ಜಿಗಣೆ
ಮಳೆಕಾಡವಾಸಿ ಮಳೆಗಾಲದಲಿ ಮಾತ್ರ,
ಪಡೆಯುವ ಅಸ್ತಿತ್ವಕ್ಕೆ ಮಹತ್ವದ ಪಾತ್ರ
ಅರೆನೀರ ಆವಾಸಿ, ರಕ್ತ ಪಿಪಾಸಿ. 
ಆದರೂ ಬಹು ಹೃದಯ ಶ್ರೀಮಂತ
ನಿರಾಹಾರಿ ಸಾಮಂತ, ಸಂತ ಚಲಿಸುತ್ತಾನೆ
ವಂಕಿಯಾಗಿ ಉರುಳುತ್ತಾ, ಸರಾಗ ತೇಲುತ್ತಾ,
ತೆವಳುತ್ತ, ಒಮ್ಮೊಮ್ಮೆ ಮುಳುಗುತ್ತ ಪರಾರಿ
ಹರಿಯುವ ಹಳ್ಳಗಳಲ್ಲಿ ಕುಡಿದು, ಹೀರುತ್ತಾನೆ,
ಹೊಟ್ಟೆ ಮಟ್ಟ, ಮಿತಿಅರಿತ ಸುಸಂಕೃತ
ಅಥಿತೇಯ ಪ್ರಾಣಕ್ಕೇ ಕೈ ಹಾಕದ ಸಾಧು,
ಬಿಡುವುದಿಲ್ಲ ತನ್ನ ಹಿಡಿತ,ಅರಿವಳಿಕೆಯ ಕಡಿತ,
ಅಹಿಂಸೆಯ ಹಿಂಬಾಲಕ,ನಾಯಕ ಶಾಂತ ಪಂಡಿತ
ಕೊಳವೆಯಾಕಾರದ ಕಾಯಕ್ಕೆ ರಕ್ತಖಣದಲಿ ಸುಗ್ಗಿ,
ಚಪ್ಪಟೆಯ ಸಂಚಿ, ಉಬ್ಬಿ,ಹಿಗ್ಗಿ ದುಂಡಾಗಿ
ಚೆಂಡಾಗುವ ವರೆಗೂ ಅಂಟಿಕೊಂಡಿರುವ ಅಭಿಮಾನಿ...
ನಿರಕ್ತ....ಕರಿ ಪಿಂಡವಾಗಿ, ಮೆತ್ತನೆಯ ಸ್ಪರ್ಷ
ಕಳಚಿಕೊಳ್ಳುತ್ತಾನೆ ತಾನೇತಾನಾಗಿ, ತೃಪ್ತ
ಹೆಪ್ಪು ಗಟ್ಟಿಸಿ ರಕ್ತ ಗಾಯಮುಚ್ಚಿ ಮಂಗಮಾಯ
ನಾಳೆಯ ಹಂಗಿಲ್ಲದ ಸಾಧು, ದ್ರವಾಹಾರ ವ್ರತನಿಷ್ಟ
ಆ ಕ್ಷಣಕ್ಕೆ ಬದುಕುವ ತತ್ವಜ್ಞಾನಿ ಸಂತೃಪ್ತ
ಅಲ್ಪಾಯುಷಿ, ಹೊರೆಯಾಗಲಾರ, ಬದುಕಿನ ಹಂಗಿಗೆ
ಹಾಗಾಗಿ ಅರ್ಧ ಬದುಕು ಉಪವಾಸ,ಉಳಿದಂತೆ ಪಥ್ಯ
ಅಜ್ಞಾತದಲ್ಲಿ....ದ್ವಿಲಿಂಗಿ, ಮುಂದುವರೆಸುವ ಪೀಳಿಗೆ
ಗುಪ್ತ ನೆಲವಾಸಿ ಮಾಯವಾಗುತ್ತಾನೆ ನೇಪಥ್ಯದಲ್ಲಿ
ವಾಮನನ ಕಾಲ್ತುಳಿತಕ್ಕೆ ಪಾತಾಳಸೇರಿದ ಬಲಿ
ಮತ್ತೆ ಪ್ರತ್ಯಕ್ಷ ಮೋಡಗಳೊಂದಿಗೆ ತಾತ್ಕಾಲಿಕ ಶಿಬಿರಗಳಲ್ಲಿ
ಕಾಡಿನ ತೊರೆಗಳ ದಂಡೆಯ ಮೇಲೆ ಡೇರೆ ಜಡಿಯುವ ಮಡಿವಂತ
ಸಸ್ಯಹಾರಿಗಳ ಬಿಸಿರಕ್ತ ಮಾತ್ರ ವೇದ್ಯ, ಉಳಿದಿನ್ನೆಲ್ಲಾ ವರ್ಜ್ಯ

Comments

Popular posts from this blog

Reunited...at last..

ಕಾಗೆ....

The Crow.