ಅಮ್ಮ...... 

ನನ್ನಮ್ಮ
ನನ್ನಬಾಯಲ್ಲಿ, ಈಗ ಕೇವಲ ಉದ್ಗಾರ ಮಾತ್ರ
ಅದರೂ ಕೂಗುತ್ತೇನೆ, ಬಾರಿ,ಬಾರಿ 
ಅಕಾಲ, ಅನಿರೀಕ್ಷತ ಸಂದರ್ಭ ಗಳಲ್ಲಿ
ಪರಿಸ್ಥಿತಿಗಳ ಹಂಗಿಲ್ಲದೆ...
ಅಸಹಾಯಕನಾಗಿ... 
ಪ್ರಜ್ಞಾಹೀನ 

ಹೆದರಿಕೆಯ ನಡುಕದಲಿ, ಬೆವರೇ ಬೇರಾದ ಆತ್ಮದಾಳದಲ್ಲಿ 
ಆಪ್ಯಾಯ ನೋವಲ್ಲಿ, ನಿರ್ಲಜ್ಜ ನಲಿವುಗಳ 
ಕೋಪದ ಅಲೆಗಳಲ್ಲಿ, ಬಚ್ಚಿಟ್ಟ ಈರ್ಷೆಯಲಿ  
ಎಚ್ಚರದ,ಸುಪ್ತ ಕನಸುಗಳಲ್ಲಿ ಜಾಗೃತ 
ನೀ ಬಂದು ಆವರಿಸಿ
ನಿನ್ನ ರಕ್ಷಕ ತೊಟ್ಟಿಲಿನಲ್ಲಿ, ತೂಗಿ
ಆತ್ಮವನ್ನೇ ಗಟ್ಟಿತಬ್ಬಿ ಸಂತೈಸುತ್ತೀಯಾ

ಆದರೂ ನೀನಿಂದು 
ಈ ಗ್ರಹ, ನಕ್ಷತ್ರಗಳ ಲೆಕ್ಕಾಚಾರ, 
ಗೃಹಾಚಾರ ತಾಪತ್ರಯ ದಿಂದಲೇ ದೂರ
ಗ್ರಾಹಕಗಳ ಹೆದರಿಕೆ,ಬೆದರಿಕೆಗಳ ನಿರ್ಲಕ್ಷಿಸಿ 
ನಿರ್ಲಿಪ್ತಳಾದೆ  ನೀನಿಂದು, ಬಂಧನದ ಬೇಡಿ ಕಳಚಿ
ಒಂಟಿತನದ ಅನಾಥ ಕಾರಾಗೃಹದಲ್ಲಿ 
ನಾ ಮಾತ್ರ ಆಜೀವ ಆರೋಪ ಕೈದಿ 
ಶಾಶ್ವತವಾಗಿ ಕಾಯುತ್ತೇನೆ 
ನನ್ನ ಬಿಡುಗಡೆಗಾಗಿ

ಹೋಗಿ, ಬಾ ಎಂದು ನಾನು ಹೇಳುವುದಿಲ್ಲ
ನನಗೆ ಗೊತ್ತಿದೆ ನೀನು ಮರಳಿ ಬರುವುದೇಇಲ್ಲ
ಬರುತ್ತೇನೆ ನಾನೇ ಇಂದಲ್ಲ ನಾಳೆ 
ವಿಳಾಸ ಗೊತ್ತಿಲ್ಲ, ಅದರ ಅವಶ್ಯಕತೆ ಇಲ್ಲ 

ನಿನ್ನನ್ನೇ ಬಿಟ್ಟುಹೋಗಿದ್ದಿಯ  ಕಣಕಣಗಳ 
ಜೀವಾಣುಗಳಲ್ಲಿ. ನನ್ನ ವಿಸ್ತಾರದಲ್ಲಿ 
ನಿನ್ನದೇ ವ್ಯಾಪ್ತಿಯಲ್ಲಿ
ಕಷ್ಟವಾಗುವುದಿಲ್ಲ ನಿನ್ನ ಪತ್ತೆ ಹಚ್ಚಲು
ಸರ್ವವ್ಯಾಪಿ ನೀ 
ವಿಶ್ವವೇ ನಿನ್ನ ಹೊಕ್ಕಳು ಬಳ್ಳಿ 
ಇದು ಪರಮಾಣು ಸಂಬಂಧ....ಬ್ರಹ್ಮಾಂಡ 
ಕಾಣೆಯಾಗುವಷ್ಟು ಕುಗ್ಗ ಬಹುದು
ನಶಿಸಲಾರದು ಎಂದೂ ನಿನ್ನ ಸೃಷ್ಟಿ
ಹುಡುಕುವುದು ಬಲು ಸುಲಭ
ರೂಪಪರಿವರ್ತನೆಯ ಚಕ್ರ.........
ಈಗ ನೀನು ನನ್ನೊಳಗೆ ಶಾಶ್ವತರಕ್ಷಿತ

ದುಃಖ ಮಡುಗಟ್ಟಿ, ಕಟ್ಟೆ ಒಡೆಯದ ಕಣ್ಣು
ನೋವನ್ನು ಅನುಭವಿಸದ ಕಲ್ಲಾದ ಹೃದಯ
ಅಗಲಿಕೆಯ ನೋವಲ್ಲಿ,ಸಂಕಟದ ಬಿರುಗಾಳಿ
ವಾಸ್ತವದ ಅರಿವಲ್ಲಿ ಶೂನ್ಯತೆಯ ತಂಗಾಳಿ
ಸಂತನಲ್ಲ ನಿನ್ನೊಡಲ ಬಳ್ಳಿ, 
ಸಾಮಾನ್ಯ ಶುಷ್ಕ ಪಾಪಸುಕಳ್ಳಿ
ನಟಿಸಲಾರೆ ನಾನು ಅಸಮಾನ್ಯ ಸ್ಥಿತಪ್ರಜ್ಞ ನಂತೆ
ನಿರ್ವಾತ ಆತ್ಮದಲಿ, ಕಾಡುತಿದೆ ಅನಾಥ ಪ್ರಜ್ಞೆ
ಅಮ್ಮಾ........

Comments

Popular posts from this blog

Reunited...at last..

ಕಾಗೆ....

The Crow.