ಯಾವಕಾಲಕ್ಕೂ ಯಾರು, ಯಾವುದೂ, ಅನಿವಾರ್ಯವಲ್ಲ ಇಲ್ಲಿ.
ಪ್ರಪಂಚದ ಹಾಲಿ ಅಪಾಯಕಾರಿ, ಆತಂಕಕಾರಿ, ಕಳವಳದ ಪ್ರಕ್ಷುಬ್ಧ ಪರಿಸ್ಥಿತಿ ಸಹಾ ನೈಸರ್ಗಿಕ ಪ್ರಕ್ರಿಯೆ ಎಂಬುದು ನನ್ನ ಅನಿಸಿಕೆ. ಈಗ ಕಾಣುತ್ತಿರುವ ಅಸಹನೆ, ದ್ವೇಷ, ದೇಶ, ಭಾಷೆ, ಯುದ್ಧ, ಪ್ರಗತಿ, ಸೋಲು, ಗೆಲುವು, ಪ್ರಗತಿ, ಆಕ್ರಮಣ, ಪರಾಕ್ರಮ, ಸಾಮ್ರಾಜ್ಯ ಸ್ಥಾಪನೆ ಎಲ್ಲವೂ ಮುಂಬರುವ ಭಯಂಕರ ಭವಿಷ್ಯದ ಸೂಚಕಗಳು. ಎಲ್ಲವೂ ಮೌನವಾಗಿ ಪರಿಸರದ ಮುಂದುವರಿಕೆ ಯಿಂದಲೇ ನಿಯಂತ್ರಿಸಲ್ಪುಡಿತ್ತಿದೆ. ಈ ಕ್ರಿಯೆಗಳೆಲ್ಲಾ ಗುಪ್ತವಾಗಿ ಪರಿಸರ ಸಂತುಲನವನ್ನು ಕಾಪಾಡುವ ಒಂದು ತಂತ್ರ. ಈ ಪರಿಸರದ ನಿಷ್ಪಕ್ಷಪಾತ ಯೋಜನೆಯಲ್ಲಿ ನಾವು ಇರುವೆವೋ ಇಲ್ಲವೋ ನಿಸರ್ಗವೇ ನಿರ್ಧರಿಸಲಿದೆ.
ಕೇವಲ ನಾವು ಮಾನವ ಕೇಂದ್ರಿತ ಅಸ್ತಿತ್ವವನ್ನು ಒಪ್ಪಿಕೊಂಡು ಮಿಕ್ಕಎಲ್ಲಾ ಪ್ರಾಕೃತಿಕ ಅಂಶಗಳನ್ನು ನಾವು ನಿಯಂತ್ರಿಸುತ್ತೇವೆ ಅಥವಾ ಅವುಗಳ ಇರುವಿಕೆ ದೇವರಿಂದ ನಮಗಾಗಿ ದೊರೆತ ವಿಶೇಷ ಕೊಡುಗೆಗಳು ಮಾತ್ರ ಎಂಬ ಭಾವನೆಯಲ್ಲೆ ಎಲ್ಲವನ್ನು ಹಿಗ್ಗಾ ಮುಗ್ಗಾ ಕೊಳ್ಳೆಹೊಡೆಯುತ್ತಿದ್ದೇವೆ. ನಮ್ಮ ಇತಿಹಾಸವನ್ನು ಕೆದಕಿದಾಗ ಇಂದಿನ ನಾವು, ಹೀಗಾಗಲೂ ಕೇವಲ ಕೆಲವೇ ಸಾವಿರವರ್ಷಗಳು ಮಾತ್ರ. ಈ ಅಲ್ಪಸಮಯದಲ್ಲಿ ಪರಿಸರದ ಎಲ್ಲಾ ಅಂಶಗಳನ್ನು ಗರಿಷ್ಟ ಮಟ್ಟದಲ್ಲಿ ಬಳಸಿ ಸಂಪನ್ಮೂಲ ಆಗರವನ್ನು ಬರಿದಾಗಿಸಿ ಮಜಾ ಉಡಾಯಿಸುತ್ತಿದ್ದೇವೆ. ಮುಂಬರುವ ಪೀಳಿಗೆ ಉಳಿಸಿಹೋಗುವುದು ಕೇವಲ ಬರಿದಾದ ಚಿಪ್ಪು.
ನಮ್ಮ, ಈ ಗ್ರಹದಲ್ಲಿ ಜೀವವಿಕಾಸದ ಯಾತ್ರೆಯ ಇತಿಹಾಸ ಸುಮಾರು ೬ ಬಿಲಿಯನ್ ವರ್ಷಗಳಷ್ಟು ಪುರಾತನವಾದುದು. ಈ "ಕಾಲ" ಅಥವಾ "ಸಮಯ” ಎಂಬ ಪದದ ಗ್ರಹಿಕೆ ನಮ್ಮ ಕಲ್ಪನೆಗೆ ನಿಲುಕುವುದಿಲ್ಲ. ನಾವು ಹೆಚ್ಚಂದರೆ ನೂರು ವರ್ಷಬದುಕಬಲ್ಲ ಪ್ರಾಣಿಗಳು. ನಮ್ಮ ಜೀವಿತದಲ್ಲಿ ನಮ್ಮಹಿಂದಿನ ಇತಿಹಾಸ, ವರ್ತಮಾನ ಬದುಕು ಎರಡನ್ನು ನಮ್ಮ ಮುಷ್ಟಿಯಲ್ಲಿ ಹಿಡಿದು ಇದು ಹೀಗೆ, ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ವೈಜ್ಞಾನಿಕ ಆಧಾರ ಮತ್ತು ಪುರಾವೆಗಳಿಗನುಗುಣವಾಗಿ, ನಮ್ಮಂತೇ ಇರುವ ದೈಹಿಕವಾಗಿ ಮತ್ತು ಭೌತಿಕವಾಗಿ ಒಂದೇ ಹೋಲಿಕೆವುಳ್ಳ ಆಧುನಿಕ ಮಾನವನ ವಿಕಾಸ ಸುಮಾರು ೨೫ ಸಾವಿರ ವರ್ಷಗಳಿಗಿಂತ ಹೆಚ್ಚಾಗಿಲ್ಲ. ಅದಕ್ಕೂ ಮುಂಚೆ ನಿಯಾಂಡ್ರ್ತಾಲ್ ಮತ್ತು ಕ್ರೋಮಾಗ್ನಾನಾನ್ ಮಾನವರ ಅವಶೇಷಗಳು ಮತ್ತು ಪಳೆಯುಳಿಕೆಗಳು ಯುರೋಪ್ ಖಂಡದಲ್ಲಿ ಕಂಡುಬಂದಿವೆ. ಮಾನವನ ಉಗಮ ಆಫ್ರಿಕಾ ಎಂದು ನಂಬಲಾಗಿದೆ ವೈಜ್ಞಾನಿಕವಾಗಿ.
ಇಂದಿನ ಆಧುನಿಕ ಮಾನವ ನಮಗೆ ಮತ್ತು ಇತರ ಎಲ್ಲಾ ಜೀವ ಪ್ರಭೇದಗಳಿಗೆ ಜೈವಿಕವಾಗಿ ಯಾವ ವ್ಯತ್ಯಾಸವೂ ಇಲ್ಲ. ನಾವು ಅಂದುಕೊಂಡಂತೆ ನಮ್ಮ ಯೋಚನಾಸಾಮರ್ಥ್ಯ, ಕಲ್ಪನೆ, ನೆನಪು, ಭುದ್ದಿಶಕ್ತಿ ಇವೆಲ್ಲವೂ ಮೂಲಭೂತವಾಗಿ ಜೈವಿಕ ವಿಕಾಸದ ಹಾದಿಯಲ್ಲಿ ಸ್ವಾಭಾವಿಕವಾಗಿ ಉಂಟಾಗಿರುವ ಮಾರ್ಪಾಡಿನ ಫಲಿತಾಂಶ. ಹಳ್ಳ ತಿಟ್ಟುಗಳ ವಕ್ರ ಮೇಲ್ಮೈ ಇಂದಾದ, ಒತ್ತಾಗಿ ಗರಿಷ್ಟ ಸಂಖ್ಯೆಯಲ್ಲಿ ಜೋಡಿಸಲ್ಪಟ್ಟ ನರಕೋಶಗಳಿಂದಾದ ಮಿದುಳು, ಅದರ ವಿಸ್ತಾರವಾದ ಮಡಿಕೆಯಾಗಿರುವ ಮೇಲ್ಮೈ ವಿಸ್ತೀರ್ಣ ಇತ್ಯಾದಿ ನಮ್ಮ ಇಂದಿನ ಬುದ್ಧಿಗೆ ಕಾರಣ. ಇದರೊಟ್ಟಿಗೆ ಮಾನವನಲ್ಲಿ ವಿಕಾಸಗೊಂಡ ದ್ವಿಪಾದಿ ಭಂಗಿ, ಲೇಖನವನ್ನಾಗಲಿ, ಸೂಜಿಯನ್ನಾಗಲಿ ಸರಾಗವಾಗಿ ಹಿಡಿಯಬಲ್ಲ ನಿಖರ ಹಿಡಿತ ಹಾಗೂ ಕತ್ತಿಯನ್ನಾಗಲಿ, ಎಕೆ.೪೭ ಆಟೋಮ್ಯಾಟಿಕ್ ಬಂದೂಕಾಗಲಿ ಗಟ್ಟಿಯಾಗಿ ಹಿಡಿಯಬಲ್ಲ ಶಕ್ತಿಯುತ ಹಿಡಿತ ಹೊಂದಿರುವ ಚಲಿಸಬಲ್ಲ ಕೈ ಮತ್ತು ಇತರ ಅವಯವಗಳು ಮತ್ತು ಅತಿಮುಖ್ಯವಾಗಿ ಇಕ್ಕಣ್ಣನೋಟ ಇತ್ಯಾದಿ. ಈ ಬದಲಾವಣೆಗಳೆಲ್ಲವೂ ಪ್ರಕೃತಿ ಆಯ್ಕೆಯಲ್ಲಿ ಯಶಸ್ವಿಯಾದುದರ ಫಲವೇ ಇಂದಿನ ಮಾನವನ ದೈತ್ಯ ಶಕ್ತಿಯ ಪರಿಸ್ಥಿತಿಗೆ ಕಾರಣ. ಈ ಎಲ್ಲಾ ಬದಲಾವಣೆಗಳು ಮಾನವನ ಇರುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿ ಈ ಪ್ರಭೇದಕ್ಕೆ ನಿಯಂತ್ರಣ ತಂತ್ರವೇ ಇಲ್ಲವಾಗಿದೆ. ಮನುಷ್ಯನ ಸಾಮರ್ಥ್ಯವನ್ನು ಪ್ರಶ್ನಿಸುವ ಅಥವಾ ನಿಯಂತ್ರಿಸುವ ಯಾವುದೇ ಪ್ರಭೇದ ಜೀವಿ ಇಂದು ನಮ್ಮ ಪರಿಸರದಲ್ಲಿಲ್ಲ. ಎಲ್ಲವನ್ನು ಅನವಶ್ಯಕವಾಗಿ ಬಳಸಿ ನಾಶಮಾಡಿದ್ದಾನೆ ಇಲ್ಲವೇ ತನ್ನದೇ ಸ್ವಾರ್ಥಕ್ಕೆ ಪಳಗಿಸಿದ್ದಾನೆ. ಮತ್ತು ಎಲ್ಲವನ್ನೂ ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ತನಗೆ ಅನುಕೂಲಕರವಾದ ಪರಿಸರವನ್ನು ಗ್ರಹದ ಯಾವುದೇ ಭಾಗದಲ್ಲಿ ನಿರ್ಮಿಸುವ ಶಕ್ತಿಗಳಿಸಿದ್ದಾನೆ.
ಮಾನವನ ಸಂತತಿಯನ್ನು ಸ್ವಾಭಾವಿಕವಾಗಿ ನಿಯಂತ್ರಿಸುತ್ತಿದ್ದ ವನ್ಯ ಪ್ರಾಣಿ ಪ್ರಭೇದಗಳು, ಹಾವುಗಳು ಇತ್ಯಾದಿಗಳಿಗೆ ಆಶ್ರಯಕೊಡುವ ದಟ್ಟಕಾಡುಗಳು, ಅಕಾಲ ವಲಸೆಯನ್ನು ಸೀಮಿತಗೊಳಿಸುತ್ತಿದ್ದ ನದಿಗಳು, ಸಾಗರಗಳು ಎಲ್ಲವನ್ನು ಆಕ್ರಮಿಸಿದ್ದಾನೆ. ಪಾತಾಳಹೊಕ್ಕು ಅದರ ಗರ್ಭಸೀಳಿ ಅವಶೇಷವನ್ನು ಹೆಕ್ಕಿ ಹೀರಿದ್ದಾನೆ. ನರಭಕ್ಷಕ ವನ್ಯ ಮೃಗಳಿಂದ ಹಿಡಿದು ಸಾಂಕ್ರಾಮಿಕ ರೋಗಗಳನ್ನುಂಟು ಮಾಡಿ ಜನಸಂಖ್ಯೆಯನ್ನು ನಿಯಂತ್ರಿಸುತ್ತಿದ್ದ ಸೂಕ್ಷ್ಮಾಣುಗಳಾದ ಬ್ಯಾಕ್ಟೀರೀಯ ಮತ್ತು ವೈರಸ್ ಗಳ ಪ್ರಭಾವನ್ನು ತಾನೇ ನಿಯಂತ್ರಿಸಿ ಸಾವನ್ನೇ ಗೆದ್ದಿದ್ದಾನೆ ಎನ್ನುವಷ್ಟು ಪ್ರಾಭಲ್ಯ ಮೆರೆದಿದ್ದಾನೆ. ಸುಮಾರು ೧೦೦೦೦ ವರ್ಷಗಳ ಹಿಂದೆ ಇಡೀ ಜಗತ್ತಿನ ಒಟ್ಟು ಜನಸಂಖ್ಯೆ ಕೇವಲ ಒಂದು ಕೋಟಿ ಎಂದು ನಂಬಲಾಗಿದೆ. ಅಂದರೆ ೪೦೦ ಮಿಲಿಯನ್ ವರ್ಷಗಳ ಧೀರ್ಘ ವಿಕಾಸದ ಇತಿಹಾಸದ ಇದೇ ಪರಿಸರದಲ್ಲಿ ಕೇವಲ ೧೦೦೦೦ ವರ್ಷಗಳ ಅವಧಿಯಲ್ಲಿ ೬೦೦ ಕೋಟಿಗಿಂತ ಹೆಚ್ಚು ಜನರು ಈ ಗ್ರಹದಲ್ಲಿ ತುಂಬಿತುಳುಕುತ್ತಿದ್ದಾರೆ. ಯೋಚಿಸಿ, ಇದೇ ಭೂಮಿಯಲ್ಲಿ, ಅಷ್ಟೇ ಜಾಗದಲ್ಲಿದ್ದ ಇತರ ಜೀವಿಗಳನ್ನು ನಾಶಪಡಿಸಿ ನಾವು ಜೀವಿಸುತ್ತಿದ್ದೇವೆ ಇತರಪ್ರಭೇಧಗಳ ಆವಾಸದಲ್ಲಿ. ಈಗ ಇನ್ನು ಬಾಕಿ ಇರುವುದೆಂದರೆ ಸಾವು ಬಾರದಂತೆ ಚಿರಂಜೀವಿ ಯಾಗಿಸುವುದು ಮಾತ್ರ. ಆದರೆ ಹುಟ್ಟಿಗೆ ಅತಿಮುಖ್ಯ ಸಾವು, ಸಂಸ್ಲೇಷಣೆಗೆ ವಿಘಟನೆ ಅಗತ್ಯವಿದ್ದಂತೆ.
ಈ ಬದಲಾವಣೆಗಳು, ಅಥವಾ ಮಾರ್ಪಾಡುಗಳು ಅಥವಾ ಹೊಂದಾಣಿಕೆಗಳು ಸತತವಾಗಿ ನಡೆಯುವ ಪ್ರಾಕೃತಿಕ ಪ್ರಕ್ರಿಯೆಗಳು. ಹೀಗಾಗಿ ಇಂದು ನೋಡುತ್ತಿರುವ ಮಾನವನ ದೈತ್ಯ ಶಕ್ತಿಯ ಪ್ರದರ್ಶನ ಸಹಾ ಪರಿಸರದ ನಿಲ್ಲದ ಒಂದು ಕ್ರಿಯಾಶೀಲ ಹಂತ. ಈ ಅನುಕೂಲಕರ ದೈಹಿಕ ಹಾಗೂ ಭೌದ್ಧಿಕ ಮಾರ್ಪಾಡುಗಳು ವಿಧ್ವಂಸಕಾರಿಯಾಗಿ ಪರಿಸರ ಮತ್ತು ಅದನ್ನು ಹೊತ್ತ ಈ ನಾಗರೀಕ ಜಗತ್ತು ಯಾರಿಗೂ ಸ್ಪಷ್ಟವಾಗಿ ಅರ್ಥವಾಗದ ಪ್ರಕ್ಷುಭ್ದ ಮತ್ತು ಗೊಂದಲಮಯ ಸ್ಥಿತಿತಲುಪಿದೆ.
ಇಂದಿನ ಈ ಗೊಂದಲಮಯ, ಕೋಲಾಹಲದ ಅಸಮತೋಲನ ಸಾಮಾಜಿಕ, ಜೈವಿಕ ಹಾಗೂ ಇತರ ಎಲ್ಲಾ ಪ್ರಗತಿಶೀಲ ಬೆಳವಣಿಗೆಗಳು ನಮಗೆ ಅರಿವಿಲ್ಲದೆ ನಡೆಯುತ್ತಿರುವ ಪರಿಸರದ ವಿಕಾಸೀಯ ಸೂತ್ರದ ಒಂದು ವಿಧಾನ. ಪರಿಸರದ ಯಾವುದೇ ಹಂತ ಪ್ರಕ್ಷುಭ್ದ ಹಂತ ತಲುಪಿದಾಗ ಪರಿಸರದ ಆವಾಸಗಳಲ್ಲಿ ಅನಿರೀಕ್ಷಿತ, ಅನೂಹ್ಯ ಏರುಪೇರುಗಳಾಗುವುದು ಸ್ವಾಭಾವಿಕ. ಯಾವರೀತಿಯಲ್ಲಿ, ಯಾವಾಗ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇಂದಿನ ಅಸುಂತಲನ ಅಸ್ವಾಭಾವಿಕ ಸ್ಥಿತಿಯನ್ನು ಸುಧಾರಿಸುವ ವಿಧಾನಗಳು ಪ್ರಕೃತಿಯೇ ಆಯ್ಕೆ ಮಾಡುತ್ತದೆ. ಸಂಪನ್ಮೂಲಗಳ ತ್ವರಿತ ಬಳಕೆಯ ಪರಿಣಾಮ ಪರಿಸರ ಮಾಲಿನ್ಯ ವಿಶಕಾರಿ ಮಟ್ಟವನ್ನು ತಲುಪಿ ಕಂಡು ಕೇಳರಿಯದ ಮಹಾರೋಗಗಳಿಗೆ ತುತ್ತಾಗಬಹುದು. ಮಹಾಯುದ್ಧಗಳಾಗಬಹುದು. ಸಾಗರದಡಿಯ ಭೂಕಂಪದ ಪರಿಣಾಮ ವಿನಾಶಕಾರಿ ಸುನಾಮಿ ಅಲೆಗಳೆದ್ದು ದೇಶಗಳು ಮುಳುಗಡೆ ಯಾಗಬಹುದು, ಹಿಮಯುಗ ಉಂಟಾಗಬಹುದು, ಉಲ್ಕೆಗಳು ಬಂದು ಬಡಿದು ಪ್ರಳಯಸ್ಥಿತಿಯೂ ಉಂಟಾಗಬಹುದು.ಯಾವುದೋ ಒಂದು ನೈಸರ್ಗಿಕ ವಿಧಾನದಲ್ಲೇ ಅಸಮತೋಲನವನ್ನು ತೊಡೆದುಹಾಕಿ ಮತ್ತೊಂದು ಹೊಸ ಜೀವವಿಕಾಸ ಆರಂಭವಾಗಬಹುದು. ವಿಕಾಸದ ಮಹಾ ಚಕ್ರೀಯ ಚಲನೆ ನಿಲ್ಲುವುದಿಲ್ಲ ಎಂದೆಂದಿಗೂ. ಯಾರು ಅಥವಾ ಯಾವುದು ಅನಿವಾರ್ಯವಲ್ಲ ಈ ಪ್ರಕೃತಿಗೆ. ನೀವಿರಲಿ ಇಲ್ಲದಿರಲಿ. ಚಲಿಸುತ್ತದೆ ತನ್ನದೇ ಹೊಸ ಸಂಯೋಜನೆಯೊಂದಿಗೆ.
ಈಗಲೂ ಮನಸ್ಸುಮಾಡಿದರೆ ಇರುವ ಈಗಿರುವ ಪ್ರಸ್ತುತ ಕೃಶವಾದ ಪ್ರಕೃತಿಯನ್ನು ಉಳಿಸಿಕೊಳ್ಳಬಹುದು. ಆದರೆ ಅದಕ್ಕಾಗಿ ನಾವು ನಮ್ಮೆಲ್ಲಾ ನಾಗರೀಕತೆಯನ್ನು ತೊರೆದು ನಿಸರ್ಗ ಜೀವಿಗಾಳಬೇಕು. ಸಾಧ್ಯವೇ?. ಅನವಶ್ಯಕ ಮೋಜಿನ ವಿಲಾಸಿ ಜೀವನಶೈಲಿಯನ್ನು ಬದಲಿಸಿ ಕೇವಲ ಮೂಲಭೂತ ಅಗತ್ಯಗಳಿಗೆ ನಮ್ಮ ಚಟುವಟಿಕೆಗಳನ್ನು ಸೀಮಿತಗೊಳಿಸಿದರೆ ನಮ್ಮ ಮಾನವನ ನಾಗರೀಕತೆಯನ್ನು ಕೆಲವು ಶತಮಾನಗಳಷ್ಟು ಮೂಂದೂಡಬಹುದು.
ಆದರೆ ಊಹಿಸಿಕೊಳ್ಳಿ. ವಿದ್ಯುತ್ ಇಲ್ಲದ ಜೀವನವನ್ನು!!! ಇದು ಸಾಧ್ಯವೇ? ಅಸಾಧ್ಯ....! ಸಿದ್ಧರಾಗಿರಿ ಮುಂದಿನ ಘಟನೆಗಳಿಗೆ. ನಿಸರ್ಗನಿಯಮವೇ ನಿಮ್ಮ ಕೈಗೆ ಶಕ್ತಿಕೊಟ್ಟಿದೆ. ಆ ಶಕ್ತಿಯನ್ನು ಬಳಸಿಕೊಳ್ಳುವ ಯೋಗ್ಯತೆ ನಿಮಗಿಲ್ಲ ಆ ಶಕ್ತಿಯಿಂದಲೇ ನಿಮ್ಮನ್ನೇ ಬಲಿತೆಗೆದುಕೊಂಡು ಹೊಸ ಸಮತೋಲನ ಪರಿಸರ ಸೃಷ್ಟಿಸುತ್ತದೆ. ಅದರಲ್ಲಿ ನಾನಾಗಲಿ, ನೀವಾಗಲಿ ಇರುವುದಿಲ್ಲ..
Comments