ಅಮ್ಮನ ದಿನ...
ನಾನು,
ವಾಡಿಕೆಯಂತೆ ನನ್ನ ಹಣೆ ಇಡುವ ಆ ಪಾದಗಳು
ಸಿಗಲಿಲ್ಲ ಇಂದು, ಹಿಂದಿನ ವರ್ಷಗಳಂತೆ...
ಮಾಡುವುದಾದರೂ ಯಾರಿಗೆ ಸಾಸ್ಟಾಂಗ ನಮನ?
ನನ್ನನ್ನು ಈ ಗ್ರಹಕ್ಕೆ ಡೆಲಿವರಿ ಮಾಡಿದ ನಿನ್ನ ಆ ದಿನ....
ಇಂದು
ನನ್ನ ಅಮ್ಮನ ಋಣ ನೆನಸಿಕೊಳ್ಳುವ ದಿನ
ಹಾಗಂತ ದಯಮಾಡಿ ವಿಶ್ವ ಮದರ್ಸ್ ಡೇ,
ಅಂತ ಅನ್ಕೊಬೇಡಿ
ನಿಜ....ನನಗಿಂದು ಹುಟ್ಟಿದ ದಿನ,
ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನನ್ನ ಅಧಿಕೃತ ಹುಟ್ಟಿನ ದಾಖಲಾತಿ ಇಂದು
ಅಮ್ಮನ ಪಂಚಾಂಗದ ಪ್ರಕಾರ ಹುಟ್ಟಿದದಿನ ಎಂದೋ ಕಳೆದಿರಬೇಕು,
ಸಿದ್ದವಾಗಬೇಕು ಎಲ್ಲಕೂ
ಅದರೂ.....
ಆತಂಕದಲ್ಲಿದ್ದಾಗ "ಹುಚ್ಚ ಹುಡುಗ" ಅಂತ ತಲೆಸವರುವ
ಅಮ್ಮನ ಆ ಭರವಸೆಯ ಸ್ಪರ್ಷದ ನೆನಪು ಕಾಡುತಿದೆ
ಈಗ ಖಂಡಿತಾ ಯಾರಿಗೂ ನಾನು ಹುಡುಗ ಅಲ್ಲ
ಅಮ್ಮ, ನೀ ಹೋದ ಮೇಲೆ
ಈ ಬಾರಿ ಗೊತ್ತಾಯಿತು....
೬೭ ನಿಜಕ್ಕೂ ಹಿರಿಯ ವಯಸು.
Comments