ಪ್ರತಿ ಕೃತಿ...
ಒಮ್ಮೊಮ್ಮೆ ಹುಚ್ಚು ಮನಸ್ಸು ಏನನ್ನೋ ಮಾಡಲು ಪರಿತಪಿಸುತ್ತದೆ. ಕೆಲಸವಿಲ್ಲದಾಗ ಮನಸ್ಸು ಏನೆಲ್ಲಾ ಮಾಡಲು ಅಜ್ಞಾಪಿಸುತ್ತದೆ. ಅಂತಹದೇ ಒಂದು ದಿನ ಅಂತಾ ಕಾಣುತ್ತೆ. ನನ್ನ ಭಾವ ಚಿತ್ರ ನಾನೇ ಬಿಡಿಸಿಕೊಂಡು ನೋಡಬೇಕೆಂಬ ವಿಚಿತ್ರ ತೆವಲು ಪ್ರಾರಂಭ ವಾಯಿತು. ಹಾಗೆಂದು ನಾನೊಬ್ಬ ವೃತ್ತಿ ಪರ ಕಲಾವಿದನಲ್ಲ. ಹವ್ಯಾಸಕ್ಕಾಗಿ ಯಾವುದಾದರೂ ಪತ್ರಿಕೆಗಳ ಚಿತ್ರ ಗಳನ್ನೂ ಕಾಪಿ ಮಾದಬಲ್ಲಷ್ಟು ರೇಖೆಗಳನ್ನುಎಳೆಯಬಲ್ಲೆ . ಇಷ್ಟ ಬಂದ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದೆ. ಮತ್ತೆ ಶಾಲೆಯಲ್ಲಿ ಬೋರ್ಡ್ ಮೇಲೆ ನನ್ನ ಕ್ಲಾಸ್ನಲ್ಲಿ ಚಿತ್ರಗಳನ್ನು ಬಿಡಿಸದೆ ವಿಧಿ ಇರಲಿಲ್ಲ. ಅದರಲ್ಲಿ ಆಸಕ್ತಿ ಇರೋದರಿಂದ ಹವ್ಯಾಸವಾಗಿ ಆಗಾಗ ನನ್ನ ತೃಪ್ತಿಗೆ ನಾನು ಬಣ್ಣಗಳ ಜೊತೆ ಒಬ್ಬನೇ ಆಟಆಡ್ತೇನೆ ನನ್ನ ಮನಸ್ಸಿಗೆ ಬಂದಹಾಗೆ. ಹಾಗಾಗಿ ಯಾಕೆ ಪ್ರಯತ್ನ ಪಡಬಾರದು ಅನಿಸಿ ಸಾದಾರಣ ಹಾಳೆಯ ಮೇಲೆ ಪೆನ್ಸಿಲ್ ನಿಂದ ಶುರು ಮಾಡಿದೆ.ನಾನು ಹೇಗಿದ್ದೇನೆ? ನನ್ನ ತಲೆ ಅಥವಾ ಮುಖ ಸೌತೆಕಾಯೋ? ಕುಂಬಳ ಕಾಯಿಯೂ ? ಮೊದಲು ಮುಖದ ವಿನ್ಯಾಸ ನೆನಪಿಸಿಕೊಂಡೆ. ಕನ್ನಡಿಯಲ್ಲಿ ಒಮ್ಮೆ ನನ್ನ ಮುಖ ನೋಡಿಕೊಂಡೆ. ಯಾಕೋ ಏನೋ ನನ್ನ ಮುಖ ನನ್ನ ತಮ್ಮಂದಿರಂತೆ ವ್ರುತ್ತಾಕಾರದಲ್ಲಿಲ್ಲ ಎನಿಸಿತು. ಹಾಗೆಂದು ಮೂಳೆಯ ಕೋಲು ಮುಖವು ಅಲ್ಲ. ಒಂದು ರೀತಿ ಅಂಡಾಕಾರ ಅಥವಾ ಚೌಕಾಕಾರ ಎರಡು ಅಲ್ಲದ ತೆಂಗಿನ ಚಿಪ್ಪಿನ ಒಂದು ಮುಖ. ಹಾಗಾದರೆ ನಾನು ನನ್ನ ರೂಪ ರೇಖೆ ಯನ್ನು ಎಲ್ಲಿಂದ ಆರಂಭಿಸಲಿ. ಸ್ವಲ್ಪ ಯೋಚಿಸಿ ಹೊರಗೆರೆಗಳನ್ನು ಎಳೆದೆ. ಉದ್ದನೆಯ ಕೂದಲು, ಎದುರು ಸುಳಿಯ ಎಡಕ್ಕೆ ವಾಲಿರುವ ಬೈತಲೆ, ವಯಸ್ಸಿಗೆ ಮೀರಿ ಕಾಣುವ ದಪ್ಪ ದಪ್ಪ ಸುಕ್ಕುಗಳು, ಹುಬ್ಬು ಸಹಾ ನೆಟ್ಟಗಿಲ್ಲದ ತಿರುಚಿಕೊಂಡ ಕೂದಲುಗಳು, ರೆಪ್ಪೆಯ ಬಗ್ಗೆ ಹೆಚ್ಚು ಯೋಚಿಸುವ ಅಥವಾ ಹೋಲಿಸುವ ಅವಶ್ಯಕತೆ ಇರಲಿಲ್ಲ. ಕಾರಣ ನನ್ನ ಪ್ರಕಾರ ಗಂಡಸರ ರೆಪ್ಪೆ ಅದರ ದೈಹಿಕ ಪ್ರಾಮುಖ್ಯತೆಗೆ ಮಾತ್ರ ಸೀಮಿತ. ಕಣ್ಣ ಕೆಳಗೆ ಕಪ್ಪು ಗೆರೆಗಳು, ಜೋಲು ಬಿದ್ದಿರುವ ಸ್ನಾಯುಗಳ ಒಂದು ಪದರ ಜಲಜ ಶಿಲೆಗಳ ಪದರಗಳಂತೆ. ಎರಡು ಹುಬ್ಬಿನ ನಡುವೆ ಮೂಗು. ಸ್ವಲ್ಪ ದಪ್ಪ. ಅಗಲ ಹೊಳ್ಳೆಗಳು. ಮುಖದ ಇನ್ನು ಸ್ವಲ್ಪ ಕೆಳಗಿನ ಭಾಗಗಳ ಬಗ್ಗೆ ಯೋಚಿಸಿದಾಗ ಒಂದು ಪ್ರಾಕ್ಟಿಕಲ್ ಪ್ರಾಬ್ಲಂ ಬಂತು. ನನ್ನ ಮೂಗಿನ ಕೆಳಭಾಗವನ್ನು ಮೂವತ್ತು ವರ್ಷದಿಂದ ಮೀಸೆ ಆವರಿಸಿರುವುದರಿಂದ ಅ ಜಾಗ ನಯವಾಗಿದೋ ಅಥವಾ ಒರಟಾಗಿದೆಯೋ? ಇಲ್ಲ ಬ್ಲೇಡಿನ ಒಂದು ದೊಡ್ಡ ಗಾಯದ ಗೆರೆ ಜ್ಞಾಪಕಕ್ಕೆ ಬಂತು. ಇನ್ನು ಎಡ ಮತ್ತು ಬಲ ಕೆನ್ನೆಗಳು ಅಷ್ಟೇ. ಸತತ ಮೂರುವರೆ-ನಾಲ್ಕು ದಶಕಗಳ ಗಡ್ಡದ ಕೃಷಿ ಇಂದಾಗಿ ಅಲ್ಲಿನ ಮಲ್ಮೈ ಬಗ್ಗೆ ಅನುಮಾನ. ಮತ್ತೊಮ್ಮೆ ಕನ್ನಡಿ ನೋಡಿದೆ. ಏನು ಕಾಣುವುದಿಲ್ಲ. ನೆರೆತ ಮುದಿ ಬಿಳಿ ಗಡ್ಡದ ಅಸ್ತವ್ಯಸ್ತ ಬಿರು ಕೂದಲುಗಳು. ಕಾರಣ ರೆಗುಲರ್ ಆಗಿ ಶೇವ್ ಮಾಡುವ ಅಭ್ಯಾಸ ಬಿಟ್ಟು ಬಹಳವರ್ಷಗಳಾಗಿದೆ. ಅಲ್ಲೋ ಸಹಾ ಏನೋ ಮಚ್ಚೆಗಳು, ಚಿಕನ್ ಪಾಕ್ಸ್ ನ ಕಲೆ ಇರಬಹುದು. ಎರಡು ಕೆನ್ನೆಗಳ ಮಧ್ಯೆ ನೀಗ್ರಾಯಿಡ್ ತುಟಿಗಳ ಕೆಳಭಾಗದಲ್ಲಿ ಗದ್ದದ ದೊಡ್ಡ ಗುಳಿ. ಕಿವಿ ಕೆನ್ನೆಯ ನಡುವೆ ಸೀಳು ಕಾಣದ ರೋಮ ಆವೃತ ತೂತೇ ಇಲ್ಲದ ಕಿವಿಯ ಹಾಲೆ. ಮತ್ತೊಮ್ಮೆ ಕನ್ನಡಿಯಲ್ಲಿ ಮುಖ ನೋಡಿದೆ. ಹೌದು.. ನನ್ನ ವೀಕ್ಷಣೆ ಸರಿಯಾಗಿದೆ. ಇನ್ನು ಪೆನ್ಸಿಲ್ ತೊಗೊಂಡು ಹಣೆಯ ಮೇಲಿನ ದಪ್ಪನೆಯ ಸುಕ್ಕೊಂದನ್ನು ಗೀಚಿದೆ. ಚಿತ್ರ, ಹಣೆಯ ಮೇಲೆ ಬೀಳುವ ಕೂದಲಿಂದ ಆರಂಭ ವಾಯಿತು. ಹಣೆಯ ಮೇಲಿನ ಆಳವಾದ ಒಂದು ಗಾಯದ ಕಲೆ ಇನ್ನೂ ಹಾಗೆ ಇದೆ. ಜ್ಞಾಪಕ ವಿಲ್ಲ ಎಷ್ಟುವರ್ಷದ ಹಿಂದೆ ಎಂದು, ಆದರು ಈಜಲು ಹೋಗಿ ಡೈವ್ ಮಾಡಿ ಮೇಲೆ ಬರುವಾಗ ಮೆಟ್ಟಿಲಿನ ಕಲ್ಲಿಗೆ ತಾಗಿ ಭಾವಿಯೇ ರಕ್ತ ವಾಗಿ ಎಲ್ಲರೂ ಹೆದರಿ, ಅಕ್ಕನ ಹೊಸ ಸೀರೆಯನ್ನೇ ಹರಿದು ಪಟ್ಟಿಮಾಡಿದ ಮಾಗಲಾರದ ಮರೆಯಲಾರದ ಹೃದಯಕ್ಕೆ ಹತ್ತಿರ ವಾದ ಕಲೆ. ಅದನ್ನು ಬಣ್ಣದಲ್ಲಾಗಲಿ, ಚಿತ್ರಿಸಲು ಸಾಧ್ಯವೇ? ಗೊತ್ತಿಲ್ಲ, ಪ್ರಯತ್ನಿಸುವ... ಇನ್ನೂ ಮುಖದ ಹೊರ ರೂಪ ರೆಖೆಯೇ ಸಿದ್ಧವಾಗಿಲ್ಲ. ಏಕೆ ಅವಸರ? ಬಣ್ಣ ಮಿಶ್ರಣಗಳ ಯೋಚನೆ ಯಾಕೆ?
ಮತ್ತೊಮ್ಮೆ ಕನ್ನಡಿಯಲ್ಲಿ ಹಿಂದೂ ಮುಂದು ನೋಡಿ ಸಂಗಮ ದೂರವನ್ನು ಅಳೆದು ಮೇಲೆ ಕೆಳಗೆ ನೋಡಿದಾಗ ತಲೆ ತುಂಬಾ ಉದ್ದಾ ಅನಿಸ ಹತ್ತಿತು. ಹೇಗೆ ಇರಲಿ, ಇದು ನನ್ನ ರೂಪವನ್ನು ವೈಭವೀಕರಿಸುವ ಪ್ರಯತ್ನವಲ್ಲ ಎಂದು ನನಗೆ ನಾನೇ ಹೇಳಿ ಕೊಂಡೆ. ಹೇಗಿದ್ದೇನೋ ಹಾಗೆ ಯಥಾ ವತ್ತಾಗಿ ನನ್ನ ಚಿತ್ರವನ್ನು ನಾನೇ ಬಿಡಿಸುವುದು ಒಂದು ಚಾಲೆಂಜಿಂಗ್ ಕೆಲಸ. ನಿರ್ವಿಕಾರ ಭಾವನೆಯಿಂದ ಮುಂದುವರೆಸಲು ಸಾಧ್ಯವಿಲ್ಲ. ಎಲ್ಲೋ ಒಂದು ಗೆರೆ ಕಡಿಮೆ ಮಾಡಿದರೆ ನನ್ನ ಆನೆಯ ಕಣ್ಣುಗಳು ಇನ್ನಷ್ಟು ಸರಿ ಹೋಗಬಹುದು. ತುಟಿ ತೆಳ್ಳಗೆ ಮಾಡಿದರೆ ಮುಖದ ವಿನ್ಯಾಸಕ್ಕೆ ಸರಿ ಹೊಂದಬಹುದು. ಕಣ್ಣುಗಳು ಪ್ರಖರತೆ ಎಲ್ಲಿ ಹೋಗಿದೆ?ಸದ್ಯಕ್ಕೆ ಈ ತಕ್ಷಣದ ಮನಸ್ಸಿನ ಸ್ಥಿತಿ ಯಿಂದ ಹೀಗೆ ಕಾಣುತ್ತಿರಬಹುದು. ಸುಸ್ತಾಗಿರಬಹುದೇ. ಜೀವ ತುಂಬಾ ಬಹುದೇ? ಒಂದು ಕಪ್ಪು ಚುಕ್ಕೆ, ಅಥವಾ ಶೇಡ್ ಕೊಟ್ಟರೆ ಸರಿ ಮಾಡಬಹುದು. ಬೇಡ ಹಾಗೆ ಮಾಡಿದರೆ ನಾನು ಬಿಡಿಸುವ ನನ್ನ ಭಾವ ಚಿತ್ರ ಇನ್ನ್ಯಾರದೋ ಆಗಿಬಿಟ್ಟಿತು. ಸುಮ್ಮನಾಗಿ ಪೆನ್ಸಿಲ್ ನಿಂದ ಹೊರ ಗೆರೆಯನ್ನು ಎಳೆದು ಅಲ್ಲಲ್ಲಿ ಎರಡು ಮೂರು ಬಾರಿ ಬೆರಳ ತುದಿಯಿಂದ ಪೆನ್ಸಿಲ್ ನ ಚೂಪಾದ ತುದಿಯನ್ನು ಓರೆಯಾಗಿ ಆಡಿಸಿದೆ. ಸ್ಥೂಲವಾಗಿ ಮುಖದ ಆಕೃತಿ ಕಾಣಿಸಿತು. ಆದರೆ ಇನ್ನೂ ಕಣ್ಣು, ಮೂಗು, ಕೂದಲಿನ ಕೆಳಗೆ ಮರೆಯಾಗಿರುವ ಕಿವಿ ಹಣೆ ಮುಚ್ಚಿರುವುದನ್ನು ತೋರಿಸಬೇಕು. ಅಂದಹಾಗೆ ಇತ್ತೀಚಿಗೆ ಕ್ಷೌರ ಮಾಡಿಸಿಕೊಂದಿರುವುದರಿಂದ ಕೂದಲು ಉದ್ದವಾಗಿ ಹಣೆ ಮುಚ್ಚಿರಬೇಕೆ ಅಥವಾ ಚಿಕ್ಕದಾಗಿ ಕಟ್ ಮಾಡಿಸಿಕೊಂಡಿದ್ದರೆ ಕಿವಿ ಪ್ರಧಾನ ವಾಗಿ ಕಾಣಬೇಕು. ಯಾಕೋ ಅವ್ಯಕ್ತ ಕಳವಳದ ಭಾವನೆ. ಕಾರಣ ಇದ್ದಕ್ಕಿದ್ದಹಾಗೆ ಇನ್ನೊಂದು ವಿಷಯ ಥಟ್ ಎಂದು ಹೊಳೆಯಿತು. ನನ್ನ ಕಣ್ಣು ಕಾಲೇಜ್ ದಿನಗಳಿಂದ ಕನ್ನಡಕ ಹಾಕಿಕೊಂಡು ಫ್ರೇಮಿನ ಆ ಜಾಗದಲ್ಲಿ ಒಂದು ಕಲೆ ಮೂಡಿದೆ. ಹಾಗೆ ಕಣ್ಣಿನ ಕೆಳಗೂ ಅದೇ ಸದಾ ಮುಚ್ಚಿ ಕೊಳ್ಳುವ ದೇಹದ ಭಾಗ ತಿಳಿಯಾಗಿ ಕಾಣುವಂತೆ. ಅಂದರೆ ನನ್ನ ಕಣ್ಣಿನ ಕೊರತೆಗಳನ್ನು ಗಾಜಿನ ಹಿಂದೆ ಅವಿತಿಡಬಹುದು ಮನಸ್ಸು ಮಾಡಿದರೆ. ಯಾವ ಕನ್ನಡಕ ಹಾಕಿಕೊಳ್ಳಬೇಕು? ಎರಡು ಕನ್ನಡಕಗಳನ್ನು ಯಾವಾಗಲು ನನ್ನ ಬಳಿ ಇಟ್ಟುಕೊಂಡಿರುತ್ತೇನೆ. ಹೆಚ್ಚು ವೈತ್ಯಾಸ ಇಲ್ಲದಿದ್ದರೂ ಒಂದು ಸಾದಾ ಗ್ಲಾಸಿನ ತೆಳ್ಳನೆಯ ಹಗುರವಾದದ್ದು ಮತ್ತು ಪ್ರೋಗ್ರೆಸ್ಸಿವ್ ಲೆನ್ಸ್ , ಇನ್ನೊಂದು ಫೋಟೋ ಗ್ರೆ. ಬಿಸಿಲೆರಿದಾಗ ಬಣ್ಣ ಬದಲಾಗುವ ಹಾಗೂ ನೆರಳಿಗೆ ಬಂದಾಗ ಸಾದಾ ಮಸೂರ ವಾಗುವ ಚಾಳೀಸು.
ಈಗೇಕೆ ಅದರ ಯೋಚನೆ? ಮೊದಲು ಹೊರ ರೂಪ ರೇಖೆ ಬಿಡಿಸೋಣ.
ಯಾಕೆ ಅಪರೂಪದ ಯೋಚನೆಗಳು? ನಾನೊಬ್ಬ ಹವ್ಯಾಸಿ ಚಿತ್ರಕಾರ ಮಾತ್ರ. ನನ್ನನ್ನು ನಾನೇ ಯಥಾವತ್ತಾಗಿ ಸಹಜ ವಾಗಿರುವಂತೆ ಮತ್ತು ನನ್ನ ನಿಜ ರೂಪವನ್ನು ನಿಷ್ಪಕ್ಷಪಾತವಾಗಿ ಚಿತ್ರಿಸಬೇಕು. ನನ್ನ ದೇಹದ ರೂಪು ರೇಷೆಗಳನ್ನು ತಿದ್ದಿ ಮೂಲ ಆಕಾರಕ್ಕೆ ಮೋಸ ಮಾಡಿ ಅಸ್ತಿತ್ವ ಕಳೆದು ಕೊಳ್ಳುವುದು ಬೇಡ ಎನಿಸಿತು. ಆದರೆ ನನ್ನ ರೂಪವನ್ನು ಚಿತ್ರದಲ್ಲಾದರೂ ಸರಿಪಡಿಸುವ ಸ್ವತಂತ್ರ ವಿಲ್ಲವೇ? ಆದರೆ ಇದು ಸ್ವತಂತ್ರದ ಪ್ರಶ್ನೆ ಅಲ್ಲ. ವಾಸ್ತವಿಕತೆಯ ಬಣ್ಣದ ನಿಜ ರೂಪದ ಇನ್ನೊಂದು ಸುಳ್ಳು ರೂಪವನ್ನು ತೋರಿಸುವುದು ನ್ಯಾಯವೇ? ನಾನು ಯಾರನ್ನು ಮೆಚ್ಚಿಸಲು, ಏನನ್ನು ಮರೆಮಾಚಲು ಯೋಚಿಸುತ್ತಿದ್ದೇನೆ. ವಿಚಿತ್ರ ತೊಳಲಾಟ. ಪ್ರಕ್ಷುಬ್ದ ಮನಸ್ಸು. ಬೆರಳ ನಡುವೆ ಬಿಗಿಯಾಗಿ ಹಿಡಿದಿದ್ದ ಇದ್ದಿಲು, ಹಲ್ಲಲ್ಲಿ ಕಚ್ಚಿ ಹಿಡಿದಿದ್ದ ಪೆನ್ಸಿಲ್, ಹಾಳೆ ಹಿಡಿದ ಎಡಗೈ ಹಿಂದೆ ಮುಂದೆ ಆಡಿಸುತ್ತ, ಬಲಗೈ ಸೊಂಟದ ಮೇಲೆ ಇಟ್ಟುಕೊಂಡು ನೋಡಿದೆ. ಬಿಳಿ ಹಾಳೆಯಲ್ಲಾ ಖಾಲಿ,ಖಾಲಿ. ಎಲ್ಲವೂ ಅಸ್ಪಷ್ಟ. ತೀರ ಅಪರಿಚಿತ ಮುಖ.....
ಪರಿಚಯ ಮಾಡಿಕೊಳ್ಳೋಣ ಈ ಆಗಂತುಕನನ್ನು.
ಸೀಸದಕಡ್ಡಿ ಹಾಳೆಯ ಮೇಲೆ ಮೃದುವಾಗಿ ಚಲಿಸಲಾರಂಭಿಸಿತು. ಹಣೆ, ಕೂದಲು, ಕಿವಿಗಳು, ಹೊಳ್ಳೆಗಳು, ಒರಟಾದ ಪ್ರಾಯದ ಕಪ್ಪು ಬಿಳುಪಿನ ಗಡ್ಡ, ಆಳ ಗುಳಿಯ ಗಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಾ ಎಡಗೈನಲ್ಲಿ ಹಾಳೆಯನ್ನು ಸರಿಪಡಿಸುತ್ತಾ ಮುಖದ ಆಕೃತಿ ಮೂಡಲಾರಂಭಿಸಿತು.ಒಂಥರಾ ಸಮಾಧಾನ. ಮುಖ ಗುರುತಿಸಬಲ್ಲಷ್ಟು ಚೆನ್ನಾಗಿ ಮೂಡಿದೆ ಅನಿಸಿತು. ನನ್ನದೇ ಮುಖ ಎಂದು ಧೈರ್ಯದಿಂದ ಹೇಳಿಕೊಳ್ಳಬಹುದು. ರಬ್ಬರ್, ಬ್ಲೇಡ್ ಗಳ ಸಹಾಯದಿಂದ ಸ್ವಲ್ಪ ದುರಸ್ತಿ ಕಾರ್ಯ ಮುಂದುವರಿಸಿ ಕೊನೆಗೆ ತಲೆಯ ಮುಂದಿನ ಭಾಗ ಮುಖ ಸಮಾಧಾನ ತಂದರೂ, ತಲೆಯ ಹಿಂಭಾಗದ ವಿವರಗಳು ಕಾಣೆಯಾಗಿದ್ದವು. ಆದರೆ ಅದರ ಇರದಿರುವಿಕೆ ಅಷ್ಟು ಪ್ರಧಾನ ಎನ್ನಿಸಲಿಲ್ಲ. ಕನ್ನಡಕಕ್ಕೆ ಹಳೆಯ ಫ್ರೇಮನ್ನೇ ಹಾಕಿದೆ. ಬಣ್ಣ ಅವಾಯಿಡ್ ಮಾಡಬೇಕು ಗಾಜಿನಹಿಂದಿರುವ ಪುಟ್ಟ ಕಣ್ಣುಗಳಿಗೆ ಎಂದುಕೊಂಡೆ. ಮತ್ತೊಮ್ಮೆ ಮೂಡಿರುವ ರೆಖಾಕೃತಿಯನ್ನು ನೋಡಿ, ಹಾಳೆಯನ್ನೊಮ್ಮೆ ದಿಟ್ಟಿಸಿದೆ. ಓ.ಕೆ. ಅನ್ನಿಸಿತು. ಇನ್ನು ಮುಖದ ಕೆಳಭಾಗ! ಪರವಾಗಿಲ್ಲ. ಹೆಚ್ಚು ಕಡಿಮೆ ಎಲ್ಲವನ್ನು ನನ್ನ ಜುಬ್ಬಾ ಮುಚ್ಚಿ ಹಾಕುತ್ತದೆಂದುಕೊಂಡೆ. ಕತ್ತಿನ ಕೆಳಭಾಗ ಹಾಗೂ ಶ್ವಾಸನಾಳದ ಮುಂಭಾಗದಲ್ಲಿ ಚರ್ಮದ ಸುಕ್ಕುಗಳು ಜಾಸ್ತಿಯಾಗಿದೇ ಇತ್ತೀಚಿಗೆ. ನಾನು ಗಮನಿಸಿರಲಿಲ್ಲ. ಮುದಿತನದ ಸ್ಪಷ್ಟ ಸಂಕೇತ ಈ ನೆರಿಗೆಗಳು. ಇದನ್ನು ಮುಚ್ಚುವ ಅವಶ್ಯಕತೆ ಇಲ್ಲ.
ಎಷ್ಟು ಏನನ್ನು ಮುಚ್ಚಲು ಪ್ರಯತ್ನಿಸಿದರೂ ನಮ್ಮತನ, ಒಂದಲ್ಲ ಒಂದು ರೀತಿ ದೈಹಿಕವಾಗೆ ಅಭಿವ್ಯಕ್ತಿ ಪಡೆಯಬಹುದು,ಅದರಲ್ಲೂ ಮುಖ.....? Face is the index of mind....? or ones personality? ಬಣ್ಣದಿಂದ ಚಿತ್ರದ ಗುಣಗಳನ್ನು ಉತ್ತಮಪಡಿಸಬಹುದು ಎಂದು ತೋರಿತು. ಹಾಗೆಂದೇ ಉದ್ದೇಶಪೂರ್ವಕವಾಗಿಯೇ ಅಸ್ವಾಭಾವಿಕ ಬಣ್ಣಗಳನ್ನೇ ಉಪಯೋಗಿಸಲು ನಿರ್ಧರಿಸಿ ಬೇಜವಾಬ್ದಾರಿಯಿಂದ ಸಿಕ್ಕ ಬಣ್ಣವನ್ನು ಒರಟಾಗಿ ಚೌಕಟ್ಟಿನಲ್ಲಿ ತುಂಬಿದೆ. ಶೇಡ್ ಮಾಡುವ ತಂಟೆಗೆ ಹೋಗಲಿಲ್ಲ. ಮುಖದ ಒಂದೊಂದೇ ಭಾಗಗಳ ಪ್ರತ್ಯೇಕತೆಯನ್ನು ಮಾತ್ರ ಉಳಿಸಿಕೊಂಡೆ. ಕುತ್ತಿಗೆಯನ್ನು ಸುತ್ತುವರೆದ ಜುಬ್ಬದ ಕಾಲರ್ ಸ್ವಲ್ಪ ಲೂಸ್ ಆಗಿದ್ದು, ಒಂದು ಗುಂಡಿಯ ಫೋಲ್ಡ್ ಎಡಕ್ಕೆ ವಾಲಿದೆ. ಘಾಡ ನಿಲಿಯಿಂದ ಆರಂಭಗೊಂಡು ಎದೆಗೂಡಿನಲ್ಲೇ ತುಂಡಾಗುವ ಹಾಳೆಯ ಕೊನೆಯವರೆಗೂ ಬಣ್ಣತಿಳಿಯಾಗುತ್ತ ಬಂದು ಚೌಕಟ್ಟಿನಲ್ಲಿ ಬೆರೆತು ಒಂದಾಗಿದೆ. ಭುಜಗಳು ಸಹಜವಾಗಿಯೇ ಇರುವಂತೆ ಕಂಡಿತು.
ಆದರೆ... ಕೈತೊಳುಗಳಿಗೆ ತಮ್ಮದೇ ಆದ ಸ್ವಂತ ಅಸ್ತಿತ್ವ ಇಲ್ಲದಂತೆ ಭಾಸವಾಗುತ್ತಿತ್ತು!!
ನಯವಾದ ಕುಂಚ ಬದಲಾಯಿಸಿ ನಾಜೂಕಾದ ಕೊನೆಯಹಂತದ ರಿಪೇರಿ ಕೆಲಸ ಆರಂಭಿಸುವಾಗ ಮನಸ್ಸು ಹಗುರವಾಗಿತ್ತು. ಜಲವರ್ಣ ವಾದುದರಿಂದ ಸ್ವಲ್ಪ ಹುಶಾರಿಗಿ ಕುಂಚವನ್ನು ಆಡಿಸಬೇಕು. ಗಡ್ಡಕ್ಕೆ ಹೆಚ್ಚು ಸಮಯಬೇಕಾಗಲಿಲ್ಲ. ಯಾವ ಬಣ್ಣದಲ್ಲಾದರೂ ಮುದಿತನ ಸಹಜತೆಯನ್ನು ಪಡೆಯುತ್ತದೆ! ಹಣೆಯ ನೆರಿಗೆ, ಸುಕ್ಕುಗಳು ಮತ್ತು ನನ್ನ ಬಾಲ್ಯದ ಮರೆಯಲಾರದ ಈಜುವಾಗ ಉಂಟಾದ ಕಲೆ ಎಲ್ಲವೂ ಸ್ಪಷ್ಟವಾಗಿತ್ತು. ಮೂಗು, ತುಟಿ ಅಂದುಕೊಂಡಂತೆ ಕಂಡಿತು.ಕೇಶವಿನ್ಯಾಸ ನಿರಾಸೆಯಾಯಿತು. ಪ್ರಯತ್ನಪಟ್ಟರೂ ಮುಖಕ್ಕೆ ಮತ್ತು ಕೂದಲು ತಾಳೆಯಾದಂತೆ ಕಂಡು ಬರಲಿಲ್ಲ. ಯಾರದೋ ಮುಖಕ್ಕೆ ಇನ್ನ್ಯಾರದೋ ಕೃತಕ ಟೋಫನ್ ಹಾಕಿದಂತೆ ಕಂಡಿತು. ಅದರೂ ಅದನ್ನು ಸರಿಮಾಡಬೇಕೆಂದು ನನಗೆ ಅನಿಸಲಿಲ್ಲ. ಹಾಗೆ ಬಿಟ್ಟುಬಿಟ್ಟೆ. ಇರಲಿ ಅದೊಂದು ಆಭಾಸ! ಅಲ್ಲ...ನೈಜತೆ..
ಕುಂಚ ಕೆಳಗಿಟ್ಟು, ಮೈಮುರಿದು ಒಮ್ಮೆ ಕಣ್ಣು ಮುಚ್ಚಿ ತಲೆಯ ಕೂದಲುಗಳನ್ನು ಕತ್ತಿನ ಚಲನೆಯಿಂದ ಹಿಂದಕ್ಕೆ ದೂಕಿದೇ. ನೆಟ್ಟಗೆ ಕೂತು ಮುಗಿದಭಾವ ಚಿತ್ರದ ಕಡೆ ನೋಡಿದೆ. ಓ.ಕೆ. ಪರವಾಗಿಲ್ಲ.....ವಯಸ್ಸಿಗೆ ಅಪವಾದ ವೆನಿಸುವ ಉದ್ದ ಕೂದಲು, ಗಾಯದ ಕಲೆ ಪ್ರಧಾನವಾದ ಸುಕ್ಕುಗಟ್ಟಿದ ಹಣೆ, ಸ್ವಲ್ಪ ಉದ್ದವಾದ ಮುಖದ ರಚನೆ, ಎದ್ದು ಕಾಣುವ ಎದುರು ಸುಳಿಯ ಬೈತಲು, ಸಂಪೂರ್ಣ ನೆರೆತಿರುವ ಬಿಳಿಯ ಗಡ್ಡ, ಆ ಬಿಳಿ ಕೂದಲಿನಲ್ಲು ಎದ್ದು ಕಾಣುವ ಆಳವಾದ ಗಲ್ಲದ ಗುಳಿ, ಕಣ್ಣನ್ನು ಭಾಗಶಃ ಮುಚ್ಚಿರುವ ಕನ್ನಡಕ, ಅದರ ಹಿಂದಿನ ಕಣ್ಣುಗಳು......
ಕಣ್ಣುಗಳು... ಹೌದು..ಯಾಕೋ.. ಎಡವಟ್ಟಾಗಿದೆ... ಅನಿಸತೊಡಗಿತು.ಯಾಕೆ? ಎಲ್ಲಿ ತಪ್ಪಾಗಿದೆ? ನನ್ನ ಕಲಾಪ್ರತಿಭೆಯ ಇತಿಮಿತಿಯೇ?ಅಥವಾ ನಾನು ಈ ವರೆವಿಗೆ ನೋಡಿದ ಕಣ್ಣುಗಳು ಈ ರೀತಿಯೇ ಇತ್ತೇ?
ಆದರೆ, self portrait ನಲ್ಲಿ ಅಥವಾ ಪ್ರತಿ ಕೃತಿಗೆ ಮುಖದಲ್ಲಿನ ಕಣ್ಣುಗಳೇ ಜೀವಾಳ.
ಒಬ್ಬ ವೈಕ್ತಿಯ ಬದುಕಿನ, ನೈತಿಕತೆ, ಸ್ವಭಾವ ಅಷ್ಟೇ ಏಕೆ? ಸಂಪೂರ್ಣ ಬದುಕಿನ ವ್ಯಕ್ತಿತ್ವದ ಅಭಿವ್ಯಕ್ತಿ. ಜೀವನದ ಸಾರಾಂಶದ ಸಂಕೇತ ಈ ಕಣ್ಣು...
ನಾನು ನನ್ನಬಗ್ಗೆಯೇ ಅಂದುಕೊಂಡಂತೆ ಆ ಮುಗ್ಧ, ಪ್ರಾಮಾಣಿಕ, ಆದರ್ಶಮಯ, ಶ್ರಮಜೀವಿಯ ಸಾಹಸಮಯ ಮುಖ ಭಾವ, ಅಂತರಂಗ ಕಲಕುವ ಆ ಪಿಳಿ ಪಿಳಿ ನೋಡುವ ಕಣ್ಣುಗಳು...ಕಳೆದು ಹೋಗಿದೆಯೇ? ಕಪ್ಪು ನೆರಿಗೆಗಳ ಕೋಟೆಯ ಕಂದರದಲ್ಲಿನ ಗುಳಿಯಲ್ಲಿ ಆಳವಾಗಿ ಇಳಿದಿರುವ, ಮಾಸಿದ, ಮಬ್ಬಾದ ಕಣ್ಣುಗಳು ಯಾರವು? ವೀಕ್ಷಣೆ ಮತ್ತು ಗ್ರಹಿಕೆ ಸೋತಿರಬಹುದೇ?
ಹೌದು! ನಾನು ಗ್ರಹಿಸಿ, ಅನುಭವಿಸಿ, ವಿಶ್ಲೇಷಿಸಿ, ಬದುಕಿ ಬಿಡಿಸಿರುವ ಕಣ್ಣುಗಳೇ?
ದೃಷ್ಟಿ ಮಂಜಾಗಿ, ಹುಬ್ಬು, ರೆಪ್ಪೆ, ಹಣೆ, ಮೂಗು, ತುಟಿ ಎಲ್ಲಾ ವದನಾಂಗಗಳು ಒಂದಾದ ಮೇಲೆ ಒಂದು ಕರಗಿ ಮಾಯವಾಯಿತು. ಬಣ್ಣ ನಿರ್ವರ್ಣ ವಾಗಿ ನಿರ್ವಿಕಾರ ವಾಯಿತು. ಯಾವುದೋ ಒಂದು ಅಸ್ಪಷ್ಟ, ಅಪರಿಚಿತ ಮುಖ ಹಾಳೆಯ ಮೇಲಿಂದಲೇ ನನ್ನನ್ನೇ ಕೆಕ್ಕರಿಸಿ ನೋಡುತ್ತಿತ್ತು. ಅ ವಕ್ರ, ವಿಕಟ ನಗೆಯನ್ನು ಎದುರಿಸುವ ಧೈರ್ಯ ಅಡಗಿತು.ಮನಸ್ಸಿನಲ್ಲಿ, ನೂರಾರು ಪ್ರಶ್ನೆಗಳು. ಗೊಂದಲದ ಮಹಾಪೂರ. ಈ ನನ್ನ ಮುಂದೆ ನನ್ನನ್ನೇ ನುಂಗುವಂತೆ ನೋಡುತ್ತಿರುವ ಮುಖ, ಕಣ್ಣು ಗಳನ್ನೂ ನನ್ನ ಕುಂಚ ಚಿತ್ರಿಸಿತೆ? ಅಥವಾ ಯವ್ವನದ ಆದರ್ಶದ ನಶೆಯಲ್ಲಿ ಮಾದರಿಯಾಗಲು ಬಯಸಿದ ವ್ಯಕ್ತಿತ್ವದ ಕಲ್ಪನಾ ರೂಪವೇ?ಅನ್ಯನಾಗಿ, ನಿಷ್ಪಕ್ಷಪಾತ ವಿಮರ್ಶಕನಾಗಿ ನನ್ನನ್ನು ನಾನೇ ಎಷ್ಟು ಬಾರಿ ನೋಡಿಕೊಂಡಿದ್ದೇನೆ? ಅಂತರಂಗವನ್ನು ಕಲುಕಿದ್ದೇನೆ ಎಂದು ಲೆಕ್ಖ ಹಾಕುವುದು ಮೂರ್ಖತನದ ಪರಮಾವಧಿ.
ನನ್ನ ಎದುರಿಗಿರುವ ನನ್ನನ್ನೇ ದಿಟ್ಟಿಸಿ ನೋಡುತ್ತಿರುವ ಈ ಆಗಂತುಕ ನನ್ನ ಕಲ್ಪನೆಯ ಕುಂಚದಲ್ಲೇ ರೂಪ ಪಡೆದಿರುವ ಈ ಭಾವ ಚಿತ್ರ ಯಾರದು?ಭ್ರಮೆ. ಇರಬಹುದು,ನಾನಂದುಕೊಂಡ, ನಾನು..... ನನ್ನದಲ್ಲ...
ಹಾಳೆ ಖಾಲಿ...!! ಚಿತ್ರವೇ ಇಲ್ಲದ ಬರೀ ಹಾಳೆ.. ಮತ್ತೊಮ್ಮೆ ಕಣ್ಣುಜ್ಜಿ ನೋಡಿದೆ, ಚಿತ್ರ ಅಲ್ಲೇ ಇದೆ... ಹಾಳೆ ಖಾಲಿಯಾಗಿಲ್ಲ...
ಆದರೆ ಆ ಭಾವಚಿತ್ರ ಮಾತ್ರ ಖಂಡಿತ ನನ್ನದಲ್ಲ!!!!
Comments