ಗೊಂದಲ....
1.
ಬರೆಯುವ ಹಂಬಲದಲ್ಲಿ ಬರವಣಿಗೆ ಆರಂಭ
ಬಿಸಿಲ ಧಗೆಯಲಿ ಘನಿಸಿ ಸ್ರವಿಸಲಾರದ ಶಾಯಿ, 
ಮೂಡಿಸುವ ಅಸ್ಪಷ್ಟ ಮುರುಕುಸಾಲುಗಳು ಮಾತ್ರ
ಅಕ್ಷರಗಳೇ ಮೂಡುವುದಿಲ್ಲ, ಪದವಾಗುವ ಕನಸು
ಲೇಖಕ, ಲೇಖನಬಿಟ್ಟು ಲೇಖನಿರಿಪೇರಿಯಲ್ಲೇ ಮಗ್ನ
ಮುಕ್ತಾಯವಾದಿತೇ ಸಾಲುಗಳೇ ಇಲ್ಲದ ಉಲ್ಲೇಖ?
ಮುನ್ನುಡಿಯೇ ಮುಗ್ಗರಿಸಿ, ಮುಗಿಯದ ಎಡವಟ್ಟು
ಮುಂದುವರೆಯ ಬಲ್ಲುದೆ ?ನನ್ನ ನಿಮ್ಮಯ ಕಥೆ,
ಕವನವೋ, ಗಾಯನವೋ ನಾದರಹಿತ, ಏಕತಾನವೋ
ವಾದ್ಯರಹಿತ ಕಛೇರಿಯಲಿ ಗಾಯಕನಿಗೆ ಶೀತ,ನೆಗಡಿ
ಕಥೆಯೇ ಆಗದ ವ್ಯಥೆಯಲ್ಲೇ ವಾಕ್ಯಗಳ ಆತ್ಮಹತ್ಯೆ....
ಎಲ್ಲವೂ ಅಪೂರ್ಣ,ಆಗಿರಬೇಕಿಲ್ಲ ಎಲ್ಲವೂ ಪರಮಸತ್ಯ
2.
ಚಿತ್ರಬಿಡಿಸುವ ಕುಂಚ ಒಣಗಿ, ಸೋತು ಒರಗಿದೆ
ಚಕ್ಕೆಯಾಗಿ ಉದುರುತ್ತಿದೆ ಧೂಳು, ಚಿತ್ರಪಠದಿಂದ
ಬಣ್ಣ ಕರಗುವುದಿಲ್ಲ, ಬಣ್ಣಗಳ ತಟ್ಟೆಯೇ ನಿರ್ಜಲ
ಗೆರೆ ಮೂಡಿ ಹಾಳೆಯ ಹಾದಿಯಲ್ಲೇ ವಿಸರಿಸಿ, ಚಿತ್ರ ಮಾಯ
ಅಸ್ಪಷ್ಟ ಛಾಯೆಗಳು ಹೊರಗೆರೆಗಳಲ್ಲಿ ಬಣ್ಣಹರಡಿ
ಅಸ್ತವ್ಯಸ್ತ ಅಮೂರ್ತ ರೂಪ, ಗರ್ಭಪಾತದಲ್ಲಿ
ಬಣ್ಣತುಂಬಲಾರದ ಗೆರೆಗಡಿಗಳಲ್ಲಿ ಆಕೃತಿಯೇ ಮೂಡಿಲ್ಲ
ಹುಡುಕ ಹೊರಟಿದೆ ಆತ್ಮ ದೇಹಾಕ್ಕಾಗಿ ಗೆರೆಗಳು ಎಲ್ಲೆಲ್ಲೋ
ಪುಷ್ಪ,ಪತ್ರ ವಿನ್ಯಾಸದಲ್ಲಿ ಚಿತ್ರಪಟ ಚೌಕಟ್ಟು ಸುಂದರ
ಜೋತುಬಿದ್ದ ಅನಾಥ ಕಲಾಕೃತಿ ಬಿಳಿಯಭಿತ್ತಿಯ ಮೇಲೆ
ಕಲಾಪ್ರೀಮಿಗಳ ಜಾತ್ರೆ ದೌಡು, ಮೇಲಿಂದಮೇಲೆ,
ರೆಪ್ಪೆ ಅಲುಗದ ದೃಷ್ಟಿ ಹುಡುಕುತ್ತಿದೆ, ಭಿತ್ತಿಯೇ ಕಾಲಕೃತಿ
ಮೆಚ್ಚಿಕೊಂಡಿದ್ದಾರೆ ಕಲಾವಿಧನ ಪ್ರತಿಭೆಯನ್ನು ಆಸಕ್ತರು
ಹೊಗಳಿಕೆಗೆ ಪದಸಿಗದೆ ಪರದಾಡುತ್ತಿದ್ದಾರೆ ಪಾಪ ವೀಕ್ಷಕರು
ಕಲಾಪ್ರೇಮಿಗಳ ನಿಲ್ಲದ ಚಡಪಡಿಕೆ, ಹುಡುಕುತ್ತಲೇ ಇದ್ದಾರೆ
ಬಣ್ಣಗಳ ಜಾತ್ರೆಯ ಗುಪ್ತ ಕಲೆಯಲ್ಲಿ, ನವ್ಯ ಕಲೆಯನ್ನು.

Comments

Popular posts from this blog

Reunited...at last..

ಕಾಗೆ....

The Crow.