ನಿನ್ನಿರುವು, ಅನುಭವಕೆ ಬಾರದ ಅಸಂಗತ,
ಎಲ್ಲೆಡೆ ಅವಿರ್ಭವಿಸುವ ನಿರಾಕಾರ ನೀನು,
ಸುಪ್ತ ಚಲನೆಯ ಅನುಭವದ ಕ್ಷಣದಲ್ಲಿ
ಆಗಂತುಕ ನಾನು ನನಗೆ,
ವಿವರಿಸಲು ನಿನ್ನ ಏನೆಂದು, ಹೇಗೆಂದು ಏಕೆಂದು,
ಯಾರೆಂದು, ಯಾರಲ್ಲಿ ಕೇಳುವುದು?
ನಿನ್ನ ಅನೂಹ್ಯ ಭವಿಷ್ಯದ ಆದ್ಭುತ ವಿಶಾಲ ಚಾಚು
ದಿಕ್ಕುಗಳಿಲ್ಲದ ಈ ಗುರುತ್ವರಹಿತ ಖಾಲಿತನದಲ್ಲಿ
ತೂಗಿ, ಜೋಕಾಲಿ ಆಡುವ ಜೀವಿಗಳ ಸಂತೆಯಲ್ಲಿ
ನೆಲದಮೇಲೆ ತೇಲುವ ಭ್ರಮೆ ಎಲ್ಲರಿಗೆ
ಸಿಕ್ಕಷ್ಟೇ ಅನುಭವ, ಕಂಡಷ್ಟೇ ಕನಸು
ಒಮ್ಮೊಮ್ಮೆ ನನಸಾಗುವ ಮನಸು
ಅದೇ ಆ ಬೆರಗಾಗುವ ನಿಜ ವಯಸು.

ಗೊಂದಲದ ಹುಟ್ಟಲ್ಲಿ
ಅಮ್ಮ ತ್ಯಜಿಸಿದ ಕುಡಿ ತತ್ತಿ
ಅಪ್ಪ ಅವಸರದಲಿ ತುಂಬಿದ ಜೀವ, ಜಲಚಲನೆ
ಒಂಟಿ ಪಿಂಡ ಚೆಂಡಾದ ರೂಪ
ಮೀನಾಗಿ ಕಿವಿರಲ್ಲೇ ಉಸಿರಾಡಿ ಬದುಕು 
ಬಾಲವೂ ಮಂಗಮಾಯ,
ಹೊಸ ಅವಯವಗಳ ಹುರುಪಲ್ಲಿ ಕುಪ್ಪಳಿಸಿ, ಕುಣಿದ
ಭೂ,ಜಲವಾಸಿ ಸದಾ ಅಪರಚಿತ,
ನೆಲವನ್ನೇ ನೆಚ್ಚದೆ, ಬಾಡಿಗೆ ಮನೆ ಹಿಡಿದು
ಜಲಸಮಾದಿಯಲ್ಲಿ, ರಾಸ ಕ್ರೀಡೆಯ ಗೂಡು ಕಟ್ಟಿ
ಪೀಳಿಗೆಗೆ ಪೀಠಿಕೆ ಬರೆಯುವ ಮುನ್ನುಡಿಕಾರ
ಉಸಿರು ಕಟ್ಟುವ ತರಬೇತಿಗೆ ನೀರಿನ ಹಂಗೆಲ್ಲಿ?
ಗಾಳಿಜೊತೆಗೂಡಿ,ನಡೆದಾಡುವ ಪ್ರಭೇದ,
ಪ್ರಾಣಾಯಾಮ ಅನಿವಾರ್ಯ ಪ್ರಭೇದಸಂತನಿಗೆ.

Comments

Popular posts from this blog

Reunited...at last..

ಕಾಗೆ....

The Crow.