(ಚೆನ್ ಗ್ಯುಲಿಲಾಂಗ್, ಚೀನಿ ಕವಿಯ "fill in the blanks" ಎಂಬ ಕವನ ಓದಿದ ನಂತರ ಅನ್ನಿಸಿದ್ದು)
ಬಿಟ್ಟಿರುವ ಜಾಗ ಭರ್ತಿ ಮಾಡಿ
ಸ್ವರ್ಗವೆ....ನೀನೆಷ್ಟು ಖಾಲಿ
ಆಕಾಶವೇ ನಿನ್ನ ಅನೂಹ್ಯ ವಿಸ್ತಾರದ ಶೂನ್ಯ ಸಾವನ್ನು ನೆನಪಿಸುತ್ತದೆ
ಸಾವನ್ನು ನೆನಪಿಸುವ ನಿನ್ನ ಈ ವಿಸ್ತಾರದ ಖಾಲಿತನ
ಆಕಾಶವೇ, ಅಳತೆಗೆ ಮೀರಿದ ಅದೆಷ್ಟು ವಿಶಾಲತೆ ನಿನ್ನದು
ಎಷ್ಟು ತುಂಬಿದರೂ ತುಂಬುತ್ತಲೇ ಇರಬೇಕು ನಿನ್ನ ಖಾಲಿತನ
ನಿನ್ನ ಖಾಲಿಯಾಗುತ್ತಲೇ ಇರುವ ಹಾಳೆಗಳಲ್ಲಿ
ವಂಶಪಾರಂಪರೆಯ ಪೂರ್ವಿಕರ ದಾಖಲೆಯಲ್ಲಿ ನೊಂದಾಯಿಸಲು
ವರ್ತಮಾನದ ಕುಡಿಯಲ್ಲಿ ಯಾರದೊಬ್ಬರು ಅಸುನೀಗಲೇ ಬೇಕು
ಈ ಖಾಲಿ ವಿಸ್ತಾರವನ್ನು ತುಂಬಲು ಅದ್ಯಾವುದೋ ಒಂದು ದಿನ ಮಧ್ಯಾನ್ಹ
ನಮ್ಮಪ್ಪ
ಎಲ್ಲದರ ಅಂತ್ಯವನ್ನೇ ನೆನಪಿಸುವ ಆಕಾಶವೇ ಅದೆಷ್ಟು ವಿಸ್ತಾರ ನಿನ್ನ ಈ ಖಾಲಿತನ?
ಭೂತ, ಭವಿಷ್ಯಗಳ ನಿರಂತರ ಸಾವುಗಳ ಮೊತ್ತದಿಂದಲೇ ತುಂಬುತ್ತಾಹೋದರು,
ವಿಶಾಲ ಹಿಗ್ಗುತ್ತಲೇ ಇರುವ ನಿನ್ನ ಶೂನ್ಯತೆ ಯಲ್ಲಿ ವರ್ತಮಾನವೇ ಕರಗಿ ಮಾಯವಾಗುವ ಬೆರಗು
ಭಾರರಹಿತ ಹಗುರತೆಯ ಇಲ್ಲದಿರುವಿಕೆಗೆ ಭಾವೋದ್ವೇಗದ ಬಣ್ಣರಹಿತ ಮೆರಗು.
Comments