ವಿಕಾಸ,ಪ್ರಗತಿ,ವಿನಾಶ ಇತ್ಯಾದಿ

ವಿವೀಕಿ ವಿಧ್ವಂಸಕಾರಕ,
ನಿಜ,ಕೆಲವೊಮ್ಮೆ, ಕೆಲವರಿಗೆ ಹೆಸರು ಅನ್ವರ್ಥಕ
ಜಾತಿ ಪ್ರಭೇದ ಸೂಚಕ, ನಿಜ ತೀರಾ ವೈಜ್ಞಾನಿಕ
ಸಾಮಾನ್ಯರಿಗೆ ಚಿರ ಪರಿಚಿತನಾದರೂ ಅನಾಮಿಕ,
ಭವಿಷ್ಯ ಬರೆದು ,ಭಾವ ಚಿವುಟಿದ ಭಾವುಕ!
ಹೊತ್ತ ತನ್ನ ರೆಂಬೆಯನ್ನೇ, ತಾನೇ ಕಡಿವ ಸಾದಕ.
ಮಹಾಕವಿ ಕಾಳಿದಾಸ!
ಹಾಡುತ್ತಿದ್ದಾನೆ ಚರಮಗೀತೆ ಹಂಸಧ್ವನಿಯಲ್ಲಿ
ಮೈಮರೆತು, ಕಿವುಡನಂತೆ....!
ಜ್ಞಾನದಲ್ಲಿ ಮಿದುಳು ಅರಳಿ , ಭಕ್ತಿಯಿಂದ ಹೂವು ಮುಡಿಸಿ
ಮಿದುಳಿನಲ್ಲೇ ಎಲ್ಲ ಕೆಡಿಸಿ, ಸೃಷ್ಟಿ ಯಿಂದ ಪುಷ್ಟಿ ಗೊಂಡು,
ಕಂಡಿದೆಲ್ಲ ಕುಡಿದು ತಿಂದು, ಬಳೆದು ಬಾಚಿ ಖಾಲಿ ಮಾಡಿ,
ಇದ್ದದೆಲ್ಲ ಕದಡಿ, ಕದಡಿ, ತೀಡಿ ಮಾಡಿ ಎಲ್ಲ ರಾಡಿ.
ತಾಯ ಬಸಿರ ಹಸಿರು ಬಗೆದು, ಇದ್ದದೆಲ್ಲ ಹೊರಗೆ ತೆಗೆದು...
ಯಶಸ್ವಿ ಮೆರೆದ ಸಾಧನೆ, ತಪಸ್ವಿ ಮರೆತ ವೇದನೆ
ಅಳಿವಪ್ಪಿದೆ ಪರಿಸರ, ಗಾಳಿಗೂ ಬೀಸದ ಚಾಮರ,
ಜರಡಿಯಾದ ಹಂದರ, ಭೂಮಿ ಸುಡುವ ಪಂಜರ,
ನದಿಗಳಾಗಿವೆ ಕಂದರ, ಕಾವೇರಿದ ಚಂದಿರ,
ಬತ್ತಿಹೋದ ಸಾಗರ, ಮರಳುಭೂಮಿ ಆಕರ,
ಪರಿಹಾರ! ಸ್ಪೋಟಗೊಂಡ ಮಹಾ ಸಮರ...
ಭಸ್ಮಾಸುರನ ಆತ್ಮಾಹುತಿಯ ಶಿವತಾಂಡವ
ಕಳಚಿಹೋದ ಜೀವ ಕೊಂಡಿ,
ಮಾಯವಾಗಿವೆ ಸರದಿಯಲ್ಲಿ, ದೂರಜಾರಿದ ಪರಧಿಯಲ್ಲಿ,
ಜೀವಮಂಡಲ ಪ್ರಕ್ಷುಬ್ದ, ವಿವಿದತೆಯ ಭಾಗಕಾರ
ಜೀವಮಂಡಲದ ಲೆಕ್ಕಾಚಾರದಲ್ಲಿ... ಭಾಗಲಬ್ಧ?
ಉಳಿಯಬಲ್ಲದೇ, ಶೇಷ ಜೀವಾಣುವಾದರೂ?

Comments

Popular posts from this blog

Reunited...at last..

ಕಾಗೆ....

The Crow.