ಕಡಲ ಸಂವಾದ....

ನಾನು...
ಸಾಗರವೇ, ನೀನೊಬ್ಬನೆ ಹೀಗೆ....ಏಕೆ? ಅವಿಶ್ರಾಂತ ಕ್ರಿಯಾಶೀಲ, ನಿನ್ನ ಮೌನವ ಕೇಳಿದವರಿಲ್ಲ. ನಿನ್ನ ಕದನವಿರಾಮ ಕೇಳಿಲ್ಲ ಯಾರು.ಆ ನಿಶ್ಚಲ ಜಡದೇಹವನ್ನು ಚುಚ್ಚಿ,ಕೊರೆದು, ಕೊರೆದು,ಬೀಸಿ,ರುಬ್ಬಿ,ಅಗೆದು,ಬಗೆದು ಮಾಡಿದ್ದೀಯ ಮಣ್ಣುಪಾಲು
ಈಗಲೂ ಬಿಟ್ಟಿಲ್ಲ ಆ ಮೌನಶಿಲೆಯನ್ನು ಕೊರೆಯುತ್ತಲೇ ಇದ್ದಾರೆ ನಿರಂತರ ನಿನ್ನ ನಿರ್ದಯ ತುಕಡಿ ಮಂದಿ.,
ಓ ಅವಿಶ್ರಾಂತನೇ, ಶಾಂತನಾಗು, ಒಂದು ಕ್ಷಣಕ್ಕಾದರೂ...ಅನೂಹ್ಯ ಕಾಲದಿಂದ ನನ್ನ ದೃಷ್ಟಿಯ ಮುಂದೆ ಬಡಿಯುತ್ತಲೇ ಇದ್ದೀಯ ನಿನ್ನ ಅಂಚನ್ನೇ..ಸವೆಸಿರುವೆ,ಕೊರೆದಿರುವೆ, ಬೀಸಿ ರುಬ್ಬಿರುವೆ..ಇನ್ನೂ ಮುಗಿದಿಲ್ಲ ನಿನ್ನ ಕಾರ್ಯ.
ಶತ್ರುರಹಿತ ಯುದ್ಧ, ನಿನ್ನ ಅಲೆಗಳ ಸೇನೆಗೆ ಅಜ್ಞಾಪಿಸು, ಸ್ವಲ್ಪ ವಿರಮಿಸಲಿ.ಬಳಲಿರಬಹುದು ಮಿಲಿಯಾಂತರ ಕಲ್ಪಗಳ ನಿಲ್ಲದ ಚಲನೆಯಲ್ಲಿ....ಮಹಾದಂಡನಾಯಕ ,ಅನಿಲರಾಜ...ನಿನ್ನಮಾತು ಕೇಳುವುದಿಲ್ಲವೇ? ಅವನ ಆದೇಶವೇ ಅಂತಿಮ ಆಜ್ಞೆ ನಿನ್ನ ಅಗಣಿತ ಸೇನೆಗೆ,ನಿನ್ನ ಅನುಮತಿ ಬೇಕಷ್ಟೇ ಕದನವಿರಾಮಕ್ಕೆ,ಚಂದ್ರನ ಮಧು ಮತ್ತೇರಿಸದಿರಲಿ, ನಶೆಯಲ್ಲಿ ಹಾರದಿರಲಿ
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ, ಬೇಕೆ? ನಾವು ನೆಲವಾಸಿ, ಭೂಮಿಯೇ ಮರಳಾಗಿ ಶರಣಾದ ಮಣ್ಣು ಆಶ್ರಯವಾಯಿತು, ನಿ ಬಿತ್ತಿದ ಬದುಕಿಗೆ, ಆ ನಿನ್ನ ಪ್ರತಿನಿಧಿಗಳು...., ನಿನ್ನ ಮೊಳಕೆಯೇ ಚಿಗುರೊಡೆದು, ಹರಡಿ, ದೂರಸರಿದು ಸಹಸ್ರಾರು ವಿವಿದತೆಯಲಿ ಕವಲು...ನಿನ್ನ ಸಂತಾನ.....ನಿನ್ನವರು, ನಿನ್ನ ಮೂಲದವರು,ಮೋಡದಿಂದಲೇ ಇಳಿದು ಬೀಡು ಬಿಟ್ಟವರು
ನಿನ್ನ ವಂಶದ ಕುಡಿಗಳು ಮರೆಯಬೇಡ ನಿರ್ದಯಿ,ಒಂದು ದಿಕ್ಕಿಗೆ ಅಲೆಮಾರಿ ಅಲೆಗಳ ಧಾಳಿ,ಇನ್ನೊಮ್ಮೆ ಮೋಡಗಳು ಸಾರುವ ಸಮರ,ಭಗ್ನಾವಶೇಷ, ನಿನ್ನ ಆಹಾರ,ದೈತ್ಯ ಶಕ್ತಿಪ್ರದರ್ಶನದಲ್ಲಿ ನಲುಗಿದೆ ಭೂಮಿ...ದಿಕ್ಕುಕಾಣದೆ,ಶರಣಾಗಿದೆ,ನಿನಗೆ,ಗೆಲುವಿನ ನಂತರವೂ ಘೋಷಿಸಬಾರದೆ, ಶಾಂತಿ?
ನಿನಗೊಂದು ಆಟ,ಕೊತ,ಕೊತ ಕುದಿಯುವ ಲಾವ ಶಿಲಾಗುಮ್ಮಟವಾದ ಕಾಲ..ನೀನು ನಕ್ಕಿದ್ದೆ, ದ್ವೇಶ ಮರೆಯಲಿಲ್ಲ, ಸೇಡು ಇನ್ನೂಬಿಟ್ಟಿಲ್ಲ.ಅದಕೆ ಸತತ ನಿಲ್ಲದ ಆಕ್ರಮಣ ನಿನ್ನ ಅಲೆಗಳಿಂದ,ನಿನ್ನ ರಕ್ತ ಬೀಜಾಸುರ, ಸಾವು ಗೆದ್ದ ಸಂತಾನ
ಒಂದರಹಿಂದೊಂದು ಹುಟ್ಟಿ ಬರುತ್ತಲೇ ಇವೆ ಎಲ್ಲ ಕೋನಗಳಿಂದ ನಿನ್ನ ಕಾಯದಿಂದ ನಿಲ್ಲದ ನಿರಂತರ ಮಾರಕ ಪ್ರಹಾರ,ಭೂಮಿ ತಡಯಲು ಪ್ರಯತ್ನದಲ್ಲೇ ನುಚ್ಚು ನೂರು,ಎಲ್ಲ ಕೊಳ್ಳೆ ಹೊಡೆದು ಸಾಗಿಸುತ್ತಿ ನಾವು ಕಾಣದ ಆ ನಿನ್ನ ಪಾತಾಳದರಮನೆಗೆ.
ನನ್ನ ಮುಂದಿರುವ ನೀನು ಘರ್ಜಿಸುತ್ತಲೇ ಇದ್ದೀಯಾ,ನಾನಿಲ್ಲದ ಕಾಲದಿಂದ, ದಡಬಡೆಯುವುದೇ ನಿನ್ನ ಚಟ, ಯಾರನ್ನುಹೆದರಿಸಲು, ಯಾರನ್ನುನುಂಗಲು? ಯಾರಮೇಲೆ ನಿನ್ನ ಧಾಳಿ? ಜಯಶೀಲ ನೀನೀಗ. ಯಾರ ಬಳಿ ಹೋಗಲಿ ನಾನು? ನಿನ್ನ ಮೇಲೆ ದೂರು ಕೊಡಲು...? ಇರುವ ಇನ್ನೊಬ್ಬ...ನಮ್ಮಿಬ್ಬರನ್ನು ಬಿಟ್ಟು...ಹೌದು...ನನ್ನ ನಿನ್ನ ನಡುವೆ ಬೆಸುಗೆಯೋ? ಕಂದರವೋ...ಇರುವಿಕೆಯಂತು ನಿಜ...ಆ ದಿಗಂಬರ ದಿಗಂತ...

ದಿಗಂತ...
ಓ ದಿಗಂತವೇ...ನೀನೆ ಹೇಳು..ಗಮನಿಸುತ್ತಲೇ ಇದ್ದೀಯಾ ನಮ್ಮಿಬ್ಬರನ್ನು.ಧಾಳಿಕೋರ ಯಾರು?  "ಶಾಂತಪ್ರಿಯ ನಾನು....ನಾನು ತಟಸ್ಥ, ನೀವಿಬ್ಬರೂ ಒಂದೇ ನನಗೆ" ನುಡಿಯಿತು ಭೂಸಾಗರ ರೇಖೆ ಕಳಕಳಿಯಿಂದ,ನಿರ್ಭಾವದಿಂದ, ತಗುಲಿತು ಸೂರ್ಯ ಕಿರಣ..

ಕಡಲು
ಕಡಲ ಒಡಲಿಂದ ನಗುಒಂದು ಕಂಪಿಸಿತು,ಜಗವೆಲ್ಲ ಪ್ರತಿಧ್ವನಿಸಿತು, ಅ ಮಾರ್ದನಿ ಮುಗುಳುನಗೆಯಲಿ,"ಓ ಹಸಿಕೂಸೇ....ಎಳೆ ಕುನ್ನಿ ಮಾನವ, ನೆಟ್ಟಗೆ ಉಸಿರಾಡಲಾರೆ...ಆದರೂ ನನ್ನ ಮೇಲೆ ನಿನ್ನ ದೂರು..ಕೋಪ ನನಗೆ ತಿಳಿದಿಲ್ಲ, ಕಾರ್ಯವೇ ನನ್ನ ಹವ್ಯಾಸ...ಕೈಲಾಸ ಗೊತ್ತಿಲ್ಲ....ನಿನ್ನ ನೆಲ, ಪುರಾತನ ಗೌರವ ಮಾತೆ, ಮಹಾಕರುಣಾಮಯಿ,ಹೆತ್ತಿದ್ದಾಳೆ, ಸಾಕಿದ್ದಾಳೆ,ನಿನ್ನ ಊಹೆಗೆ ನಿಲುಕದ ಕಂದಮ್ಮಗಳನ್ನು....ಮಾತೃಭಕ್ತಿಯಲಿ ಬದುಕಿ ಕರ್ಮಸವೆಸಿದ ಆ ನಿನ್ನ ಹಿರಿಯ ಜೀವಗಳು.
ನಿನೋಬ್ಬನೆ ವಿಚಿತ್ರ ಹುಟ್ಟು, ಶಾಪ ವಸುಂಧರೆಗೆ...ಪಾಪ, ನುಂಗಿನೋವು ಕಾಯುತ್ತಿದ್ದಾಳೆ ಆಶ್ರಯಕೊಟ್ಟ ತಾಯಿ....ವಿಧ್ವಂಸಕ ಸ್ವಾರ್ಥವನ್ನು..ಸಹಿಸಿಕೊಂಡಿದ್ದಾಳೆ...
ಹೊಸಪ್ರಾಣಿ ನೀನು....ಆದರೂ ಹೇಳುತ್ತೇನೆ ಕೇಳು.....ನಾನಿಲ್ಲಿರುವ ದಿನದಿಂದ ನೀನು ನನ್ನಲ್ಲೇ ಇದ್ದೀಯಾ, ಅಲ್ಪದೃಷ್ಟಿಯವನು....ನೋಡು ಕಣ್ಣು ಬಿಟ್ಟು ನೋಡು...ನಿನ್ನಲ್ಲೇ ಇದ್ದೇನೆ ನಾನು....ನನ್ನಲ್ಲೆ ಇರುತ್ತೀಯ ನೀನು ಶಾಶ್ವತವಾಗಿ.... ಹೊಸರೂಪ, ಹೊಸಆಕೃತಿಯಲ್ಲಿ...ಕಾಲ ನಿಲ್ಲುವವರೆಗೂ....ಅದನ್ನು ಲೆಕ್ಕಹಾಕುವವರಿರುವ ವರೆಗೂ....

Comments

Popular posts from this blog

Reunited...at last..

ಕಾಗೆ....

The Crow.