ಅಮ್ಮನತೀರ್ಪು...ಕಾದುನೋಡೋಣ.




ಅಮ್ಮನತೀರ್ಪು...ಕಾದುನೋಡೋಣ.

ದೇವ, ದೈವ ಇಬ್ಬರೂ ನಮ್ಮ ಪಾಲನೆಯ ತಮ್ಮ ಹೊಣೆಯನ್ನು
ನಿನ್ನ ತಾಯಿಗೇ ಬಿಟ್ಟಿದ್ದಾರಂತೆ ನೋಡು.
ಏನನ್ಯಾಯ?
ದುರ್ವಾಸ ಮುನಿಯಂತೆ ಮುನಿದು ಮೌನಿಯಾಗಿರುವ ಅಮ್ಮ.
ಕಾರಣ ಗೊತ್ತಾ ಮಗಾ?
ನಿನ್ನಿಂದಲೇ ಅಂತೆ, 
ಕಂಗಾಲಾಗಿರುವ ಆಕೆಗೆ  ನಿನ್ನದೇ ಚಿಂತೆ
ಮಮತೆಯ ಮಮಕಾರಕ್ಕೆ ಸೋತು ಕುದಿಯುತ್ತಿದ್ದಾಳೆ
ಭೂಮಂಡಲದ ಸುಪ್ತ ಲಾವಕಂದರಗಳಲ್ಲಿ.
ಮೊದಲು ಹೀಗಿರಲಿಲ್ಲವಂತೆ! ನಿನ್ನಮ್ಮ
ಹಾಗೆಂದು ಹೇಳುತ್ತಾರೆ ಹಿರಿಯರು.
ಇರಲಿಲ್ಲ ಆಗ ನಾವ್ಯಾರು

ಸರ್ವಗುಣ ಸಂಪನ್ನೇ...
ಭೂಗರ್ಭ ಸಿರಿವಂತೆ ಎಲ್ಲಕೂ ಅವಳೇ ಒಡತಿ....
ಸರ್ವಾಧಿಕಾರಿ ಅವಳಲ್ಲ
ಸರ್ವರಿಗೂ ಸಿರಿಹಂಚುವ ಹಂಬಲ,
ಇದು ಎಲ್ಲಾ ತಾಯಿಯ  ಬಯಕೆ
ಬಿದ್ದಿದೆ ನಿನ್ನಿಂದಲೇ ಕೊಕ್ಕೆ..ಅದಕೆ

ಬೇಕಿತ್ತೇ? 
ಬದುಕಲು ಅ ಮೂರು ಕಪಟ ಹಜ್ಜೆ ವಾಮನನಿಗೆ
ನೀನಾದರೋ ತ್ರಿವಿಕ್ರಮ,
ಅನಗತ್ಯ ಬೇಕಿದೆ ಎಲ್ಲವೂ ನಿನಗೆ
ನಿನ್ನವರು ಯಾರಿಲ್ಲ, ಯಾರೂ ನಿನಗೆ ಬೇಕಿಲ್ಲ
ನಿನ್ನ ಭೋಗ ವೈಭವವೇ
ಆಮ್ಮನ ಕಾಡುತಿರುವ ಮಹಾಭಯ

ನೋವಿಗೊಂದು ಗಡಿ, ತಾಳ್ಮೆಗೊಂದು ಮಿತಿ,  
ತಿಳಿದಿಲ್ಲ ನಮಗೆ, ಕಾದಿರುವ ಗ್ರಹಚಾರ
ಕರಳಬಳ್ಳಿ ಕಳಚಿ, ಛಿದ್ರವಾಗುವ ಮಮಕಾರ
ನಿನ್ನ ಚೀತ್ಕಾರ,
ನಿಶ್ಚಲ ನಿಲ್ಲುತ್ತವೆ ನಿಂತಲ್ಲೇ ಅಲೆಗಳು.
ಅಪ್ಪಳಿಸುವುದಿಲ್ಲ ನಿನ್ನ ಆಕ್ರಂದನ ಕಿವಿಯತಮಟೆಗೆ
ಕರಳು ಮಿಡಿಯುವುದಿಲ್ಲಕೊರಗಿ ಕರಕಲಾದ ಗುಡಿಯಲ್ಲಿ
ಕಡಲ ಕೂಗು ಮುಗಿಲ ಘರ್ಜನೆಯಲ್ಲಿ ರಣಿಸಿ
ರಣರಂಗ ವಾಗಿಸುತ್ತಾಳೆ ತನ್ನ ಮಡಿಲನ್ನೇ..
ಕೇಳೆ ಕೇಳುತ್ತಾಳೆ ಪಾಪ! ಗಾಂಧಾರಿ...ಅನಿವಾರ್ಯದ ಪ್ರಶ್ನೆ...
ಗುಬ್ಬಿಯಮೇಲೆ ಬ್ರಹ್ಮಾಸ್ತ್ರ ಬೇಕಿತ್ತೇ ಮಗನೇ...?

ಅಮ್ಮ ನಿಷ್ಪಕ್ಷಪಾತಿ.
ನಿಜ.... ಎಲ್ಲರಿಗೂ ಗೊತ್ತು
ನಿನ್ನುಳಿದು...
ಆದರೂ ಒಪ್ಪಲೇಬೇಕು, ನೀನೆಂದರೆ ಸ್ವಲ್ಪ ಹೆಚ್ಚೇ
ಆಕೆಯ ಪ್ರೀತಿ ಹುಚ್ಚು.
ಎಲ್ಲ ಕರಳಬಳ್ಳಿಗಳಿಗಿಂತ ನೀನಾಗಿದ್ದೆ ನಿಸ್ಸಾಹಾಯಕ.
ಅಂಟಿಕೊಂಡಿರುತ್ತಿದ್ದೆ ಹಾಗಾಗಿ ಬಹಳ ಸಮಯದ ತನಕ.
ಹಾಗೆಂದೇ ಸಹಿಸಿದ್ದಾಳೆ ಮೂಕಳಾಗಿ 
ಎಳೆ ಹಸುಳೆ ಮೊಲೆ ಕಚ್ಚಿದ ಆಘಾತ,
ಆಶ್ಚರ್ಯದಲ್ಲೇ ನಿಷ್ಕ್ರಿಯ  ಸ್ತಭ್ದತೆ
ನಿಷ್ಪ್ರಯೋಜಕ...ನೀನಲ್ಲ ಬಾಲಕೃಷ್ಣ!
ಕುಡಿಸಲಿಲ್ಲ ವಿಷ,
ನೀನಾಗಬಲ್ಲೆಯಾ ವಿಷಕಂಠ?
ಬೇಡವೆಂದರೂ ನೆನಪಾಗುತ್ತಾನೆ ಭಸ್ಮಾಸುರ.....
 
ನೀನೊಬ್ಬನೆ ಅಲ್ಲ ಅವಳ ವಾರಸುದಾರ..
ಹಾಗೆಂದೇ, ಒಡನಾಡಿಗಳ ದೂರು
ಸ್ವೀಕೃತವಾಗಿದೆ ಅಹವಾಲು ಮುಕ್ತ ನ್ಯಾಯಲಯದಲ್ಲಿ
ದೇವರೇ ಹೊರಡಿಸಿದ್ದಾನಂತೆ ಆದೇಶ
ಅಧಿಸೂಚನೆ ಜಾರಿಯಾಗಿದೆ,
ಎಲ್ಲರ 
ಅನುಮೋದನೆಯಂತೆ ಅಮ್ಮನೇ ನ್ಯಾಯಾಧಿಪತಿ
ಈ...... ಸರ್ವೋಚ್ಛ ನ್ಯಾಯಲಯಕೆ
ತೀರ್ಪು ನೀಡಲಿದ್ದಾಳೆ ಇಷ್ಟರಲ್ಲೇ....

Comments

Popular posts from this blog

Reunited...at last..

ಕಾಗೆ....

The Crow.