ಹಾಗೆ ಸುಮ್ಮನೆ....
ಪರಿಸರವನ್ನೇ ಗುಲಾಮಗಿರಿಗೆ ತಳ್ಳಿದ ವಿಜ್ಞಾನದ ಕ್ರಾಂತಿ.... ನಮ್ಮ ವಯಕ್ತಿಕ ಸೇವೆಗೆ ನಿರತವಾಗಿದೆ ಮೌನವಾಗಿ. ಈಗ ಸದಾ ಎಲ್ಲಾ ಋತುಗಳು ಲಭ್ಯ ಒಂದೇ ಕಾಲದಲ್ಲಿ, ಯಾವುದಾದರೂ ಪ್ರದೇಶದಲ್ಲಿ, ಅಕಾಲ ಮಾವು ಈಗ ಪ್ರತಿನಿತ್ಯದೊರೆಯುವ ನಿತ್ಯಮಾವಿನ ಹಾಗೆ. ನಿಶ್ಚಲ ನಿಂತಿದೆ ಅನೂಹ್ಯ ನಾಗಾಲೋಟದಲಿ ಸಮಯ.....ಭೂಭ್ರಮಣದಲ್ಲಿ. ದೂರವಾಗಿದೆ ವ್ಯತ್ಯಾಸ ಹಗಲು,ರಾತ್ರಿಗಳಲ್ಲಿ.... ಇನ್ನಷ್ಟು ಈ ಕಾಲ ಮುಂದುವರಿಯಲಿದೆ ಹೀಗೆ, ಅನಿಸುತ್ತದೆ.. ಕಾಲ ಘಟನೆಗಳಂತೆ....ಬದುಕಿನ ಪರಿಕಲ್ಪನೆ. "ಬಳಸಿ....ಬಿಸಾಡಿ"..... ತತ್ವದ ಪರಾಕಾಷ್ಟೆಯಲ್ಲಿ ಎಲ್ಲವೂ ತಾತ್ಕಾಲಿಕ....ಎಂಥಹ ಮಹಾತತ್ವ....? ಎಲ್ಲರ ಧ್ವನಿಯೂ ಅವರಂತೆ, ಅವರಿಗೆ ಸರ್ವಕಾಲಿಕ ಅಮರಸತ್ಯ. ನಕಲಿನ ಪ್ರಪಂಚ, ವಿವಿದತೆ. ಸೃಜನಶೀಲತೆ ಒಂದು ಸಾಮಾನ್ಯ ಬಿಡಿಸಲಾರದ ಸೂತ್ರ. ಲೆಕ್ಕ ಕಗ್ಗಂಟು. ಬರವಣಿಗೆಗೆ ಬರಗಾಲ. ಕಲೆ, ಸಾಹಿತ್ಯಕ್ಕೆ ಇದೀಗ ಕಲಿಗಾಲ. ಓದುವ, ಬರೆಯುವ ಹವ್ಯಾಸ ಕ್ಕೆ ಮಾಡಲಾಗಿದೆ ಅಂತಿಮ ಸಂಸ್ಕಾರ. ಸ್ವೀಕರಿಸಿದೆ ತಿಲಾಂಜಲಿ ಅಂತರಾತ್ಮ. ಆದರ್ಶ.....ಅದೃಷ್ಯ...! ಆದರ್ಶವಾದಿಗಳು ಗೊಂದಲದಲ್ಲಿ ಗಸ್ತು ಹೊಡೆಯುತ್ತಿದ್ದಾರೆ ತಮ್ಮದೇ ಗುಹೆಗಳಲ್ಲಿ.
ಬರವಣಿಗೆ ಕ್ಷೇತ್ರ ಕಂಡ ಈಚಿನ...ಭೀಕರ ಬರಗಾಲ. ಕವನ ಒಂದು ರೋಗ....ಮಾರಕಜಾಡ್ಯ. ಕವಿಗಳು...ರೋಗಿಗಳು ವೈದ್ಯರಿಲ್ಲದ ಆಸ್ಪತ್ರೆಯಲ್ಲಿ. ಎಬೋಲಾ ರೋಗಿಗಳ ಸಂಪರ್ಕಕ್ಕೆ ಬಂದವರಂತೆ ಪ್ರತ್ಯೇಕ ಉಳಿಸಿಕೊಂಡಿದ್ದಾರೆ......ವಿಶೇಷ ನಿಯಂತ್ರಿತ ಪ್ರಯೋಗಶಾಲೆಗಳಲ್ಲಿ ಪ್ರಾಯೋಗಿಕ ಮಾದರಿಗೆ. ಉಳಿದಿದ್ದಾರೆ ಶಶ್ರೂಷೆಯಿಂದ ದೂರ, ಪ್ರತ್ಯೇಕ ತೀವ್ರನಿಗಾ ಘಟಕದಲ್ಲಿ, ನಿರ್ಲಕ್ಷತೆಯಲಿ ನಿರ್ಲಿಪ್ತ ವೀಕ್ಷಣೆ, ವಿವರಣೆಯ ಜಂಜಾಟ...ವೀಕ್ಷಕನಪರದಾಟ...ಕಥೆ ಹೇಳುವವರೇ ಇಲ್ಲ, ನೋಡುವವರೆ ಹೆಚ್ಚು..ವಿಸ್ತರಿಸಿ ಹೋಗುತ್ತಲೇ ಇರುವ ಸೂತ್ರ ಹೆಚ್ಚು ಸೂಕ್ತ. ಓದುಗರು ಇಲ್ಲದಿರಬಹುದು, ಬೆರಳುಗಳು ಬರವಣಿಗೆ ಮರೆತಾಗ. ಕಥೆ ಬರೆಯುವುದಾದರೂ ಹೇಗೆ? ಕಥಾನಾಯಕನಾಗುವ ನಾಯಕ ಬದುಕಲಾರ ತನ್ನ ಪಾತ್ರವನ್ನು.....ಹೊಳೆಯುತ್ತಲೇ ಸಾಯುತ್ತಾನೆ. ವೀಕ್ಷಕ ಮೈಮರೆಯುತು ಉಸಿರುತ್ತಾನೆ ತನ್ನ ಕಥೆಯನ್ನೇ. ತನ್ನ ಮೆಚ್ಚಿನನಾಯಕನಂತೆ ಹೊಡೆದಾಡುತ್ತಲೇ ಇದ್ದಾನೆ ನೀತಿವಂತನಾಗಿ.....ಸಕಲ ಸದ್ಗುಣಗಳೊಂದಿಗೆ ತನ್ನ ಐಶೋಆರಾಮಿ ಕಲ್ಪನೆಯಲ್ಲಿ.
ಉಮರನ ನಿಜ ಹಿಂಬಾಲಕರು.....ನೆನ್ನೆಯೇ ಸತ್ತಿದೆ...ನಮ್ಮ ಆತ್ಮ. ಸಾಕ್ಷಿ ಅನಗತ್ಯ. ನಾಳೆಯ ಬರುವಿನ ಅನುಮಾನದಲ್ಲಿ ಬರಿದುಮಾಡಿದ್ದೇವೆ ಅಕ್ಷಯಪಾತ್ರೆ ಅನುಭವಿಸುತಲಿದ್ದೇವೆ ವರ್ತಮಾನವನ್ನು ತತ್ವಜ್ಞಾನಿಗಳಂತೆ ಸ್ಥಿತಪ್ರಜ್ಞರಾಗಿ.....
Comments