ಇದೀಗ ಬಂದ ಸುದ್ಧಿ. 
7-11-17

ಭೂಗ್ರಹದ ಉಚ್ಛ ಪರಿಸರ ನ್ಯಾಯಲಯದಲ್ಲಿ ನಡೆಯುತ್ತಿದ್ದ ಧೀರ್ಘಕಾಲದ ಕುತೂಹಲಕಾರಿ ಮೊಕದ್ದಮೆ ಇಂದು ಮುಕ್ತಾಯಗೊಂಡಿದೆ ಎಂದು ಈಗಷ್ಟೇ ವರದಿಯಾಗಿದೆ. ವಿವರಗಳು ವಿರಳ. ಸ್ಪಷ್ಟರೂಪ ಪಡೆದು ಅಧಿಕೃತವಾಗಿ ಸುದ್ದಿ ಹೊರಬರಲು ಕೆಲಕಾಲ ಬೇಕಾಗಬಹುದು ಎಂದು ನಂಬಲಾಗಿದೆ. ಸುಮಾರು ದಶಕಗಳಿಂದ ಆರಂಭಗೊಂಡ ಈ ಮೊಕದ್ದಮೆ ಶೀಘ್ರ ಕುಲಾಸೆಗೊಂಡಿರುವುದು ಅನೇಕರಿಗೆ ಖುಷಿ ಇನ್ನು ಕೆಲವರಿಗೆ ಈ ತೀರ್ಪಿನಿಂದಾಗುವ ಪರಿಣಾಮದ ಹೆದರಿಕೆ ಎಂಬುದು ಕೆಲವರ ಅಭಿಪ್ರಾಯ. ಆರೋಪಿತನ ಮೇಲೆ ಲೂಟಿ, ಕೊಲೆ, ಸುಲಿಗೆ, ಮೋಸ, ವಂಚನೆ, ಕ್ರೌರ್ಯ, ಮಾರಣಹೋಮ ಇತ್ಯಾದಿ ಜೀವವಿರೋಧಿ ಶೋಷಣೆಗಳ ಎಲ್ಲಾ ಆರೋಪಗಳನ್ನು ಹೊರಿಸಲಾಗಿದ್ದು, ಆತ ಯಾವ ಆರೋಪವನ್ನು ತಳ್ಳಿಹಾಕದೆ, ನಿರ್ಭೀತಿಯಿಂದಿರುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಆತ ಅಮಾನವೀಯವಾಗಿ ತನ್ನಸುತ್ತಮುತ್ತಲಿನ ಎಲ್ಲರನ್ನು ಮತ್ತು ಅವರಿಗೆ ಬೇಕಾದ ಎಲ್ಲವನ್ನು ತನ್ನದೇ ಉಪಯೋಗಕ್ಕೆಮಾತ್ರ ಎಗ್ಗಿಲ್ಲದೆ ಕೇವಲ ತನ್ನಬಲದ ತುರಿಕೆ ಮತ್ತು ತೋರಿಕೆಗಾಗಿ ಬಳಸಿಕೊಳ್ಳುತ್ತಿದ್ದುದು ಮೇಲ್ನೋಟಕ್ಕೆ ಕಂಡುಬಂದು ಸಾಬೀತಾಗಿರುವುದು ತಿಳಿದುಬಂದಿದೆ. ಈ ತಪ್ಪಿತಸ್ತನ ನಡವಳಿಕೆಯಿಂದ ಜೀವ ಸಮಾಜದಲ್ಲಿ ಹಾಗೂ ಎಲ್ಲಾ ಸಮುದಾಯಗಳಲ್ಲಿ ಯಾವುದೇ ವ್ಯವಸ್ಥೆ, ನಿಯಮ, ಕಾನೂನು ಎಲ್ಲವೂ ಏರುಪೇರಾಗಿ ಧೂಳಿಪಟವಾಗಿದೆ. ಯಾರನ್ನೂ ಗೌರವಿಸದ, ವ್ಯವಸ್ಥೆಯಲ್ಲೇ ನಂಬಿಕೆ ಇರದ ಈತ ಎಲ್ಲರನ್ನು ಕೀಳಾಗಿ ಕಾಣುವ ಮತ್ತು ದರ್ಪದಲ್ಲಿ ವ್ಯವಹರಿಸುವ ಧೋರಣೆಯಿಂದ ಕೆಲವು ನೆರೆಹೊರೆಯ ಜೀವಿಗಳ ಉಳಿವಿಗೆ ಸಂಚಾಕಾರ ತಂದಿದ್ದಾನೆ. ತಮ್ಮನ್ನು ಈ ದೈತ್ಯಶಕ್ತಿಯಿಂದ ರಕ್ಷಿಸಬೇಕೆಂದು, ಇಲ್ಲವಾದರೆ ಅವನ ಸುತ್ತಮುತ್ತ ಬದುಕಿರುವ ಯಾರಿಗೂ ಅವನ ಆತ್ಮಹತ್ಯಾ ಪ್ರವೃತ್ತಿಯ ಮಾರಕ ಶಕ್ತಿಯಲ್ಲಿ ಉಳಿಗಾಲವಿಲ್ಲ ಎಂಬ ದೂರನ್ನು ಸಲ್ಲಿಸಿದ್ದರು ಜೀವಸಮುದಾಯದ ಪ್ರತಿನಿಧಿಗಳು ಕೆಲಕಾಲದ ಹಿಂದೆ.ತಾವೇ ದೂರುದಾರರಾಗಿ, ವಿಚಾರಣೆಗೆ ಪೂರಕವಾದ ಸಾಕ್ಷಿದಾರರೊಂದಿಗೆ ಮೊಕದ್ದಮೆ ಹೂಡಿದ್ದರೆಂಬುದನ್ನು ಇಲ್ಲಿ ನಾವು ಇಲ್ಲಿ ಸ್ಮರಿಸಬಹುದು. 

ಮೊಕದ್ದಮೆಯ ವಿಚಾರಣೆಯ ಆರಂಭದಿಂದಲೂ ಆರೋಪಿ, ನ್ಯಾಯಲಯದ ಆದೇಶವನ್ನು ನಿರ್ಲಕ್ಷಿಸಿ ಹಾಜರಾಗದೆ, ಆರೋಪವನ್ನು ಗಂಭೀರವಾಗಿ ಪರಿಗಣಿಸದಷ್ಟು ಸೊಕ್ಕಿದ್ದು ನ್ಯಾಯಲಯವನ್ನೇ ನಿರ್ಲಕ್ಷಿಸಲಾಗಿದೆ ಎಂಬ ಎಂಬ ಆಪಾದನೆಯು ನಿಜ ಎಂದು ಮನವರಿಕೆಯಾಗಿದೆ ಗೌರವಾನ್ವಿತ ನ್ಯಾಯಲಯಕೆ. ಹೀಗಾಗಿ ಆರೋಪಿ ನ್ಯಾಯಲಯವನ್ನು ನಿರ್ಲಕ್ಷಿಸಿ ಅವಮಾನ ಮಾಡಿರುವುದು ನ್ಯಾಯಲಯದ ಅವಹೇಳನ ಎಂಬ ಮಾನನಷ್ಟ ಮೊಕದ್ದಮೆಗೂ ಗುರಿಯಾಗಬಹುದು. ಆತನಿಗೆ ಅತಿ ಕಠಿಣವಾದ ಮತ್ತು ಸೂಕ್ತವಾದ ಶಿಕ್ಷೆ ವಿಧಿಸುವಮೂಲಕ ಸಮಾಜಕ್ಕೆ ಒಳ್ಳೆಯ ಕಟ್ಟುನಿಟ್ಟಿನ ಸಂದೇಶವನ್ನು ಸಾಗಿಸಬೇಕಿದೆ. ವಿಚಾರಣೆಯ ಸಮಯದಲ್ಲಿ ಆರೋಪಿತನ ಗೈರುಹಾಜರಿಯನ್ನು ನ್ಯಾಯಲಯ ಗಂಭೀರವಾಗಿ ಪರಿಣಸುವ ಸಾಧ್ಯತೆ ಇದೆ. 

ಅನೇಕ ನೋಟಿಸ್ ಗಳಿಗೆ ಖುದ್ದಾಗಿ ಬಂದು ಉತ್ತರಿಸಿಯೂ ಇಲ್ಲ, ಅಷ್ಟೇ ಅಲ್ಲದೆ ತನ್ನ ಪರವಾಗಿಯಾದರೂ ಯಾವ ಪ್ರತಿನಿಧಿಯನ್ನೂ ಸಾಕ್ಷಿದಾರರೊಂದಿಗೆ ಕಳಿಸದೆ ಸಾಮಾಜಿಕ ಹಾಗೂ ಪರಿಸರಾತ್ಮಕ ಇಡೀ ಸಮಾಜಕ್ಕೆ ಶೆಡ್ಡು ಹೊಡೆದಂತಾಗಿದೆ. ಸತತ ಗೈರುಹಾಜರಿಯ ಈ ಆರೋಪಿತನ ಬಗ್ಗೆ ಏಕಪಕ್ಷೀಯ ತೀರ್ಮಾನವನ್ನು ತೆಗೆದುಕೊಳ್ಳುವುದು ನ್ಯಾಯಮೂರ್ತಿಗಳಿಗೆ ಅನಿವಾರ್ಯವಾಗಿದೆ. ಹಲವು ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರಕ್ಕೆ ಬಂದು ಆರೋಪಿತ ಎಲ್ಲವಿಧಗಳಲ್ಲಿಯೂ ಸಮಾಜ ಕಂಟಕನಾಗಿದ್ದು ಆತನೇ "ತಪ್ಪಿತಸ್ತ" "ಅಪರಾಧಿ" ಎನ್ನುವ ಅನುಮಾನಕ್ಕೆ ಎಡೆ ಇರದ ನಿಚ್ಚಳ ತೀರ್ಪನ್ನು ಕೊಟ್ಟಿದ್ದಾರೆ. 

ಗುಮಾಸ್ತರು ಆಜ್ಞೆಯ ಕರಡನ್ನು ಸಿದ್ದಪಡಿಸುತ್ತಿದ್ದಾರೆ.

ಇನ್ನು ಕೇವಲ ಶಿಕ್ಷೆ, ಆ ಶಿಕ್ಷೆಯ ಪ್ರಮಾಣ ಮತ್ತು ತಾರೀಕು ಇತ್ಯಾದಿಗಳ ಅಂತಿಮ ತೀರ್ಪು ಸದ್ಯದಲ್ಲೇ ತ್ವರಿತವಾಗಿ ಹೊರಬೀಳಲಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದು ಬಂದಿದೆ.


ವರದಿ- ಪರಿಸರಪ್ರಿಯ
PTU. ಪ್ರೆಸ್ ಟ್ರಸ್ಟ್ ಆಫ್ ದ ಯೂನಿವರ್ಸ್.

Comments

Popular posts from this blog

Reunited...at last..

ಕಾಗೆ....

The Crow.