ ಕಿವುಡಾಗುವಂತೆ ಚಿರುತಿತ್ತು...ಎಲ್ಲರ ಬಡಿತ, ನಾಡಿ. ರಕ್ತದ ಹರಿವು, ಯೋಚನೆ ಸ್ಥಭ್ದವಾಗಿತ್ತು... ಒಂದು ಕ್ಷಣ.

ಇನ್ಸ್ಪೆಕ್ಟರ್ ಮುಂದಿಟ್ಟ ಪುಸ್ತಕದ ಹಾಳೆಯ ಮೇಲೆ ಎಲ್ಲಿ ಸಹಿ ಹಾಕಬೇಕೆಂದು ಕೇಳಿ, ತಮ್ಮ ಸಹಿ ಹಾಕಿದರು.....

ಕೀರ್ತಿಯ ಸಾವು ಕೇವಲ ಒಂದು ಆಕಸ್ಮಿಕ.....ಠಸ್ಸೆ ಒತ್ತಿದ್ದರು ಕರಿಯಪ್ಪ....ಮೃತನ ತಂದೆ.....ಕಾನೂನಿನ ಪ್ರಕಾರ ಸಾವಿನ ಕಾರಣಕ್ಕೆ ಅನುಮತಿ ಸಿಕ್ಕಿತು....ಸಿಗಬೇಕಾದವರಿಂದ...?

ಮುಂದೆ......ಉಪಧ್ಯಾಯರುಗಳೆಲ್ಲರು ಒಬ್ಬರ ಮುಖ ಒಬ್ಬರು ನೋಡಿಕೊಂಡು ಏನಾಗುತ್ತಿದೆ ಎಂಬುದನ್ನೂ ಹೇಳಲು ಬಾರದೆ ಇನ್ಸ್ಪೆಕ್ಟರ್ ಅವರಿಗೆ ಥ್ಯಾಂಕ್ಸ್ ಹೇಳಿದರು....ಪೆಚ್ಚು, ಪೆಚ್ಚಾಗಿ.....

ಕರಿಯಪ್ಪನವರು ಎದ್ದರು. ಎಚ್. ಎಮ್, ರವರ ಕಾಲಿಗೆ ಬಿದ್ದು ನಂತರ ದೂರದಲ್ಲಿ ಸಿಗರೆಟ್ ಸೇದುತ್ತಿದ್ದ ಎಮ್.ವಿ.ಎಸ್, ಅವರ ಬಳಿ ಹೊರಟರು. ಅವರ ತಮ್ಮ ಅವರನ್ನು ಹಿಂಬಾಲಿಸಿದ.

ಕರಿಯಪ್ಪನವರ ಈ ಅನಿರೀಕ್ಷಿತ ವರ್ತನೆ ಎಲ್ಲರ ಮುಖಕ್ಕೂ ಹೊಡೆದಂತೆ ಆಗಿತ್ತು. ಕಾರಣ.. "ನೋಡಿ..... ಅಮ್ಮ...... ನಿಮಗೆ ಯಾವರಿತಿಯಲ್ಲಿಯು ತೊಂದರೆ ಕೊಡಲಿಲ್ಲ, ಕೊಡೋದಿಲ್ಲ, ಕೊಡೋನಲ್ಲ, ಈಗ್ಲಾದ್ರೂ ಗೊತ್ತಾಯ್ತಾ?" ಎಂದು ಮೌನವಾಗಿ ಹೇಳಿದಂತೆ ಇತ್ತು ಅವರು ನಮಸ್ಕಾರ ಮಾಡಿ ಹೊರಟಿದ್ದು.

ಮುಖ್ಯೋಪಾಧ್ಯಯನಿಯವರು ಎಚ್.ಎ.ಅರ್, ಅವರನ್ನು ಬಳಿ ಕರೆದು, ತಮ್ಮ ಹತ್ತಿರವಿದ್ದ ಎಚ್.ಏನ್.ಎಸ್, ಮತ್ತು ಬಿ.ಅರ್.ಎಸ್, ರೊಂದಿಗೆ ಸಮಾಲೋಚನೆ ನಡೆಸಿ ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಮಾತನಾಡಿ ಹೆಣವನ್ನು ಬೆಂಗಳೂರಿಗೆ ಸಾಗಿಸಲು ಏರ್ಪಾಟು ಮಾಡಲು ತಿಳಿಸಿದರು. ಅದಕ್ಕೂ ಸಹ ಅವರಿಗೆ ಪೋಲಿಸ್ ಇನ್ಸ್ಪೆಕ್ಟರ್ ಅವರಿಂದ ಅನುಮತಿ ಹಾಗು ಸಹಕಾರದ ಅಗತ್ಯ ವಿತ್ತು. ಹೆಣ ಸಾಗಿಸಲು ಬೇಕಾದ ಕಾನೂನು ರೀತ್ಯಾ ಅಪ್ಪಣೆ ಮತ್ತು ಬೆಂಗಳೂರಿಗೆ ಹೆಣವನ್ನು ತೆಗೆದುಕೊಂಡು ಹೋಗುವ ವಾಹನ ವ್ಯವಸ್ಥೆ....ಆಗಬೇಕಿತ್ತು... ಇನ್ನು...

ಎಂ.ವಿ. ಎಸ್, ಇತ್ತ ಕರಿಯಪ್ಪನವರೊಡನೆ ಮತ್ತೊಂದು ಸಿಗರೆಟ್ ಹಚ್ಚಿ ಅವರಿಗೆ ಬಿಡಿ ಸೇದಲು ಪ್ರೇರೇಪಿಸಿ, ಸುಮ್ಮನೆ ತಮ್ಮ ಅಧ್ಯಾಪಕ ವೃಂದ ಮತ್ತು ಎಚ್.ಎಮ್, ನಡುವೆ ನಡೆಯುತ್ತಿದ್ದ ಸಂಭಾಷಣೆಯನ್ನು ಗಮನಿಸುತ್ತಿದ್ದರು. ಅವರೇನು ಮಾತನಾಡುತ್ತಿದ್ದಾರೆ, ಯಾವುದರ ಬಗ್ಗೆ ಆಲೋಚಿಸುತ್ತಿದ್ದಾರೆ ಎಂದು ಯಾರು ಅವರಿಗೆ ಹೇಳಬೇಕಿರಲಿಲ್ಲ. ಈಗ ಅವರ ಮನಸ್ಸಿನಲ್ಲೂ ಸಹಾ ಅದೇ ಯೋಚನೆ ಇತ್ತು. ಆದರೆ ಹೇಗೆ ಪ್ರಾರಂಭಿಸುವುದು ಅವರಿಗೆ ಸ್ವಲ್ಪ ಮುಜುಗರ ವಾಗುತ್ತಿತ್ತು. ಹಾಗು ಕರಿಯಪ್ಪನವರ ಹೇಳಿಕೆ ಮತ್ತು ಅವರು ಸಹಿ ಹಾಕಿದನಂತರ ಅವರಲ್ಲಿ ಉಂಟಾದ ತೀವ್ರ ಮಾನಸಿಕ ಖಾಲಿತನ, ಅವ್ಯಕ್ತವಾದ ಅಸಂಗತ ಆಯಾಮದ ಇನ್ನೊಂದು ಭಾವನೆಯಿಂದ ಹೊರಬರಲು ಕಾಲಾವಕಾಶದ ಅವಶ್ಯಕತೆ ಬಹಳವಿತ್ತು. ಅಥವಾ ದೊಡ್ಡ ಹೊರೆ ತಲೆಯಿಂದ ಇಳಿದು ಹೃದಯ ಹಗುರವಾದ ಸ್ಥಿತಿಯನ್ನು ಇನ್ನು ಕೊಂಚ ಹೊತ್ತು ಆನಂದಿಸುವ ಅಭಿಲಾಷೆ ಇತ್ತೋ ಏನೋ? ನಿಜಕ್ಕೂ ಅದು ಸಂತೋಷವೇ? ಅಥವಾ ಸ್ಥಿತಪ್ರಜ್ಞ ಸ್ಥಿತಿಯೇ? ಎಮ್.ವಿ.ಎಸ್, ಅವರಿಗೆ ತಿಳಿದಿರಲಿಲ್ಲ. ಒಟ್ಟಿನಲ್ಲಿ ಅ ಮಾನಸಿಕ ಸ್ಥಿತಿಯಲ್ಲಿಯೇ ಇರಲು ಬಯಸುತ್ತಿತ್ತು ಮನಸ್ಸು. ಎಚ್.ಎ.ಆರ್, ಆಸ್ಪತ್ರೆಯ ಕಾಂಪೌಂಡ್ ನಿಂದ ಹೊರ ಬಂದು ಧೂಮಪಾನದಲ್ಲಿ ತಲ್ಲಿನರಾಗಿದ್ದ ಕರಿಯಪ್ಪ, ಅವರ ತಮ್ಮ ಮತ್ತು ಎಮ್.ವಿ.ಎಸ್, ಅವರನ್ನು ಸೇರಿದರು. ಸ್ವಲ್ಪ ಸಮಯದ ನಂತರ ಮುಂದೇನು??? ಎಂಬ ಪ್ರಶ್ನೆಯನ್ನು ಕಣ್ಣಿಂದಲೇ ಕೇಳಿದರು. ಎಮ್.ವಿ.ಎಸ್, ಕರಿಯಪ್ಪನವರ ಕಡೆಗೆ ತಿರುಗಿ,

"ಕರಿಯಪ್ಪನವರೆ.... ಇನ್ನು ಸ್ವಲ್ಪ formalities ಬಾಕಿ ಇದೆಯಂತೆ. ನಂತರ ಬಾಡಿ ಸಿಗುತ್ತದೆ. ಅಷ್ಟರಲ್ಲಿ ನಾವು ಯಾವುದಾದರೂ ಗಾಡಿಯ ವ್ಯವಸ್ಥೆ ಮಾಡೋಣ ಬೆಂಗಳೂರಿಗೆ ಹೋಗಲು...... ಅಲ್ಲಿಯವರೆಗೆ ನೀವು ಇಲ್ಲೇ ನಿಂತಿರುವ ಅವಶ್ಯಕತೆ ಇಲ್ಲ, ನೀವು, ಅಮ್ಮ ಎಲ್ಲರೂ ಈಗ ಹಾಸ್ಟೆಲ್ ಗೆ ಹೋಗಿ, ನಾನು ಮತ್ತೆ ಮಾಸ್ಟ್ರು(ಎಚ್.ಎ.ಆರ್) ಎಲ್ಲಾ ಮುಗಿಸಿಕೊಂಡು ಬರ್ತೀವಿ..... ಎಂದು ಮೃದುವಾಗಿ ಹೇಳಿದರು.

"ಇಲ್ಲ ಸಾರ್, ಕೀರ್ತಿಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಬೇಡ.....ಇದು ನಮ್ಮ ಕೀರ್ತಿ ಅಂತ ತೋರಿಸಿ ಹೇಳಿದ್ರು ಯಾರಿಗೂ ಗುರ್ತು ಸಿಗೋದಿಲ್ಲ....ಅವನ ಅಮ್ಮ ಸಾಯುವತನಕ ತನ್ನ ಮೊದಲಿನ ಕೀರ್ತಿಯ ಮುಖವನ್ನೇ ನೆನಪಿಸಿಕೊಳ್ಳಲಿ.... ಬಾಡಿ ಯಾದ ಕೀರ್ತಿಯ ಈ ದೇಹವನ್ನು ನೋಡಿ ಜೀವನವೆಲ್ಲ ಕೊರಗುವುದು ಬೇಡ... ಅದು ನನಗೆ ಮಾತ್ರ.....ಇದನ್ನ ಇವನ ತಂಗೀರು, ನೋಡಿದ್ರೆ,..... ಬೇಡ ಸಾರ್..... ಅದೇನ್ ಮಾಡಬೇಕೋ ಅದನ್ನೆಲ್ಲಾ ಇಲ್ಲೇ ನೀವೇ ಮುಗಿಸಿಬಿಡಿ.....ನನ್ ಕೈಲಿ ಏನು ಆಗೋದಿಲ್ಲ......."

ಹೃದಯ ತುಂಬಿ ಬಂತು.... ಮಾತು ನಿಂತಿತು.... ಕಣ್ಣಿರು ಮಾಡು ಗಟ್ಟಿತು......ಈ ಮಾತನ್ನು ಕೇಳಿ ಉಪಾಧ್ಯಾಯರಿಬ್ಬರಿಗೂ ಆಶ್ಚರ್ಯ ಮತ್ತು ಆಘಾತ ಒಟ್ಟಿಗೆ ಆಯಿತು. ಕಾರಣ ಮಾನಸಿಕ ವಾಗಿ ಇದರ ಬಗ್ಗೆ ಯೋಚಿಸದಿದ್ದರೂ, ಬಾಡಿಯನ್ನು ಬೆಂಗಳೂರಿಗೆ ಕೊನೆ ದರ್ಶನಕ್ಕೆ ತೆಗೆದುಕೊಂಡು ಹೋಗುವುದೆಂದು, ವಾಡಿಕೆಯಂತೆ ಅಂದು ಕೊಂಡಿದ್ದರು ಎಲ್ಲರೂ. ಇದರ ಬಗ್ಗೆ ಯಾರು ಚರ್ಚಿಸುವ ಗೋಜಿಗೆ ಹೋಗಿರಲಿಲ್ಲ. ಈಗ ಕರಿಯಪ್ಪನವರ ಪ್ರಕಾರ ಅಂತ್ಯಸಂಸ್ಕಾರ ಜೋಗದಲ್ಲೇ ನಡೆಯುವುದು ನಿಶ್ಚಿತ. ಆದರೆ ಅ ಆಗಂತುಕ ಜಾಗದಲ್ಲಿ ಶ್ರವ ಸಂಸ್ಕಾರದ ಸಿದ್ಧತೆ ಊಹಿಸಲು ಅಸಾಧ್ಯ ವಾಗಿತ್ತು... ಉಪಾಧ್ಯಾಯರಿಬ್ಬರ ತಲೆ ಗಿರಿಗಿಟ್ಲೆ ಯಂತೆ ತಿರುಗಲಾರಂಭಿಸಿತು. ತೀರ ಅನಿರೀಕ್ಷಿತ ಬೆಳವಣಿಗೆ, ಕರಿಯಪ್ಪನವರ ವಾಸ್ತವಿಕ ಪ್ರಜ್ಞೆಗೆ ತಲೆ ತೂಗುವಂತಾದರೂ, ತಾವಿದ್ದ ಸ್ಥಿತಿಯಲ್ಲಿ ಏನನ್ನು ತಕ್ಷಣ ಹೇಳುವಂತಿರಲಿಲ್ಲ. ಆದರೂ ಎಮ್.ವಿ.ಎಸ್, ಧೈರ್ಯ ಮಾಡಿ ಹೇಳಿದರು...

"ಆಯ್ತು....ಕರಿಯಪ್ಪ...ಹಾಗೆ ಆಗ್ಲಿ.. ನೀವ್ ಹೇಳ್ದಂಗೆ ಇಲ್ಲೇ ಎಲ್ಲವನ್ನು ಮುಗಿಸಲು ಸಾಧ್ಯವೇ, ತಿಳಿದುಕೊಳ್ಳೋಣ...ಆದ್ರೆ.... ಹಂಗೆ ಮಾಡೋಣ..." ಎಚ್.ಎ.ಆರ್, ಕಡೆ ತಿರುಗಿ,

"ಸಾರ್, ನೀವ್ ಹೋಗಿ ಕೆ.ಇ.ಬಿ. ಇಂಜಿನಿಯರ್ ಬಳಿ ವಿಷಯ ತಿಳಿಸಿ... ನಾನು ಇನ್ಸ್ಪೆಕ್ಟರ್ ಬಳಿಮಾತನಾಡುತ್ತೇನೆ"

ಎಚ್.ಎ.ಆರ್. ಕರಿಯಪ್ಪನವರನ್ನು ಎಮ್.ವಿ.ಎಸ್, ರೊಟ್ಟಿಗೆ ಬಿಟ್ಟು ಎಚ್.ಎಮ್.ಬಳಿ ಓದಿದರು...ವಿಷಯ ತಿಳಿದ ತಕ್ಷಣ ಅಸಾಧ್ಯ ಎನಿಸಿದರೂ, ಕರಿಯಪ್ಪನವರ ಅ ಸಲಹೆ blessing in disguise ಎಂದು ಎಲ್ಲರಿಗು ನಿಧಾನವಾಗಿ ಅರಿವಾಯಿತು. ಅಂದರೆ ಶ್ರವ ಸಂಸ್ಕಾರ ಅಲ್ಲೇ ಆಗುವುದರಿಂದ ಬೆಂಗಳೂರಿನಲ್ಲಿ ಮುಂಬರುವ ಮುಜುಗರದ ಅನೇಕ ಅಪ್ರಿಯ ಸನ್ನಿವೇಶಗಳನ್ನೆಲ್ಲಾ ತಪ್ಪಿಸಬಹುದು. ಮುಖ್ಯವಾಗಿ, ಪೋಲಿಸರಿಂದ ಮುಕ್ತವಾಗಿ, ಯಾವ ಕಾನೂನಿನ ರಗಳೆ ಇಲ್ಲದೆ ಬೆಂಗಳೂರನ್ನು ತಾವುಗಳು ತಲುಪ ಬಹುದು.ಅ ವಿಷಯವನ್ನೂ ಎಚ್.ಎ.ಅರ್, ವಿವರಿಸಿ ಹೇಳಿದಾಗ ಎಲ್ಲರಿಗೂ ನಿಜವೆನಿಸಿ ನಿಟ್ಟುಸಿರು ಬಿಟ್ಟರು....

ಪ್ರವಾಸಿ ತಂಡದವರು ಅಂದುಕೊಂಡಂತೆ ಅಂತ್ಯಕ್ರಿಯೆ ಏರ್ಪಾಡು ಮಾಡುವುದು ಕಷ್ಟವೇ ಆಗಲಿಲ್ಲ. ಕಾರಣ ಜೋಗದ ಜನಗಳ ಅಪರೂಪದ ಮಾನವಿಯತೆಯ ಪ್ರದರ್ಶನ.

ಛೆ...ಈ ಪದ ಇಲ್ಲಿ ಸೂಕ್ತ ಅಲ್ಲ ಅಂತ ಕಾಣುತ್ತದೆ. ಪ್ರದರ್ಶನ ಅಂದರೆ ಇಚೆಗೆ ತೋರಿಕೆ ಎಂಬ ಅರ್ಥ ಕೊಡುತ್ತದೆ.
ಆದುದರಿಂದ ಅ ಪದದ ಬದಲು ಅವರ ಸ್ವಾಭಾವಿಕ, ಸಹಜ ಅಭಿವ್ಯಕ್ತಿ... ಎಲ್ಲರು ತಲೆ ತೂಗುವಂತೆ ಮಾಡಿತು...ಕೆ.ಇ.ಬಿ. ಇಲಾಖೆ ಯವರು ಕ್ರಿಯೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಪೂರೈಸಲು, ಮುಂದಾದರು. ಅವರ ಟ್ರಕ್ ನಲ್ಲಿಯೇ, ಅವರ ಚಾಲಕನೇ, ಸ್ವತಹ ಎಲ್ಲರ ಮನೆಗೆ ಹೋಗಿ ದಹನ ಕ್ರಿಯೆಗೆ ಬೇಕಾಗುವ ಕಟ್ಟಿಗೆಗಳನ್ನು ಸಂಗ್ರಹಿಸಿ ತಂದರು. ಸಾಕಷ್ಟು ಉರುವಲು ಲಾರಿಯನ್ನು ತುಂಬಿತು. ಕೆಲವರು, ಬಾಲಕನ ಅಥವಾ ಬ್ರಹ್ಮಚಾರಿಯ ಅಂತ್ಯ ಕ್ರಿಯಗೆ, ಶ್ರೀಗಂಧದ ದಾನ ಶ್ರೇಷ್ಟ ಎಂದು ತಿಳಿದು ಕೆಲವರು ಗಂಧದ ಕೊರಡನ್ನು ಸಹಾ ಲಾರಿಗೆ ತುಂಬಿದ್ದರು. ಲಾರಿಯೊಟ್ಟಿಗೆ ತುಪ್ಪ, ಎಣ್ಣೆ, ಕಡೆಗೆ ಸಿಮೆನ್ನೇ ಕೊಡುವುದನ್ನು ಮರೆತಿರಲಿಲ್ಲ ಅಲ್ಲಿಯ ಜನ... ಇನ್ನು.. ಉದಿನ ಕಡ್ಡಿ, ಕರ್ಪೂರ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿ ಕೊಳ್ಳಲು ಯಾರು ಹೋಗಲಿಲ್ಲ.

ಕೀರ್ತಿಯ ಅಂತಿಮ ಪ್ರಯಾಣ ಮೂರೂ ಮೂವತ್ತಕ್ಕೆ ಹೊರಟಿತು. ಲಾರಿಯ ಹಿಂಭಾಗದಲ್ಲಿ ದೇಹವನ್ನು ಇಟ್ಟಿದ್ದರು. ಗುರುತುಸಿಗಲಾರದ ಉಬ್ಬಿದ ಮುಖ ಮಾತ್ರ ಕಾಣಿಸುತ್ತಿತ್ತು. ಅದರಲ್ಲೂ ಹಣೆಯ ತುಂಬ ವಿಭೂತಿ ಮತ್ತು ಗಂಧ ಮಾತ್ರ ಎದ್ದುಕಾಣುತ್ತಿತ್ತು. ಪೂರ್ಣ ದೇಹ ಬಿಳಿ ಬಟ್ಟೆಯಿಂದ ಸುತ್ತಿದ್ದರು. ಎಲ್ಲ ಮೇಷ್ಟ್ರುಗಳು, ವಿದ್ಯಾರ್ಥಿಗಳು, ಕೆಲವು ಜೋಗದ ಜನ ಸಹಾಯಕ್ಕೆಂದು ಬಂದವರು ಲಾರಿಯ ಹಿಂಭಾಗದ ಇಟ್ಟಿದ್ದ ಮೇಲೆ ಚಟ್ಟದ ಸುತ್ತ ನಿಂತಿದ್ದರು. ಹೆಣಸುಡುವ ಸ್ಥಳ ತಲುಪಿದನಂತರ ಎಲ್ಲ ಆಗಬೇಕಾದ ಕೆಲಸಗಳು ಚಟ ಪಟನೆ ಮುಗಿಯಿತು....ಕಾಡಿನ ಅಂಚಿಗೆ ಅಂಟಿಕೊಂಡ ಪೊದೆಗಳು ಬೆಳೆದ ಒಂದು ಮೈದಾನ. ದಹನ ಕ್ರಿಯೆಗಾಗಿಯೇ ಸಿದ್ಧಗೊಂಡಿದ್ದ ಜಾಗ.. ದಟ್ಟವಾಗಿ ಬೆಳೆದ ಗಿಡ,ಗಂಟೆಗಳು ಲಂಟಾನ ಪೊದೆಗಳನ್ನು ಕತ್ತರಿಸಿ, ಚಿತೆಗೆ ಜಾಗ ಮಾಡಿದ್ದರು. ಕಟ್ಟಿಗೆಯನ್ನು ನೀಟಾಗಿ ಪೇರಿಸಿದ್ದರು.ಉಪಾಧ್ಯಾರುಗಳೇ ಚಟ್ಟದ ಸಮೇತ ದೇಹವನ್ನು ಚಿತೆಯ ಮೇಲೆ ಇಟ್ಟರು. ಎಲ್ಲರಿಗಿಂತ ಹಿರಿಯರಾದ ಹಾಗು ಸ್ವಲ್ಪ ಮಟ್ಟಿಗೆ ಅಚಾರ ವಿಚಾರಗಳನ್ನ ತಿಳಿದಿದ್ದ ಎಚ್.ಎನ್.ಎಸ್, ಅಂತ್ಯಕ್ರಿಯೆಗಳ ಮುಂದಾಳತ್ವ ವನ್ನು ವಹಿಸಿ ಕೊಂಡಿದ್ದರು. ಉಪಾಧ್ಯರೆಲ್ಲರು (ಒಬ್ಬರನ್ನು ಬಿಟ್ಟು) ಬ್ರಾಹ್ಮಣರೇ ಅದ್ದರಿಂದ ಪುರೋಹಿತರ ಅವಶ್ಯಕತೆ ಇಲ್ಲವೆಂದು ಕರಿಯಪ್ಪನವರೆ ಹೇಳಿದ್ದರು. ದೇಹ ಪೂರ್ತಿ ಮುಚ್ಚಿ ಹೋಗುವ ವರೆಗೂ ಕಟ್ಟಿಗೆಯನ್ನು ಪೇರಿಸಿದರು. ಕಟ್ಟಿಗೆಯ ಕೊರತೆ ಇರಲಿಲ್ಲ. ಎಣ್ಣೆ, ತುಪ್ಪದಿಂದ ಕಟ್ಟಿಗೆ ತೊಯ್ದಂತಾಗಿತ್ತು. ಎಚ್.ಎನ್.ಎಸ್, ಸತತವಾಗಿ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಾ, ಚಿತೆಯ ಸುತ್ತಾ ಬಂದರು. ಇತರ ಮೇಷ್ಟ್ರುಗಳು ಅವರನ್ನು ಹಿಂಬಾಲಿಸುತ್ತಿದ್ದರು. ಎಂ.ವಿ.ಎಸ್, ಮಾತ್ರ ಚಿತೆಯಿಂದ ದೂರ, ಎಚ್,ಎಂ, ಜೊತೆಯಿದ್ದ ಇತರ ಮೇಡಮ್ ಗಳು, ಕರಿಯಪ್ಪ ಮತ್ತು ವಿದ್ಯಾರ್ಥಿಗಳು ನಿಂತಲ್ಲಿ ನಿಂತು ಕೊಂಡು ನೋಡುತ್ತಿದ್ದರು. ಎಲ್ಲರ ಕಣ್ಣಲ್ಲೂ ನಿರು.... ಎಲ್ಲರ, ಅವರ ಮನಸ್ಸು ಬುದ್ಧಿ ಎಲ್ಲವು ಶಾಶ್ವತವಾಗಿ ಕೆಲಸ ಮಾಡುವುದನ್ನು ಬಿಟ್ಟು ಬಹಳ ಹೊತ್ತು ಆಗಿತ್ತು.

ಎಚ್.ಎನ್.ಎಸ್, ಅವರ ಬಾಯಿಂದ ಸ್ಪಷ್ಟವಾಗಿ ಭಗವದ್ಗೀತೆಯ ಶ್ಲೋಕ ಕೇಳಿ ಬರುತ್ತಿತ್ತು.....

ನೈನಂ ಛಿನ್ದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ

ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ............

ಮುಂದುವರೆಯಿತು.... ಮಂತ್ರ... ನಿಲ್ಲಲಿಲ್ಲ ಕಣ್ಣೀರು... ಸುತ್ತು ಮುಗಿಯಿತು... ಎಚ್.ಎನ್.ಎಸ್, ನಿಂತರು.....ದಕ್ಷಿಣ ದಿಕ್ಕಿಗೆ ನಿಂತು ಉರಿಯುತ್ತಿರುವ ಕೊಳ್ಳಿಯಿಂದ ಚಿತೆಗೆ ಸ್ಪರ್ಶಿಸಿದರು.......ಹೊಗೆಯಾಡಿತು... ನಿಧಾನವಾಗಿ ಹೋಗೆ ದಟ್ಟವಾಗಿ, ಅಲ್ಲಲ್ಲಿ ಕೆಂಪು ಜ್ವಾಲೆ ನಾಲಿಗೆ ಚಾಚಲು ಆರಂಭಿಸಿತು. ಸುಡುವ ತುಪ್ಪದ ವಾಸನೆ, ಜೊತೆಯಲ್ಲಿ ಬೆರೆತ ಒಣ ಕಟ್ಟಿಗೆಯ ಹೊಗೆ ಮೇಲೆ ಎರಲಾರಂಬಿಸಿತು.............

ಇದು ವೆರೆಗೂ ಭಾವೋದ್ವೇಗವನ್ನು ತಡೆದುಕೊಂಡಿದ್ದ ಎಂ.ವಿ.ಎಸ್, ಅವರ ಬಲವಂತದ ನಿರ್ಲಿಪ್ತತೆಯ ಮುಖವಾಡ ಕಳಚಿಬೀಳಲು ಆರಂಭಿಸಿದಾಗ, ತಮ್ಮೆಲ್ಲಾ ಸಂಯಮದ ಶಕ್ತಿಯನ್ನು ಉಪಯೋಗಿಸಿ ಅಳುವನ್ನು ತಡೆದು ಕೊಂಡರೂ ಸಾಧ್ಯವಾಗದೇ, ದುಃಖದ ಕಟ್ಟೆ ಒಡೆದು, ಕೊನೆಗೆ ಕಣ್ಣೀರಿನ ಕೋಡಿ ಹರಿಯಿತು.... ತಮಗೆ ಅರಿವಿಲ್ಲದೆ ನಿಶ್ಯಬ್ಧವಾಗಿ ಅಳುತ್ತಿದ್ದರು.....ಹೃದಯರಹಿತ, ನಿಷ್ಟುರಿ, ಲೋಕವಿರೋಧಿ, ಎರ್ರಾ ಬೆರ್ರಿ ಸ್ಟ್ರಿಕ್ಟ್ ಎಂದು ಹೆಸರುವಾಸಿಯಾಗಿದ್ದ ಎಂ.ವಿ.ಎಸ್, ಕುಂಟು ಮೇಷ್ಟ್ರು.........ಎಲ್ಲರಿಗು ಕಾಣಿಸುವ ಹಾಗೆ.... ವಿದ್ಯಾರ್ಥಿಗಳಿಗೆ ಆಶ್ಚರ್ಯದ ಜೊತೆ ನೋವುಆಯಿತು.. ಅವರ ಕಣ್ಣೀರು ಇನ್ನು ಹೆಚ್ಚಾಯಿತು... ಮೇಷ್ಟ್ರು ಅಳುವುದನ್ನು ನೋಡಿ....ಎಚ್.ಎಂ. ಶ್ರೀಮತಿಯವರ ಸ್ಥಿತಿಯಂತೂ ಚಿಂತಾಜನಕ ವಾಗಿತ್ತು. ಸತತ ವಾಗಿ ದಿನಗಟ್ಟಲೆ ಅತ್ತೂ...ಅತ್ತೂ...ಬಡವಾಗಿದ್ದರು. ಚಿತೆ ಉರಿಯಲು ಆರಂಭಿಸಿತು... ಅವರು ಅಲ್ಲೇ ಕುಸಿದರು... ತಕ್ಷಣ ಹತ್ತಿರವಿದ್ದ ಕರಿಯಪ್ಪನವರೆ ಬಂದು,

"ಅಮ್ಮ....ನೀವ್ ಹೀಗೆ ಅಳ್ತಾ ಇದ್ದರೆ.... ನಿಮ್ಮ...ಆರೋಗ್ಯ ಏನಾಗಬೇಕು? ನನಗೆ ಧೈರ್ಯ ಹೇಳಿ ನೀವೇ ಹೀಗಾದರೆ... ಯಾಕ್ ಅಳ್ತಿರಾ?...ಯಾತಕ್ಕೆ ಅಳ್ತಿರಿ? ನೋಡಿ...ನನ್ ಮಗನ ಅದೃಷ್ಟ.... ಹೇಗಿದೆ ಅಂತ... ಎಲ್ಲಾ ಬ್ರಾಹ್ಮಣರ ಕೈಲಿ ಮಾಡ್ಸಿಕೊಳ್ತಿದ್ದಾನೆ.... ಎಲ್ಲರಿಗೂ ಈ ಅದೃಷ್ಟ ಸಿಗೋದಿಲ್ಲ....ಅವನ ಮೇಷ್ಟ್ರುಗಳ ಕೈಲೇ.....ಶ್ರೀಗಂಧದ ಚಿತೆ.."
ಮಾತು ನಿಂತಿತು... ಮೌನವಾಗಿ ಕಣ್ಣುಒರೆಸಿಕೊಂಡರು....

ಅಲ್ಲೇ ನಿಂತಿದ್ದ ಎಂ.ವಿ.ಎಸ್, ಕರಿಯಪ್ಪನವರ ಮಾತು ಕೇಳಿ shock ಆದರು. ಅವರ ಕಲ್ಪನೆಗೆ ಮೀರಿದ ಅಂಶವನ್ನು ಅದೀಗತಾನೆ ಕರಿಯಪ್ಪನವರಿಂದ ತಿಳಿದು ಒಂದು ಕ್ಷಣ ಮೂಕಾದರು...

ನೂರಾರು ಪ್ರಶ್ನೆಗಳು ಅವರನ್ನು ಕಾಡಲು ಶುರುಮಾಡಿತು. ಒಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆ ಅದೆಷ್ಟು ಬಲವಾಗಿರಬಲ್ಲದು? ಪಾಪ,ಪುಣ್ಯಗಳ ಲೆಕ್ಕಾಚಾರ, ಕೆಲವು ಧಾರ್ಮಿಕ ಆಚರಣೆಗಳಿಂದ ಅಂತ್ಯ ಗೊಳ್ಳ ಬಲ್ಲುದೇ? ಮಗನನ್ನು ಕಳೆದುಕೊಂಡ ಒಬ್ಬ ತಂದೆಯ ದುಖ್ಹ ಕೇವಲ ಕೆಲವು ಧಾರ್ಮಿಕ ವಿಧಿ ವಿಧಾನ ಗಳಿಂದ ತಣ್ಣಗಾಗ ಬಹುದೇ? ಮಗ ತನ್ನ ಕಣ್ಣೆದುರಿಗೆ ಇಲ್ಲದೆ, ಸ್ವರ್ಗಕ್ಕಾಗಲಿ,ಅಥವಾ ನರಕಕ್ಕಾಗಲಿ ಹೋದರೆತಂದೆ ಅವನ ಅಕಾಲದ ಸಾವನ್ನು ಬದುಕಿನ ಬದಲಿಗೆ ಒಪ್ಪಿಕೊಳ್ಳಲು ಸಾಧ್ಯವೇ? ಸತ್ಯ ಮಾತ್ರ ಇನ್ನು ಆತನ ಮಗನನ್ನು ಇನ್ನೆಂದೂ ಆತ ಈ ಜೀವಿಗಳ ಪರಿಸರದಲ್ಲಿ ಸಹಜವಾಗಿ, ತನುಮನಗಳ ಸಹಿತ ನೋಡಲಾರ. ಅದು ಕಟು ಸತ್ಯ. ಮತ್ತು ಸಾವಿನ ನೋವಿನ ಮೂಲ ಕಾರಣ ಸಹಾ ಅ ಅಗಲಿಕೆಯಿಂದ ಆರಂಭ ವಾಗುತ್ತದೆ. ನಿಜ ಯಾವುದು ಶಾಶ್ವತ ವಲ್ಲ. ನಿಲ್ಲದ ಕಾಲದಲ್ಲಿ ಎಲ್ಲವೂ ಹುದುಗಿಹೋಗಿ ಸಾಮಾನ್ಯ ಬದುಕಿನ ಜಂಜಾಟಕ್ಕೆ ತೊಡಗಿಸಿಕೊಳ್ಳುತ್ತೇವೆ. ಇದೂ ಸಹ ಸರ್ವಕಾಲಿಕ ಸತ್ಯ. ಆದರೆ ಅದೇತಾನೆ ಮಗನ ದೇಹ, ಚಿತೆಯಲ್ಲಿ ಭಸ್ಮ ವಾಗುತ್ತಿರುವ ಅ ಸಮಯದಲ್ಲಿ ಮಗನ ಪುಣ್ಯದ ಟಿಕೆಟ್ ನಿಂದ ಸ್ವರ್ಗಕ್ಕೆ ಸಿಟೊಂದನ್ನು ಕಾದಿರಿಸುವಂತೆ ಮಾತನಾಡಿದ ಕರಿಯಪ್ಪನವರ ಭಾವನೆಯಾಗಲಿ, ನಂಬಿಕೆಯಾಗಲಿ ನಾಸ್ತಿಕವಾದಿಯಾದ ಎಂ.ವಿ.ಎಸ್, ಅರ್ಥವಾಗದ ಮಾತಾಗಿತ್ತು. ಆದರೆ ಅ ಧಾರ್ಮಿಕ ನಂಬಿಕೆ ಅಂತಹ ಸಮಯದಲ್ಲಿಯೂ ಒಬ್ಬ ತಂದೆಗೆ ಸಮಾಧಾನ ನೀಡಿದ್ದು ನಿಜವೇ? ಅಥವಾ ಮನುಷ್ಯ ತನ್ನ ದುಖವನ್ನು ಮರೆಯಲು ಹುಡುಕುವ ಒಂದು ದಾರಿಯೇ? ಮಗನ ಸಾವಿನ ನಷ್ಟ ತನ್ನ ಸತ್ತ ಮಗ ಸಂಪಾದಿಸುವ ಸ್ವರ್ಗದ ಲಾಭದ ಪ್ರಲೋಭನೆಯ ಮುಂದೆ ತೀರಾ ಕಿರಿದಾಗಿತ್ತು. ಅದು ತರ್ಕಕ್ಕೆ ಎಟುಕದ ಅಲೌಕಿಕ ವಾಸ್ತವಿಕತೆಯಾಗಿತ್ತು..........

ಕಣ್ಣಿರು ಹರಿಯುತ್ತಲೇ ಇತ್ತು.ಚಿತೆ ಧಗ ಧಗಿಸಿ ಉರಿಯುತ್ತಿತ್ತು. ಎಚ್.ಎನ್.ಎಸ್, ರವರ ಮಂತ್ರೋಚ್ಚಾರ ನಿಂತಿತ್ತು... ಎಲ್ಲರೂ ತಲೆ ತಗ್ಗಿಸಿ, ಹೊಟ್ಟೆಯ ಕೆಳಗೆ ಎರಡು ಕೈಗಳ ಬೆರಳುಗಳನ್ನು ಜೋಡಿಸಿ ಉರಿಯುತ್ತಿರುವ ಚಿತೆಯನ್ನು ನೋಡುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಉರಿಯುವ ಒಣ ಕಟ್ಟಿಗೆಯು ಚಟ ಪಟ ಶಬ್ದ ಮಾಡುತ್ತಿತ್ತು.. "let his soul rest in peace...." ಜೆ.ಎಸ್.ಡಿ, ಮೇಡಮ್ ಕಣ್ಣೊರೆಸಿಕೊಂಡರು.....

ಶವಸಂಸ್ಕಾರ ಮುಗಿಸಿ ಹಾಸ್ಟೆಲ್ ಗೆ ಎಲ್ಲರೂ ವಾಪಸ್ ಬಂದಾಗ ಕತ್ತಲು ಆವರಿಸಿತ್ತು.

ಕೆ.ಎಸ್.ಅರ್.ಟಿ.ಸಿ, ಸರಕಾರೀ ಬಸ್ ರಾತ್ರಿ ಹತ್ತೂವರೆಗೆ ಬೆಂಗಳೂರಿಗೆ ಹೊರಡುವುದಿತ್ತು. ಎಲ್ಲರ ಮನಸ್ಸು ಅರಿವಿಲ್ಲದ ಖಾಲಿತನವನ್ನು ಅನುಭವಿಸಿ, ಸಾಕಾಗಿ ಮನಸ್ಸು ಹೊಸ ಅನುಭವಕ್ಕೆ ಹಾತೊರೆದು ಬೆಂಗಳೂರಿನ ತಮ್ಮ ಮನೆಯ ನೆನಪು ಆರಂಭ ವಾಯಿತು. ಮಾರನೆ ದಿನ ತಮ್ಮ ಅತ್ಮಿಯರೊಂದಿಗೆ ಇರಬಹುದೆಂಬ ಅಸೆ ಹೊಸ ಚೇತನವನ್ನು ತಂದಿತ್ತು. ರಾತ್ರಿ ಬಸ್ ಹತ್ತುವುದನ್ನೇ ಕಾಯುತ್ತಾ ಕುಳಿತರು. ಬೇರೆ ಇನ್ನೇನು ಕೆಲಸ ಇರಲಿಲ್ಲ. ಹಿಂದಿನ ದಿನ ಇದ್ದ ಮನಸ್ಸಿನ ಸ್ಥಿತಿಯ ಅನಿಶ್ಚಿತತೆ, ಕಾತುರತೆ, ಹೇಳಲಾರದ ದುಖ, ನೋವಿನ ಹೆದರಿಕೆಯ ಸ್ಥಿತಿ ಮಾಯವಾಗಿತ್ತು. ಎಲ್ಲವನ್ನು ಪ್ಯಾಕ್ ಮಾಡಿ, ಗಡಿಯಾರ ನೋಡುತ್ತಾ ಕುಳಿತರು...ಆ ಸಮಯ ಕಡೆಗೂ ಬಂತು...

ಜೋಗದಲ್ಲಿ ಎಲ್ಲರೂ ತಮ್ಮ ಕೊನೆಯ ಊಟವನ್ನು ಮುಗಿಸಿ ಚಳಿರಾತ್ರಿಯಲ್ಲಿ ಬಸ್ ಸ್ಟ್ಯಾಂಡ್ ಗೆ ನಡೆದು ಕೊಂಡು ಹೊರಟರು. ವಾಚ್ ಮ್ಯಾನ್ ಆ ನಾಲ್ಕು ದಿನಗಳಲ್ಲಿ ಇವರ ಸುಖ ದುಖದೊಂದಿಗೆ ಭಾಗಿಯಾಗಿ ಬಹಳ ಆತ್ಮೀಯನಾಗಿಹೊಗಿದ್ದ. ಹೊರಟಾಗ ಎಲ್ಲರೊಟ್ಟಿಗೆ ಅವನ ಕಣ್ಣುಗಳು ಸಹಾ ತುಂಬಿ ಬಂತು. ಜೋಗದ ಜೀವನದ ಕೇಂದ್ರ ಬಿಂದು ಅವನಾಗಿದ್ದ. ದಿನದ ಪ್ರತಿಯೊಂದು ಚಟುವಟಿಕೆಯಲ್ಲಿ ಅವನ ಅವಶ್ಯಕತೆ ಬಹಳವಿತ್ತು. ಅವನ ಅಗಲಿಕೆ ಕೂಡಾ ಅಪಾರ ನೋವುಂಟು ಮಾಡಿತು. ದುಖ, ನೋವುಗಳಿಗೆ ಅದೆಷ್ಟು ಆಯಾಮಗಳು? ಕೀರ್ತಿಯ ಸಾವು, ವಾಚ್ ಮ್ಯಾನ್ ನ ಅಗಲಿಕೆ ಎರಡು ಅನುಭವಗಳಲ್ಲಿ ಉಂಟಾದ ನೋವಿಗೆ ಸಂಭಂದ ಇದೆಯೇ?.....

ಬಸ್ ನಿಲ್ದಾಣದಲ್ಲಿ, ಎರಡೋ ಅಥವಾ ಹೆಚ್ಚೆಂದರೆ ಮೂರೂ ಜನ ಇದ್ದರು. ಅವರು ಸಹ ಬೆಂಗಳೂರಿಗೆ ಹೊರಟ ಪ್ರಯಾಣಿಕರು, ಹಾಗು ಹೊರಟಿರುವ ಪ್ರವಾಸ ತಂಡದ ಎಲ್ಲರು ಅವರಿಗೆ ಪರಿಚಯ ವಾಗಿತ್ತು ಆ ನಾಲ್ಕೈದು ದಿನಗಳ ಸಂಪರ್ಕದಿಂದ... ಅರಿವಿಲ್ಲದೆ, ಅಭ್ಯಾಸ ಬಲದಿಂದ ಯಾಂತ್ರಿಕವಾಗಿ ಎದುರಿಗೆ ಸಿಕ್ಕವರು ಮುಗುಳುನಗೆ ಸ್ಪಂದಿಸಿದರು...ಉಪಾಧ್ಯಾಯರುಗಳು... ಬಸ್ ಸಿದ್ಧವಿತ್ತು...ಇಡಿ ಬಸ್ನಲ್ಲೆಲ್ಲಾ ಅವರುಗಳು ಮಾತ್ರ... ಒಬ್ಬನನ್ನು ಬಿಟ್ಟು.. ಅವರು ಸಹ ಶಿವಮೊಗ್ಗದಲ್ಲಿ ಇಳಿಯುವವರಿದ್ದರು. ಹಾಗಾಗಿ ಬಸ್ಸಿನಲ್ಲಿ ಜಾಗದ ಕೊರತೆ ಇರಲಿಲ್ಲ... ಕೊನೆ ಪಕ್ಷ ಶಿವಮೊಗ್ಗದ ತನಕ ಮಲಗಿರಲು ಯಾವ ಯೋಚನೆ ಇರಲಿಲ್ಲ. ಕಂಡಕ್ಟರ್ ಪ್ರಕಾರ ಬೆಂಗಳೂರಿನ ತನಕ ಅ ಹೊತ್ತಿನಲ್ಲಿ ಯಾರು ಹತ್ತುವುದಿಲ್ಲವೆಂದು... ಕಾರಣ ಅದು ಹೊರಡುವ ಸಮಯ ತುಂಬಾ ಲೇಟ್, ಹಾಗು ಡಿಸೆಂಬರ್ ತಿಂಗಳ ಅ ಕೊರೆಯುವ ಚಳಿಯಲ್ಲಿ ಪ್ರಯಾಣಿಸುವವರು ಕಡಿಮೆ.

"The great escape" ಸಿನೆಮಾದ ಯುದ್ಧ ಕೈದಿಗಳಂತೆ ತಮ್ಮ ಪುಟ್ಟ ಲಗೇಜ್ ಅನ್ನು ಹಿಡಿದು, ತಲೆ ತಗ್ಗಿಸಿ ಬಸ್ಸನ್ನು ಹತ್ತಿದರು ಒಬ್ಬರ ಹಿಂದೆ ಒಬ್ಬರು....ಹುಡುಗರು ಅಷ್ಟೊಂದು ಸೀಟ್ ಖಾಲಿ ಇದ್ದರು ಅಲ್ಲಿ ಇಲ್ಲಿ ಎಂದು ನುಗ್ಗಿದರು... ಸಮಯ ನಿಧಾನ ವಾಗಿ ಚಲಿಸುತ್ತಿತ್ತು. ಕೆಲವೇ ನಿಮಿಷಗಳಲ್ಲಿ ಸೀಟಿಗಾಗಿ ಇದ್ದ ಪೈಪೋಟಿ ಮಾಯವಾಯಿತು.....ಹುಡುಗರಲ್ಲಿ... ಪೈಪೋಟಿಯ ಅಗತ್ಯತೆ ಇಲ್ಲದಷ್ಟು ಖಾಲಿ ಬಸ್.....ಕಿಟಕಿಯಹತ್ತಿರದ ಜಾಗ ಎಲ್ಲಾ ಹುಡುಗರಿಗೂ ಸಿಕ್ಕಿತ್ತು....
ಟಾಟ ಹೇಳುವವರು ಯಾರು ಇರಲಿಲ್ಲ ಹೊರಗಡೆ.....ಆದರು ಕತ್ತಲಲ್ಲಿ ದಿಟ್ಟಿಸುತ್ತಿದ್ದರು ಅದೇನನ್ನೋ, ಕೈಚಾಚಿದ್ದರು ಕಿಟಕಿಯ ಹೊರಗೆ..... ಯಾರು ಏನನ್ನೂ ಮಾರುತ್ತಿರಲಿಲ್ಲ ಹೊರಗೆ....

ಉಪಾಧ್ಯಾಯರುಗಳಿಗೆ ಹೇಳಲು,ಏನು ಇರಲ್ಲಿಲ್ಲ. ಮೂಕರಾಗಿ ಸಿಕ್ಕ ಜಾಗಗಳಲ್ಲಿ ಕುಳಿತು ನಿದ್ರೆಗೆ ತಯಾರಿ ಮಾಡಿಕೊಂಡರು.ಕರಿಯಪ್ಪ ಮತ್ತು ಅವರ ತಮ್ಮ ಕೊನೆಯ ಸೀಟ್ ಅನ್ನು ಹಿಡಿದು, ಮುಖಕ್ಕೆ ಮಫ್ಲರ್ ಸುತ್ತಿ ಕಿಟಕಿಯ ಗಾಜನ್ನು ಸರಿಸಿ, ಕತ್ತನ್ನು ಕಂಬಿಯ ಮೇಲಿಟ್ಟರು. ಟವಲ್ ಅವರ ಪುಟ್ಟ ದೇಹವನ್ನು ಮುಚ್ಚಿತು.....

"ಹೊರಡೋಣಾ ಸಾರ್.. ಇನ್ಯಾರು ಬರೋದಿಲ್ಲ...ಐದು ನಿಮಿಷ ಮೊದ್ಲೇ ಹೋದ್ರೆ ಏನ್ ತೊಂದ್ರೆ ಇಲ್ಲ..." ಬೆಚ್ಚಗೆ, ಕುಳಿತ ಜಾಗದಿಂದಲೇ ಕೂಗಿದ ಕಂಡಕ್ಟರ್. ಕತ್ತಲಲ್ಲಿ ಸಿಗರೇಟ್ ಸೇದುತ್ತಿದ್ದ ಎಂ.ವಿ.ಎಸ್, ಕಡೆ ನೋಡಿ..ತಕ್ಷಣ ಸಿಗರೇಟ್ ಎಸೆದು ಕುಂಟಿಕೊಂಡು ಬಂದು ಬಸ್ ಹತ್ತಿದರು ಎಂ.ವಿ.ಎಸ್... ಕಂಡಕ್ಟರ್ ರೈಟ್ ಹೇಳಿದ... ಬಸ್ ಹೊರಟಿತು... ಬೆಂಗಳೂರಿಗೆ...
ಸಿಕ್ಕ ೩ ಸೀಟರ್ ನ ಒಂದು ಸೀಟ್ ನ ಮೂಲೆಯಲ್ಲಿ ಒರಗಿದರು...ಎಂ.ವಿ.ಎಸ್...ಜೀನ್ಸ್ ಪ್ಯಾಂಟ್ ಟೈಟ್ ಆದಂತೆ ಆಗಿ ಕಾಲು ಚಾಚಿ ಬೆನ್ನು ಮಡಚಿದರು. ಕಿಟಕಿಯ ಗಾಜು ಮುಚ್ಚಿದರು...ಚಳಿಯಿಂದ ತಪ್ಪಿಸಿಕೊಳ್ಳಲು.. ಮಡಚಿದ ಜುಬ್ಬದ ಕೈ ತೋಳನ್ನು ಬಿಚ್ಚಿ ಮುಷ್ಟಿಯನ್ನು ಮುಚ್ಚಲು ಪ್ರಯತ್ನಿಸಿ ವಿಫಲರಾದರು...ಬಸ್ ಮುಖ್ಯ ರಸ್ತೆ ಸೇರಿ ವೇಗ ಹೆಚ್ಚಾಯಿತು. ಕತ್ತಲನ್ನು ಸೀಳಿ ವೇಗವಾಗಿ ಚಲಿಸುತ್ತಿದ್ದ ಬಸ್ ನ ಹೊರಗೆ ನೋಡಿದಾಗ ತಮ್ಮ ಮುಖವನ್ನೇ ಕತ್ತಲಿನ ಹಿನ್ನೆಲೆಯಲ್ಲಿ ಕಂಡು, ಹಣೆಯನ್ನು ಗಾಜಿಗೆ ತಾಗಿಸಿ ಕಣ್ಣನ್ನು ತೆರೆದಾಗ ಕಂಡಿದ್ದು ಹಿಂದೆ ಸರಿಯುತ್ತಿದ್ದ ಮರಗಳು ಮಾತ್ರ... ಮತ್ತೊಮ್ಮೆ ತನ್ನ ವಿದ್ಯಾರ್ಥಿಯನ್ನು ಕಬಳಿಸಿದ ಅ balanced reservoir ನ ಒಮ್ಮೆ ಕೊನೆಯಬಾರಿ ನೋಡಲು ಹವಣಿಸಿತು ಮನಸ್ಸು...ಕಂಡದ್ದು ಅ ಮಂದ ಬೆಳದಿಂಗಳಲ್ಲಿ ನಿಶ್ಯಬ್ಧವಾಗಿ, ಸೌಮ್ಯವಾಗಿ, ಹರಿಯುತ್ತಿದ್ದ ಆ ಗುಪ್ತಗಾಮಿನಿ....ಸುಪ್ತಮರ್ಧಿನಿ...ಶರಾವತಿ ನದಿ ಪ್ರಪಾತಕ್ಕೆ ಧುಮುಕುವ ಮೊದಲು ಶಾಂತವಾಗಿ ಎಂದಿನಂತೆ, ಏನು ನಡೆದಿಲ್ಲದಂತೆ.... ಕಿಟಕಿಯಿಂದ ಸೀಳಿ ಬಂದ ಶೀತಗಾಳಿಯಲ್ಲಿ ದೇಹ ನಡುಗಿತು...ಸಣ್ಣ ತಲೆನೋವು ಪ್ರಾರಂಭವಾಗಿ ಕಣ್ಣು ಭಾರವಾಗ ತೊಡಗಿತು...ನೆನಪು...ಎಲ್ಲವು ಒಂದೊಂದಾಗಿ ಸಿನೆಮಾದಂತೆ ಕಾಣಲು ತೊಡಗಿತು...

ಕಾಲಿನ ಆಣಿಯ ಅಪರೇಷನ್, ಜೋಗ ಪ್ರವಾಸಕ್ಕೆ ಹೊರಟ ಶಾಲಾ ತಂಡ, ಲೇಟ್ ಆಗಿ ಜೋಗ ಸೇರಿದ್ದು, ಕೀರ್ತಿ ಧಿಕ್ಕರಿಸಿ ಸ್ನಾನಕ್ಕೆ ಹೋಗಿದ್ದು...,ಮುಳುಗಿದ್ದು...ಕುಣಿಗಲ್ ದಾರಿ, ಆಕಸ್ಮಿಕ ಕಂಡ ಹೆಣ, ಜನಗಳ ಅಕ್ರೋಶ....ಹೊಡೆತ...ಭಯಂಕರ ಮೌನ ಪ್ರಯಾಣ ವಾಪಸ್ ಜೋಗ್ ಗೆ ಕರಿಯಪ್ಪನವರ ಜೊತೆ.. ನಾಲ್ಕು ದಿನಗಳು ಇದ್ದ ಮನಸ್ಸಿನ ಅಶಾಂತ ಸ್ಥಿತಿ.... ಕೀರ್ತಿಯ ಉಬ್ಬಿದ ವಿಕಾರವಾದ ದೇಹ... ಚಿತೆ....ಹೊಗೆ, ಭುಗಿಲೆದ್ದ ಬೆಂಕಿ, ಕಡೆಗೆ ತಣ್ಣಗಾದ ಜ್ವಾಲೆ, ಬೂದಿಯಾದ ಬಾಲಕನ ಎಳೆಯ ದೇಹ.....ಜೋಗ್ ಜನತೆಯ ಮರೆಯಲಾರದ ಮಾನವೀಯತೆ....ಸಾಗಿತ್ತು ನೆನಪು ಕಣ್ಣಿನ ಪರದೆಯ ಮೇಲೆ, ರೆಪ್ಪೆ ಭಾರವಾಗಿ ಕೆಳಬರಲಾರಂಭಿಸಿತು...ಹಿಂದೋಡುವ ಮರಗಳ ಅಲೆಯಂತಹ ಚಲನೆ ವಂಚಿಸುವ ಬೆಳಕಿನಲ್ಲಿ....ಬಸ್ ಓಡುತ್ತಿತ್ತು.... ನೆನಪುಗಳ ನೋವಿನ ಅಸ್ಥಿರ ಮುಲುಗುವಿಕೆ ಕ್ರಮೇಣ ಕ್ರಮ ಭದ್ದವಾದ ಗೊರಕೆಯಾಗಿ ಬದಲಾಗುವುದರಲ್ಲಿ ಬಹಳ ಸಮಯ ತೆಗೆದುಕೊಳ್ಳಲಿಲ್ಲ....ಜೋಗ್ ಹಿಂದೆ ಸರಿಯಿತು..........ಬಸ್ ಸಾಗಿತ್ತು ಬೆಂಗಳೂರಿಗೆ....

Comments

Popular posts from this blog

Reunited...at last..

ಕಾಗೆ....

The Crow.