ಪಿತೃದೇವೋಭವ....

ಇದುವರೆಗೂ ಕೇಳಿರದ ಒಂದು ಹೆಸರು 
ನೋಡಿರುವುದು ಇನ್ನು ದೂರ
ಜಲ ಆವಾಸಿ, ಸಿಹಿನೀರಿನ ಸಾಮ್ರಾಜ್ಯದ ಪ್ರಜೆ.
ಕೆರೆ, ಕೊಳಗಳ ಸಾಮಾನ್ಯ ಜಲನಾಗರೀಕ 
ಕಡಲ ತಿನಿಸು ಪಾಕ ಶಾಲೆಗಳಲ್ಲಿ ಜನಪ್ರಿಯ, 
ಅನಾರೋಗ್ಯದ ಬಿರುದು ಹೊತ್ತಿದ್ದರೂ ಆಹಾರಯೋಗ್ಯ
ತೀರ್ವ ವಿವಾದಿತ, ಸೇವನಾ ಯೋಗ್ಯ? 
ಚರ್ಚೆ ನಿಂತಿಲ್ಲ, ಇಂದಿಗೂ ಆಗಿದೆ ಜನಪ್ರಿಯ ಗ್ರಾಸ
ಕಡಲ ವ್ಯಂಜನಕೆ ಮಾರುಹೋಗಿ
ಬೆಳೆಸುತ್ತಾರೆ ಮತ್ಸ್ಯಾಹಾರಪ್ರಿಯರು, ಕೆರೆ,ಕೊಳಗಲ್ಲಿ 
ಕೇವಲ, ಮಾರುತ್ತಾರೆ! ಪ್ರಾಣಿದಯಾಮಯಿಗಳು


ಕುತೂಹಲ ಸಾಕು, 
ನಿಮಗಿನ್ನು ಒಗಟಾಗಿ, ನನ್ನ ಚಿವುಟುವುದು ಬೇಡ.
ಹೌದು .... ಇದೊಂದು ಸಾಮಾನ್ಯ ಮೀನು, 
ಮಾನವನ ರಸಾಂಕುರಗಳಿದು ಪ್ರಿಯವಾದ ಆಹುತಿ
ಅಪರಿಚಿತ ಪದ, ಗೂಗಲಿಸಿದಾಗ ಸಿಕ್ಕಿದ್ದು 
ಆಫ್ರಿಕಾ, ಇಂಡೋನಿಶಿಯಾ ಕೊಳಗಳಲ್ಲಿ ಮಾತ್ರ 
ವಿಸ್ಮಯಗೊಳಿಸುವ ಅಪರೂಪ ಪ್ರಭೇದ
ಇದರ ಜೀವನಗಾಥೆಗಿದೆ ಅಯಸ್ಕಾಂತ ಸೆಳೆತ

ಹುಟ್ಟಲ್ಲೇ ನೀರಪಾಲಾಗುವ ಇದರ ಕಥೆ ವಿಚಿತ್ರ
ಅಸಂಖ್ಯ ಫಲಿತ ತತ್ತಿಗಳು, ಅನಾಥ, 
ಅಮ್ಮನ ಪಲಾಯನ, ಜಲಗರ್ಭದಲ್ಲೇ ಜನನ, 
ಆರೈಕೆ ಆರಂಭ, ಅಪ್ಪನ ಬಾಯಲ್ಲೇ ಬಾಣಂತನ
ಅವಳಿಯೂ ಅಲ್ಲ, ತ್ರಿವಳಿಯೂ ಅಲ್ಲ, 
ನೂರಾರು ಭ್ರೂಣಗಳು, ಮುಚ್ಚಿದ ಬಾಯ ಗರ್ಭದಲ್ಲಿ
ಪಾಕ್ಷಿಕ ಉಪವಾಸವ್ರತ, ಮಠದಸ್ವಾಮಿಗಳಂತೆ
ಮರಿಗಳು ಹೊರಬರುವವರೆಗೂ,ತೆರೆಯದ ದವಡೆಗಳು

ಅಪ್ಪನಬಾಯಿಯ ಹೊಸ ಆವಾಸ 
ಬಾಯಕುಹರದ ಮೈದಾನದಲಿ ಮರಿಗಳ ಆಟ, 
ಹಸಿವ ಮರೆತು, ಹಂಗುತೊರೆದ ಅಪ್ಪ 
ಗಂಟಲ ಅನ್ನದ್ವಾರ ಮುಚ್ಚಿ, 
ವ್ರತ ಮುಂದುವರೆಸುವ ಮಹಾಸಾಧಕ
ಮರಿಗಳ ಆಟ, ಅಪ್ಪನ ಪೀಕಲಾಟ
ನೀರಿಗೆ ಕಳಿಸಿದರೂ ಚೇಷ್ಟೆಯಮೇಲೆ ಕಟ್ಟೆಚ್ಚರ
ಬೇಟೆಗಾರನ ಸುಳಿವು, ಹೆದರಿ ಮರಳುವ ಮರಿಗಳು 
ಜಡಿದ ಬೀಗವ ತೆರೆದು ಮತ್ತೆ ಜೋಪಾನಮಾಡುವ ಜನಕ
ಚಿಗರುವ ಜೀವಗಳ ನಿಲ್ಲದ ಆಟ, ಕಂಟಕದ ಕಾಟ
ಒಮ್ಮೊಮ್ಮೆ, ಅನಿವಾರ್ಯ ನಿರ್ಧಾರ 
ಪೀಳಿಗೆಯನೇ ನುಂಗಿ ಕಲಿಸುತ್ತಾನೆ ಕೊನೆಯ ಪಾಠ
ಕುರುಡಲ್ಲ ಸಂತತಿ ಪ್ರೇಮ

ಮನೆಬಿಡಲು ಸಿದ್ಧ, ಬೆಳೆದು ಬಲಿತಾಗ ಮರಿಗಳು 
ಪಾಪ, ಅಪ್ಪನ ಮಮಕಾರ,ವ್ಯಾಮೋಹ, ನೋವು 
ಕೇಳುವವರು ಯಾರು? 
ಪ್ರವಹಿಸುವ ನೀರಲ್ಲಿ ಕಣ್ಣೀರು!

ಬಹುಕಾಲ ಮುಚ್ಚಿದ ಬಾಯಿ 
ಉಗುಳುವಾಗ ಹೆರಿಗೆ, ನೂರಾರು ಮರಿಗಳು ಹೊರಗೆ 
ಕರುಳ ಬಳ್ಳಿ ಕಳಚಲು ಗರ್ಭವೇ ಇಲ್ಲ,ಪಾಪ!
ಏಕ ಪೋಷಕ ಕರ್ತವ್ಯಪಾಲಕ ನೀನು.

ಓ....ಟಿಲಪಿಯಾ, ಕೇವಲ ಮೀನಲ್ಲ, ನೀನು
ಮಾದರಿ, ಅನುಕರಣೀಯ ನೀ ಇಂದಿಗೂ,
ಎಂದೆಂದಿಗೂ


ನೀನೇ ಧನ್ಯೋಸ್ಮಿ....ಪಿತೃದೇವೋಭವ....
ಆದರೂ...... 
ತಾಯಿಯಾಗಲೇ ಇಲ್ಲ ನೀನೆಂದಿಗೂ.....

Comments

Popular posts from this blog

ಕಾಗೆ....

Reunited...at last..