ಬದುಕು ನೀನೇ ನೀನಾಗಿ......


ಕೇವಲ ಧ್ವನಿಪೆಟ್ಟಿಗೆಯಿಂದ ಹೊರಡುವ ಯಾಂತ್ರಿಕ ಕಂಪನಗಳು ಪದಗಳಾಗಲಿ ಅಥವಾ ಭಾಷೆ ಆಗಲಾರದು, ಯಾವುದೋ ಶಭ್ದ,ಭಾಷೆ ಆಗಲೂ ಬಹುದು, ಆದರೆ ಅರ್ಥವಾಗಲಾರದು ಕಾಳಜಿರಹಿತ ಶುಷ್ಕ ಧ್ವನಿತರಂಗಗಳು ಸಂಭಾಷಣೆಯಾಗಲಾರದು.......ಪದಗಳು ಅಡ್ಡಾದಿಡ್ಡಿ ಜಾಗಬದಲಿಸಿದರೆ ವಾಕ್ಯವಾಗುವುದೇ ಅಭಿವ್ಯಕ್ತಿಯಲ್ಲಿ....?ನೀಟಾದ,ಸುಂದರ ಅಕ್ಷರಗಳ ಸಾಲುಗಳು ಮಧುರ ಗೀತೆಯಾಗಲಾರದು ನೀನು ಹಾಡದಿದ್ದರೆ....
ಧಮನಿಗಳಿಂದ ಸತತ ಹರಿಯುವ ನಿನ್ನ ಯೋಚನೆಯನ್ನೂ ಪೋಷಿಸುವ ಮಿದುಳಿನ ಅಭಿವ್ಯಕ್ತಿ ಯಾಗಬೇಕು ನಿನ್ನ ಮಾತು....ಬಾಹ್ಯ ಮತ್ತು ಆಂತರಿಕ ಭೌತಿಕ, ಮಾನಸಿಕ ಸಂವಾದದಲ್ಲಿ ನಿನ್ನ ಸಮಾಜಿಕ ಪ್ರಜ್ಞೆ ಮಿಳಿತವಾಗಬೇಕು ನಿಜ ಅರ್ಥದಲ್ಲಿ.....ಇದು ಇಂದಿನ ಮಾತಲ್ಲ. ಮಿಲಿಯಾನು ವರ್ಷಗಳ ಸತತ ಆಂತರಿಕ ಸೆಣಸಾಟದಲ್ಲಿ ಹೊರಬಂದ ಪರಿಸರಾತ್ಮಕ ಜೀವ,ನಿರ್ಜೀವ ಅಂಶಗಳ ನಡುವಿನ ಪರಸ್ಪರ ಅಂತರ, ಪ್ರತಿಕ್ರಿಯಗಳ ವಾಸ್ತವ. ಇರಬಹುದು ಇದೇ ಪರಮಸತ್ಯ.

ಭಾವನೆಗಳು ವಿಕಸಿಸುವ ಮಿದುಳಿನಕೇಂದ್ರ ಕೇವಲ ಜೈವಿಕ ಮಾಂಸಲ ಮುದ್ದೆಯಲ್ಲ. ವಿವೇಕ ಕೇವಲ ನರಕೋಶಗಳ ವಿದ್ಯುತ್ ಛಾಪವಲ್ಲ....ಪ್ರತಿಯೊಂದು ಸಜೀವ ಕ್ರಿಯೆ ಕೇವಲ ಬುದ್ದಿಯ ಪ್ರತಿಕ್ರಿಯೆಯಲ್ಲ...ಪ್ರೇಮದ ಸಂಕೇತ ನಾಲ್ಕು ಕೋಣೆಗಳ, ಅಸಂಖ್ಯಾತ ರಕ್ತನಾಳಗಳ, ಲೋಮನಾಳಗಳಲ್ಲಿ ಹರಿದು ಕೋಶಸೇರುವ ರಕ್ತ, ಕೇವಲ ಜಿಗುಟಾದ ಪ್ಲಾಸ್ಮ ಜೀವರಸವಲ್ಲ....ಅನುಕಂಪ,ಕರುಣೆ ಕರಗಿರುವ ಅನಂತ ಅನುಭೂತಿಯ ಆಗರ.....ಅಸಂಗತ ಹೃದಯ...ಕೇವಲ ಒಂದು ಅನುಭವ.

ಪ್ರಚೋದನೆಗಳಿಗೆ ಸೂಕ್ತ ಪ್ರತಿಕ್ರಿಯಿಸುವ ನಿನ್ನ ಜ್ಞಾನೇಂದ್ರಿಯಗಳು ಯಾಂತ್ರಿಕ ಗ್ರಾಹಕಗಳಲ್ಲ.....ಗ್ರಹ, ಸೌರವ್ಯೂಹಗಳಾಚೆ ಅಗೋಚರದಲ್ಲಿರುವ ಆಕಾಶ ಗಂಗೆ, ನಿಹಾರಿಕೆ, ಸೂಪರ್ನೋವ, ಬ್ಲಾಕ್ ಹೋಲ್ ಗಳಿಂದ ಬೆಸೆದಿರುವ ಪರಮಾಣು ಅನುಭಂದ.......ಅವರ್ಣನೀಯ ಬೃಹತ್ ಜಾಲ.......ಅನುಭವಿಸಬೇಕು ನಿನ್ನ ಶೂನ್ಯತೆಯನ್ನು...ಕಲ್ಪನೆಯಲ್ಲಿ....ವೈಜ್ಞಾನಿಕವಾಗಿ......

ಆತ್ಮಜ್ಞಾನಕ್ಕೆ ಸಾತ್ವಿಕ ದೇವರು ತಾತ್ವಿಕ ಸೂತ್ರ ವಾಗಲಾರದು ಎಂದಿಗೂ....ನಿನ್ನ ದೇವರು ಸರ್ವಕಾಲಿಕನಲ್ಲ...ಬದಲಾಗುತ್ತಿರುತ್ತಾನೆ ದೇಶ,ಭಾಷೆ,ಕಾಲ, ಜಾಗ, ಸಂಪನ್ಮೂಲಕ್ಕೆ ತಕ್ಕಹಾಗೆ....!!! ಬೇಕಿಲ್ಲ ನಮಗೆ ಈ ಕ್ರೂರ,ಕುರೂಪ ಜಗತ್ತಿನ ವಿಚಿತ್ರ ದೇವರು....ಶರಣಾಗದಿರು ಆ ಕೃತಕ ಮಾನವ ನಿರ್ಮಿತ ರಕ್ಷಕನಿಗೆ..... ಯಾವುದೋ ಭ್ರಮೆಯಲ್ಲಿ....ನಿನ್ನ ಈ ಅತಂತ್ರ ಸ್ಥಿತಿಯಲ್ಲಿ.

ಒಮ್ಮೆ ಬೆರಗಾಗು ಮುಕ್ತನಾಗಿ, ಈ ಅಕಾಲ್ವನಿಕ ವಿಶಾಲ ಬ್ರಹ್ಮಾಂಡದ ವಿಸ್ತಾರದ ಹರಿವಲ್ಲಿ....ಶರಣಾಗು ಆ ಅನೂಹ್ಯ ಸೌಂದರ್ಯಕ್ಕೆ.. ತಲೆಬಾಗು ಆ ಕಾಣದ ಕಲ್ಪನಾತೀತ ಪ್ರಕೃತಿಯ ದೈತ್ಯಶಕ್ತಿಗೆ.. ನಿನ್ನ ಇತಿಮಿತಿಯ ಪರಧಿಯಲ್ಲಿ ವಿನಯನಾಗು. ವಿಲೀನವಾಗು ವಾಸ್ತವದಲ್ಲಿ.... ನಿನ್ನ ಅಸ್ತಿತ್ವಕ್ಕೆ ವಿಧೇಯನಾಗು. ಸರಳವಾಗು ಸಂಕೀರ್ಣದಲ್ಲಿ.... ಭಾವುಕನಾತ್ಮಕ ವಿಸ್ಮಯಿಯಾಗು ನೂರಾರು ನಿರುತ್ತರ ಶೇಷಪ್ರಶ್ನೆಗಳಿಗೆ....ಬೆರಗಾಗಿ ಬದುಕು ಭಯವಿಲ್ಲದೆ, ಯಾರಹಂಗಿಲ್ಲದೆ ನೀನೇ ನೀನಾಗಿ...... ಯಾರಿಗೂ ಹೊರೆಯಾಗದೆ....ಸಹಜವಾಗಿ ಈ ಗ್ರಹದ ಒಂದು ಅಂಶದಂತೆ.......ಎಲ್ಲದರಂತೆ....

Comments

Popular posts from this blog

Reunited...at last..

ಕಾಗೆ....

The Crow.