ಸೂಚನೆ...


ಅಸಂಖ್ಯ ಬೇರುಗಳು ಭೂಗರ್ಭದಲ್ಲಿ
ಲಾವಾದ ವಿಭಜನೆ ಮೊಳಕೆಯಲ್ಲಿ
ಮರಗಿಡ, ಪೊದರು ಹುಲ್ಲಲ್ಲೇ ಹೆತ್ತಕರಳು
ಯಾರಹಂಗಿಲ್ಲ, ಎಲ್ಲರೂ ನಿಸ್ವಾರ್ಥ
ಬೇರು ಹೊರೆಯಲ್ಲ ಮಣ್ಣಿಗೆ,ಹೊರತಲ್ಲ ನೀರು
ಸದಾ ನಿಷ್ಪಕ್ಷಪಾತಿ ನೀನು ಬೀಸೋಗಾಳಿ
ಬೇರಿಂದ ಬೇರಾಗಿ ಬೆಳೆದರೂ ಆಕಾಶದೆಡೆಗೆ
ಚಲನೆ ಮಾತ್ರ ಗುರುತ್ವದೆಡೆಗೆ

ಕಾಂಡ, ಖಂಡಮಯ, ಸಹಸ್ರಾರು ಕೊಂಬೆಗಳು
ರೆಂಬೆಗಳು,ಶಾಖೆಗಳು ಬಿಚ್ಚಿಟ್ಟ ಚಿಗುರುಗಳು
ಕವಲುಗಳು ಸೂಕ್ಶ್ಮ, ಭೂಮಿಯಲಿ ಒಂದಾಗಿ
ಹೂವಾಗಿ ಪರಮಾಣು, ಅಸ್ತಿತ್ವ ಆಕಾಶ ನಿರ್ವಾಣ
ನಿರ್ವಾತದಲಿ ನಿರ್ಲಿಂಗ ಲಿಂಗಾಣು,
ಬೇಕಿಲ್ಲ ವೈರಾಣು
ಮುಕ್ತವಾಗಲೇ ಬೇಕು ವಿವಿದ ಬಣ್ಣಗಳಲ್ಲಿ,
ಉತ್ಪತ್ತಿಯಾಗಬೇಕಿದೆ ಬೀಜಾಣು

ನಾಳೆ,ಕೊನೆಯಾಗುವ ಮಣ್ಣಲ್ಲಿ
ಬೆಳಕು, ಬಳಕಿ ಸಂಗ್ರಹಿಸಿ, ಉಸಿರು ತುಳುಕಿ
ಹಸಿರು,
ಹರಸು, ಹರಿಸು
ಶಕ್ತಿ ಧಾರೆ ಹೊತ್ತುಹೋಗುವ ಪಯಣ
ನಿನ್ನ ವಂಶಕೆ....ತಾಯಿಬೇರು ಹೊಕ್ಕಳುಬಳ್ಳಿ .
ಆದರೂ ಪಾರ್ಶ್ವ ಮೊಗ್ಗಲ್ಲಿ ದುರಾಸೆ ಚಿಗರುಗಳು
ಕಾರ್ಪೋರೇಟ್ ಹದ್ದುಗಳಂತೆ ಬಿಳಲು ಬೇರು

ಕಾಂಡದಿಂದಲೇ ಹೆರುವ ಅಬೀಜ ಸಂತಾನ
ನೆರಳಿಲ್ಲದ ಪಂಜರದ ಛಾವಣಿ
ಜಂಜಾಟ ಜೀವಜಾಲ,
ಕೊಲೆಪಾತಕ ಪೈಪೋಟಿ ಆಹಾರಜಾಲ
ನೀಲ ಸೂರಿನ ನಿರ್ಭಾವ ಗುಮ್ಮಟ?
ನಿಲ್ಲದ ನಿರ್ದಯ ಶಾಶ್ವತ ಸಂಕಟ....
ನಿನ್ನ ಅಶ್ವಮೇಧಯಾಗದಲಿ
ಅಸಂಖ್ಯ ಅಸಹಾಯಕರ ಆಹುತಿ
ಗುಬ್ಬಿಯಮೇಲೆ ಬ್ರಹ್ಮಾಸ್ತ್ರ

ನಿಶ್ಯಬ್ದ ಅಳಿವು , ಅಬ್ಬರಿಸಿದೆ ಸುತ್ತಮುತ್ತ
ಆಹುತಿಯಾಗಲಿದೆ ಉಳಿವು
ಕಲಿಯಲೇ ಬೇಕಿದೆ ಜೀವಸಂಕುಲ ಪಾಠ
ನೀನೊಬ್ಬನೇ ಅಲ್ಲ ಮಾಲಿಕ
ತಾತ್ಕಲಿಕ ಪಾಲುದಾರ ಮಾತ್ರ
ಅರಿವಿರಲಿ, ಬೇಕಿಲ್ಲ ನಿನ್ನ ರಕ್ಷಕನ ಪಾತ್ರ,
ಸೃಷ್ಟಿಕಾಯಿದೆ ಉಲ್ಲಂಘನೆ ದೂರು ತಲುಪಿದೆ
ಸೂಕ್ತ ನಿರ್ಣಯ ಬರಲಿದೆ
ಸಿದ್ಧವಾಗಲೇ ಬೇಕು ಕಠಿಣ ಕಾರಾಗೃಹ ಆವಾಸಕೆ.....

Comments

Popular posts from this blog

Reunited...at last..

ಕಾಗೆ....

The Crow.