ವಿವೇಕಿ...

ವಿವೇಕಿ 

ಮಾಯಾವಿ,
ಸೂಕ್ಷ್ಮಾಣುಗಳಂತೆ,
ಆದರೂ ಸರ್ವಂತರ್ಯಾಮಿ ಪರಮಾಣುವಿನಂತೆ.
ಕ್ಷಣ ಕ್ಷಣದಲ್ಲೂ ಅನುಭವ,
ಆದರೂ ಅರಿವು ಅಸಂಭವ
ತ್ರಿಕಾಲ ಜ್ಞಾನಿಗಳಿಗೆ.
ಹಾಕಿರುವ ಬಣ್ಣದ ಚಾಳೀಸು ಬದಲಿಸಿ ನೋಡು,
ಆಗಬಹುದು ಪರಕಾಯ ಪ್ರವೇಶ.
ಕೊಡು...ಕಣ್ಣನ್ನು ಸೂಕ್ಷ್ಮದರ್ಶಕ ಮಸೂರಕ್ಕೆ,
ತೆಗೆ ಮುಚ್ಚಳ... ನೋಡು...
ಒಳಗೆ,
ಹೊರಗೆ,
ಅವತರಿಸಬಹುದು ಕಾಣದ ಆ ದೃಶ್ಯ
ಇಣುಕ ಬಹುದು ಮನುಕುಲದ ಆದರ್ಶ,
ದೃಷ್ಟಿ ದೋಷವೇ?
ವಿಸ್ತರಿಸಿ ಗೋಚರಿಸಿದ ವೈರಾಣು,
ಸೃಷ್ಟಿ ರೋಷವೆ? ಪರಿಸರ ಹೈರಾಣು!
ಸೋಂಕು
ಪ್ರಗತಿ, ಸಾಂಸ್ಕೃತಿಕ ರೋಗಾಣು
ಹೊರಗೆ ಕಾಣದ ಹುಣ್ಣು
ಆತ್ಮಕ್ಕೆ ಹಿಡಿದಿದೆ ಮಣ್ಣು.
ವಾಸಿಸಲು ಆಗಿದೆ ಪರಿಸರ ಅಯೋಗ್ಯ
ಪ್ರಗತಿ ಜ್ಞಾನ ತಂದ ಭಾಗ್ಯ
ತಾಯಿ ಹಿಡಿದಳು ಹಾಸಿಗೆ,
ನಮ್ಮ ಏಳಿಗೆ.
ಅರಿವಿದೆ ನಮಗೆ,
ದೃತರಾಷ್ಟ್ರ ಪ್ರೇಮ ಕಾಣದೆ ತಮಗೆ?
ಕುಳಿತಿರುವಿರಿ ಯಾಕೆ? ತೆಪ್ಪಗೆ.
ನಿಜ.... ಎಂದೋ ಬಿತ್ತಿದ ಬೀಜ
ಮೊಳೆತು, ನಿರಂಕುಶ ರಾಜ
ಸಾಗಿದೆ ನಿರಂತರ, ನಿಲ್ಲದ ಪೈಪೋಟಿ,
ಯಾರಿದರ ಮೇಟಿ?
ಕಲಿಸಿಕೊಟ್ಟಿದೆ ಸುಳಿವು
ಸಮರ್ಥರ ಉಳಿವು, ಅಸಮರ್ಥರ ಅಳಿವು,
"ದುಷ್ಟ ಶಿಕ್ಷಿಕ ಶಿಷ್ಟ ರಕ್ಷಕ"
ಚೆನ್ನಾಗಿದೆ ಈ ಶ್ಲೋಕ!
ಯಾರಿದರ ನಿರ್ಧಾರಕ?
ಹಾಡುತ್ತಲೇ ಇದ್ದಾನೆ ಮೈ ಮರೆತು ಗಾಯಕ!
ಯಾರು ಖಳನಾಯಕ?
ನಂಬಿದ್ದಾನೆ,
ಅಸಲು ವಾರಸುದಾರ ತಾನೆ,

ವಿವೇಕಿ ಮಾನವ, ಯಜಮಾನ
ಯಾರಿವನ ಸಮಾನ?
ಹರಡಿ ವಿನಾಶದಂಟು ಬೇನೆ,
ಅಳಿದು ಹೋದ ಅಳಲು ತಾನೆ?
ಇರಲಾಗದು ಸುಮ್ಮನೆ, ಬೆಂಕಿಯಾಗಿದೆ ನಮ್ಮನೆ
ಬದುಕು ಮೆರೆದ ಅರಮನೆ, ಆಗದಿರಲಿ ಸೆರೆಮನೆ
ಕೂರ ಬೇಡ ಸುಮ್ಮನೆ,
ಭೋಗ ಸಹಿಸದಾ ಕಾಮನೆ
ಕೊಳೆತು ನಾರಿದೆ ವಾಸನೆ...ನಿನ್ನ ಕರ್ಮದ ಆರಾಧನೆ.










Comments

Popular posts from this blog

Reunited...at last..

ಕಾಗೆ....

The Crow.