ಆರ್ಕಿಯಾಪ್ಟೆರಿಕ್ಸ್....


ಇದೊಂದು ಜೀವಿಯಾಗಿತ್ತು ಎನ್ನುವುದು ಮುಖ್ಯ
ಅದಕ್ಕಿಂತ ಅತಿಮುಖ್ಯ
ಕಲ್ಪನಾತೀತ ಕಲ್ಪಗಳ ಮುಂಚಿನ ಅಂಚಲ್ಲಿ
ಉರಗ,ಖಗಗಳ ನಡುವಿನ ಸಂಕ್ರಮಣ ರೂಪಿ
ಅನಿರೀಕ್ಷಿತ ಅಳಿವು, ಮಾಯವಾದ ಉಳಿವು
 
ರೆಕ್ಕೆಇದ್ದೂ ಹಕ್ಕಿಯಾಗದ, ಹಲ್ಲಿದ್ದು ಹಲ್ಲಿಯಾಗದ,
ಶಿಲೆಯಾದ ಕಥೆ ಪವಾಡ ಅಷ್ಟೇ ಸತ್ಯ....
ಪುಷ್ಟಿಗೊಂಡಿದೆ ಇಂದು, ಅಹಲ್ಯೆಗೆ ವಿಮೋಚನೆ ಸಿಗುವುದಿಲ್ಲ
ಮಿದುಳಿನ ಸ್ತರಗಳಲ್ಲಿ, ಆತ್ಮದಲ್ಲಿಯೂ ಅಚ್ಚಾಗಿರುವ
ಸಂರಕ್ಷಿತ ಪಳೆಯುಳಿಕೆ ನಿಶ್ಚಲ ಎಡಬಿಡಂಗಿ
 
ಓಂಕಾರದಲ್ಲಿ ರಕ್ಕಸ ನಾದ,... ಪ್ರತಿಧ್ವನಿಸಿ
ಪಡೆದ ಆಕಾರ ಮಾನವ! ಇರುವಿಗೇ ಸಂಚಕಾರ
ಹಾರಿದರೆ ಏರಲಾರ, ದ್ವಿಪಾದಿ ಆದರೂ ಕುಂಟ
ಚಲನಹೀನ ಅಚಲ ಸುಸಂಕೃತ ಕುಳಿತ ಸಮಾಧಿ ಅವಸ್ಥೆ
ಅತಿ ಸ್ವೇಛ್ಛೆಯಂತೆ ಈ ಅಸ್ಥಿಪಂಜರ
 
ಉಳಿಸಿಕೊಂಡಿದ್ದೇವೆ ವಿಕಾಸಾವಶೇಷ ಹೆಮ್ಮೆಯಿಂದ
ಪ್ರಯೋಗಶಾಲೆಗಳಲ್ಲಿ, ಅಷ್ಟೇ ಏಕೆ
ಮಂದಿರ, ಮಸೀದಿಗಳಲ್ಲಿ ಚರ್ಚ್ ಗಳಲ್ಲಿ
ದೇಹ ದಂಡಿಸಿ,ಮನಸ್ಸು ಮಡಿಗೆ ಅಡವಿಟ್ಟು ಕಾಯುತ್ತಿದ್ದೇವೆ
 
ಉಳಿಸಲು ಧರ್ಮ ಸಮರಸಾರಿದ್ದೇವೆ
ಬೆಳೆಸಲು ನ್ಯಾಯ, ಸಮಾನತೆ ಜಪಿಸಿದ್ದೇವೆ
ನೆತ್ತರ ಝರಿ ಹರಿಸಿ ಇತಿಹಾಸದ ನದಿಯಲ್ಲಿ
ಯುಧ್ದ ನೌಕೆಗಳನ್ನು ತೇಲಿಸಿದ್ದೇವೆ
ನ್ಯಾಯ ಕೊಟ್ಟಿದ್ದೇವೆ ನೇಣುಗಂಬಗಳಲ್ಲಿ
ಕೊಳೆಗೇರಿ ಕಿಷ್ಕಿಂದೆ ಗಲ್ಲಿಗಳಲ್ಲಿ. 
 
ಜತನದಿಂದ ಕಾಪಾಡಿ ನಮ್ಮ ಅಸ್ತಿತ್ವದ ಉಳಿವು
ಕಥೆ ಕಟ್ಟಿದ್ದೇವೆ, ಪುರಾಣದ ಪುಂಗಿ ಊದಿ,
ಸನಾತನ ಸಂತಾನ,ಈ ಶೈತಾನ ವಿಶ್ವಮಾನ್ಯ
ಮಾನವನಲ್ಲ ಸಾಮಾನ್ಯ, ನಿಜಕ್ಕೂ ಅಸಾಮಾನ್ಯ.
 
ಎಲ್ಲೆಲ್ಲೂ ಹರಡಿರುವ ಅಗಣಿತ ಶಾಖೆ,
ಕೊಂಬೆ,ರೆಂಬೆಗಳಲ್ಲೂ ಹೆಮ್ಮಾರಿ ನಿರ್ಲಿಂಗ ಜಾತಿ
ಪ್ರತಿಮೆ ಅರಾದ್ಯ ಬೊಂಬೆ ಅಸಹಾಕಾರಿ
ಪಳೆಯುಳಿಕೆಯ ಮೂರ್ತಿ ಅಲಂಕರಿಸಿದ ಗರ್ಭಗುಡಿ
ಅಮೂರ್ತವಾಗಿದೆ ಮಸೀದಿ ಮಿನಾರ್ ಗಳಲ್ಲಿ
ಪ್ರಾರ್ಥಿಸುತ್ತಿದೆ ಶಿಲುಬೆಯಾಗಿದೆ ಚರ್ಚಿನಲ್ಲಿ,
ಚರ್ಚೆಯಾಗಿವೆ ಅವರವರ ಪ್ರಕಾರ, ಪ್ರಾಕಾರ...
ಆದರೂ ವಿಕಸಿಸಿ ವಿಸ್ತಾರ ಶಸ್ತ್ರಾಗಾರ ಗುಮ್ಮಟಗಳಲ್ಲಿ ಅಪಾರ
 
ಜೀವ ಭಿಕ್ಷೆ ಬೇಡುವ ಭಕ್ತ ಸಾಗರ
ಜಿನುಗಿ ಹೀರಿದೆ ರಕ್ತ ಮಂದಾರ
ಸಕಲ ವಿಲಾಸಿ,ಅಮಾನವೀಯ ದೈತ್ಯ ಭ್ರಮರ
ಕ್ರಿಯಾಶೀಲ ಮುಳುಗಿದ್ದಾನೆ ಪರಾಗ ಸ್ಪರ್ಷದಲ್ಲಿ
ಕೇಳುವವರು ಯಾರು? ಈ ಮಾನವ ತೋಪಿನಲ್ಲಿ
ಪುಷ್ಪಾರ್ಚಾನಾಸಕ್ತ, ಸೌಂದರ್ಯೋಪಾಸಕ ಭಕ್ತ
ಈ ಅತಿಬುಧ್ದಿಜೀವಿಯನ್ನು...
 
ಗರ್ಭಕಟ್ಟಿದ ತತ್ತಿ, ಭ್ರೂಣವಾಗುವ ಮೊದಲು
ಹೊಸದೊಂದು,ಅನಾಮಿಕ ಸಂಕರ
ಸ್ವಜಾತಿ ಭಕ್ಷಕ, ಸರ್ವ ಭಕ್ಷಕ ಭಯಾನಕ
ವಿಕಾಸದ ಮೊದಲು ಕೇಳ ಬೇಕಿದೆ ಪ್ರಶ್ನೆ
ಆಕಸ್ಮಿಕ ಕಂಡ ಈ ಪ್ರಾಣಿ!
ಈ ಹೈಬ್ರಿಡ್ ವಿಶ್ವಕರ್ಮನೋ??
ಪ್ರಳಯರುದ್ರನಿಗೇ ಶಾಪವಾದ ಭಸ್ಮಾಸುರನ ಅಬೇಜ ಪಿಂಡವೋ?

Comments

Popular posts from this blog

Reunited...at last..

ಕಾಗೆ....

The Crow.