ಆಗಂತುಕ.
ನಿನ್ನ ಪದ್ಯ ಅರ್ಥವಾಗದ ನವ್ಯ ಕವಿತೆ,
ನಿನ್ನ ಗದ್ಯ ನನ್ನ ಹಣೆಬರಹದಂತೆ
ಬಿಡಿಸಲಾರದ ಒಗಟು, ಆ ಕಾರಣಕ್ಕೆ,
ನನ್ನ ಬಗ್ಗೆ ನಿನಗಿರುವ ತಿರಸ್ಕಾರ, ತಾತ್ಸಾರ,
ನಿನ್ನ ಗೀತೆಯ ಗದ್ಯ ಘನತೆಗೆ ಹೊಂದುವುದಿಲ್ಲ,
ಅತೀವ ಅನುಕಂಪ ನನಗೆ ಅದಕೆ....
ನಿನ್ನ ಬೈಗಳು ನನ್ನ ಚುಚ್ಚುವುದಿಲ್ಲ
ದಿಕ್ಕುತೋಚದ ನಿರ್ಲಷ್ಯ ಧೋರಣೆ,
ಮಾರ್ಮಿಕ ಚಾಟಿ ಏಟು ಹೃದಯನಾಟಿ,
ಹುಚ್ಚನಂತೆ ನಗುತ್ತೇನೆ ಏಕಾಂತದಲ್ಲಿ.
ಕೋಲಾಹಲದಲಿ, ನಗುವಿಗೂ ಹೇರಿದ್ದಾರೆ ನಿಷೇಧ
ಅಸಹಜ ನಡುವಳಿಕೆಗೆ ಸಿಗಬಹುದು ಶಿಕ್ಷೆ
ಗಡಿಪಾರೇ ಸಾಕಾಗಿದೆ ನನಗೆ
ಆದರೂ ಅದೇಕೋ ಓದುತ್ತೇನೆ ಹಲವು ಬಾರಿ
ನಿನ್ನ ಸಾಲುಗಳಲ್ಲಿ ಹುಡುಕುತ್ತೇನೆ
ತೀವ್ರ ಹೃದಯ ಬಡಿತದ ಕೌತುಕದಲ್ಲಿ
ನನಗಾಗಿ ನೀ ಬರೆದಿರಬಹುದೆಂಬ ಭ್ರಮೆಯಲಿ
ಅರ್ಥ, ಅಂತರಾರ್ಥ, ತಡಕಾಡುತ್ತೇನೆ
ಸುಮಧುರ ಸಂಗೀತದ ಧ್ವನಿಗಾಗಿ, ಆಲೈಸುತ್ತೇನೆ
ಸಾಂತ್ವನದ ಪದಗಳಿಗೆ, ಓಲೈಸುವ ನಿರೀಕ್ಷೆಯಲಿ,
ನಿನ್ನ ಭಾಷೆ ಕಾಲ, ದೇಶವನ್ನು ಮೀರಿದ್ದು
ಎಲ್ಲಾ ಎಲ್ಲೆಯ ಎಲ್ಲೆ ಮೀರಿದ, ಸರ್ವವ್ಯಾಪಿ,
ಸರ್ವಕಾಲಿಕ ನಿರುತ್ತರದ ನಿನ್ನಿರುವು ನನಗೆ ಗೊತ್ತು
ನಾನಿನ್ನೂ ಶಾಶ್ವತ ಅಸಮರ್ಥ ಅಗಂತುಕ.
Comments