....ಕೈಲಾಸ....
ಸರ್ವಾಧಿಕಾರಿ...
ಕೊರೆಯುವ ಕ್ರೌರ್ಯ ಮಲಗಿಸುತ್ತದೆ ಶಾಶ್ವತವಾಗಿ.
ಹೆದರಿಕೆಯ ನಡುಕದಲಿ ನಗ್ನವಾಗುವ ಹಸಿರು,
ಚಳಿಯ,ಬಿಳಿಯ ಚಾದರಹೊದ್ದು ಮುಲುಗಿದ ನಿಟ್ಟುಸಿರು.
ನೀರಿಗೂ ಕ್ಷಮೆಇಲ್ಲ, ಗಾಳಿಗೂ ಸುಂಕ
ತಾಪ ಇಲ್ಲಿ ಅಪರೂಪದ, ದುಬಾರಿ ಸಗಟು
ಸಹಜ ಬಾಳೇ ಅಗಿದೆ ಒಂದು ಒಗಟು,
ಹೆಪ್ಪುಗಟ್ಟಿಸಿ, ರೂಪ ಬದಲಿಸಿ
ಹರಡಿ ಪದರವಾಗಿ ಮೆರೆಯುವ
ಮೆತ್ತನೆಯ ಅಟ್ಟಹಾಸ.
ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ
ಅದರಮೇಲೆ ಬೆಟ್ಟ ಓಡಿಸುವ ಒರಸೆ,
ಸಾವಕಾಶದಲ್ಲಿ ತಿರುಗಿಸುತ್ತಾನೆ
ತನ್ನ ಚೂಪು ಮೀಸೆ, ಪ್ರತಿಧ್ವನಿಸುವ ಶಂಖನಾದಲಿ
ನೀರ್ಗಲ್ಲ ಗರ್ಭಪಾತದಲಿ ಹರಿಯುವ ಹಿಮಪಾತ
ನಿಶ್ಯಭ್ದ ಡಮರುಗಕೆ ಓಗೊಡದ ಕೈಲಾಸವಾಸಿ.
ಪ್ರಾಣಿಗಳ ಸುಳಿವಿರದು ಈತನ ಪಾಳಿಯಲ್ಲಿ.
ಪಾಪ! ಅವುಗಳಿಗಾದರೂ ಆಸರೆ ಎಲ್ಲಿ?
ಗಿಡಮರಗಳು ಸೆಣಸಿ, ಸುಸ್ತಾಗಿ ಕುಸಿಯುವ ಕಣ್ಣಾ ಮುಚ್ಚಾಲೆ ಆಟ
ಘಾಸಿತ ಅಂಗಾಂಗಳ ಶಶ್ರೂಷೆಯಲಿ ನಿರತ.
ಹಸಿರುಟ್ಟ ಅನ್ನಪೂರ್ಣೆಯೇ ಕಂಗಾಲು
ಕೈಲಾಸವಾಸಿ ಹರನ ಹರಿವಿನಲ್ಲಿ
ಮಾಯಾವಿ ಶಿವ ಹೊರಬಿಡುವ ಭಂಗಿಯ ಧೂಮ
ಶಿಖರಗಳಮೇಲೆ ನರ್ತಿಸುವ ತಾಂಡವ…..
Comments