ಬಸವನ ಹುಳು.
ನಾಚಿ, ಮುದುಡುವ,ಮೂಳೆರಹಿತ ಮೃದು ದೇಹ,
ಮಣಭಾರದ ತೂಕ ಕಿರೀಟ ಬೆನ್ನಲ್ಲಿ!
ಸುರಳಿ ಚಿಪ್ಪಲ್ಲಿ ತಲೆಮರೆಸಿಕೊಂಡು
ಮೀಸೆ ಸ್ಪರ್ಶದ ದೃಷ್ಟಿಯಲ್ಲಿ
ಗುರುತರ ಬವಣೆಯ ಗಡಸು ಬಣವೆಯ ಹೊತ್ತು
ಸಾಗಿದೆ
ಸಾವಾಕಾಶದಲ್ಲಿ, ಅನೂಹ್ಯ ಕಾಲದಿಂದ
ಕೀಟಗಳ ಹಿಂದೆ ಹಾಕಿ,
ಕಾಲದಲ್ಲಿ ಇವನೊಬ್ಬನೇ ಬಾಕಿ.
ಒಂಟಿ ನೆಲವಾಸಿ, ನೆರಳ ಪ್ರಿಯ ದ್ವಿಲಿಂಗಿ
ಮಣ್ಣುತಿಂದರೂ ಮಣ್ಣುಹುಳ ದಾಯಾದಿ ಅಲ್ಲ
ಸ್ಪರ್ಶಕದ ನೇತ್ರಸೀಮಿತ ದೃಷ್ಟಿ,
ನಿಜ ಕಣ್ಣು, ಮೂಗಿಲ್ಲದ ಆಘ್ರಾಣ ಗ್ರಾಹಕ
ಪೂರ್ವಜರು ಕಡಲಬಿಡದಿದ್ದರೂ
ಕಡಲತೀರ ಸೇರಿದ ಮಹಾವಲಸಿಗ
ಅಂಜಿಕೆ, ಅತಿನಾಚಿಕೆಯ ಅಸ್ತಿತ್ವ,
ಚತುಷ್ಪಾದಿ ಆಮೆಗೆ ಹೊಂದದ ಗೋತ್ರ
ಎರಡು ಜೊತೆ ಸ್ಪರ್ಶಕ, ಸರ್ವ ಗ್ರಾಹಕ
ಹೋರಾಟ ಅಪ್ರಿಯ, ಮಹಾ ಶಾಂತಿದೂತ
ಧಾಳಿಕೋರರ ಯಾಮಾರಿಸಿ ಚಿಪ್ಪೊಳಗೆ ಶರಣು
ಕಟ್ಟುನಿಟ್ಟಿನ ಪಥ್ಯಾಹಾರಿ, ಮಿತಭಕ್ಷಕ ಕೊಳೆತಿನಿ,
ವಿಘಟಕ,ಮಣ್ಣರುಚಿ ಮೆಚ್ಚುವ ಪರಿಸರ ಪ್ರೇಮಿ
ಈ ಬಸವ, ಹುಳುವಲ್ಲ, ಅಂತರಾತ್ಮ ಕೆಣಕುವ
ಸದಾ ಪ್ರತಿಧ್ವನಿಸುವ
ಮಾದರಿ ನಿಯಮಪಾಲಕ,
ನೆನ್ನೆ ಕೇಳಿದ ಪ್ರಶ್ನೆ
ಸ್ವಚ್ಚತಾ ಅಭಿಯಾನದಲ್ಲಿ ನಾನೇಕೆ ಇಲ್ಲ?
Comments