ಇದು ಗದ್ಯವೇ ಅಥವಾ ಪದ್ಯವೇ.... ನೀವೆ ನಿರ್ಧರಿಸಿ.
ಜೀತದಾಳಿಗಿಂತ ಕೆಟ್ಟದಾಗಿ ಕೆಲಸ ಹಚ್ಚಿಸಿ, ಬೆವರಿಸಿ ಆವಿಯಾಗಿಸುವುದೇ ಈತನ ತೆವಲು, ಸಹಿಸಲೇಬೇಕು ಸೌರ್ಯವ್ಯೂಹದ ಚಕ್ರವರ್ತಿಯ ಪೊಗರು. ನಿಸ್ಸಾಹಯಕರು, ಒಪ್ಪಿಕೊಂಡಿದ್ದೇವೆ ನಾವೆಲ್ಲಾ, ಈತನ ಸಾರ್ವಭೌಮತ್ವ, ಪಾರುಪತ್ಯ ಎರಡನ್ನು ತುಟಿಕ್ ಪಿಟಿಕ್ ಎನ್ನದೆ.ನಿರ್ಜೀವಿ, ಜೀವಿಗಳ ಮುಲಾಜಿಲ್ಲದೇ ಎಲ್ಲರಿಗೂ ಕೆಲಸ ಹಚ್ಚಿರುವ ಈ ಹುಚ್ಚಿಗೆ, ನನ್ನಲ್ಲಿಲ್ಲ ಮೆಚ್ಚುಗೆ. ಅನ್ನಬಹುದಲ್ಲವೆ ಈತ ಒಬ್ಬ ಭಯಂಕರ ಸ್ಯಾಡಿಸ್ಟ್?. ದುರ್ವಾಸನ ರಕ್ತ ಕೆಂಗಣ್ಣು ಕೋಪಕ್ಕೆ ಗಿಡಮರಗಳ ಎಲೆಗಳೆಲ್ಲಾ ತಲೆತಗ್ಗಿಸಿ ನಿಂತಿವೆ ಮೌನದಲ್ಲಿ. ಜೀರುಂಡೆಗಳ ಝೇಂಕಾರದ ಹಿಮ್ಮೇಳದಲ್ಲಿ ಗಾಳಿಯೂ ಅಲುಗಾಡದ ಮೂಕ ಪ್ರೇಕ್ಷಕ.
ಕೆಂಗಾವಲು ಕಾವಲುಗಾರನಿಗೆ ಮೈಎಲ್ಲ ಕಣ್ಣು. ತಪ್ಪಿಸಿಕೊಳ್ಳಲಾರರು ಯಾರುಇಲ್ಲಿ ಜೀತದಿಂದ, ಕೆಲವೊಮ್ಮಕಣ್ಣು ತಪ್ಪಿಸಿ ಸರಿಯುತ್ತವೆ ನೆರಳಿನ ಬದಿಗೆ ಬದುಕು. ಹಾವುಹಲ್ಲಿಗಳು ಮೊರೆಹೋಗುವ ಬಿಲದಲ್ಲೂ ತಲುಪುವ ಕಿರಣದ ಶಾಖ, ಕಂಗಾಲು ಮಾಡಿ ಜೋಲು ಬಿದ್ದ, ಜೊಲ್ಲುಸುರಿಸುವ ನಾಲಿಗೆಯ ಏದುಸಿರು ವ್ಯಾಘ್ರಗಳಲ್ಲಿ. ಮೈ ಮರೆತು ಎದುರಿಗಿದೆ ನೆರಳಲ್ಲಿ ತನ್ನ ಪಾಡಿಗೆ ತಾನೆ ಯಾರನ್ನು ಲೆಕ್ಕಿಸಿದೆ ಧರ್ಯವಾಗಿ ಹುಲ್ಲು ಮೇಯುವ ಭಕ್ಷಕ ಮಂದಿ. ಕಾಡೆಲ್ಲಾ ಕಳ್ಳತನದಲಿ ಪಡೆಯುತ್ತಿದೆ ವಿಶ್ರಾಂತಿ. ನೀಲಿ ಮಧ್ಯದ ಸೂರ್ಯನ ಯಾಮಾರಿಸುವುದು ಸುಲಭ. ಮೇಲಿದ್ದಾನೆ ಅತಿ ಎತ್ತರದಲ್ಲಿದಲ್ಲಿ ತನ್ನ ಪ್ರಭಾವಳಿಯಲ್ಲಿ ತಾನೇ ಕುರುಡಾಗಿ, ವಿಶ್ವವೇ ಬದಲಾದ ಒಂದು ಬಿಸಿಲು ಕುದುರೆ.
ಈ ಐಲುರಾಜಿನಿಗೆ ಮಿತ್ರರಿಲ್ಲ ಬಹಳ. ಇರುವ ಇಬ್ಬರ ಸಂಭಂದ ಬಲು ಸರಳ. ಪಾಪಿ ಹಿರಿಯ ಸ್ನೇಹಿತನಂತೆ, ಪಾಪ.... ಇವರೂ ಕಂತೆಗೆ ತಕ್ಕ ಬೊಂತೆ. ಆದರೂ ಅತಿ ಕೆಡುಕರಲ್ಲಿ ತುಸು ಕಡಿಮೆ ಕ್ರೌರ್ಯದ ಒಳ್ಳೆಯವರು. ಅಷ್ಟೇ. ಸಾಭ್ಯಸ್ತರಲ್ಲ ಇವರು ಪ್ರಾಣತಿನ್ನುವವರೇ. ಇವರಲ್ಲೊಬ್ಬ ಮೇಘರಹಿತ, ಶಾಖರಹಿತ ಶೀತ ಗ್ರೀಷ್ಮ ಎಂದೇ ಪ್ರಸಿದ್ಧಿ. ಮಿತ್ರನ ಗೈರುಹಾಜರಿಯಲ್ಲಿ ಈತ ಸರ್ವಾಧಿಕಾರಿ ಕೊರೆಯುವ ಕ್ರೌರ್ಯ ಮಲಗಿಸುತ್ತದೆ ಶಾಶ್ವತವಾಗಿ. ಹೆದರಿಕೆಯ ನಡುಕದಲಿ ನಗ್ನವಾಗುವ ಹಸಿರು, ಬಿಳಿಯ ಚಾದರವಾಗಿ ಮುಲುಗುತ್ತದೆ ನಿಟ್ಟುಸಿರು. ನೀರಿಗೂ ಕ್ಷಮೆಇಲ್ಲ. ಹೆಪ್ಪುಗಟ್ಟಿಸಿ ಹರಡಿ ಅಟ್ಟಹಾಸ ಮೆರೆಯುವ ಪರಿ ಪದರವಾಗಿ. ಹರಿಯುವ ನೀರನ್ನು ಲಂಗೋಟಿ ಮಾಡಿ ಅದರಮೇಲೆ ಕುದುರೆ ಓಡಿಸುವ ಒರಸೆ, ತಿರುಗಿಸುತ್ತಾನೆ ತನ್ನ ಚೂಪು ಮೀಸೆ ನೀರ್ಗಲ್ಲುಗಳ ಹಿಮಪಾತದಲ್ಲಿ ಕೇಳಿಬರುವ ಶಂಖನಾದ. ಬಾರದ ಕೈಲಾಸವಾಸಿ. ಪ್ರಾಣಿಗಳ ಸುಳಿವಿರದು ಈತನ ಪಾಳಿಯಲ್ಲಿ. ಪಾಪ! ಅವುಗಳಿಗಾದರೂ ಆಸರೆ ಎಲ್ಲಿ? ಗಿಡಮರಗಳು ಸೆಣಸಿ ಊನಗೊಂಡ ತಮ್ಮಅಂಗಾಂಗಳ ಶಶ್ರೂಷೆಯಲಿ ನಿರತ. ಉತ್ಪಾದಕರೇ ಪರಾವಲಂಬಿಗಳಾಗುವ ವಿಚಿತ್ರ.
ಬಲವಂತವಾಗಿ ಸ್ನೇಹಿತನ ಬೀಳ್ಕೊಡಿಗೆ, ತಾತ್ಕಲಿಕವಾಗಿ....ಮತ್ತೆ ಬರಬಹುದಾದ ಆಶ್ವಾಸನೆಯಲಿ.
ತೆರಳುತ್ತಾನೆ ಛಳಿರಾಜ ಸೂರ್ಯಮಿತ್ರ, ಸದ್ಯ. ಬರೆದಾಯಿತು ಆಗಲೇ ಸ್ವಾಗತ ಗೀತೆ ನವ್ಯ ಪದ್ಯ.
ತೊಲಗಿದ್ದ ಬಿಸಿಲುರಾಜ ಬರುತ್ತಾನೆ ಮತ್ತೆ ಹೊಳೆಯುತ್ತಾ, ಗವಾಕ್ಷಿಯಿಂದ ಇಳಿಯುತ್ತಾ.... ಸೇಡು ತೀರಿಸಲು ಇನ್ನಷ್ಟು ತೀಕ್ಷ್ಣ,ತೀವ್ರ ಮತ್ತಷ್ಟು ಪ್ರಖರ. ಎಲ್ಲರಿಗೂ ಕೊಡುತ್ತಾನೆ ಬಾಸುಂಡೆ, ಬರೆ. ಬಿರುಕು ಬಿಡಿಸುತ್ತಾನೆ ಕೆರೆ,ತೊರೆಗಳಲ್ಲಿ. ನಿಶ್ಯಭ್ದ ಒಳಸಂಚು ನಡಿಯುತ್ತಿದೆ ತಿಳಿಯದಂತೆ ಕಾಡ ಜೀವಿಗಳಲ್ಲಿ, ಸಂಚಾರವಾಗಿದೆ ತಲೆ ಎತ್ತುವ ಹುರುಪು. ಅದ್ಯಾವುದೋ ಟಾನಿಕ್ ಹರಿಯುತ್ತಿದೆ ಕಾಣದಂತೆ. ಚಿಗುರುತ್ತಿದೆ ಮೀಸೆ ವೃಕ್ಷರಾಜನ ಪೀಳಿಗೆಗಳಲ್ಲಿ. ಚಾಲಾಕಿ ಕಿರಣಜನಕ ಬೆಳಕಿನಲ್ಲೂ ಕುರುಡಾಗಿದ್ದಾನೆ ಎಲ್ಲಾ ಆಗುಹೋಗುಗಳಿಗೂ. ತಿಳಿದು ತಿಳಿಯದವನಂತೆ. ರಾಚುತ್ತಾನೆ ತನ್ನ ಚಾವುಟಿ ಬಾಯಾರಿದವರಮೇಲೆ. ಕಾಡ್ಗಿಚ್ಚು ಧಗಿಧಗಿಸಿ ಉರಿದಾಗ ಭೂಮಂಡಲ ಸಂಕುಚಿಸಿ ಬೆಂಡಾದ ಉಂಡೆ. ಚದುರುತ್ತವೆ ಜೀವಜಂತುಗಳು ಚೆಲ್ಲಾಪಿಲ್ಲಿಯಾಗಿ ಏನನ್ನೋ ಆರಿಸಿಕೊಂಡು. ಸಿಕ್ಕರೂ ಸಿಗಬಹುದು ಅವುಗಳಿಗೆ ಬದುಕಿಉಳಿಯಲು ಬೇಕಾದ ಮೀಸಲು ಕನಿಷ್ಟ ದಾಸ್ತಾನು.
ಇನ್ನೂ ಮುಗಿದಿಲ್ಲ ನಿಮ್ಮ ಸೂರ್ಯನ ಕಥೆ. ಕೇಳಲೇ ಬೇಕು ಆದರೂ ನಿಮಗೆ ವ್ಯಥೆ.
ಬಿಸಿಲರಾಜನ ದುರಾಡಿಳಿತದಲ್ಲಿ ಕರಕಲಾಗಿಹೋಗಿದ್ದ ಜೀವಿಮಂದಿ ನೋಡುತ್ತಾರೆ ಆಕಾಶ. ಬಂದೇ ಬರುತ್ತಾನೆ ಸೃಷ್ಟಿಕರ್ತನ ರಾಯಭಾರಿ ಮುಂಗಾರು, ಮುಂಗೋಪಿ, ಆದರೂ ಪರವಾಗಿಲ್ಲ ತೊಲಗಿಹೋದರೆ ಸಾಕು ಈ ಸೆಖೆಯ ಕ್ರೂರಿ ಪಾಪಿ. ಗುಡುಗಿದ ಗಗನ. ಘೋಷಿಸಿದೆ ಮೋಡಗಳ ಆಗಮನ..... ಮಬ್ಬಾದ ಆಗಸದಲ್ಲಿ ಮಿಂಚು ಹೊಳೆದಾಗ ಸೂರ್ಯನಿಗೆ ಎದ್ವಾ ತದ್ವಾ ಸಿಟ್ಟು....ಮೋಡದ ಅಡ್ಡ ಗೋಡೆಯಹಿಂದೆ ಬಲವಂತ ನೂಕಿದ ಸೂರ್ಯನಿಗೆ ಕೋಪ. ಮತ್ತೆಬರುತ್ತಾನೆ ಮೋಡಗಳ ಸೀಳಿ ನಿಮ್ಮನ್ನು ಬಿಸಿಮಾಡಲು. ಮಳೆಗೆ ಯಾರಹಂಗಿಲ್ಲ, ಪಡೆದಿದೆ ಈಗಾಗಲೇ ಅದು ವರ್ಣನ ಕಛೇರಿಯಿಂದ ಒಪ್ಪಿಗೆ ಪತ್ರ. ಸೂರ್ಯನಿಗೆ ಆದು ಆದೇಶ, ಆ ಮಾತು ಮೀರುವಹಾಗಿಲ್ಲ. ತಳಮಳದಲ್ಲಿ ಸಮಯಸಾಧಿಸಿ ತೂರುತ್ತಾನೆ ಮತ್ತೆ,ಮತ್ತೆ.ಬೆಳಕಿನಲ್ಲೇ ಬೆವರಿದ ಮೋಡಗಳು ಸುರಿಸುತ್ತವೆ ಮಳೆ. ತೊಳೆದು ಶುಚಿಗೊಳಿಸುತ್ತದೆ ಬಿಸಿಲರಾಜನ ಧೂಳು ನಿಲುವಂಗಿ. ಜಳಕದಲಿ ಪುಳಕಿತ ಧರೆಯಲ್ಲಿ ಪುಟಿಯುವ ಹಸಿರಿನಲ್ಲಿ. ಬಣ್ಣ ಹಚ್ಚುವ ವರ್ಷಧಾರೆ. ಎಲ್ಲಲ್ಲೂ ಹೊಳೆಯುತ್ತದೆ ಬಣ್ಣ ಸೂರ್ಯನ ಹಂಗಿಲ್ಲದೆ ಮೊದಲಬಾರಿ.......
Comments