ಕಳೆ.
ವಿನಾಶಕಾರಿ ಕಳೆ ಹರಡುತ್ತಿದೆ ಅತಿವೇಗದಲ್ಲಿ
ವಿವಿದತೆ ಮಾಯ, ಅಯೋಮಯ ಜೀವಿಸಂಕುಲ
ಕೊಂಬೆ,ರೆಂಬೆಗಳಲ್ಲೂ ಹೆಮ್ಮಾರಿ ನಿರ್ಲಿಂಗ ಜಾತಿ
ಪ್ರತಿಮೆ ಅರಾದ್ಯ ಬೊಂಬೆ ಅಸಹಾಕಾರಿ
ಪಳೆಯುಳಿಕೆಯ ಮೂರ್ತಿ ಅಲಂಕರಿಸಿದ ಗರ್ಭಗುಡಿ
ಅಮೂರ್ತವೇ ಆಕಾರವಾಗಿದೆ ಮಸೀದಿ ಮಿನಾರ್ ಗಳಲ್ಲಿ
ಪ್ರಾರ್ಥಿಸುತ್ತಿದೆ ಶಿಲುಬೆಯಾಗಿ ಅನಾಥ ಚರ್ಚಿನಲ್ಲಿ,
ಚರ್ಚೆಯಾಗಿವೆ ಅವರವರ ಅಹಂ, ಅರಿವಿನಂತೆ...
ಗಿರವಿ ಇಡಲಾಗಿದೆ ಎಲ್ಲರ ಆತ್ಮ ಅವರವರ ಬೆಲೆಗೆ ತಕ್ಕಂತೆ
ಸರ್ವವ್ಯಾಪಿ ಆದರೂ ಗುಪ್ತ ವಿಸ್ತಾರ ಶಸ್ತ್ರಾಗಾರ
ಗುಮ್ಮಟಗಳಲ್ಲಿ ಅಪಾರ, ಪ್ರಳಯ ಭಂಡಾರ
ಜೀವ ಭಿಕ್ಷೆ ಬೇಡುವ ಭಕ್ತ ಸಾಗರ, ಹೀರಿದೆ ರಕ್ತ ಮಂದಾರ
ಸಕಲ ವಿಲಾಸಿ,ಅಮಾನವೀಯ ದೈತ್ಯ ಭ್ರಮರ
ಅಸಮರ್ಥರ ಮೇಲೆ ಸಾರಲಾಗಿದೆ ಸಮರ
ಕ್ರಿಯಾಶೀಲ ಮುಳುಗಿದ್ದಾನೆ ಪರಾಗ ಸ್ಪರ್ಷದಲ್ಲಿ
ಕೇಳುವವರು ಯಾರು? ಈ ಮಾನವ ವಿಕೃತ ತೋಪಿನಲ್ಲಿ
ಪುಷ್ಪಾರ್ಚಾನಾಸಕ್ತ, ಸೌಂದರ್ಯೋಪಾಸಕ ಭಕ್ತ
ಎಲ್ಲದರ ಆಹುತಿ ಆಗಲೇ ಬೇಕು, ಈ ಅತಿಬುಧ್ದಿಜೀವಿಗೆ,
ಹರಿಕೆಯಿಂದಲೇ ಗರ್ಭಕಟ್ಟಿದ ತತ್ತಿ, ಭ್ರೂಣವಾಗಿದೆ
ಹೊಸದೊಂದು,ಅನಾಮಿಕ ಸಂಕರ ಚಿಗುರುತ್ತಲೇ ಇದೆ
ವಿಸ್ಮಯ, ವಿನಾಶದ ವೇಗದಲ್ಲಿ,ನಿರ್ಭಯ ಒಂಟಿ ಸಲಗ
ಸ್ವಜಾತಿ ಭಕ್ಷಕ,ಭಕ್ಷಕ ಭಯಾನಕ, ವಿಕಾಸವೇ ಕೇಳುವ ಪ್ರಶ್ನೆ
ಆಕಸ್ಮಿಕದಲಿ ಅವತರಿಸಿದ ಈ ಪ್ರಾಣಿ! ಈ ಹೈಬ್ರಿಡ್, ಕುಲಾಂತರಿ
ವಿಶ್ವಕರ್ಮನೋ? ಸಂರಕ್ಷಕನೋ?
ಪ್ರಳಯರುದ್ರನಿಗೇ ಶಾಪವಾದ
ಭಸ್ಮಾಸುರನ ಅಬೇಜ ಪಿಂಡವೋ?
Comments