ಮೌನಿ....


ಮಣ್ಣ ತುಂಬಿ, ನೀರ ಬೆರೆಸಿ,
ಬೆಳಕ ಚುಂಬಿಸಿ
ಆಕಾರ ತುಂಬಿಸುವ ಪ್ರಕೃತಿಯ ಅಕ್ಷಯಪಾತ್ರೆ
ಸಕಲ ಜೀವಿಗಳಿಗೆ,
ರಾಡಿ ಹರಿಸಿ, ಹಸಿರು ಕಲಸಿ, ಮೆತ್ತಿ ಕೆಸರ,
ಬೆರೆಸಿ ಲವಣ, ಹೀರಿ ಕಿರಣ, ಪೋಣಿಸಿ ಕಟ್ಟುವ ಆಹಾರ ತೋರಣ
ಭೂವಿಸ್ತಾರದಲಿ ವಿಸರಿಸಿ, ಹರಿದು ನೀರಲ್ಲಿ ನೀರಾಗುವ ಪಾಚಿ
ಬೆಳಕಿನ ಬೆರಣಿಯಲ್ಲಿ ಹದಮಾಡುವ ಕಲೆಗಾರ
ಸಂಸ್ಲೇಷಕನಾದರೂ, ಗಾಳಿ ಬೀಸುವ ವಿಶ್ಲೇಷಕ
ಜೀವಶಕ್ತಿ ಹಂಚಿಕೆದಾರ.
ಶಾಶ್ವತ ಮೌನಿ, ತುಂಬಾ ಸರಳ
ಹೀಗೆ ನಮ್ಮಲ್ಲಿ ಅತಿ ವಿರಳ
ದೇಹಕ್ಕೆ ಅಂಟಿರುವ ಉಸಿರಿನಂತೆ, ನೆಲಮರೆಯದ ನಿಶ್ಚಲ ಯೋಗಿ
ಗುರುತ್ವ ಗುರುವರ್ಯರಲ್ಲಿ, ಭಕ್ತಿ ಅಪಾರ
ಗುರು ಇದ್ದಲ್ಲೇ ನೆಲೆ, ಪ್ರಶ್ನಾತೀತ ವಿಧೇಯತೆ ಸೆಲೆ
ಕದಲುವುದಿಲ್ಲ ಅಚಲ, ಕಿತ್ತಿ ಅಡ್ಡ ಮಲಗಿಸಿ,
ತಲೆಕೆಳಗೆ ಮಾಡಿ ವ್ಯಾಮೋಹದ ನೀರುಣಿಸಿದರೂ
ಮತ್ತೇ ಹುಡುಕಿಕೊಂಡು ಬರುವ ಅತಿವಿನಯ ಶಿಷ್ಯಭಕ್ತ
ಒಣಮರದ ಬೇರಿಗೆ ಜರಡಿಯ ಪಾತ್ರೆಯ ಜಲಸಿಂಚನ
ಕೃಷ್ಣ ಮರೆಯಲಿಲ್ಲ ಕರುಣಿಸಲು ಸಾಕ್ಷಾತ್ಕರ
ಕಂಡಾಗ ಭೀಮನ ಹೆಣಹೊತ್ತ ಧರ್ಮರಾಯನ ವ್ಯಾಮೋಹ,
ಸ್ವರ್ಗದಹಾದಿಯಲ್ಲಿ
ಕವಲು,ಕವಲಾಗಿ ಕರಗಿ,ಮಾಯವಾಗುತ್ತಾ
ಸ್ಥಿತಿಸ್ಥಾಪಕದಲ್ಲೇ ಇಳಿಯುವ, ಆಳ ಹುಡುಕುವ ವೇಷಧಾರಿ
ಯಾರಿಗೂ ಕಾಣದ ಗುಹೆಯಲ್ಲಿ ಜಪಿಸುವ ಋಷಿ
ತನ್ನೆಲ್ಲಾ ಜೀವಕವಲುಗಳ ಜೀವಜಲ ಉಣಿಸುವ
ಜವಾಬ್ದಾರಿ ಯಜಮಾನ, ಗುರುತ್ವಕ್ಕೆ ಪ್ರಶ್ನೆಯಾಗುವ
ಬೆಳಕಿಗೆ ವಿಮುಖನಾದ ಬಲಿ ಪಾತಾಳ ಹೊಕ್ಕು,
ಕಣಕಣದಲ್ಲಿ ಅಭಿಸರಿಸಿ ಎತ್ತರಕ್ಕೆ ನೂಕಿ, ಗುರಿತಲುಪಿಸುವ,
ನಿಸ್ವಾರ್ಥಿ,ನಿರ್ಮೋಹಿ ನಿರಾಡಂಬರಿ
ಅಲಂಕೃತ, ಬಹುಭಾರ ಕಿರೀಟಹೊತ್ತ
ವಿಶಿಷ್ಟ ಪ್ರಭೇಧ ವಿಶ್ವವ್ಯಾಪಿ...

Comments

Popular posts from this blog

Reunited...at last..

ಕಾಗೆ....

The Crow.